ಹೆಚ್ಚುತ್ತಿರುವ ವೆಚ್ಚ ಮತ್ತು ಕುಸಿಯುತ್ತಿರುವ ಮಾರಾಟದಿಂದಾಗಿ ಸ್ಯಾಮ್‌ಸಂಗ್ ಇಂಡಿಯಾ ತನ್ನ ಟೆಲಿವಿಷನ್ ಮತ್ತು ಗೃಹೋಪಯೋಗಿ ವಿಭಾಗದ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುತ್ತಿದೆ. ಖರ್ಚು ಕಡಿಮೆ ಮಾಡಲು ಕಂಪನಿಯು ತನ್ನ ಬ್ರಾಂಚ್‌ಗಳನ್ನು ವಿಲೀನಗೊಳಿಸಲು ಮುಂದಾಗಿದೆ.
ಒಂದೆಡೆ ಹೆಚ್ಚುತ್ತಿರುವ ವೆಚ್ಚ, ಇನ್ನೊಂದೆ ನಿರಿಕ್ಷಿತ ಮಾರಾಟ ಆಗದೆ ಕುಸಿಯುತ್ತಿರುವ ಹಿನ್ನೆಲೆ ನಷ್ಟದಿಂದ ತಪ್ಪಿಸಿಕೊಳ್ಳಲು ಇದೀಗ ದೈತ್ಯ ಎಲೆಕ್ಟ್ರಾನಿಕ್ಸ್ ಕಂಪನಿಯಾದ 'ಸ್ಯಾಮ್‌ಸಂಗ್ ಇಂಡಿಯಾ' ಕೂಡ ತನ್ನ ಉದ್ಯೋಗಿಗಳನ್ನು ಹಂತ ಹಂತವಾಗಿ ಕೆಲಸದಿಂದ ತೆಗೆದುಹಾಕಲು ಮುಂದಾಗಿದೆ.
ವರದಿಗಳ ಪ್ರಕಾರ ಕಂಪನಿಯು ಟೆಲಿವಿಷನ್ ಮತ್ತು ಗೃಹೋಪಯೋಗಿ ವಿಭಾಗದಿಂದ ಸುಮಾರು 80-100 ಉದ್ಯೋಗಿಗಳಿಗೆ ಈಗಾಗಲೇ ಕೆಲಸ ಬಿಡುವಂತೆ ಸೂಚಿಸಿದೆ. ಇದರಲ್ಲಿ ಕಂಪನಿಯ ಹೆಡ್‌ಕ್ವಾರ್ಟರ್ಸ್‌ನಲ್ಲಿರುವ ಡೈರೆಕ್ಟರ್ ಮಟ್ಟದ ಅಧಿಕಾರಿಗಳು, ಟೀಮ್ ಲೀಡ್‌ಗಳು ಹಾಗೂ ವಿವಿಧ ನಗರಗಳಲ್ಲಿರುವ ಬ್ರಾಂಚ್ ಮತ್ತು ಏರಿಯಾ ಮ್ಯಾನೇಜರ್‌ಗಳು ಸೇರಿದ್ದಾರೆ.
ಸ್ಯಾಮ್‌ಸಂಗ್ Layoff ಯಾರ ಮೇಲೆ ಪರಿಣಾಮ?
ಎಲೆಕ್ಟ್ರಾನಿಕ್ಸ್ ಬಿಸಿನೆಸ್‌ನಲ್ಲಿರುವ ಸೇಲ್ಸ್ ಮತ್ತು ಮಾರ್ಕೆಟಿಂಗ್ ವಿಭಾಗದ ಶೇ. 25ರಷ್ಟು ಉದ್ಯೋಗಿಗಳ ಮೇಲೆ ಇದು ಪರಿಣಾಮ ಬೀರಬಹುದು. ಇದರಲ್ಲಿ ಮ್ಯಾನ್‌ಪವರ್ ಏಜೆನ್ಸಿಗಳ ಮೂಲಕ ನೇಮಕಗೊಂಡ ಸಿಬ್ಬಂದಿಯೂ ಸೇರಿದ್ದಾರೆ ಎಂದು ಹೆಸರು ಹೇಳಲಿಚ್ಛಿಸದ ಕಂಪನಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬ್ಯಾಚ್‌ಗಳಲ್ಲಿ ಟರ್ಮಿನೇಷನ್ ಲೆಟರ್
ಸ್ಯಾಮ್‌ಸಂಗ್ ಇಂಡಿಯಾದ ಎಲೆಕ್ಟ್ರಾನಿಕ್ಸ್ ಸೇಲ್ಸ್ ವಿಭಾಗದಲ್ಲಿ ಸುಮಾರು 550-600 ಅಧಿಕಾರಿಗಳಿದ್ದಾರೆ. ಸ್ಮಾರ್ಟ್‌ಫೋನ್ ವಿಭಾಗದ ಸಿಬ್ಬಂದಿ ಇದಕ್ಕಿಂತ ದೊಡ್ಡ ಸಂಖ್ಯೆಯಲ್ಲಿದ್ದಾರೆ. ಈ ಉದ್ಯೋಗ ಕಡಿತದಿಂದ ತೊಂದರೆಗೊಳಗಾದ ಉದ್ಯೋಗಿಯೊಬ್ಬರು ಹೇಳುವ ಪ್ರಕಾರ, ಕಂಪನಿಯು ಕಳೆದ ಕೆಲವು ದಿನಗಳಿಂದ ಪ್ರತಿದಿನ ಸಣ್ಣ ಸಣ್ಣ ಬ್ಯಾಚ್‌ಗಳಲ್ಲಿ ಟರ್ಮಿನೇಷನ್ ಲೆಟರ್ ನೀಡುತ್ತಿದೆ. ಹಲವು ಉದ್ಯೋಗಿಗಳಿಗೆ ನೋಟಿಸ್ ಪೀರಿಯಡ್ ಪೂರೈಸದೆಯೇ ಕೆಲಸ ಬಿಡಲು ಹೇಳಲಾಗಿದೆ. ಇದಕ್ಕೆ ಕಂಪನಿಯು ಪರಿಹಾರವಾಗಿ ಮೂರು ತಿಂಗಳ ಸಂಬಳ ಹಾಗೂ ಪ್ರತಿ ವರ್ಷದ ಸೇವೆಗೆ ಒಂದು ತಿಂಗಳ ಹೆಚ್ಚುವರಿ ಸಂಬಳವನ್ನು ನೀಡುತ್ತಿದೆ.
ರೂಪಾಯಿ ಮೌಲ್ಯ ಕುಸಿತದ ಪರಿಣಾಮವೇ?
ಹೌದು ಎನ್ನುತ್ತದೆ ಅಂಕಿ-ಅಂಶ. FY26ರ ಅವಧಿಯಲ್ಲಿ ರೂಪಾಯಿ ಮೌಲ್ಯ ಶೇ. 10ರಷ್ಟು ಕುಸಿದಿರುವುದು ಸ್ಯಾಮ್‌ಸಂಗ್‌ಗೆ ದೊಡ್ಡ ತಲೆನೋವಾಗಿದೆ. ಈ ವರ್ಷ ರೂಪಾಯಿ ಮೌಲ್ಯ ಸ್ಥಿರವಾಗಿದ್ದರೂ, ಹಿಂದಿನ ಕುಸಿತದ ಪರಿಣಾಮ ಕಂಪನಿಯ ಮೇಲೆ ಇನ್ನೂ ಇದೆ. ದುರ್ಬಲ ರೂಪಾಯಿಯಿಂದಾಗಿ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ಗಳು ಮತ್ತು ಇತರ ಎಲೆಕ್ಟ್ರಾನಿಕ್ ಉತ್ಪನ್ನಗಳ ಬೆಲೆ ಹೆಚ್ಚಾಗಿದ್ದು, ಮಾರಾಟದ ಮೇಲೆ ಮತ್ತಷ್ಟು ಒತ್ತಡ ಬಿದ್ದಿದೆ. ಭಾರತದ ಒಟ್ಟಾರೆ ಎಲೆಕ್ಟ್ರಾನಿಕ್ಸ್ ಉದ್ಯಮವೇ ಮಾರಾಟ ಮತ್ತು ಲಾಭಾಂಶದ ಕುಸಿತವನ್ನು ಎದುರಿಸುತ್ತಿದೆ. ಉದ್ಯಮದ ಅಂದಾಜಿನ ಪ್ರಕಾರ, ಭಾರತದಲ್ಲಿ ಸ್ಮಾರ್ಟ್‌ಫೋನ್ ಮಾರಾಟವು ವರ್ಷದಿಂದ ವರ್ಷಕ್ಕೆ ಶೇ. 11-12ರಷ್ಟು ಕಡಿಮೆಯಾಗಿದೆ.
ಸ್ಯಾಮ್‌ಸಂಗ್ ಇಂಡಿಯಾದ ಒಟ್ಟು ಆದಾಯದಲ್ಲಿ ಮೊಬೈಲ್ ಫೋನ್‌ಗಳ ಪಾಲು ಸುಮಾರು ನಾಲ್ಕನೇ ಮೂರರಷ್ಟಿದೆ. ಹೀಗಾಗಿ, ಈ ವಿಭಾಗದಲ್ಲಿನ ಕುಸಿತ ಕಂಪನಿಗೆ ದೊಡ್ಡ ಹೊಡೆತ ನೀಡಲಿದೆ. ಇದೇ ವೇಳೆ, ಭಾರತದ ಏರ್-ಕಂಡಿಷನರ್ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸಲು ಸ್ಯಾಮ್‌ಸಂಗ್ ಈ ವರ್ಷ ಸಾಕಷ್ಟು ಪ್ರಯತ್ನ ಪಟ್ಟರೂ, ನಿರೀಕ್ಷಿತ ಯಶಸ್ಸು ಸಿಕ್ಕಿಲ್ಲ. ಕಚ್ಚಾ ವಸ್ತುಗಳ ಬೆಲೆ ಏರಿಕೆಯು ಅದರ ಕನ್ಸ್ಯೂಮರ್ ಎಲೆಕ್ಟ್ರಾನಿಕ್ಸ್ ವಿಭಾಗವನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ.
ಬ್ರಾಂಚ್‌ಗಳ ವಿಲೀನ
ಖರ್ಚು ಕಡಿಮೆ ಮಾಡುವ ಭಾಗವಾಗಿ, ಸ್ಯಾಮ್‌ಸಂಗ್ ತನ್ನ ಬ್ರಾಂಚ್ ನೆಟ್‌ವರ್ಕ್ ಅನ್ನು ವಿಲೀನ ಮಾಡಲು ಮುಂದಾಗಿದೆ. ರಾಂಚಿ ಮತ್ತು ಪಾಟ್ನಾ, ದೆಹಲಿ ಮತ್ತು ಗುರ್‌ಗಾಂವ್, ಹಾಗೂ ಪಂಜಾಬ್ ಮತ್ತು ಚಂಡೀಗಢದಂತಹ ಕಚೇರಿಗಳನ್ನು ವಿಲೀನಗೊಳಿಸಲಾಗುತ್ತಿದೆ. ಈ ವಿಲೀನದಿಂದಾಗಿ ಕೆಲವು ಹುದ್ದೆಗಳು ಅನಗತ್ಯವಾಗುತ್ತವೆ ಇದರಿಂದ ಹುದ್ದೆ ತೆರವುಗೊಳಿಸಬಹುದು ಎಂದು ಉದ್ಯಮದ ತಜ್ಞರು ಹೇಳುತ್ತಾರೆ.
ಸ್ಮಾರ್ಟ್‌ಫೋನ್ ವಿಭಾಗ ಸದ್ಯಕ್ಕೆ ಸೇಫ್?
ವರದಿಗಳ ಪ್ರಕಾರ, ಸದ್ಯದ ಪಟ್ಟಿಗೆ ಉದ್ಯೋಗ ಕಡಿತವು ಸ್ಯಾಮ್‌ಸಂಗ್‌ನ ಸ್ಮಾರ್ಟ್‌ಫೋನ್ ವಿಭಾಗದ ಮೇಲೆ ಪರಿಣಾಮ ಬೀರಿಲ್ಲ ಎನ್ನಲಾಗಿದೆ. ಇದಕ್ಕೆ ಕಾರಣ ಮೊಬೈಲ್ ಬಿಸಿನೆಸ್ ಸ್ಯಾಮ್‌ಸಂಗ್‌ಗೆ ಭಾರತದಲ್ಲಿ ಅತಿ ಹೆಚ್ಚು ಆದಾಯ ತರುವ ವಿಭಾಗವಾಗಿದೆ. ಹೀಗಾಗಿ, ಸ್ಮಾರ್ಟ್‌ಫೋನ್ ಮಾರಾಟದಲ್ಲಿ ಚೇತರಿಕೆ ಕಾಣುವುದು ಕಂಪನಿಗೆ ಬಹಳ ಮುಖ್ಯವಾಗಿದೆ.
ಸ್ಯಾಮ್‌ಸಂಗ್‌ನ ಹೊಸ ಪ್ರೀಮಿಯಂ ಫೋನ್‌ಗಳಾದ ಗ್ಯಾಲಕ್ಸಿ ಫೋಲ್ಡ್ ಮತ್ತು ಫ್ಲಿಪ್‌ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಆದರೆ, 1 ಲಕ್ಷ ರೂ. ಮತ್ತು ಅದಕ್ಕಿಂತ ಹೆಚ್ಚಿನ ಬೆಲೆಯ ಫೋನ್‌ಗಳು ಒಟ್ಟು ಸ್ಮಾರ್ಟ್‌ಫೋನ್ ಮಾರುಕಟ್ಟೆಯ ಕೇವಲ ಶೇ. 4ರಷ್ಟು ಮಾತ್ರ. ಹಾಗಾಗಿ, ಈ ಪ್ರೀಮಿಯಂ ವಿಭಾಗದಿಂದ ಕಂಪನಿಯ ಒಟ್ಟಾರೆ ಮಾರುಕಟ್ಟೆ ಪಾಲುದಾರಿಕೆಯ ಮೇಲೆ ದೊಡ್ಡ ಪರಿಣಾಮ ಬೀರುವುದಿಲ್ಲ.
ಕೌಂಟರ್‌ಪಾಯಿಂಟ್ ರಿಸರ್ಚ್ ಹೇಳೋದೇನು?
ಮಾರುಕಟ್ಟೆ ಸಂಶೋಧನಾ ಸಂಸ್ಥೆ ಕೌಂಟರ್‌ಪಾಯಿಂಟ್ ರಿಸರ್ಚ್ ಪ್ರಕಾರ, ಏಪ್ರಿಲ್-ಜೂನ್ ಅವಧಿಯಲ್ಲಿ ಸ್ಯಾಮ್‌ಸಂಗ್ ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಮೂರನೇ ಸ್ಥಾನಕ್ಕೆ ಕುಸಿದಿದೆ. ವಿವೋ ಮೊದಲ ಸ್ಥಾನ ಮತ್ತು ಒಪ್ಪೋ ಎರಡನೇ ಸ್ಥಾನದಲ್ಲಿದೆ. ಕೌಂಟರ್‌ಪಾಯಿಂಟ್ ರಿಸರ್ಚ್ ಪ್ರಕಾರ, ಸ್ಯಾಮ್‌ಸಂಗ್ ತನ್ನ ಪ್ರಮುಖ ಸ್ಮಾರ್ಟ್‌ಫೋನ್ ಮಾಡೆಲ್‌ಗಳ ಮೇಲೆ ಆಕ್ರಮಣಕಾರಿ ಪ್ರಚಾರವನ್ನು ಅವಲಂಬಿಸಿದೆ.
FY25ರ ಉತ್ತಮ ಫಲಿತಾಂಶದ ನಡುವೆಯೂ ಒತ್ತಡ
ಕಂಪನಿಯು ರಿಜಿಸ್ಟ್ರಾರ್ ಆಫ್ ಕಂಪನೀಸ್‌ಗೆ ಸಲ್ಲಿಸಿದ ದಾಖಲೆಗಳ ಪ್ರಕಾರ, FY25ರಲ್ಲಿ ಸ್ಯಾಮ್‌ಸಂಗ್ ಇಂಡಿಯಾದ ಒಟ್ಟು ಆದಾಯ ₹1.1 ಲಕ್ಷ ಕೋಟಿಗೆ ಏರಿದ್ದು, ಹಿಂದಿನ ವರ್ಷಕ್ಕಿಂತ ಶೇ. 12ರಷ್ಟು ಹೆಚ್ಚಳವಾಗಿದೆ. ಮೊಬೈಲ್ ಫೋನ್‌ಗಳ ನಂತರ, ಗೃಹೋಪಯೋಗಿ ವಸ್ತುಗಳ ವಿಭಾಗವು ಶೇ. 11ರಷ್ಟು ಮಾರಾಟದೊಂದಿಗೆ ಎರಡನೇ ಅತಿದೊಡ್ಡ ಬಿಸಿನೆಸ್ ಆಗಿದೆ. ಕಂಪನಿಯು FY25ರಲ್ಲಿ ₹11,287 ಕೋಟಿ ನಿವ್ವಳ ಲಾಭ ಗಳಿಸಿದ್ದು, ಇದು ಹಿಂದಿನ ವರ್ಷಕ್ಕಿಂತ ಶೇ. 38ರಷ್ಟು ಹೆಚ್ಚಾಗಿದೆ. FY26ರ ಆರ್ಥಿಕ ಫಲಿತಾಂಶ ಇನ್ನೂ ಪ್ರಕಟವಾಗಿಲ್ಲ. ಆದರೆ, ಜೂನ್ ತ್ರೈಮಾಸಿಕದಲ್ಲಿ ಸ್ಯಾಮ್‌ಸಂಗ್‌ನ ಜಾಗತಿಕ ಮೊಬೈಲ್ ಬಿಸಿನೆಸ್ ನಷ್ಟ ಅನುಭವಿಸಿದೆ. ಮೆಮೊರಿ ಚಿಪ್‌ಗಳಿಗೆ ಉತ್ತಮ ಬೇಡಿಕೆ ಇದ್ದರೂ, ಅದರ ಕನ್ಸ್ಯೂಮರ್ ಎಲೆಕ್ಟ್ರಾನಿಕ್ಸ್ ವಿಭಾಗವು ಒತ್ತಡದಲ್ಲಿಯೇ ಉಳಿದಿದೆ.
'ಮೊಬೈಲ್ ಫೋನ್ ವಿಭಾಗದಲ್ಲಿ ಸದ್ಯಕ್ಕೆ ಯಾವುದೇ ಉದ್ಯೋಗ ಕಡಿತ ಇರುವುದಿಲ್ಲ. ಯಾಕೆಂದರೆ ಇದು ಕಂಪನಿಯ ಮುಖ್ಯ ಆದಾಯದ ಮೂಲ. ದೀಪಾವಳಿ ಸಮಯದಲ್ಲಿ ಮಾರಾಟ ಹೆಚ್ಚಾಗುವ ನಿರೀಕ್ಷೆಯಿದೆ. ಆದರೆ, ನಂತರದ ದಿನಗಳಲ್ಲಿ ಈ ಬಗ್ಗೆಯೂ ಮರುಪರಿಶೀಲನೆ ನಡೆಸಬಹುದು' ಎಂದಿದ್ದಾರೆ.
ಮತ್ತೆ ಸ್ಮಾರ್ಟ್‌ಫೋನ್ ಬೆಲೆ ಏರಿಕೆಯಾಗುತ್ತಾ?
ಸೋಮವಾರ, ಸ್ಯಾಮ್‌ಸಂಗ್ ತನ್ನ ಕೆಲವು ಸ್ಮಾರ್ಟ್‌ಫೋನ್ ಮಾಡೆಲ್‌ಗಳ ಬೆಲೆಯನ್ನು ಶೇ. 5-10ರಷ್ಟು ಹೆಚ್ಚಿಸಿದೆ. ಈ ತಿಂಗಳಲ್ಲಿ ಇದು ಮೂರನೇ ಬಾರಿಯ ಬೆಲೆ ಏರಿಕೆಯಾಗಿದೆ. ಆಲ್ ಇಂಡಿಯಾ ಮೊಬೈಲ್ ರಿಟೇಲರ್‌ಗಳ ಸಂಘದ ಪ್ರಕಾರ, ಪದೇ ಪದೇ ಬೆಲೆ ಏರಿಕೆಯಿಂದಾಗಿ ಗ್ರಾಹಕರ ಸಂಖ್ಯೆಯಲ್ಲಿ ಶೇ. 40ರಷ್ಟು ತೀವ್ರ ಕುಸಿತವಾಗಿದೆ. ಇದು ಸ್ಮಾರ್ಟ್‌ಫೋನ್ ತಯಾರಕರು ಮತ್ತು ಮಾರಾಟಗಾರರಿಗೆ ಮತ್ತೊಂದು ಸಂಕಷ್ಟ ತಂದೊಡ್ಡಿದೆ.
ಸ್ಯಾಮ್‌ಸಂಗ್ ಇಂಡಿಯಾ ತನ್ನ ಗೃಹೋಪಯೋಗಿ ಮತ್ತು ಟೆಲಿವಿಷನ್ ಸೇಲ್ಸ್ ತಂಡಗಳನ್ನು ವಿಲೀನಗೊಳಿಸುವ ಪ್ರಸ್ತಾಪವನ್ನು ಡಿಸೆಂಬರ್ ತ್ರೈಮಾಸಿಕಕ್ಕೆ ಮುಂದೂಡಿದೆ.
ಈ ಮರುರಚನೆಯು ವೆಚ್ಚವನ್ನು ಕಡಿಮೆ ಮಾಡಲು ಮತ್ತು ನಿರ್ವಹಣೆಯನ್ನು ಸುಗಮಗೊಳಿಸಲು ಸಹಾಯ ಮಾಡುತ್ತದೆ ಎಂದು ಉದ್ಯಮದ ತಜ್ಞರು ಹೇಳುತ್ತಾರೆ. ಆದರೆ, ಈ ವಿಲೀನ ಪ್ರಕ್ರಿಯೆಯನ್ನು ಮುಂದೂಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


