Shivamogga : ಕೇಳುವವರೇ ಇಲ್ಲ ಶರಾವತಿ ಹಿನ್ನೀರಿನ ದ್ವೀಪವಾಸಿಗಳ ಗೋಳು!

ಪ್ರತಿ ಸೌಲಭ್ಯ ಪಡೆಯಲು ಇಲ್ಲಿ ಹೋರಾಟ ಅನಿವಾರ್ಯ
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಶರಾವತಿ ಹಿನ್ನೀರಿನ ವಾಸಿಗಳು
ಕಳೆದ 25 ದಿನಗಳಿಂದ 108 ಆ್ಯಂಬುಲೆನ್ಸ್ ಸೇವೆಯೂ ಸ್ಥಗಿತ
 

First Published Dec 17, 2021, 10:20 PM IST | Last Updated Dec 17, 2021, 10:34 PM IST

ಶಿವಮೊಗ್ಗ (ಡಿ. 17): ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ (shivamogga) ನೋಡೋಕೆ ಸ್ವರ್ಗ. ಆದರೆ, ಇಲ್ಲಿ ಶರಾವತಿ ಹಿನ್ನೀರಿನ (Sharavathi Backwaters ) ದ್ವೀಪವಾಸಿಗಳ ಜೀವನ ನಿತ್ಯ ನರಕ. ಪ್ರತಿ ಸೌಲಭ್ಯ ಪಡೆಯಲು ಇಲ್ಲಿನ ಹೋರಾಟ ಮಾಡೋದು ಅನಿವಾರ್ಯವಾಗಿಬಿಟ್ಟಿದೆ.  ಕಳೆದ 25 ದಿನದಿಂದ 108 ಆ್ಯಂಬುಲೆನ್ಸ್ (Ambulance) ಸೇವೆ ಸ್ಥಗಿತಗೊಂಡು ನಿನ್ನೆ ತಡರಾತ್ರಿ  ಗರ್ಭಿಣಿ , ಅಪಘಾತದ ಗಾಯಾಳು ಸಂಕಷ್ಟ ಎದುರಿಸಿದ್ದಾರೆ. ಸಾಗರ ತಾಲೂಕಿನ ತುಮರಿ (Tumari) ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿರುವ 108   ಆ್ಯಂಬುಲೆನ್ಸ್ ಸೇವೆ ಹಾಳಾಗಿ ಅಂದಾಜು 1 ತಿಂಗಳಾಗುತ್ತಾ ಬಂದಿದ್ದರೂ, ಇಲ್ಲಿಯವರೆಗೂ ಸರಿಹೋಗುವ ಲಕ್ಷಣ ಕಂಡಿಲ್ಲ. ಇದರ ಪರಿಣಾಮವಾಗಿ ತುರ್ತು ಸೇವೆಗೆ ಆ್ಯಂಬುಲೆನ್ಸ್ ಅನ್ನೇ ನೆಚ್ಚಿಕೊಂಡಿರುವ 8 ಪಂಚಾಯತ್ ವ್ಯಾಪ್ತಿಯ 20 ಸಾವಿರಕ್ಕೂ ಅಧಿಕ ಜನರ ಕಷ್ಟ ಹೇಳತೀರದಾಗಿದೆ.

Shivamogga Infrastructure Issue: : 108 ಆ್ಯಂಬುಲೆನ್ಸ್‌ ಕೊರತೆ : ಶರಾವತಿ ಹಿನ್ನೀರು ಜನರ ಗೋಳಿಗೆ ಕೊನೆ ಎಂದು?
ಸಂಜೆ 6 ಗಂಟೆಗೆ ಲಾಂಚ್ ಸ್ಥಗಿತಗೊಂಡರೆ, ಇಡೀ ತಾಲೂಕಿನ ನರನಾಡಿಯೇ ಕಡಿದಂತಾಗುತ್ತದೆ. ಇದರಿಂದಾಗಿ ತುರ್ತು ಸಂದರ್ಭಗಳಲ್ಲಿ ಸಾಗರ (Sagar) ತಾಲೂಕು ಆಸ್ಪತ್ರೆಗೆ ಹೋಗಬೇಕೆಂದಿದ್ದಲ್ಲಿ ನಿಟ್ಟೂರು-ಹೊಸನಗರ ಅಥವಾ ಕೋಗಾರ್- ಕಾರ್ಗಲ್ ಮೂಲಕ ಹಿನ್ನೀರ ವಾಸಿಗಳು ಸಾಗರ ತಲುಪಬೇಕಿದೆ. ಕೆಲ ದಿನದ ಹಿಂದೆ ಇಬ್ಬರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಇಡೀ ಹಿನ್ನೀರಿನ ವಾಸಿಗಳು ಪರದಾಟ ನಡೆಸಿದ್ದರೆ, ಅದೇ ಸಮಯದಲ್ಲಿ ಚದರವಳ್ಳಿಯ ಚೈತ್ರಾ ಎನ್ನುವ ಹೆಂಗಸಿಗೆ ಹೆರಿಗೆಯಾಗಿದ್ದರಿಂದ ಆಸ್ಪತ್ರೆಗೆ ಸಾಗಿಸಲು ಹರಸಾಹಸ ಪಡಲಾಗಿತ್ತು. ಆ ಕಾರಣದಿಂದಾಗಿ ತುಮರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸುಸಜ್ಜಿತವಾಗಿರುವ 108 ಆ್ಯಂಬುಲೆನ್ಸ್  ನೀಡಬೇಕೆಂದು ಸ್ಥಳೀಯ ಜನರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಅದರೊಂದಿಗೆ ಕೇಂದ್ರದಲ್ಲಿ ಕೆಲ ವೈದ್ಯಕೀಯ ಸೇವೆಗಳನ್ನೂ ಹೆಚ್ಚಿಸುವಂತೆ ಜನರು ಆಗ್ರಹ ಮಾಡಿದ್ದಾರೆ.