‘ಕಾಮನ್ ಮ್ಯಾನ್’ ಸಿನಿಮಾದಲ್ಲಿ ವಕೀಲನಿಂದ ಮುಖ್ಯಮಂತ್ರಿಯಾಗುವ ಪಾತ್ರದಲ್ಲಿ ನಟಿಸಿರುವ ಗೌರಿಶಂಕರ್, ಸಿನಿಮಾ ಮೇಲಿನ ನಿರೀಕ್ಷೆ, ‘ಕೆರೆಬೇಟೆ’ ಬಳಿಕದ ಪಯಣ, ಕಮರ್ಷಿಯಲ್ ಸಕ್ಸಸ್ ಹಾಗೂ ಎರಡು ದಶಕಗಳ ಚಿತ್ರರಂಗದ ಹೋರಾಟದ ಬಗ್ಗೆ ಮಾತನಾಡಿದ್ದಾರೆ.
* ‘ಕೆರೆಬೇಟೆ’ ನಂತರ ಬಹಳ ಸಮಯದ ಬಳಿಕ ‘ಕಾಮನ್ ಮ್ಯಾನ್’ ಸಿನಿಮಾ ಒಪ್ಪಿಕೊಳ್ಳಲು ಮುಖ್ಯ ಕಾರಣವೇನು?
ಒಬ್ಬ ಕಲಾವಿದನಿಗೆ ಕಥೆಯ ಜೊತೆಗೆ ನಿರ್ಮಾಣ ಸಂಸ್ಥೆ, ನಿರ್ದೇಶಕರು ಮತ್ತು ಇಡೀ ತಂಡದ ವಿಷನ್ ಬಹಳ ಮುಖ್ಯವಾಗುತ್ತದೆ. ನಿರ್ಮಾಪಕ ಎನ್. ನರಸಿಂಹಮೂರ್ತಿಯವರು ಕಥೆಯ ಒಂದು ಮುಖ್ಯ ಎಳೆ ಹೇಳಿದ ನಂತರ, ದೊಡ್ಡ ರೈಟಿಂಗ್ ಟೀಮ್ ಮತ್ತು ನಿರ್ದೇಶಕರು ಸೇರಿ ಅತ್ಯುತ್ತಮ ಚಿತ್ರಕಥೆ ಸಿದ್ಧಪಡಿಸಿದ್ದರು. ಎಲ್ಲಕ್ಕಿಂತ ಹೆಚ್ಚಾಗಿ ಕಥೆ ಕೇಳುತ್ತಿದ್ದಂತೆ ನನಗೆ ತುಂಬಾ ಕನೆಕ್ಟ್ ಆಯ್ತು. ನನ್ನ ಕುಟುಂಬದಲ್ಲಿ ಎಲ್ಲರೂ ವಕೀಲರು. ರೈತಾಪಿ ಕುಟುಂಬದಿಂದ ಬಂದವರು ಸುಲಭವಾಗಿ ಓದಲು ಆಯ್ಕೆ ಮಾಡಿಕೊಳ್ಳುವುದು ಎಲ್‌ಎಲ್‌ಬಿ. ಈ ಚಿತ್ರದ ನಾಯಕ ಕೂಡ ಅಡ್ವೊಕೇಟ್. ಆಮೇಲೆ ಮುಖ್ಯಮಂತ್ರಿ. ಹಾಗಾಗಿ ಈ ಕಥೆ, ಪಾತ್ರ ನನ್ನ ಮನಸ್ಸಿಗೆ ತೀರ ಹತ್ತಿರವಾಯಿತು.
* ‘ಕಾಮನ್ ಮ್ಯಾನ್’ ಚಿತ್ರ ಯಾವ ಜಾನರ್‌ಗೆ ಸೇರುತ್ತದೆ? ಪ್ರೇಕ್ಷಕರಿಗೆ ಇದು ಎಂಥ ಅನುಭವ ನೀಡಲಿದೆ?
ಇದು ಸಂಪೂರ್ಣವಾಗಿ 2 ಗಂಟೆ 20 ನಿಮಿಷಗಳ ಪಕ್ಕಾ ಎಂಟರ್‌ಟೈನ್‌ಮೆಂಟ್ ಸಿನಿಮಾ. ಎಲ್ಲೂ ಬೋರ್ ಹೊಡೆಸಲ್ಲ. ಇದೊಂದು ಮೃಷ್ಟಾನ್ನ ಭೋಜನ ಅಲ್ಲದಿರಬಹುದು, ಆದರೆ ದೇಹಕ್ಕೆ ಹಿತ ನೀಡುವ ಆರೋಗ್ಯಕರ ‘ಮಜ್ಜಿಗೆ ಅನ್ನ’ದಂತಹ ಸಿನಿಮಾ. ಸಾಯಿಪ್ರಕಾಶ್ ಅವರಂತಹ ಅನುಭವಿ ನಿರ್ದೇಶಕರು ತುಂಬಾ ಅಚ್ಚುಕಟ್ಟಾಗಿ ಈ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ. ಅವರದ್ದು ಅಪ್ರತಿಮ ಅನುಭವ ಮತ್ತು ಅದ್ಭುತ ಜಡ್ಜ್‌ಮೆಂಟ್. ಅದೇ ರೀತಿ ನಿರ್ಮಾಪಕರು ಉತ್ತಮ ರೀತಿಯಲ್ಲಿ ಸಿನಿಮಾ ಮಾಡಿದ್ದಾರೆ.
* ಒಬ್ಬ ಕಾಮನ್ ಮ್ಯಾನ್ ಮುಖ್ಯಮಂತ್ರಿಯಾಗುವ ಪಾತ್ರ ಇದೆಯಂತೆ. ಈ ಪಾತ್ರಕ್ಕೆ ಸಿದ್ಧತೆ ಹೇಗಿತ್ತು?
ಹೌದು, ಆರಂಭದಲ್ಲಿ ‘ನಾನೇ ಸಿಎಂ’ ಅಂತೆಲ್ಲ ಟೈಟಲ್ ಯೋಚನೆ ಇತ್ತು. ಆದರೆ ಒಬ್ಬ ಸಾಮಾನ್ಯ ವ್ಯಕ್ತಿ ಸಿಎಂ ಆಗ್ತಾನೆ ಅಂದಾಗ ಸಾರ್ವಜನಿಕರಿಗೆ ತಕ್ಷಣ ರಿಲೇಟ್ ಆಗಬೇಕು ಎಂಬ ಕಾರಣಕ್ಕೆ ‘ಕಾಮನ್ ಮ್ಯಾನ್’ ಅಂತ ಇಟ್ಟೆವು. ಈ ಪಾತ್ರದಲ್ಲಿ ನಟನೆ ಬಹಳ ಸವಾಲಾಗಿತ್ತು. ಒಬ್ಬ ವಕೀಲನಾಗಿ ಹುಮ್ಮಸ್ಸು ತೋರಬೇಕು. ಅದೇ ವ್ಯಕ್ತಿ ಸಿಎಂ ಆದಾಗ ಗಾಂಭೀರ್ಯ ಇರಬೇಕು. ಗತ್ತು ಇರಬೇಕು, ದೌಲತ್ತು ಇರಬಾರದು. ಅದೆಲ್ಲಾ ಯೋಚಿಸಿ ಯಾವುದೇ ವರ್ಕ್‌ಶಾಪ್ ಮಾಡದೆ ನಾನೇ ಸ್ವತಃ ಬಾಡಿ ಲ್ಯಾಂಗ್ವೇಜ್ ಮತ್ತು ಲುಕ್ ಮೇಲೆ ಸಾಕಷ್ಟು ಅಭ್ಯಾಸ ಮಾಡಿ ಈ ಪಾತ್ರ ಮಾಡಿದ್ದೇನೆ.
* ‘ಕೆರೆಬೇಟೆ’ ನಿಮಗೆ ವಿಮರ್ಶಾತ್ಮಕವಾಗಿ ದೊಡ್ಡ ಹೆಸರು ತಂದುಕೊಟ್ಟಿತು. ಆದರೆ ಈ ಸಿನಿಮಾದಿಂದ ನಿಮ್ಮ ನಿರೀಕ್ಷೆಯೇನು?
‘ಕೆರೆಬೇಟೆ’ ನನಗೆ ಹೆಸರು ತಂದುಕೊಟ್ಟಿದ್ದು ನಿಜ, ಆದರೆ ಕಮರ್ಷಿಯಲ್ ಆಗಿ ದೊಡ್ಡ ಹಣ ಮಾಡಲಿಲ್ಲ. ಚಿತ್ರರಂಗದಲ್ಲಿ ಕಮರ್ಷಿಯಲ್ ಸಕ್ಸಸ್ ಬಹಳ ಮುಖ್ಯ. ಈ ಚಿತ್ರದಲ್ಲಿ ಆ ಎಲ್ಲಾ ಕಮರ್ಷಿಯಲ್ ಅಂಶಗಳೂ ಇವೆ. ಆಕರ್ಷಕ ಹಾಡುಗಳು, ಮಾಸ್ ಎಲಿಮೆಂಟ್ಸ್ ಇವೆ. ಈ ಸಿನಿಮಾ ಗೆದ್ದರೆ ನಾನು ಒಬ್ಬ ಮಾಸ್ ಮತ್ತು ಕಮರ್ಷಿಯಲ್ ಹೀರೋ ಆಗಿ ಇಂಡಸ್ಟ್ರಿಯಲ್ಲಿ ಗುರುತಿಸಿಕೊಳ್ಳಬಲ್ಲೆ ಎಂಬ ನಂಬಿಕೆಯಿದೆ.
* ಈ ಸಿನಿಮಾದ ಮೂಲಕ ಪ್ರೇಕ್ಷಕರಿಗೆ ಟೇಕ್ಅವೇ ಏನು?
ಇವತ್ತಿನ ಸಮಾಜದಲ್ಲಿ ಜನಸಾಮಾನ್ಯರ ದಿನನಿತ್ಯದ ಬದುಕಿನ ಪ್ರತಿ ಹಂತದಲ್ಲೂ ರಾಜಕೀಯ ಬೆರೆತುಹೋಗಿದೆ. ಆಡಳಿತ, ಕಾನೂನು, ವ್ಯವಸ್ಥೆಯಲ್ಲಿನ ಸಮಸ್ಯೆಗಳನ್ನು ಒಬ್ಬ ಸಾಮಾನ್ಯ ಮನುಷ್ಯನಿಗೆ ಅರ್ಥವಾಗುವ ಭಾಷೆಯಲ್ಲೇ ಸಿನಿಮಾದಲ್ಲಿ ಹೇಳಲಾಗಿದೆ. ಭ್ರಷ್ಟಾಚಾರವನ್ನು ಹೇಗೆ ಕಿತ್ತೊಗೆಯಬಹುದು ಎಂಬುದನ್ನು ಮನರಂಜನೆಯ ಜೊತೆಗೆ ಅರ್ಥಪೂರ್ಣವಾಗಿ ಚರ್ಚಿಸಲಾಗಿದೆ.
* ಈ ಪಯಣ ಹೇಗಿದೆ?
‘ಜೋಕಾಲಿ’, ‘ರಾಜಹಂಸ’, ‘ಕೆರೆಬೇಟೆ’ ಹೀಗೆ ಏಳುಬೀಳುಗಳನ್ನು ಕಂಡಿದ್ದೇನೆ. ಈ ಸೋಲುಗಳೇ ನನಗೆ ಬದುಕನ್ನು ಮತ್ತು ಧೈರ್ಯವನ್ನು ಕಲಿಸಿವೆ. ಚಿತ್ರರಂಗದಲ್ಲಿ ಯಾರೂ ಸುಲಭವಾಗಿ ಅವಕಾಶ ಕೊಡಲ್ಲ, ಅವಕಾಶ ಸಿಕ್ಕಾಗ ಪೂರ್ತಿಯಾಗಿ ಕೊಟ್ಟುಕೊಳ್ಳಬೇಕು. ನನ್ನದು ಎರಡು ದಶಕಗಳ ಹೋರಾಟ. ಕನ್ನಡಿಗರು ನನ್ನನ್ನು ಚಿತ್ರರಂಗದಲ್ಲಿ ಶಾಶ್ವತವಾಗಿ ಉಳಿಸಿಕೊಳ್ಳುವ ಸಂದರ್ಭ ಈ ಸಿನಿಮಾದಲ್ಲಿ ಒದಗಲಿ ಎಂಬುದೇ ನನ್ನ ಆಶಯ. ಪ್ರಾಮಾಣಿಕವಾಗಿ ಪ್ರಯತ್ನ ಮಾಡಿದ್ದೇವೆ. ಈ ಸಿನಿಮಾ ಜನರಿಗೆ ಖಂಡಿತ ಇಷ್ಟವಾಗುತ್ತದೆ ಎಂಬ ಸಂಪೂರ್ಣ ವಿಶ್ವಾಸ ನನಗಿದೆ.


