ಒಂದು ಕಾಲದಲ್ಲಿ ವಿಶ್ವದ ಹಲವು ದೇಶಗಳ ವಿಭಜನೆಗೆ ಕಾರಣವಾಗಿದ್ದ ಬ್ರಿಟನ್ ಇದೀಗ ಸ್ವತಃ ವಿಭಜನೆಯ ಆತಂಕ ಎದುರಿಸುತ್ತಿದೆ. ಬ್ರಿಟನ್‌ನ ಭಾಗವಾಗಿರುವ ಸ್ಕಾಟ್ಲೆಂಡ್, ವೇಲ್ಸ್ ಮತ್ತು ಉತ್ತರ ಐರ್ಲೆಂಡ್‌ನ ನಾಯಕರು ಪ್ರತ್ಯೇಕಗೊಳ್ಳುವ ಕುರಿತು ಚರ್ಚಿಸಲು ಸಭೆ ಸೇರುತ್ತಿದ್ದು, ಸ್ವಾತಂತ್ರ್ಯಕ್ಕಾಗಿ ಹೊಸ ಜನಮತ ಸಂಗ್ರಹದ ಸಾಧ್ಯತೆಗಳಿವೆ.
ಲಂಡನ್ : ಒಂದು ಕಾಲದಲ್ಲಿ ವಿಶ್ವದ 65 ದೇಶಗಳನ್ನು ಆಳಿದ್ದ, ಭಾರತ ಸೇರಿ ಹಲವು ದೇಶಗಳ ವಿಭಜನೆಗೆ ಕಾರಣವಾಗಿದ್ದ ಬ್ರಿಟನ್‌ಗೇ ಇದೀಗ ಸ್ವತಃ ವಿಭಜನೆಯ ಆತಂಕ ಶುರುವಾಗಿದೆ. ಬ್ರಿಟನ್‌ನ ಭಾಗವಾದ ಸ್ಕಾಟ್ಲೆಂಡ್, ವೇಲ್ಸ್ ಮತ್ತು ಉತ್ತರ ಐರ್ಲೆಂಡ್‌ನ ನಾಯಕರು ಸೋಮವಾರ ಕಾರ್ಡಿಫ್‌ನಲ್ಲಿ ಸಭೆ ಸೇರಿ ಬ್ರಿಟನ್‌ನಿಂದ ಪ್ರತ್ಯೇಕಗೊಳ್ಳುವ ನಿರ್ಣಯ ಘೋಷಿಸುವ ನಿರೀಕ್ಷೆ ಇದೆ.
ಈ ಸಭೆಯಲ್ಲಿ ಮೂರು ಪ್ರದೇಶಗಳ ಸರ್ಕಾರದ ಮುಖ್ಯಸ್ಥರು ಪಾಲ್ಗೊಳ್ಳಲಿದ್ದಾರೆ. ಸ್ವಾತಂತ್ರ್ಯದ ಕುರಿತು ಸ್ವಯಂ ಘೋಷಣಾ ಪತ್ರಕ್ಕೆ ಸಹಿಹಾಕಲಿದ್ದಾರೆ ಎನ್ನಲಾಗಿದೆ. ಈ ಸಭೆಯ ಮುಖ್ಯ ಉದ್ದೇಶ ಬ್ರಿಟನ್ ಅನ್ನು ಮೂರು ಭಾಗಗಳಾಗಿ ವಿಭಾಗಿಸುವುದು ಹಾಗೂ ಸ್ವಾತಂತ್ರ್ಯಕ್ಕಾಗಿ ಹೊಸ ಜನಮತ ಸಂಗ್ರಹಿಸುವ ದಾರಿಯನ್ನು ಸುಲಭಗೊಳಿಸುವುದೇ ಆಗಿದೆ ಎನ್ನಲಾಗಿದೆ.
ಸ್ಕಾಟ್ಲೆಂಡ್, ವೇಲ್ಸ್, ಉ.ಐರ್ಲೆಂಡ್ ನಾಯಕರ ಸಭೆ
ರಾಜಕೀಯ ಪಂಡಿತರ ಪ್ರಕಾರ ಬ್ರಿಟನ್‌ನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸ್ಕಾಟ್ಲೆಂಡ್, ವೇಲ್ಸ್ ಮತ್ತು ಉತ್ತರ ಐರ್ಲೆಂಡ್‌ನಲ್ಲಿ ಏಕಕಾಲದಲ್ಲಿ ಸ್ವಾತಂತ್ರ್ಯಕ್ಕೆ ಬೆಂಬಲ ನೀಡುವ ಸರ್ಕಾರ ಅಧಿಕಾರದಲ್ಲಿದೆ. ಈ ಬೆಳವಣಿಗೆಯಿಂದ ಬ್ರಿಟನ್‌ನ ನೂತನ ಪ್ರಧಾನಿ ಆ್ಯಂಡಿ ಬರ್ನ್‌ಹ್ಯಾಮ್ ಅವರ ಸಂಕಷ್ಟ ಹೆಚ್ಚಾಗಿದೆ.
ಬ್ರಿಟನ್ ಪ್ರಧಾನಿ ಆ್ಯಂಡಿ ಬರ್ನ್‌ಹ್ಯಾಮ್ ಅವರು ಈ ಮೂರು ಭಾಗಗಳ ಸ್ವಾತಂತ್ರ್ಯದ ವಿಚಾರದಲ್ಲಿ ರಾಷ್ಟ್ರದಲ್ಲಿ ಸಹಮತ ವ್ಯಕ್ತವಾದರೆ ಸರ್ಕಾರವು ಮತ್ತೊಂದು ಜನಮತ ಸಂಗ್ರಹಕ್ಕೆ ಅನುಮತಿ ನೀಡಲಿದೆ ಎಂದು ಹೇಳಿಕೆ ನೀಡಿದ್ದರು. ಎರಡು ದಿನಗಳ ಹಿಂದಷ್ಟೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಾವು ಸಂಯುಕ್ತ ಐರ್ಲೆಂಡ್ ಅನ್ನು ನೋಡಲು ಬಯಸುವುದಾಗಿ ಹೇಳಿದ್ದರು. ಇದರ ಬೆನ್ನಲ್ಲೇ ಇದೀಗ ಈ ಸಮ್ಮೇಳನ ನಡೆಯುತ್ತಿರುವುದು ತೀವ್ರ ಕುತೂಹಲ ಮೂಡಿಸಿದೆ.


