ಎಫ್‌ಎಟಿಎಫ್ ಸಭೆಗೆ ಮುನ್ನ, ಪಾಕಿಸ್ತಾನವು ಜೈಶ್ ಮುಖ್ಯಸ್ಥ ಮಸೂದ್ ಅಜರ್‌ನನ್ನು ಮೋಸ್ಟ್ ವಾಂಟೆಡ್ ಪಟ್ಟಿಗೆ ಸೇರಿಸಿ, ಅವನ ತಲೆಗೆ 70 ಲಕ್ಷ ಪಿಕೆಆರ್ ಬಹುಮಾನ ಘೋಷಿಸಿದೆ. ಪಾಕಿಸ್ತಾನವು ಅಜರ್ ಅಫ್ಘಾನಿಸ್ತಾನದಲ್ಲಿದ್ದಾನೆಂದು ಹೇಳಿಕೊಂಡರೂ, ಭಾರತ ಇದನ್ನು ಒಪ್ಪಿಲ್ಲ.

ನವದೆಹಲಿ (ಸೆ.14): ಆಗಸ್ಟ್ ಅಥವಾ ಅಕ್ಟೋಬರ್‌ನಲ್ಲಿ ನಡೆಯಲಿರುವ ಎಫ್‌ಎಟಿಎಫ್ (FATF - Financial Action Task Force) ಸಭೆಗೆ ಮುನ್ನ ಅಂತಾರಾಷ್ಟ್ರೀಯ ಮಟ್ಟದ ಕಣ್ಣೊರೆಸುವ ತಂತ್ರಕ್ಕೆ ಮುಂದಾಗಿರುವ ಪಾಕಿಸ್ತಾನ, ಜೈಶ್-ಎ-ಮೊಹಮ್ಮದ್ (JeM) ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್‌ನನ್ನು ಮೋಸ್ಟ್‌ ವಾಂಟೆಡ್‌ (Most Wanted Terrorists) ಪಟ್ಟಿಗೆ ಸೇರಿಸಿದೆ. ಅಲ್ಲದೆ ಆತನ ತಲೆಯ ಮೇಲಿದ್ದ ಇನಾಮಿನ ಮೊತ್ತವನ್ನು 70 ಲಕ್ಷ ಪಾಕಿಸ್ತಾನಿ ರೂಪಾಯಿಗೆ (PKR) ಏರಿಕೆ ಮಾಡಿದೆ.

ಪಾಕಿಸ್ತಾನದ ಫೆಡರಲ್ ತನಿಖಾ ಸಂಸ್ಥೆ (FIA) ಬಿಡುಗಡೆ ಮಾಡಿರುವ 2026 ರ ನವೀಕೃತ ‘ರೆಡ್ ಬುಕ್’ನಲ್ಲಿ ಮಸೂದ್ ಅಜರ್‌ ಹೆಸರನ್ನು ಪ್ರಮುಖವಾಗಿ ಸೇರ್ಪಡೆಗೊಳಿಸಲಾಗಿದೆ. ಎಫ್‌ಎಟಿಎಫ್‌ನ ನಿಗಾ ಪಟ್ಟಿ ಅಥವಾ 'ಗ್ರೇ ಲಿಸ್ಟ್'ಗೆ (Grey List) ಮರಳಿ ಸೇರ್ಪಡೆಯಾಗುವುದನ್ನು ತಪ್ಪಿಸಿಕೊಳ್ಳುವ ಉದ್ದೇಶದಿಂದ ಪಾಕಿಸ್ತಾನ ಈ ಹೆಜ್ಜೆ ಇಟ್ಟಿದೆ ಎಂದು 'ಎಎನ್ಐ' ವರದಿ ಮಾಡಿದೆ.

ಮಸೂದ್ ಅಜರ್ ಎಲ್ಲಿದ್ದಾನೆ?: ಪಾಕಿಸ್ತಾನದ ಸುಳ್ಳು ಬಯಲು

ಮಸೂದ್ ಅಜರ್ 2021 ರಲ್ಲೇ ಪಾಕಿಸ್ತಾನವನ್ನು ತೊರೆದು ಅಫ್ಘಾನಿಸ್ತಾನಕ್ಕೆ ಓಡಿಹೋಗಿದ್ದಾನೆ ಎಂದು ಇಸ್ಲಾಮಾಬಾದ್ ಅಂದಿನಿಂದಲೂ ಹೇಳುತ್ತಾ ಬಂದಿತ್ತು. 2021 ರಲ್ಲಿ ಆತನ ಸುಳಿವು ನೀಡಿದವರಿಗೆ 50 ಲಕ್ಷ ಪಿಕೆಆರ್ ಬಹುಮಾನ ಘೋಷಿಸಿದ್ದ ಎಫ್‌ಐಎ, ಈಗ ಅದನ್ನು 70 ಲಕ್ಷ ಪಿಕೆಆರ್ ಗೆ ಹೆಚ್ಚಿಸಿದೆ. ಆದರೆ, ಭಾರತೀಯ ಗೂಢಚಾರಿ ಸಂಸ್ಥೆಗಳು ಕಳೆದ ಆರು ತಿಂಗಳಲ್ಲಿ ನಡೆಸಿದ ತಾಂತ್ರಿಕ ವಿಶ್ಲೇಷಣೆಯ ಪ್ರಕಾರ, ಮಸೂದ್ ಅಜರ್ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ನವಾಬ್‌ಶಾ ನಗರದಲ್ಲಿ ರಹಸ್ಯವಾಗಿ ಅಡಗಿಕುಳಿತಿದ್ದಾನೆ ಎಂಬುದು ಬಹಿರಂಗವಾಗಿದೆ. 2019 ರ ಭೀಕರ ಪುಲ್ವಾಮಾ ದಾಳಿ ಸೇರಿದಂತೆ ಭಾರತದಲ್ಲಿ ನಡೆದ ಹಲವು ಪ್ರಮುಖ ಭಯೋತ್ಪಾದಕ ದಾಳಿಗಳ ರೂವಾರಿಯಾಗಿದ್ದ ಆತನನ್ನು ಭಾರತ ಸರ್ಕಾರ ಈಗಾಗಲೇ ಜಾಗತಿಕ ಉಗ್ರ ಎಂದು ಘೋಷಿಸಿದೆ.

26/11 ಮುಂಬೈ ದಾಳಿಯ 19 ಉಗ್ರರೂ ರೆಡ್ ಬುಕ್‌ನಲ್ಲಿ!

ಎಫ್‌ಐಎ ಬಿಡುಗಡೆ ಮಾಡಿರುವ ರೆಡ್ ಬುಕ್‌ನಲ್ಲಿ 2008 ರ 26/11 ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿದ್ದ 19 ಮಂದಿಯ ಹೆಸರುಗಳನ್ನು ಸೇರಿಸಲಾಗಿದೆ. ಉಗ್ರರಿಗೆ ಆರ್ಥಿಕ ನೆರವು ನೀಡಿದವರು ಹಾಗೂ ದಾಳಿಕೋರರಿಗೆ ದೋಣಿಗಳ ವ್ಯವಸ್ಥೆ ಮಾಡಿದವರ ಹೆಸರುಗಳೂ ಇದರಲ್ಲಿವೆ.

ಮೂಲಗಳ ಪ್ರಕಾರ, ಈ ಪೈಕಿ 17 ಉಗ್ರರ ಭಾವಚಿತ್ರಗಳು ಹಾಗೂ ಅವರ ಕಾರ್ಯಾಚರಣೆಯ ವಿವರಗಳನ್ನು ಪಟ್ಟಿಯಲ್ಲಿ ಪ್ರಕಟಿಸಲಾಗಿದೆ. ಆದರೆ, ಪ್ರಮುಖ ಇಬ್ಬರು ಉಗ್ರರ ಭಾವಚಿತ್ರಗಳು, ಲಷ್ಕರ್-ಎ-ತೊಯ್ಬಾ (LeT) ಜೊತೆಗಿನ ನಂಟು ಹಾಗೂ ಅವರ ಕಾರ್ಯಾಚರಣೆಯ ವಿವರಗಳನ್ನು ತನಿಖಾ ಸಂಸ್ಥೆಯು ಪಟ್ಟಿಯಿಂದ ರಹಸ್ಯವಾಗಿ ತೆಗೆದುಹಾಕಿದೆ ಎನ್ನಲಾಗಿದೆ. ಹಲವು ಆರೋಪಿಗಳು ವರ್ಷಗಳಿಂದ ತಲೆಮರೆಸಿಕೊಂಡಿದ್ದಾರೆ ಎಂಬ ಪಾಕಿಸ್ತಾನದ ವಾದವನ್ನು ಭಾರತೀಯ ಮೂಲಗಳು ಪ್ರಶ್ನಿಸಿದ್ದು, ಗೂಢಚಾರಿ ಮಾಹಿತಿಗಳ ಪ್ರಕಾರ ಈ ಎಲ್ಲಾ ಉಗ್ರರು ಪಾಕಿಸ್ತಾನದೊಳಗೇ ಸುರಕ್ಷಿತವಾಗಿ ನೆಲೆಸಿದ್ದಾರೆ ಎಂದು ಆರೋಪಿಸಿವೆ.

ಉಗ್ರರ ಪಟ್ಟಿಯಲ್ಲಿ ಶೇ. 35 ರಷ್ಟು ಏರಿಕೆ:

ಎಫ್‌ಐಎ ಬಿಡುಗಡೆ ಮಾಡಿರುವ ನೂತನ ಪಟ್ಟಿಯಲ್ಲಿ ಒಟ್ಟು 1,804 ಮೋಸ್ಟ್ ವಾಂಟೆಡ್ ಉಗ್ರರ ಹೆಸರುಗಳಿವೆ. 2021 ರ ರೆಡ್ ಬುಕ್‌ನಲ್ಲಿ ಈ ಸಂಖ್ಯೆ 1,330 ಇತ್ತು. ಅಂದರೆ ಕಳೆದ ಐದು ವರ್ಷಗಳಲ್ಲಿ ಪಾಕಿಸ್ತಾನದಲ್ಲಿ ಮೋಸ್ಟ್ ವಾಂಟೆಡ್ ಉಗ್ರರ ಸಂಖ್ಯೆ ಸುಮಾರು ಶೇ. 35 ರಷ್ಟು ಹೆಚ್ಚಾಗಿದೆ.

'ಆಪರೇಷನ್ ಸಿಂಧೂರ್' ಮತ್ತು ಜೈಶ್ ಪ್ರಧಾನ ಕಚೇರಿ ಧ್ವಂಸ

ಪಾಕಿಸ್ತಾನದ ಈ ದಿಢೀರ್ ಬೆಳವಣಿಗೆಯ ಹಿಂದೆ ಭಾರತೀಯ ಸಶಸ್ತ್ರ ಪಡೆಗಳು ನಡೆಸಿದ 'ಆಪರೇಷನ್ ಸಿಂಧೂರ್' (Operation Sindoor) ಭೀತಿಯೂ ಇದೆ ಎನ್ನಲಾಗಿದೆ. ಕೆಲವು ತಿಂಗಳ ಹಿಂದಷ್ಟೇ ಭಾರತೀಯ ಪಡೆಗಳು ಬಹಾವಲ್‌ಪುರದಲ್ಲಿದ್ದ ಜೈಶ್-ಎ-ಮೊಹಮ್ಮದ್‌ನ ಪ್ರಮುಖ ಪ್ರಧಾನ ಕಚೇರಿಯಾಗಿದ್ದ 'ಮರ್ಕಝ್ ಸುಭಾನ್ ಅಲ್ಲಾ' ಮೇಲೆ ನಿಖರ ಕ್ಷಿಪಣಿ ದಾಳಿ (Precision Strikes) ನಡೆಸಿ ಧ್ವಂಸಗೊಳಿಸಿದ್ದವು. 2015 ರಿಂದ ಸಕ್ರಿಯವಾಗಿದ್ದ ಈ ಸಂಕೀರ್ಣವು ಜೈಶ್ ಉಗ್ರರ ತರಬೇತಿ, ಧಾರ್ಮಿಕ ಮೂಲಭೂತವಾದ (Indoctrination) ಹಾಗೂ ಭಯೋತ್ಪಾದಕ ಕಾರ್ಯಾಚರಣೆಗಳ ಕೇಂದ್ರ ಬಿಂದುವಾಗಿತ್ತು. ಭೀಕರ ಪುಲ್ವಾಮಾ ದಾಳಿ ಸೇರಿದಂತೆ ಹಲವು ಸರಣಿ ದಾಳಿಗಳಿಗೆ ಇದೇ ಕಚೇರಿಯಲ್ಲಿ ಸಂಚು ರೂಪಿಸಲಾಗಿತ್ತು.