ಕಲಬುರಗಿಯಲ್ಲಿ ನಡೆದ 79ನೇ ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ 9 ಅಂಶಗಳ ಯೋಜನೆಯನ್ನು ಘೋಷಿಸಿದ್ದಾರೆ. ಇದರಲ್ಲಿ ಎಕಾನಮಿ ಮಿಷನ್, ಐಟಿ ಪಾರ್ಕ್, ಪ್ರವಾಸೋದ್ಯಮ ಅಭಿವೃದ್ಧಿ ಮತ್ತು 50,000 ನಿವೇಶನಗಳ ವಿತರಣೆ ಸೇರಿವೆ. ಜೊತೆಗೆ 1,917.13 ಕೋಟಿ ರೂ. ಮೊತ್ತದ 940 ಕಾಮಗಾರಿಗಳಿಗೆ ಚಾಲನೆ ನೀಡಿದರು.

ಕಲಬುರಗಿ (ಸೆ.18): ರಾಜ್ಯದ ಶಕ್ತಿಪೀಠವಾಗಿರುವ ಕಲ್ಯಾಣ ಕರ್ನಾಟಕದ ಕಲ್ಯಾಣ ನಮ್ಮ ಸರ್ಕಾರದ ಆದ್ಯತೆ ಎಂದು ಪ್ರತಿಪಾದಿಸಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಕಲ್ಯಾಣ ಕರ್ನಾಟಕದ ಅಭಿವೃದ್ಧಿ, ಕೈಗಾರಿಕಾ ಬೆಳವಣಿಗೆ, ಹೂಡಿಕೆಗೆ ವೇಗ ನೀಡುವ ಸಲುವಾಗಿ ‘ಕಲ್ಯಾಣ ಕರ್ನಾಟಕ ಎಕಾನಮಿ ಮಿಷನ್’ ಸೇರಿದಂತೆ 9 ಅಂಶಗಳ ಯೋಜನೆಯನ್ನು ಘೋಷಿಸಿದ್ದಾರೆ.

ಕಲ್ಯಾಣ ನಾಡಿನ ಹೆಬ್ಬಾಗಿಲು ಕಲಬುರಗಿಯಲ್ಲಿ ಗುರುವಾರ ನಡೆದ 79ನೇ ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಪಾಲ್ಗೊಂಡು, ರಾಷ್ಟ್ರಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಇದೇ ವೇಳೆ, ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳಿಗೆ ಸಂಬಂಧಿಸಿದ 1,917.13 ಕೋಟಿ ರು. ಮೊತ್ತದ 940 ಕಾಮಗಾರಿಗಳಿಗೆ ಚಾಲನೆ ನೀಡಿದರು.

ಕಲ್ಯಾಣ ಕರ್ನಾಟಕದ ಇತಿಹಾಸ ಬದಲಾಯಿಸಲು ಕಾಂಗ್ರೆಸ್ ಪಕ್ಷ ರಕ್ತ, ಬೆವರು ಹರಿಸಿದೆ. ಕಲ್ಯಾಣ ಕರ್ನಾಟಕಕ್ಕೆ ವಿಮೋಚನೆ ದೊರೆತಿದ್ದು ಕಾಂಗ್ರೆಸ್‌ನಿಂದ. ಧರಂಸಿಂಗ್ ವರದಿಯ ಆಧಾರದ ಮೇಲೆ 1990ರಲ್ಲಿ ಹೈದರಾಬಾದ್-ಕರ್ನಾಟಕ ಅಭಿವೃದ್ಧಿ ಮಂಡಳಿ ಸ್ಥಾಪನೆಯಾಯಿತು. ಕಲ್ಯಾಣಕ್ಕೆ 371 (ಜೆ) ಆರ್ಟಿಕಲ್‌ ರಕ್ಷೆ ಸೋನಿಯಾ ಗಾಂಧಿ, ಮನಮೋಹನ್ ಸಿಂಗ್ ಹಾಗೂ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ಕೊಡುಗೆ. ನಾವು ಮತಕ್ಕಾಗಿ ಅಲ್ಲ, ರಾಜ್ಯದ ಹಿತಕ್ಕಾಗಿ ಕೆಲಸ ಮಾಡುತ್ತೇವೆ. ಪ್ರಜಾಸೇವೆಯೇ ದೇವರ ಸೇವೆ. ಅದಕ್ಕಾಗಿ ಪ್ರಜಾಸೇವೆ ಇಲಾಖೆಯನ್ನೇ ಸ್ಥಾಪಿಸಿದ್ದೇವೆ. ಸರ್ಕಾರವನ್ನೇ ನಿಮ್ಮ ಮನೆಬಾಗಿಲಿಗೆ ತಂದು ನಿಮ್ಮ ಸಮಸ್ಯೆ ಪರಿಹರಿಸುತ್ತಿದ್ದೇವೆ. ಕಳೆದ 12 ವರ್ಷದಲ್ಲಿ ಕಲ್ಯಾಣ ಕರ್ನಾಟಕಕ್ಕೆ ಸುಮಾರು 25 ಸಾವಿರ ಕೋಟಿ ರು.ಗಳ ವಿಶೇಷ ಅನುದಾನ ನೀಡಿದ್ದೇವೆ ಎಂದರು.

ಬಸವಣ್ಣನವರ ಹೋರಾಟದ ನೆಲ, ಸಮಾನತೆ, ಮಾನವೀಯತೆ, ಸಹಬಾಳ್ವೆಯ ಸಂದೇಶವನ್ನು ನೀಡಿದ ಪುಣ್ಯಭೂಮಿ ಈ ಕಲ್ಯಾಣ ಕರ್ನಾಟಕ. ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಮಲ್ಲಿಕಾರ್ಜುನ ಖರ್ಗೆ, ಧರಂಸಿಂಗ್, ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಮುಖಂಡರ ಶ್ರಮದಿಂದ ಕಲ್ಯಾಣವಾಗುತ್ತಿದೆ ಎಂದರು.

ಬೆಂಗಳೂರು ಕರ್ನಾಟಕದ ಕಿರೀಟ. ಆದರೆ, ಕಲ್ಯಾಣ ಕರ್ನಾಟಕ ರಾಜ್ಯದ ಶಕ್ತಿಪೀಠ. ಕಲ್ಯಾಣ ನಾಡಿನವರು ಉಪಕಾರ ಸ್ಮರಣೆ ಮಾಡುತ್ತೀರಿ ಎಂಬ ನಂಬಿಕೆ ಇದೆ. 2028ರಲ್ಲಿ ರಾಜ್ಯದ ಚುನಾವಣೆಯಲ್ಲಿ ಈ ಭಾಗದಿಂದ ಹೆಚ್ಚಿನ ಪ್ರಮಾಣದಲ್ಲಿ ನಮ್ಮ ಕೈ ಹಿಡಿಯಿರಿ. ದೇಶದಲ್ಲಿಯೂ 2029ರಲ್ಲಿ ಬದಲಾವಣೆಗೆ ತಾವೆಲ್ಲರೂ ಸಾಕ್ಷಿಯಾಗಿ. ಕಾಂಗ್ರೆಸ್‌ಗೆ ಮತ ಹಾಕಿ ಗೆಲ್ಲಿಸಿ ಎಂದು ಮನವಿ ಮಾಡಿದರು.

ಡಿಕೆಶಿ 9 ಘೋಷಣೆಗಳು:

1. ಕಲ್ಯಾಣ ಕರ್ನಾಟಕ ಎಕಾನಮಿ ಮಿಷನ್:

ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಕೈಗಾರಿಕಾ ಬೆಳವಣಿಗೆ, ಹೂಡಿಕೆಗೆ ವೇಗ ನೀಡಲು ಸೆಕ್ಷನ್ 8 ಕಂಪನಿಯಾಗಿ (ಕಂಪನಿಗಳ ಕಾಯಿದೆ, 2013ರಡಿಯಲ್ಲಿ ನೋಂದಾಯಿಸಲಾದ ಲಾಭರಹಿತ ಸಂಸ್ಥೆ) ‘ಕಲ್ಯಾಣ ಕರ್ನಾಟಕ ಎಕಾನಮಿ ಮಿಷನ್’ ಸ್ಥಾಪಿಸಿ ಹೂಡಿಕೆಗಳನ್ನು ಆಕರ್ಷಿಸಿ ಹೊಸ ಆರ್ಥಿಕ ಅವಕಾಶಗಳ ಸೃಷ್ಟಿಗೆ ಒತ್ತು.

2. ಜೈವಿಕ ಆರ್ಥಿಕ ಮಿಷನ್

ಕೃಷಿ ಉತ್ಪನ್ನಗಳ ಸಂಸ್ಕರಣೆ ಮತ್ತು ಮೌಲ್ಯವರ್ಧನೆಯ ಮೂಲಕ ರೈತರ ಆದಾಯ ಹೆಚ್ಚಿಸಲು ಜೈವಿಕ ಆರ್ಥಿಕ ಮಿಷನ್ ಸ್ಥಾಪನೆ, ತೊಗರಿ ಬೇಳೆ, ಕಮಲಾಪುರ ಬಾಳೆಹಣ್ಣು, ಒಣದ್ರಾಕ್ಷಿ ಮತ್ತು ಸಿರಿಧಾನ್ಯಗಳು ಸೇರಿದಂತೆ ಈ ಪ್ರದೇಶದ ಪ್ರಮುಖ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ.

3. ರಕ್ತಹೀನತೆ ವಿರುದ್ಧ ವಿಶೇಷ ಅಭಿಯಾನ

ಈ ಪ್ರದೇಶದಲ್ಲಿ ರಕ್ತಹೀನತೆಯ ಪ್ರಮಾಣವನ್ನು ಕಡಿಮೆ ಮಾಡಲು ಮುಂದಿನ 2 ವರ್ಷಗಳ ಕಾಲ ತಪಾಸಣೆ, ತಡೆಗಟ್ಟುವಿಕೆ ಮತ್ತು ಚಿಕಿತ್ಸೆಗೆ ವಿಶೇಷ ಅಭಿಯಾನ. ಗರ್ಭಿಣಿಯರು, ಹದಿಹರೆಯದವರು ಹಾಗೂ ಹಾಲುಣಿಸುವ ತಾಯಂದಿರ ಮೇಲೆ ಹೆಚ್ಚಿನ ಗಮನ.

4. ಕಲಬುರಗಿ ನಗರದ ಮೂಲಸೌಕರ್ಯ

ವೇಗವಾಗಿ ಬೆಳೆಯುತ್ತಿರುವ ಕಲಬುರಗಿ ನಗರದಲ್ಲಿ ಸುಗಮ ಸಂಚಾರಕ್ಕಾಗಿ ಸೇಡಂ ರಸ್ತೆಯ ರಿಂಗ್ ರೋಡ್‌ನಲ್ಲಿ ಮೇಲ್ಸೇತುವೆ ನಿರ್ಮಾಣ, ಹೊಸ ಪೆರಿಫೆರಲ್ ರಿಂಗ್ ರೋಡ್ ಡಿಪಿಆರ್ ಸಿದ್ಧಪಡಿಸಲು ಕ್ರಮ, ₹30 ಕೋಟಿ ವೆಚ್ಚದಲ್ಲಿ ಹಸಿರು ಮತ್ತು ಸಾರ್ವಜನಿಕ ವಿಹಾರ ತಾಣವಾಗಿ ಅಪ್ಪನ ಕೆರೆ, ಉದ್ಯಾನ ಅಭಿವೃದ್ಧಿ.

5. ನಿವೇಶನರಹಿತ ಕುಟುಂಬಗಳಿಗೆ 50,000 ನಿವೇಶನ

ಕಲಬುರಗಿ ಜಿಲ್ಲೆಯಲ್ಲಿ ನಿವೇಶನರಹಿತ ಕುಟುಂಬಗಳಿಗೆ 50,000 ವಸತಿ ನಿವೇಶನಗಳ ಅಭಿವೃದ್ಧಿ.

6. ಕಲಬುರಗಿಯಲ್ಲಿ ಐಟಿ ಪಾರ್ಕ್ ಮತ್ತು KRIYA:

ಐಟಿ ಮತ್ತು ನಾವೀನ್ಯತಾ ಕ್ಷೇತ್ರದ ಬೆಳವಣಿಗೆಯನ್ನು ಬೆಂಗಳೂರಿನಾಚೆಗೂ ವಿಸ್ತರಿಸಲು ಕಲಬುರಗಿಯಲ್ಲಿ 30 ಎಕರೆ ಪ್ರದೇಶದಲ್ಲಿ ಐಟಿ ಪಾರ್ಕ್ ಅಭಿವೃದ್ಧಿ, ನಾವೀನ್ಯತೆ, ಸ್ಟಾರ್ಟ್‌ಅಪ್‌ಗಳು ಮತ್ತು ಯುವ ಉದ್ಯಮಿಗಳನ್ನು ಉತ್ತೇಜಿಸಲು KRIYA – (Kalaburagi Research, Innovation and Youth Accelerator) ಸ್ಥಾಪನೆ.

7 . ಪ್ರವಾಸೋದ್ಯಮ ಮತ್ತು ಪಾರಂಪರಿಕ ತಾಣಗಳ ಅಭಿವೃದ್ಧಿ:

ಕಲಬುರಗಿ ಕೋಟೆ, ಶರಣಬಸವೇಶ್ವರ ದೇವಸ್ಥಾನ, ಖ್ವಾಜಾ ಬಂದೇ ನವಾಜ್ ದರ್ಗಾ, ಬುದ್ಧ ವಿಹಾರ, ಮಳಖೇಡ, ಸನ್ನತಿ ಮತ್ತು ಗಾಣಗಾಪುರವನ್ನು ಸಂಪರ್ಕಿಸುವ ಪುಣ್ಯ ಯಾತ್ರಾ ಸರ್ಕಿಟ್ ಅಭಿವೃದ್ಧಿ. ಕೆಕೆಆರ್‌ಡಿಬಿ ಅನುದಾನದಲ್ಲಿ ಮಳಖೇಡ, ನಾಗಾವಿ, ಕಾಳಗಿ ಮತ್ತು ಸನ್ನತಿಯ ಪಾರಂಪರಿಕ ತಾಣಗಳ ಪುನರಾಭಿವೃದ್ಧಿ. ಗಾಣಗಾಪುರದಲ್ಲಿ ಮೊದಲ ಹಂತದಲ್ಲಿ ₹50 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಗೆ ಯೋಜನೆ. ಕಲಬುರಗಿಯಲ್ಲಿ ವಚನ ಮಂಟಪ ಸ್ಥಾಪನೆ.

8. ಕ್ರೀಡಾ ಮೂಲಸೌಕರ್ಯ

ಆಧುನಿಕ ಕ್ರೀಡಾ ಮೂಲಸೌಕರ್ಯದೊಂದಿಗೆ ಕಲಬುರಗಿ ಚಂದ್ರಶೇಖರ ಪಾಟೀಲ ಕ್ರೀಡಾಂಗಣ ಪುನರಾಭಿವೃದ್ಧಿ. ಕ್ರಿಕೆಟ್ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲು ಕೆಎಸ್‌ಸಿಎ ಜೊತೆ ಒಡಂಬಡಿಕೆ, ಹಡಗಿಲ ಹಾರುತಿ ಗ್ರಾಮದಲ್ಲಿ ‘ಸ್ಪೋರ್ಟ್ಸ್ ಸಿಟಿ'' ಸ್ಥಾಪನೆ.

9. ಕೋಟಿ ವೃಕ್ಷ ಅಭಿಯಾನ

ಹಸಿರು ಹೊದಿಕೆಯನ್ನು ಹೆಚ್ಚಿಸಲು ಮುಂದಿನ ಎರಡು ವರ್ಷಗಳಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದಾದ್ಯಂತ ಕೋಟಿ ವೃಕ್ಷ ಅಭಿಯಾನ.