Uttara Kannada: ವಿಷಕಾರಿಯಾಗಿ ಬದಲಾದ ಯಲ್ಲಾಪುರದ ಹೊಸಳ್ಳಿ ಕೆರೆ!
*ಖಾಸಗಿ ಸಂಸ್ಥೆ ಬಿಡುವ ವಿಷಕಾರಿ ನೀರಿನಿಂದ ನೀರು ಸಂಪೂರ್ಣ ಕಲುಷಿತ
*ವಿಷಕಾರಿ ಕೆರೆ ನೀರಿನಿಂದಾಗಿ ಅಂತರ್ಜಲ ಕೂಡಾ ಕಲುಷಿತ ?
*28 ಎಕರೆ ಪ್ರದೇಶದಲ್ಲಿ ಹಬ್ಬಿಕೊಂಡಿರುವ ಕಿರುವತ್ತಿಯ ಹೊಸಳ್ಳಿ ಕೆರೆ
*ಕೆಮಿಕಲ್ ಮಿಶ್ರಿತ ನೀರು, ತ್ಯಾಜ್ಯ ನೀರು ನೇರವಾಗಿ ಹೊಸಳ್ಳಿ ಕೆರೆಗೆ
ಉತ್ತರ ಕನ್ನಡ (ಮಾ. 14): ಹಳ್ಳಿಯ ಜನರಿಗೆ ಹಾಗೂ ಜಾನುವಾರುಗಳಿಗೆ ಬಳಕೆಯಾಗುತ್ತಿದ್ದ ಉತ್ತರಕನ್ನಡ (Uttara Kannada) ಜಿಲ್ಲೆಯ ಯಲ್ಲಾಪುರ ತಾಲೂಕಿನ ಕಿರುವತ್ತಿಯ ಹೊಸಳ್ಳಿ ಕೆರೆ ಸಂಪೂರ್ಣ ವಿಷಕಾರಿಯಾಗಿ ಮಾರ್ಪಾಡಾಗಿದೆ. ಐಸ್ ಕ್ರೀಂ ತಯಾರಿಕಾ ಕಂಪನಿ ಹಾಗೂ ಹಾಲು ಉತ್ಪನ್ನಗಳ ತಯಾರಿಕಾ ಕಂಪೆನಿಯಿಂದ ಬಿಡುಗಡೆಯಾಗು ಕೆಮಿಕಲ್ ಮಿಶ್ರಿತ ನೀರು ಹಾಗೂ ಜನರು ಬಿಡುವ ತ್ಯಾಜ್ಯ ನೀರು ನೇರವಾಗಿ ಹೊಸಳ್ಳಿ ಕೆರೆಗೆ ಸೇರುವುದರಿಂದ ಕೆರೆ ನೀರು ಸಂಪೂರ್ಣ ವಿಷವಾಗಿದೆ ಎಂಬ ಆರೋಪಗಳು ಸ್ಥಳೀಯರಿಂದ ಕೇಳಿ ಬರುತ್ತಿವೆ.
ಇದನ್ನೂ ಓದಿ: Sagarmala ಯೋಜನೆಗೆ ವಿರೋಧ, ಶಾಸಕಿ ಹಾಗೂ ಮೀನುಗಾರರ ನಡುವೆ ವಾಕ್ಸಮರ!
ಈ ಕೆರೆಯ ಬಳಿ ಸುಳಿಯಲು ಕೂಡಾ ಸಾಧ್ಯವಾಗದ ರೀತಿಯಲ್ಲಿ ದುರ್ವಾಸನೆ ಬರುತ್ತಿದ್ದು, ಕಿರುವತ್ತಿಯ ಜನರು ಇದರಿಂದ ಸಾಕಷ್ಟು ರೋಸಿಹೋಗಿದ್ದಾರೆ. ಇದರಿಂದಾಗಿ ಸ್ಥಳೀಯರ ಒತ್ತಾಯದ ಮೇರೆಗೆ ಯಲ್ಲಾಪುರ ತಾಲೂಕು ಆರೋಗ್ಯ ಅಧಿಕಾರಿಯ ಮೂಲಕ ನೀರು ಪರೀಕ್ಷಣೆ ಮಾಡಲಾಗಿದ್ದು, ಈ ಕೆರೆ ನೀರಿನ ಪಿಎಚ್ ಪ್ರಮಾಣ ಭಾರೀ ಹೆಚ್ಚಿದ್ದು, ನೀರಿನಲ್ಲಿ ಪ್ರತೀ 100 ಎಂಎಲ್ ನೀರಿಗೆ 1800 ಪ್ರಮಾಣದಷ್ಟು (MPN Count) ಬ್ಯಾಕ್ಟೀರಿಯಾಗಳು ಕೂಡಾ ಪತ್ತೆಯಾಗಿವೆ. ಈ ಕೆರೆಯ ನೀರು ಕುಡಿಯಲು ಯೋಗ್ಯವಾಗಿಲ್ಲ ಎಂಬುದು ಮಾತ್ರವಲ್ಲದೇ, ಇದರಿಂದಾಗಿ ಅಂತರ್ಜಲ ಮಟ್ಟ ಕೂಡಾ ವಿಷವಾಗುತ್ತಿದೆ ಎಂಬ ಅಂಶ ಆತಂಕಕಾರಿಯಾಗಿದೆ. ಈ ಕುರಿತ ವರದಿ ಇಲ್ಲಿದೆ.