Karwar: ಮೀನುಗಾರರ ವಾದಕ್ಕೆ ಪುಷ್ಠಿ: ಸಮುದ್ರತೀರದಲ್ಲಿ ಆಮೆಗಳ ನೂರಾರು ಮೊಟ್ಟೆ ಪತ್ತೆ!
*ಖಾಸಗಿ ವಾಣಿಜ್ಯ ಬಂದರು ನಿರ್ಮಾಣ ಕಾಮಗಾರಿಗೆ ವಿರೋಧ
*ಮೀನುಗಾರರ ವಿರೋಧ ಲೆಕ್ಕಿಸದೇ ಬಂದರು ನಿರ್ಮಾಣ
*ಸಮುದ್ರತೀರದಲ್ಲಿ ಆಮೆಗಳ ನೂರಾರು ಮೊಟ್ಟೆಗಳು ಪತ್ತೆ
*ಮೀನುಗಾರರ ವಾದಕ್ಕೆ ಪುಷ್ಠಿ ಆಮೆ ಮೊಟ್ಟೆಗಳು, ಮರಿಗಳು
*ಅಪರೂಪದ ಆಮೆ ಸಂತತಿ ನಾಶಕ್ಕೆ ಕಾರಣವಾಗುವ ಆತಂಕ
ಕಾರವಾರ (ಮಾ. 14): ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಕಾಸರಕೋಡು ಶರಾವತಿ ಅಳಿವೆ ಪ್ರದೇಶದಲ್ಲಿ ಕೇಂದ್ರ ಸರಕಾರದ ಯೋಜನೆಯಾದ ಖಾಸಗಿ ವಾಣಿಜ್ಯ ಬಂದರು ನಿರ್ಮಾಣಕ್ಕೆ ಯೋಜನೆಯನ್ನು ರೂಪಿಸಲಾಗಿದೆ. ಬಂದರಿಗೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಕಳೆದೆರಡು ವರ್ಷಗಳ ಹಿಂದೆ ರಸ್ತೆ ನಿರ್ಮಾಣ ಕಾಮಗಾರಿಯನ್ನು ಪ್ರಾರಂಭಿಸಿದ್ದು, ಸ್ಥಳೀಯ ಮೀನುಗಾರರಿಂದ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಮೀನುಗಾರಿಕೆ ನಡೆಸಲು ಅವಲಂಬಿತವಾಗಿರುವ ಹಾಗೂ ಕಡಲಾಮೆಗಳ ಆವಾಸಸ್ಥಾನವಿರುವ ಪ್ರದೇಶದಲ್ಲಿ ಬಂದರು ನಿರ್ಮಾಣಕ್ಕೆ ಮುಂದಾಗಿದ್ದು ಮೀನುಗಾರರು ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದರು.
ಆದರೆ ಮೀನುಗಾರರ ಆರೋಪವನ್ನು ತಳ್ಳಿಹಾಕಿದ್ದ ಅಧಿಕಾರಿಗಳು ಉದ್ದೇಶಿತ ಬಂದರು ನಿರ್ಮಾಣ ಪ್ರದೇಶದಲ್ಲಿ ಆಮೆಗಳ ಓಡಾಟ ಇಲ್ಲ ಎಂದು ಕಾಮಗಾರಿಯನ್ನು ಮುಂದುವರೆಸಿದ್ದರು. ಅದಾದ ಬಳಿಕ ಅದೇ ಪ್ರದೇಶದಲ್ಲಿ ಆಮೆಗಳ ಗೂಡುಗಳು ಪತ್ತೆಯಾಗಿದ್ದು, ಇದೀಗ ಆಮೆಯ ಮೊಟ್ಟೆಗಳಿಂದ ನೂರಾರು ಮರಿಗಳು ಹೊರಬಂದಿವೆ. ಕಳೆದೆರಡು ತಿಂಗಳ ಹಿಂದೆ ಕಾಸರಕೋಡು ಅಳಿವೆ ಪ್ರದೇಶದಲ್ಲಿ ಮೂರು ಕಡೆ ಆಮೆ ಗೂಡುಗಳು ಇರುವುದು ಪತ್ತೆಯಾಗಿದ್ದು, ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.
ಇದನ್ನೂ ಓದಿ: Uttara Kannada: ವಿಷಕಾರಿಯಾಗಿ ಬದಲಾದ ಯಲ್ಲಾಪುರದ ಹೊಸಳ್ಳಿ ಕೆರೆ!
ಅದರಂತೆ ಆಮೆಗಳು ಮೊಟ್ಟೆ ಇಟ್ಟ ಪ್ರದೇಶದಲ್ಲೇ ಅವುಗಳಿಗೆ ಪಂಜರ ನಿರ್ಮಿಸಿ ಮೊಟ್ಟೆಗಳನ್ನು ಸಂರಕ್ಷಿಸಲಾಗಿತ್ತು. ನಿನ್ನೆ ತಡರಾತ್ರಿಯಿಂದ ಮರಿಗಳು ಹೊರಬರುತ್ತಿದ್ದು, ಅವುಗಳನ್ನು ಸುರಕ್ಷಿತವಾಗಿ ಇರಿಸಿದ್ದ ಸ್ಥಳೀಯ ಮೀನುಗಾರರು ಇಂದು ಬೆಳಿಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ನೂರಕ್ಕೂ ಅಧಿಕ ಆಮೆಯ ಮರಿಗಳನ್ನು ಸಮುದ್ರಕ್ಕೆ ಸೇರಿಸಿದ್ದಾರೆ. ಆಲಿವ್ ರಿಡ್ಲೇ ಪ್ರಭೇದ ಕಡಲಾಮೆಯ ಮರಿಗಳು ಇವಾಗಿದ್ದು, ಇಂತಹ ಪ್ರದೇಶದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದರಿಂದ ಅವುಗಳ ಸಂತತಿ ನಾಶಕ್ಕೆ ಕಾರಣವಾಗುತ್ತದೆ ಅನ್ನೋದು ಕಡಲಜೀವ ವಿಜ್ಞಾನಿಗಳ ಅಭಿಪ್ರಾಯ.