ಜಾಗತಿಕ ಟೆಕ್ ದಿಗ್ಗಜ ಒರಾಕಲ್ ವೆಚ್ಚ ಕಡಿತದ ಭಾಗವಾಗಿ ಮತ್ತೊಂದು ಸುತ್ತಿನ ಉದ್ಯೋಗ ಕಡಿತಕ್ಕೆ ಮುಂದಾಗುವ ಸಾಧ್ಯತೆಯಿದೆ. ಈ ಲೇಆಫ್‌ನಿಂದ ಜಾಗತಿಕವಾಗಿ 7,000-10,000 ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದು, ಭಾರತದಲ್ಲಿರುವ ಸಾವಿರಾರು ಟೆಕ್ಕಿಗಳ ಮೇಲೂ ಇದರ ಪರಿಣಾಮ ಬೀರುವ ಆತಂಕ ಎದುರಾಗಿದೆ.
ಬೆಂಗಳೂರು: ಜಾಗತಿಕ ಟೆಕ್ ದಿಗ್ಗಜ Oracle ನಲ್ಲಿ ಮತ್ತೊಂದು ಸುತ್ತಿನ ಉದ್ಯೋಗ ಕಡಿತ ನಡೆಯುವ ಸಾಧ್ಯತೆ ಇದೆ ಎಂಬ ಸುದ್ದಿ ಇದೀಗ ಉದ್ಯೋಗಿಗಳಲ್ಲಿ ಆತಂಕ ಸೃಷ್ಟಿಸಿದೆ. ಈ ಬಾರಿ ಭಾರತದಲ್ಲಿರುವ ಸಾವಿರಾರು ಉದ್ಯೋಗಿಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ವರದಿಯಾಗಿರುವುದು ಸಾವಿರಾರು ಟೆಕ್ಕಿಗಳಿಗೆ ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಾಗಿದೆ.
Oracle ಉದ್ಯೋಗ ಕಡಿತ ಯಾಕೆ?
ಮೂಲಗಳ ಪ್ರಕಾರ, ಕಂಪನಿಯು ವೆಚ್ಚ ಕಡಿತಕ್ಕೆ ಮುಂದಾಗಿದ್ದು ಹಲವು ವಿಭಾಗಗಳಲ್ಲಿ ಬಜೆಟ್‌ಗಳನ್ನು ಕಡಿಮೆ ಮಾಡುವಂತೆ ಸೂಚಿಸಲಾಗಿದೆ ಎನ್ನಲಾಗಿದೆ. ಹೀಗಾಗಿ ನಿರ್ದಿಷ್ಟ ವಿಭಾಗವೊಂದಕ್ಕೆ ಮಾತ್ರ ಸೀಮಿತವಾಗದೆ, ಹಲವು ವಿಭಾಗಗಳ ಉದ್ಯೋಗಿಗಳ ಮೇಲೆ ಉದ್ಯೋಗ ಕಡಿತದ ಪರಿಣಾಮ ಬೀರುವ ಸಾಧ್ಯತೆ ಇದೆ.
7,000-10,000 ಉದ್ಯೋಗಿಗಳೇ ಟಾರ್ಗೆಟ್?
ಕಂಪನಿ ಎಷ್ಟು ಉದ್ಯೋಗಿಗಳನ್ನ ತೆಗೆಯಲಿದೆ ಎಂಬ ಬಗ್ಗೆ ಅಧಿಕೃತ ಮಾಹಿತಿಯಿಲ್ಲ. ಆದರೆ ಉದ್ಯೋಗಿಗಳ ನಡುವೆ ಹರಿದಾಡುತ್ತಿರುವ ಆಂತರಿಕ ಅಂದಾಜು ಪ್ರಕಾರ ಜಾಗತಿಕ ಮಟ್ಟದಲ್ಲಿ ಸರಿ ಸುಮಾರು 7,000ರಿಂದ 10,000 ಉದ್ಯೋಗಿಗಳು ಕೆಲಸ ಕಳೆದುಕೊಳ್ಳಬಹುದು ಎನ್ನಲಾಗಿದೆ.
Oracle ಭಾರತೀಯ ಉದ್ಯೋಗಿಗಳ ಸಂಖ್ಯೆ ಎಷ್ಟಿದೆ?
ಒರಾಕಲ್‌ನಲ್ಲಿ ಎಷ್ಟು ಭಾರತೀಯ ಟೆಕ್ಕಿಗಳು ಉದ್ಯೋಗದಲ್ಲಿದ್ದಾರೆ ಎಂಬುದು ನಿಖರ ಮಾಹಿತಿಯಿಲ್ಲ. ಆದರೆ ಎಲ್ಲ ವಿಭಾಗಗಳ ಉದ್ಯೋಗಿಗಳ ಮೇಲೂ ಉದ್ಯೋಗ ಕಡಿತದ ಪರಿಣಾಮ ಬೀರಲಿದೆ ಎನ್ನಲಾಗಿದೆ.
ಈಗಾಗಲೇ 21 ಸಾವಿರ ಉದ್ಯೋಗ ಕಡಿತ!
ಕಳೆದ ಕೆಲವು ತಿಂಗಳಿಂದ Oracle ತನ್ನ ಉದ್ಯೋಗಿಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತಿದೆ. ಮೇ 31ಕ್ಕೆ ಅಂತ್ಯಗೊಂಡ 12 ತಿಂಗಳ ಅವಧಿಯಲ್ಲಿ ಬರೋಬ್ಬರಿ 21,000 ಉದ್ಯೋಗಿಗಳನ್ನು ಕಡಿತಗೊಳಿಸಿರುವುದಾಗಿ Oracle ಅಧಿಕೃತವಾಗಿ ತಿಳಿಸಿತ್ತು. ಇದೀಗ 7000 ರಿಂದ 10000 ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಸಾಧ್ಯತೆಯೂ ಇದೆ ಎಂಬ ಬಗ್ಗೆ ವರದಿಯಾಗಿದೆ.
ಸೆಪ್ಟಂಬರ್‌ನಲ್ಲಿ ಉದ್ಯೋಗ ಕಡಿತ ನೋಟಿಸ್?
ಈಗ ತಿಳಿದುಬಂದಿರುವ ಮಾಹಿತಿ ಪ್ರಕಾರ ಒರಾಕಲ್ ಇದೇ ತಿಂಗಳು(ಸೆಪ್ಟೆಂಬರ್) ಆರಂಭ ಅಥವಾ ಮಧ್ಯಭಾಗದಲ್ಲಿ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ ಎಂದು ಕೆಲ ಉದ್ಯೋಗಿಗಳಿಗೆ ತಿಳಿಸಲಾಗಿದೆ ಎಂದು ವರದಿಯಾಗಿದೆ. ಈ ಹಿಂದೆಯೂ ಕೂಡ ಸೆಪ್ಟೆಂಬರ್ 1 ಚರ್ಚೆಯಾಗಿತ್ತು.. ಇತ್ತೀಚಿನ ಚರ್ಚೆಗಳಲ್ಲಿ ಸೆಪ್ಟೆಂಬರ್ 15 ಕೂಡ ಮತ್ತೊಂದು ಸಾಧ್ಯತೆಯ ದಿನಾಂಕವಾಗಿ ಕೇಳಿಬಂದಿದೆ.
ಸಿನಿಯರ್ ಟೆಕ್ಕಿಗಳಿಗೆ ಆತಂಕ
ಹಿರಿಯ ಟೆಕ್ಕಿಗಳು ಉದ್ಯೋಗ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಆದರಿನ್ನೂ ಕೆಲಸ ಕಳೆದುಕೊಳ್ಳುವವರ ಅಂತಿಮ ಪಟ್ಟಿ ಬಗ್ಗೆ ಮ್ಯಾನೇಜರ್‌ಗಳಿಗೂ ಸಂಪೂರ್ಣ ಮಾಹಿತಿ ಇಲ್ಲ ಎನ್ನಲಾಗಿದೆ. ಹೀಗಾಗಿ ಯಾವ ತಂಡ, ವಿಭಾಗ ಅಥವಾ ಯಾವ ಉದ್ಯೋಗಿಗಳ ಮೇಲೆ ಪರಿಣಾಮ ಬೀಳಲಿದೆ ಎಂಬುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ. ವಿಶೇಷವಾಗಿ ಹಿರಿಯ ಹುದ್ದೆಯಲ್ಲಿರುವವರು ಹಾಗೂ ಹೆಚ್ಚಿನ ವೇತನ ಪಡೆಯುತ್ತಿರುವ ಉದ್ಯೋಗಿಗಳಲ್ಲಿ ಆತಂಕ ಹೆಚ್ಚಾಗಿದೆ ಎಂದು ಬೆಳವಣಿಗೆ ಬಗ್ಗೆ ಮಾಹಿತಿ ಹೊಂದಿರುವವರು ತಿಳಿಸಿದ್ದಾರೆ.
ಬಜೆಟ್ ಕಡಿತವೇ ಉದ್ಯೋಗಿಗಳ ತೆಗೆಯಲು ಕಾರಣ?
ಈ ಬಾರಿ ನಿರ್ದಿಷ್ಟ ಬಿಸಿನೆಸ್ ಯುನಿಟ್ ಅಥವಾ ವಿಭಾಗದ ಪುನರ್‌ರಚನೆಗಿಂತಲೂ ಒಟ್ಟಾರೆ ವೆಚ್ಚ ಕಡಿತದ ಗುರಿ ಪ್ರಮುಖ ಕಾರಣವಾಗಿರಬಹುದು ಎನ್ನಲಾಗಿದೆ. ಮ್ಯಾನೇಜರ್‌ಗಳು ಮತ್ತು ತಂಡಗಳಿಗೆ ವೆಚ್ಚ ಕಡಿಮೆ ಮಾಡುವಂತೆ ಸೂಚಿಸಲಾಗಿದ್ದು ಅದರ ಭಾಗವಾಗಿ ಉದ್ಯೋಗಿಗಳ ಸಂಖ್ಯೆಯನ್ನೂ ಕಡಿಮೆ ಮಾಡುವ ಸಾಧ್ಯತೆ ಇದೆ.
Oracle ಉದ್ಯೋಗ ಕಡಿತದಿಂದ ಭಾರತಕ್ಕೆ ದೊಡ್ಡ ಹೊಡೆತ?
Oracle ಜಾಗತಿಕವಾಗಿ ಉದ್ಯೋಗಿಗಳನ್ನ ತೆಗೆಯಲು ಮುಂದಾಗಿದೆ. ಒರಾಕಲ್‌ನಲ್ಲಿ ಭಾರತದ ಉದ್ಯೋಗಿಗಳ ಸಂಖ್ಯೆ ಹೆಚ್ಚಿದೆ. ಎಂಜಿನಿಯರಿಂಗ್, ಕ್ಲೌಡ್, ಸಪೋರ್ಟ್ ಸೇರಿದಂತೆ ಹಲವು ಪ್ರಮುಖ ತಂತ್ರಜ್ಞಾನ ತಂಡಗಳು ಭಾರತದಲ್ಲಿವೆ. ಹೀಗಾಗಿ ಕಂಪನಿಯು ಸಾವಿರಾರು ಉದ್ಯೋಗ ಕಡಿತ ಮಾಡಿದರೆ, ಅದರ ಪರಿಣಾಮ ಭಾರತದಲ್ಲಿರುವ ಉದ್ಯೋಗಿಗಳ ಮೇಲೂ ದೊಡ್ಡ ಪ್ರಮಾಣದಲ್ಲಿ ಬೀಳುವ ಸಾಧ್ಯತೆ ಇದೆ.
AI, ಕ್ಲೌಡ್‌ನಲ್ಲಿ ಹೂಡಿಕೆ... ಮತ್ತೊಂದೆಡೆ ವೆಚ್ಚ ಕಡಿತ!
Oracle ಒಂದೆಡೆ ಕ್ಲೌಡ್ ಮೂಲಸೌಕರ್ಯ ಎಐ ಕ್ಷೇತ್ರದಲ್ಲಿ ಭಾರೀ ಹೂಡಿಕೆ ಮಾಡುತ್ತಿದೆ. ಮತ್ತೊಂದೆಡೆ ವೆಚ್ಚವನ್ನು ನಿಯಂತ್ರಿಸಿ, ಬದಲಾಗುತ್ತಿರುವ ವ್ಯವಹಾರ ಆದ್ಯತೆಗಳಿಗೆ ಅನುಗುಣವಾಗಿ ಉದ್ಯೋಗಿಗಳ ಸಂಖ್ಯೆಯನ್ನು ಹೊಂದಾಣಿಕೆ ಮಾಡಲು ಪ್ರಯತ್ನಿಸುತ್ತಿದೆ. ಆದರೆ ಸಂಭವನೀಯ ಉದ್ಯೋಗ ಕಡಿತದ ಬಗ್ಗೆ Oracle ಇದುವರೆಗೆ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ. ಈ ಕುರಿತು ಪ್ರತಿಕ್ರಿಯೆ ಕೇಳಿದರೂ ಕಂಪನಿ ತಕ್ಷಣ ಪ್ರತಿಕ್ರಿಯಿಸಿಲ್ಲ.
ಸೆಪ್ಟೆಂಬರ್ 11ರ ಫಲಿತಾಂಶಕ್ಕೂ ಮುನ್ನವೇ ಚರ್ಚೆ
Oracleನ ಮುಂದಿನ ತ್ರೈಮಾಸಿಕ ಹಣಕಾಸು ಫಲಿತಾಂಶಗಳು ಸೆಪ್ಟೆಂಬರ್ 11ರಂದು ಪ್ರಕಟವಾಗಲಿವೆ. ಇದಕ್ಕೂ ಮುನ್ನ ಉದ್ಯೋಗ ಕಡಿತದ ಸಾಧ್ಯತೆ ಕುರಿತು ಭಾರೀ ಚರ್ಚೆಗಳು ನಡೆಯುತ್ತಿವೆ. ಒಟ್ಟಾರೆ ಒರಾಕಲ್ ಮತ್ತೊಮ್ಮೆ ಉದ್ಯೋಗ ಕಡಿತ ಮಾಡುತ್ತದೆಯೇ? ಇದೆಲ್ಲ ಊಹಾಪೋಹವೇ? ಒಂದು ವೇಳೆ ಉದ್ಯೋಗ ಕಡಿತಕ್ಕೆ ಮುಂದಾದೆ ಭಾರತದಲ್ಲಿನ ಎಷ್ಟು ಉದ್ಯೋಗಿಗಳ ಕೆಲಸ ಕಳೆದುಕೊಳ್ಳಲಿದ್ದಾರೆ? ಅದರ ಮುಂದಿನ ಪರಿಣಾಮಗಳೇನು ಎಂಬ ಪ್ರಶ್ನೆಗಳಿಗೆ Oracleನ ಅಧಿಕೃತ ಘೋಷಣೆಯ ಬಳಿಕವಷ್ಟೇ ಸ್ಪಷ್ಟ ಉತ್ತರ ಸಿಗಲಿದೆ.


