ಶಿವಮೊಗ್ಗದ ಎನ್‌ಇಎಸ್ ಮೈದಾನದಲ್ಲಿ ಸೆಪ್ಟೆಂಬರ್ 19ರಂದು ಡಾ. ಶರತ್ ಮರಿಯಪ್ಪ ಫೌಂಡೇಷನ್ ವತಿಯಿಂದ 'ಮಲೆನಾಡು ಮೆಗಾ ಜಾಬಥಾನ್ 2026' ಆಯೋಜಿಸಲಾಗಿದೆ. ಈ ಬೃಹತ್ ಉದ್ಯೋಗ ಮೇಳದಲ್ಲಿ 166 ಕಂಪನಿಗಳು ಭಾಗವಹಿಸುತ್ತಿದ್ದು, 10 ಸಾವಿರಕ್ಕೂ ಅಧಿಕ ಉದ್ಯೋಗಾವಕಾಶಗಳು ಲಭ್ಯವಿವೆ. 8ನೇ ತರಗತಿಯಿಂದ ಸ್ನಾತಕೋತ್ತರ ಪದವೀಧರರು ಹಾಗೂ ಅಂಗವಿಕಲರು ಇದರಲ್ಲಿ ಪಾಲ್ಗೊಳ್ಳಬಹುದು.
ಶಿವಮೊಗ್ಗ: ವಿದ್ಯಾವಂತ ನಿರುದ್ಯೋಗಿ ಯುವಕ-ಯುವತಿಯರು ಹಾಗೂ ಅಂಗವಿಕಲ ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ಡಾ. ಶರತ್ ಮರಿಯಪ್ಪ ಫೌಂಡೇಷನ್ ವತಿಯಿಂದ ಸೆ.19ರಂದು ನಗರದ ಎನ್‌ಇಎಸ್ ಮೈದಾನದಲ್ಲಿ ‘ಮಲೆನಾಡು ಮೆಗಾ ಜಾಬಥಾನ್ 2026’ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ.
ಬೆಳಗ್ಗೆ 9.30 ರಿಂದ ಸಂಜೆ 5 ರವರೆಗೆ ನಡೆಯಲಿರುವ ಮೇಳಕ್ಕೆ ಉಚಿತ ಪ್ರವೇಶವಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಾಕಾಂಕ್ಷಿಗಳು ಪಾಲ್ಗೊಳ್ಳುವಂತೆ ಫೌಂಡೇಷನ್ ಸಂಸ್ಥಾಪಕ ಡಾ. ಶರತ್ ಮರಿಯಪ್ಪ ಮನವಿ ಮಾಡಿದರು.
166 ಕಂಪನಿಗಳು ಭಾಗಿ
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಮೇಳದ ನಿರೀಕ್ಷೆಗೂ ಮೀರಿ ಸ್ಪಂದನೆ ದೊರೆತಿದ್ದು, 166 ಕಂಪನಿಗಳು ಮೇಳದಲ್ಲಿ ಭಾಗವಹಿಸುತ್ತಿವೆ. ಈ ಪೈಕಿ ಶಿವಮೊಗ್ಗದ 38 ಕಂಪನಿಗಳಿದ್ದು, ಒಟ್ಟು 10 ಸಾವಿರಕ್ಕೂ ಅಧಿಕ ಉದ್ಯೋಗಾವಕಾಶಗಳು ಲಭ್ಯವಿವೆ ಎಂದು ತಿಳಿಸಿದರು.
ಆರಂಭದಲ್ಲಿ 100ಕ್ಕೂ ಹೆಚ್ಚು ಕಂಪನಿಗಳು ಹಾಗೂ ಸುಮಾರು 3 ಸಾವಿರ ಉದ್ಯೋಗಾವಕಾಶಗಳನ್ನು ನಿರೀಕ್ಷಿಸಲಾಗಿತ್ತು. ಆದರೆ ನಿರೀಕ್ಷೆಗೂ ಮೀರಿ ಕಂಪನಿಗಳು ಸ್ಪಂದಿಸಿರುವುದು ಸಂತಸ ತಂದಿದೆ. ಇದೀಗ ಕಂಪನಿಗಳ ಬೇಡಿಕೆಗೆ ಅನುಗುಣವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಾಕಾಂಕ್ಷಿಗಳು ಮೇಳದಲ್ಲಿ ಪಾಲ್ಗೊಂಡು ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಸಾಫ್ಟ್‌ವೇರ್, ಐಟಿ, ಬ್ಯಾಂಕಿಂಗ್, ಫೈನಾನ್ಸ್, ಹಾಸ್ಪಿಟಾಲಿಟಿ, ರಿಟೇಲ್, ಬಿಪಿಒ, ಕೆಪಿಒ, ಕಸ್ಟಮರ್ ಸರ್ವಿಸ್, ಮೆಡಿಕಲ್, ಹೆಲ್ತ್‌ಕೇರ್, ಉತ್ಪಾದನೆ, ಎಂಜಿನಿಯರಿಂಗ್, ಫಾರ್ಮಸಿ, ನರ್ಸಿಂಗ್, ಮೆಕ್ಯಾನಿಕಲ್, ಎಲೆಕ್ಟ್ರಾನಿಕ್ಸ್, ಚಾಲಕರು, ಭದ್ರತಾ ಸಿಬ್ಬಂದಿ, ಗಾರ್ಮೆಂಟ್ಸ್, ಹೌಸ್‌ಕೀಪಿಂಗ್, ಎಚ್‌ಆರ್ ಹಾಗೂ ಆಡಳಿತಾತ್ಮಕ ವಿಭಾಗ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳಿವೆ ಎಂದರು.
೮ನೇ ತರಗತಿಯಿಂದ ಎಸ್‌ಎಸ್‌ಎಲ್‌ಸಿ, ಪಿಯುಸಿ, ಐಟಿಐ, ಡಿಪ್ಲೊಮಾ, ಪದವಿ, ಎಂಜಿನಿಯರಿಂಗ್, ಎಂಬಿಎ, ಎಂಕಾಂ, ಎಂಎಸ್ಸಿ, ಎಂಫಾರ್ಮ ಸೇರಿದಂತೆ ವಿವಿಧ ವಿದ್ಯಾರ್ಹತೆ ಹೊಂದಿರುವವರು ಹಾಗೂ ನರ್ಸಿಂಗ್ ಪದವೀಧರರು ಮತ್ತು ಅಂಗವಿಕಲ ಅಭ್ಯರ್ಥಿಗಳು ಭಾಗವಹಿಸಬಹುದು. ಆಯಾ ಕಂಪನಿಗಳ ನಿಯಮ ಹಾಗೂ ಮಾನದಂಡಗಳ ಆಧಾರದ ಮೇಲೆ ನೇಮಕಾತಿ ನಡೆಯಲಿದೆ ಎಂದು ಹೇಳಿದರು.
ಉದ್ಯೋಗಾಕಾಂಕ್ಷಿಗಳು ಬಯೋಡೇಟಾ ಹಾಗೂ ವಿದ್ಯಾರ್ಹತಾ ಪ್ರಮಾಣಪತ್ರಗಳ ಜೆರಾಕ್ಸ್ ಪ್ರತಿಗಳನ್ನು ಕನಿಷ್ಠ ಹತ್ತು ಪ್ರತಿಗಳಷ್ಟು ತರಬೇಕು. ಹುದ್ದೆಗೆ ಅನುಗುಣವಾದ ಉಡುಪು ಧರಿಸುವುದು, ಸಮಯಪಾಲನೆ, ವಿಷಯ ಜ್ಞಾನ, ಕೌಶಲ್ಯ ಹಾಗೂ ಶಿಸ್ತಿಗೆ ಆದ್ಯತೆ ನೀಡಬೇಕು. 18 ರಿಂದ 45 ವರ್ಷದೊಳಗಿನವರು ಮೇಳದಲ್ಲಿ ಭಾಗವಹಿಸಬಹುದು ಎಂದು ಮಾಹಿತಿ ನೀಡಿದರು.
ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳುವ ಕುರಿತು ನಗರದ ವಿವಿಧ ಕಾಲೇಜುಗಳಲ್ಲಿ ಫೌಂಡೇಷನ್ ತಂಡದಿಂದ ಈಗಾಗಲೇ ತರಬೇತಿ ನೀಡಲಾಗಿದೆ. ವಿವಿಧ ವೃತ್ತಿಪರ ಕೋರ್ಸ್‌ಗಳು ಸೇರಿದಂತೆ ಪದವಿಗಳನ್ನು ಪೂರ್ಣಗೊಳಿಸಿ ಉದ್ಯೋಗಕ್ಕಾಗಿ ಕಾಯುತ್ತಿರುವ ಯುವಕ-ಯುವತಿಯರಿಗೆ ಉದ್ಯೋಗ ಕಲ್ಪಿಸುವುದು ಮೇಳದ ಪ್ರಮುಖ ಉದ್ದೇಶವಾಗಿದೆ ಎಂದು ಡಾ. ಶರತ್ ಮರಿಯಪ್ಪ ತಿಳಿಸಿದರು.
ಆಯ್ಕೆಯಾದ ಅಭ್ಯರ್ಥಿಗಳಿಗೆ ಸೆ.19ರಂದು ಮಧ್ಯಾಹ್ನ 2 ರವರೆಗೆ ಸಚಿವರಾದ ಮಧು ಬಂಗಾರಪ್ಪ ಹಾಗೂ ಸಂತೋಷ್ ಲಾಡ್ ಅವರು ಆಫರ್ ಲೆಟರ್‌ಗಳನ್ನು ವಿತರಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಮೇಳಕ್ಕೆ ಉದ್ಯೋಗಾಕಾಂಕ್ಷಿಗಳು ಅಧಿಕೃತ ವೆಬ್‌ಸೈಟ್ ಮೂಲಕ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗೆ 96206 27697, 93805 56464, 95358 93447 ಸಂಪರ್ಕಿಸಬಹುದು.
ಪ್ರಮುಖರಾದ ಕುಮಾರ್ ಉಪ್ಪಾರ್, ಪ್ರಕಾಶ್, ರಾಜೇಶ್, ಪತ್ರೇಶ್, ವರುಣ್, ಸಾಯಿರಾಮಣ್ಣ, ತ್ಯಾಗರಾಜ್ ಇದ್ದರು.


