ಬೆಂಗಳೂರಿನ ವೈಟ್‌ಫೀಲ್ಡ್, ಗುಂಜೂರು ಮತ್ತು ವರ್ತೂರು ಭಾಗಗಳಲ್ಲಿ ತೀವ್ರ ಟ್ರಾಫಿಕ್ ಸಮಸ್ಯೆ ಎದುರಾಗಿದ್ದು, ಶಾಲಾ ಮಕ್ಕಳು ಕೇವಲ ನಾಲ್ಕೈದು ಕಿಲೋಮೀಟರ್ ದೂರದ ಶಾಲೆ ತಲುಪಲು ಎರಡು ಗಂಟೆಗಳ ಕಾಲ ರಸ್ತೆಯಲ್ಲೇ ಕಳೆಯುವಂತಾಗಿದೆ. ತುರ್ತು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಬೆಂಗಳೂರು (ಸೆ.18): ಬೆಂಗಳೂರು ಟ್ರಾಫಿಕ್ ಎಂದರೆ ವಿಶ್ವದಲ್ಲೇ ಕುಖ್ಯಾತಿ ಪಡೆದಿದೆ. ವೈಟ್‌ಫೀಲ್ಡ್, ಗುಂಜೂರು, ವರ್ತೂರು ಭಾಗದಲ್ಲಿ ಬೆಳಗಿನ ಅವಧಿಯಲ್ಲಿ ಟ್ರಾಫಿಕ್ ಹೇಗಿರುತ್ತದೆ ಎಂದರೆ ಶಾಲಾ ಮಕ್ಕಳು 4-5 ಕಿ.ಮೀ ದೂರದಲ್ಲಿನ ಶಾಲೆ ತಲುಪಲು ರಸ್ತೆಯಲ್ಲಿ ಬರೋಬ್ಬರಿ ಎರಡು ತಾಸು ಕಳೆಯಬೇಕಾದ ದುಸ್ಥಿತಿ ನಿರ್ಮಾಣವಾಗಿದೆ ಎಂದು ಮಕ್ಕಳ ಪಾಲಕರು ದೂರಿದ್ದಾರೆ.

ಐದು ಕಿಮೀ ದೂರದ ಶಾಲೆ ತಲುಪಲು ಎರಡು ತಾಸು!

ಬೆಳಗಿನ ಅವಧಿಯಲ್ಲಿ ಗುಂಜೂರು ರಸ್ತೆಯಲ್ಲಿ ಕಿ.ಮೀ ದೂರದವರೆಗಿನ ಟ್ರಾಫಿಕ್‌ನಲ್ಲಿ ನಿಂತಿರುವ ಹತ್ತಾರು ಶಾಲಾ ವಾಹನಗಳು ಹಾಗೂ ಮತ್ತಿತರ ವಾಹನಗಳ ವಿಡಿಯೋವನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಖಾಸಗಿ ಕಂಪನಿ ಸಹ ಸಂಸ್ಥಾಪಕ ನಿತೀಶ್ ರೆಡ್ಡಿ, ವೈಟ್‌ಫೀಲ್ಡ್‌ನ ಮಕ್ಕಳು ಪ್ರತಿನಿತ್ಯ ಎರಡು ತಾಸು ಸಮಯವನ್ನು ವರ್ತೂರು ರಸ್ತೆಯಲ್ಲಿ ಕಳೆಯುತ್ತಿದ್ದಾರೆ. ವೈಟ್‌ಫೀಲ್ಡ್‌ಗೆ ಸೂಕ್ತ ಮೂಲಸೌಕರ್ಯಗಳ ಅಗತ್ಯವಿದೆ ಎಂದು ಹೇಳಿದ್ದಾರೆ.

ವೈಟ್‌ಫಿಲ್ಡ್ ಗುಂಜೂರು ಟ್ರಾಫಿಕ್ ಜಾಮ್‌ಗೆ ಕಾರಣವೇನು?

ಹದಗೆಟ್ಟ ರಸ್ತೆ ಹಾಗೂ ಮೂಲಸೌಕರ್ಯ ಸಮಸ್ಯೆಗಳ ಜೊತೆಗೆ ನಾಗರಿಕರು ಬೇಕಾಬಿಟ್ಟಿಯಾಗಿ ವಾಹನಗಳನ್ನು ರಸ್ತೆಯಲ್ಲಿ ನಿಲುಗಡೆ ಮಾಡುತ್ತಿರುವುದು ಕೂಡ ಭಾರಿ ಟ್ರಾಫಿಕ್‌ ಜಾಮ್‌ಗೆ ಕಾರಣವಾಗುತ್ತಿದೆ ಎಂದು ಅನೇಕರು ದೂರಿದ್ದಾರೆ.

ವರ್ತೂರಿನಲ್ಲಿ ಎಲ್ಲೆಂದರಲ್ಲೇ ಅಪಾರ್ಟ್‌ಮೆಂಟ್, ವಿಲ್ಲಾಗಳು ತಲೆ ಎತ್ತುತ್ತಿವೆ. ಕಟ್ಟಡಗಳ ಎತ್ತರಕ್ಕೆ ತಕ್ಕಂತೆ ಸೂಕ್ತ ರಸ್ತೆಗಳು ಇಲ್ಲದ ಕಡೆ ಆಸ್ತಿಗಳನ್ನು ಖರೀದಿಸಿರುವ ನಾಗರಿಕರು ಈಗ ಟ್ರಾಫಿಕ್ ಸಮಸ್ಯೆ ಎಂದು ದೂರುತ್ತಿದ್ದಾರೆ. ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ಸಾಗಿಸುವ ಭಾರಿ ವಾಹನಗಳು ಟ್ರಾಫಿಕ್‌ ಜಾಮ್‌ಗೆ ಕಾರಣವಾಗುವ ಜೊತೆಗೆ ರಸ್ತೆಗಳನ್ನು ಹಾಳು ಮಾಡುತ್ತಿವೆ. ಬರೀ ಸರ್ಕಾರ, ಜಿಬಿಎ ಮಾತ್ರವಲ್ಲ ನಾಗರಿಕರು ಕೂಡ ಈ ಸಮಸ್ಯೆಗಳಿಗೆ ಹೊಣೆ ಎಂದು ಬ್ರಯಾನ್ ಎಂಬುವರು ಹೇಳಿದ್ದಾರೆ.

ಇಲ್ಲೇ ನರಕ ಎಂದ ಐಎಫ್‌ಎಸ್ ಅಧಿಕಾರಿ!:

ಬೆಂಗಳೂರಿನಲ್ಲಿ ನಿಮ್ಮ ಮನೆ, ಶಾಲೆ ಮತ್ತು ಕಚೇರಿ 5 ಕಿ.ಮೀ ವ್ಯಾಪ್ತಿಯಲ್ಲಿ ಇಲ್ಲದಿದ್ದರೆ ಇದೇ ಜನ್ಮದಲ್ಲಿ ನೀವು ನರಕವನ್ನು ಅನುಭವಿಸಬಹುದು. ಒಂದು ವೇಳೆ ರಸ್ತೆ ಸರಿಯಿಲ್ಲದಿದ್ದರಂತೂ 2 ಕಿ.ಮೀ ಕ್ರಮಿಸುವುದು ಕೂಡ ಯಾತನೆಮಯವಾಗುತ್ತದೆ ಎಂದು ಐಎಫ್‌ಎಸ್ ಅಧಿಕಾರಿ ದೀಪಿಕಾ ಬಜಪೈ ‘ಎಕ್ಸ್‌’ನಲ್ಲಿ ಕಮೆಂಟ್ ಮಾಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಇನ್ವೆಂಚರ್ ಅಕಾಡೆಮಿ ಸಹ ಸಂಸ್ಥಾಪಕಿ ನೂರೈನ್ ಫಜಲ್, ಗುರುವಾರದಂದು ಮನೆಯಿಂದ ಶಾಲೆಗೆ ಹಾಗೂ ಶಾಲೆಯಿಂದ ಮನೆಗೆ ತಲುಪಲು ಮಕ್ಕಳು ಮತ್ತು ಶಿಕ್ಷಕರು ಸುಮಾರು ಏಳು ತಾಸು ರಸ್ತೆಯಲ್ಲೇ ಕಳೆದಿದ್ದಾರೆ. ಟ್ರಾಫಿಕ್ ಸಮಸ್ಯೆಗೆ ತುರ್ತಾಗಿ ಸರ್ಕಾರ ಈ ಬಗ್ಗೆ ಕ್ರಮ ವಹಿಸಬೇಕು ಎಂದು ಮನವಿ ಮಾಡಿದ್ದಾರೆ.