)
ಅಣ್ಣನ ವಂಚನೆ ಕಥೆ ಕೇಳಿ ತಮ್ಮ ಶಾಕ್: ಕಿಚ್ಚ ಸುದೀಪ್ ಹೆಸರಲ್ಲಿ ಲಕ್ಷ ಲಕ್ಷ ವಂಚನೆ?
ಸಿನಿಮಾ ಅವಕಾಶ ಕೊಡ್ತಿನಿ ಅಂತ ಹೇಳಿ ಲಕ್ಷ ಲಕ್ಷ ಹಣ ದೋಚಿದ್ದಾರಂತೆ. ಖುದ್ದು ಆ ಯುವನಟ ‘ರನ್ನ’ ಡೈರೆಕ್ಟರ್ ಮೇಲೆ ದೂರು ಕೊಡೋದಕ್ಕೆ ಮುಂದಾಗಿದ್ದಾನೆ.
ಕಿಚ್ಚ ಸುದೀಪ್ ಆಪ್ತ, ನಿರ್ದೇಶಕ ನಂದಕಿಶೋರ್ ವಿರುದ್ದ ವಂಚನೆಯ ಆರೋಪ ಕೇಳಿಬಂದಿದೆ. ಅದ್ರಲ್ಲೂ ನಂದಕಿಶೋರ್ ಸುದೀಪ್ ಅವರ ಹೆಸರನ್ನ ಬಳಸಿಕೊಂಡು ಯುವನಟನೊಬ್ಬನಿಗೆ ವಂಚನೆ ಮಾಡಿದ್ದಾರಂತೆ. ಸಿನಿಮಾ ಅವಕಾಶ ಕೊಡ್ತಿನಿ ಅಂತ ಹೇಳಿ ಲಕ್ಷ ಲಕ್ಷ ಹಣ ದೋಚಿದ್ದಾರಂತೆ. ಖುದ್ದು ಆ ಯುವನಟ ‘ರನ್ನ’ ಡೈರೆಕ್ಟರ್ ಮೇಲೆ ದೂರು ಕೊಡೋದಕ್ಕೆ ಮುಂದಾಗಿದ್ದಾನೆ. ಅಷ್ಟಕ್ಕೂ ಏನಿದು ಆಕ್ಟರ್ ಡೈರೆಕ್ಟರ್ ಗೋಲ್ಮಾಲ್ ಕಹಾನಿ..? ನೋಡೋಣ ಬನ್ನಿ. ಕಿಚ್ಚ ಸುದೀಪ್ ಹೆಸರನ್ನ ಬಳಸಿಕೊಂಡು ನಿರ್ದೇಶಕ ನಂದಕಿಶೋರ್ ಗೋಲ್ಮಾಲ್ ಮಾಡಿದ್ರಾ..? ಸುದೀಪ್ ನನಗೆ ಆಪ್ತ, ಅವರ ಸಿನಿಮಾದಲ್ಲಿ ನಟಿಸೋ ಅವಕಾಶ ಕೊಡಿಸ್ತಿನಿ ಅಂತ್ಹೇಳಿ ಬಡಪಾಯಿ ಯುವನಟನೊಬ್ಬನಿಂದ ಲಕ್ಷ ಲಕ್ಷ ಪೀಕಿದ್ರಾ..? ಯೆಸ್ ಇಂಥದ್ದೊಂದು ಆರೋಪ ನಿರ್ದೇಶಕ ನಂದಕಿಶೋರ್ ಮೇಲೆ ಬಂದಿದೆ.
ಅಸಲಿಗೆ ನಂದಕಿಶೋರ್ ಕಿಚ್ಚ ಸುದೀಪ್ ಪಾಲಿಗೆ ಆಪ್ತ ಅನ್ನೋದ್ರಲ್ಲಿ ಎರಡು ಮಾತೇ ಇಲ್ಲ. ನಂದಕಿಶೋರ್ ಹೆಸರಾಂತ ಖಳನಟ ಸುದೀರ್ ಅವರ ಹಿರಿಯ ಮಗ. ಆರಂಭದಲ್ಲಿ ಹಲವು ಚಿತ್ರಗಳಲ್ಲಿ ಹಾಸ್ಯನಟನ ಪಾತ್ರಗಳನ್ನ ನಂದಕಿಶೋರ್ ಮಾಡ್ತಾ ಇದ್ರು. ಸುದೀಪ್ ನಟನೆಯ ನಲ್ಲ ಸಿನಿಮಾದಲ್ಲಿ ಕಾಮಿಡಿಯನ್ ಪಾತ್ರ ಮಾಡ್ತಿದ್ದ ನಂದನನ್ನ ಕರೆದು, ನಟನೆ ನಿನಗಲ್ಲ.. ಕ್ಯಾಮೆರಾ ಹಿಂದೆ ಕೆಲಸ ಮಾಡು ಅಂತ ಸಲಹೆ ಕೊಟ್ಟಿದ್ದೇ ಕಿಚ್ಚ ಸುದೀಪ್. ಸುದೀಪ್ ತಮ್ಮ ನಿರ್ದೇಶನದ ಚಿತ್ರಗಳಿಗೆ ನಿರ್ದೆಶನ ವಿಭಾಗದಲ್ಲಿ ಕೆಲಸ ಮಾಡೋ ಅವಕಾಶವನ್ನ ನಂದನಿಗೆ ಕೊಟ್ರು. ಕಿಚ್ಚನ ಗರಡಿಯಲ್ಲಿ ನಂದ ಕೆಲಸ ಕಲಿತುಕೊಂಡ್ರು. ಮುಂದೆ 2013ರಲ್ಲಿ ಶರಣ್ ನಟನೆಯ ವಿಕ್ಟರಿ ಸಿನಿಮಾ ಮೂಲಕ ನಿರ್ದೇಶಕನಾಗಿ ಭಡ್ತಿ ಪಡೆದರು. ಮೊದಲ ಚಿತ್ರ ವಿಕ್ಟರಿ ಹಿಟ್ ಆಯ್ತು. ಎರಡನೇ ಚಿತ್ರ ಅಧ್ಯಕ್ಷ ಸೂಪರ್ ಹಿಟ್ ಆಯ್ತು.
ಮುಂದೆ ಖುದ್ದು ಸುದೀಪ್ ತಮ್ಮ ನಟನೆಯ ರನ್ನ ಸಿನಿಮಾವನ್ನ ನಿರ್ದೇಶನ ಮಾಡೋ ಅವಕಾಶವನ್ನ ನಂದನಿಗೆ ಕೊಟ್ರು. ಇನ್ನೂ ಸುದೀಪ್-ಉಪೇಂದ್ರ ಜೋಡಿಯ ಮುಕುಂದ ಮುರಾರಿ ನಿರ್ದೇಶನ ಮಾಡಿದ್ದು ಕೂಡ ಇದೇ ನಂದ. ಅಸಲಿಗೆ ಎಂ.ಡಿ ಶ್ರೀಧರ್ ನಿರ್ದೇಶನ ಮಾಡಬೇಕಿದ್ದ ಆ ಚಿತ್ರವನ್ನ ನಂದನಿಗೆ ಕೊಡಿಸಿದ್ದೇ ಕಿಚ್ಚ ಸುದೀಪ್. ರನ್ನವರೆಗೂ ನೆಟ್ಟಗಿದ್ದ ನಂದ ಮುಂದೆ ಯಾಕೋ ಹಳಿ ತಪ್ಪಿದ್ರು. ನಂದ ಡೈರೆಕ್ಟ್ ಮಾಡಿದ ಟೈಗರ್, ಬ್ರಹಸ್ಪತಿ, ಪೊಗರು, ರಾಣಾ ಸೇರಿದಂತೆ ನಂದ ಡೈರೆಕ್ಟ್ ಮಾಡಿದ ಚಿತ್ರಗಳೆಲ್ಲಾ ಮಕಾಡೆ ಮಲಗಿದ್ವು. ಈಗ ನೋಡಿದ್ರೆ ನಂದನ ವಿರುದ್ದ ವಂಚನೆ ಆರೋಪ ಬೇರೆ ಕೇಳಿಬಂದಿದೆ. ನಂದ ಹೇಳಿ ಕೇಳಿ ಸ್ಟಾರ್ ಡೈರೆಕ್ಟರ್ , ಅವರಿಂದ ತನಗೆ ಪಾತ್ರ ಸಿಗುತ್ತೆ ಅನ್ನೋ ಭರವಸೆ ಸಿಕ್ಕಿದ್ದರಿಂದ ನಂದ ಕೇಳಿ ಕೇಳಿದಾಗೆಲ್ಲಾ ಶಬರೀಶ್ ಲಕ್ಷ ಲಕ್ಷ ಹಣ ಕೊಟ್ಟಿದ್ದಾರೆ. ಸದ್ಯ ತನ್ನದೇ ನಟನೆಯ ರಾಮದೂತ ಅನ್ನೋ ಸಿನಿಮಾ ರಿಲೀಸ್ ಆಗಬೇಕಿದೆ.
ಅದರ ಪ್ರಮೋಷನ್ಗೆ ದುಡ್ ಬೇಕು. ನನ್ನ ಹಣ ವಾಪಾಸ್ ಕೊಡಿ ಅಂದಿದ್ದಕ್ಕೆ ಏನ್ ಮಾಡ್ತಿಯೋ ಮಾಡಿಕೋ ಅಂತ ನಂದ ಅವಾಜ್ ಹಾಕಿದ್ದಾರಂತೆ. ಸುದೀಪ್ ಜೊತೆ ಸಿಸಿಎಲ್ ಆಡಿಸ್ತಿನಿ. ಧ್ರುವ ಜೊತೆಗೆ ಪೊಗರು ಸಿನಿಮಾದಲ್ಲಿ ನಟಿಸೋ ಚಾನ್ಸ್ ಕೊಡಿಸ್ತಿನಿ.. ಹೀಗೆ ತಾನು ಕೆಲಸ ಮಾಡ್ತಾ ಸ್ಟಾರ್ ನಟರ ಹೆಸರನ್ನೆಲ್ಲಾ ಬಳಸಿಕೊಂಡು ಈ ಯುವನಟನಿಂದ ನಂದ ಹಣ ಪೀಕಿದ್ದಾರೆ. ಕೊನೆಗೆ ಅವಕಾಶನೂ ಕೊಡದೇ ಹಣವನ್ನೂ ಮರಳಿಸದೇ ಕೈ ಎತ್ತಿದ್ದಾರೆ. ಇವರನ್ನ ನಂಬಿ ಹಣ ಕೊಟ್ಟ ಯುವನಟ ಈಗ ಕಣ್ಣೀರು ಹಾಕ್ತಾ ಇದ್ದಾರೆ. ಶಬರೀಶ್ ಶೆಟ್ಟಿ ಬಳಿ ನಂದಕಿಶೋರ್ಗೆ ಹಣ ಕೊಟ್ಟಿರೋ ದಾಖಲೆಗಳೆಲ್ಲಾ ಇವೆ. ಈ ಬಗ್ಗೆ ದೂರು ಕೊಡ್ತಿನಿ ಅಂದಾಗೆಲ್ಲಾ ನಂದ ಒಂದೊಂದು ಕಥೆ ಹೇಳ್ತಾ ಬಂದಿದ್ದಾರಂತೆ. ಸದ್ಯ ಮೋಹನ್ ಲಾಲ್ ನಟನೆಯ ಮಲಯಾಳಂ , ತೆಲಗು ಬೈ ಲಿಂಗ್ಯುವಲ್ ಚಿತ್ರ ಮಾಡ್ತಿರೋ ನಂದ, ಕೊಚ್ಚಿಯಿಂದ ಬರ್ತಾನೆ ಹಣ ಕೊಡ್ತಿನಿ ಅಂತ ವಾಯ್ಸ್ ನೋಟ್ ಕೂಡ ಕಳಿಸಿದ್ದಾರೆ.
ಆದ್ರೆ ವರ್ಷಗಳಿಂದ ನಂದಕಿಶೋರ್ ಆಡ್ತಾ ಬಂದಿರೋ ಆಟಗಳನ್ನ ನೋಡಿ ರೋಸಿಹೋಗಿರೋ ಶಬರೀಶ್ ಈಗ ದೂರು ಕೊಡಲಿಕ್ಕೆ ಮುಂದಾಗಿದ್ದಾರೆ. ಅಸಲಿಗೆ ನಂದಕಿಶೋರ್ ಮಾಡಿರೋ ವಂಚನೆ ಬಗ್ಗೆ ಶಬರೀಶ್ , ನಂದಕಿಶೋರ್ ಸಹೋದರ ತರುಣ್ ಸುಧೀರ್ ಗಮನಕ್ಕೂ ತಂದಿದ್ದಾರಂತೆ. ಆದ್ರೆ ನಮ್ಮ ಕುಟುಂಬದಲ್ಲಿ ಅಣ್ಣ ತಮ್ಮ ಬೇರೆ ಆಗಿದ್ದೀವಿ ಇದಕ್ಕೂ ನನಗೂ ಸಂಬಂಧ ಇಲ್ಲ ಅಂದಿದ್ದಾರಂತೆ ಕಾಟೇರ ಡೈರೆಕ್ಟರ್ ತರುಣ್ ಸುಧೀರ್. ಕೇವಲ ಶಬರೀಶ್ ಮಾತ್ರ ಅಲ್ಲ ಇನ್ನೂ ಹಲವು ಯುವ ನಟ, ನಟಿಯರಿಂದ ನಂದಕಿಶೋರ್ ಇದೇ ರೀತಿ ಹಣ ಪಡೆದು ವಂಚಿಸಿರೋ ಆರೋಪಗಳಿವೆ. ಸುದೀಪ್ ಹೆಸರು ಬಳಸಿಕೊಂಡು ನಂದ ಹಣ ಮಾಡೋ ದಂಧೆ ಮಾಡ್ತಾ ಇದ್ದಾರಂತೆ. ಇಷ್ಟು ದಿನ ಒಳ್ಳೆ ನಿರ್ದೇಶಕ ಅಂದುಕೊಂಡಿದ್ದ ವ್ಯಕ್ತಿ,ಒಬ್ಬ ವಂಚಕ ಅನ್ನೋದು ಈಗ ಬಯಲಿಗೆ ಬಂದಿದೆ. ಈ ಬಗ್ಗೆ ನಂದ ಏನ್ ಹೇಳ್ತಾರೆ.. ಇವರ ವಂಚನೆ ವಿಷ್ಯ ಗೊತ್ತಾದ ಮೇಲೆ ಸುದೀಪ್ ಇವರನ್ನ ಹತ್ತಿರ ಸೇರಿಸ್ತಾರಾ,,? ಈ ಎಲ್ಲಾ ಪ್ರಶ್ನೆಗಳಿಗೆ ಸದ್ಯದಲ್ಲೇ ಉತ್ತರ ಸಿಗಲಿದೆ.