ಕೇಂದ್ರ ಸಚಿವ ವಿ.ಸೋಮಣ್ಣ ಅವರು ಬೆಂಗಳೂರು ಕಂಟೋನ್ಮೆಂಟ್ ಮತ್ತು ಯಶವಂತಪುರ ರೈಲು ನಿಲ್ದಾಣಗಳ ಮರು ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಪ್ರಧಾನಿ ಮೋದಿಯವರ ಜನ್ಮದಿನದ ಅಂಗವಾಗಿ ನಡೆದ 'ಸೇವಾ ದಿವಸ' ಕಾರ್ಯಕ್ರಮದಲ್ಲಿ ಅವರು ಈ ವಿಷಯ ತಿಳಿಸಿದರು.

ಬೆಂಗಳೂರು: ಬೆಂಗಳೂರು ಕಂಟೋನ್ಮೆಂಟ್ ರೈಲು ನಿಲ್ದಾಣ ₹485 ಕೋಟಿ ವೆಚ್ಚದಲ್ಲಿ ಮರು ಅಭಿವೃದ್ಧಿಪಡಿಸಲಾಗುತ್ತಿದ್ದು, ಕಾಮಗಾರಿ ಡಿಸೆಂಬರ್ 2026ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

ಗುರುವಾರ ನಗರ ಕೆ ಎಸ್ ಆರ್ ರೈಲು ನಿಲ್ದಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬದ ಪ್ರಯುಕ್ತ ಸೇವಾದಿವಸ್ ಆಚರಿಸಿದ ಪರಿಣಾಮ ಕರ್ತವ್ಯ ನಿರ್ವಹಣೆಯಲ್ಲಿ ಬದ್ಧತೆ ಪ್ರದರ್ಶಿಸಿದ ರೈಲ್ವೆ ಸಿಬ್ಬಂದಿ ಸನ್ಮಾನಿಸಿ ಮಾತನಾಡಿದರು. ರೈಲ್ವೆ ಮತ್ತು ಹೆದ್ದಾರಿಗಳು ರಾಷ್ಟ್ರದ ಬೆನ್ನೆಲುಬಾಗಿವೆ ಮತ್ತು ದೇಶದ ಪ್ರಗತಿಗೆ ಮೂಲಸೌಕರ್ಯಗಳ ನಿರಂತರ ಅಭಿವೃದ್ಧಿ ಅತ್ಯಗತ್ಯ. ಇದರಿಂದಾಗಿ ಯಶವಂತಪುರ ರೈಲು ನಿಲ್ದಾಣವನ್ನು ಅಂದಾಜು 480 ಕೋಟಿ ರು. ವೆಚ್ಚದಲ್ಲಿ ಮರು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ತಿಳಿಸಿದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ‘ಸೇವಾ ದಿವಸ’ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸೋಮಣ್ಣ, ಪ್ರಧಾನಿ ನರೇಂದ್ರ ಮೋದಿ ಅವರು ಭಾರತವನ್ನು ಸ್ವಾವಲಂಬಿ ರಾಷ್ಟ್ರವನ್ನಾಗಿ ಮಾಡಲು ಶ್ರಮಿಸುತ್ತಿದ್ದಾರೆ ಮತ್ತು 2047ರ ವೇಳೆಗೆ ವಿಕಸಿತ ಭಾರತದ ದೃಷ್ಟಿಕೋನದೊಂದಿಗೆ ಯುವಜನರಿಗೆ ಸ್ಫೂರ್ತಿ ನೀಡುತ್ತಿದ್ದಾರೆ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಪರೀಕ್ಷಿತ್ ಮೋಹನ್‌ಪುರಿಯಾ ಮತ್ತು ಪ್ರವೀಣ್ ಕಾತರಕಿ, ರೈಟ್ಸ್ ಬೆಂಗಳೂರಿನ ಪ್ರಧಾನ ವ್ಯವಸ್ಥಾಪಕ ಎಂ. ಜಿ. ಸುದೀಪ್ ಉಪಸ್ಥಿತರಿದ್ದರು.