ಭಿಕ್ಷೆ ಬೇಡಿ 'ಅನ್ನಪೂರ್ಣೆ'ಯಾದ ವೃದ್ಧೆ: ದೇಗುಲಗಳಿಗೆ 9 ಲಕ್ಷ ರೂ. ದೇಣಿಗೆ
ಕೊಡುವುದಕ್ಕೆ ಬಡವರು ಅಥವಾ ಶ್ರೀಮಂತರು ಎಂಬ ಭೇದ-ಭಾವ ಇಲ್ಲ, ಒಳ್ಳೆಯ ಮನಸ್ಸಿದ್ದರೆ ಸಾಕು. ಇದಕ್ಕೆ ನಿದರ್ಶನದಂತೆ ಇದ್ದಾರೆ ಈ ವೃದ್ಧೆ. ಭಿಕ್ಷೆ ಬೇಡಿ ಬಂದ ಹಣವನ್ನು ಉಳಿಸಿ ಇಲ್ಲಿಯವರೆಗೆ ದೇವಸ್ಥಾನಗಳಿಗೆ ಸುಮಾರು 9 ಲಕ್ಷ ರೂ. ದೇಣಿಗೆ ನೀಡಿ ಮಾದರಿಯಾಗಿದ್ದಾರೆ.
ಕುಂದಾಪುರ ತಾಲೂಕು ಸಾಲಿಗ್ರಾಮದ 80 ವೃದ್ಧೆ ಅಶ್ವತ್ಥಮ್ಮ ಎಂಬುವವರು, ಹಲವು ವರ್ಷಗಳಿಂದ ದೇವಸ್ಥಾನ, ಟೋಲ್‌ಗೇಟ್ ಪರಿಸರಗಳಲ್ಲಿ ಭಿಕ್ಷೆ ಬೇಡಿ ಸಂಗ್ರಹಿಸಿದ ಹಣವನ್ನು ಉಳಿಸಿ ದೇವಸ್ಥಾನಗಳ ಅನ್ನದಾನ ಕೈಂಕರ್ಯಕ್ಕೆ ಕೊಡುಗೆಯಾಗಿ ನೀಡುತ್ತಾ ಬಂದಿದ್ದಾರೆ. ಗಂಡ-ಮಕ್ಕಳು ತೀರಿ ಹೋದ ಬಳಿಕ ಜೀವನದಲ್ಲಿ ಜಿಗುಪ್ಸೆ ಹೊಂದಿ ಮನೆ ತೊರೆದ ಇವರು, ತನ್ನವರಿಲ್ಲದ ಕೊರಗು ಮರೆಯಲು ತನ್ನಿಂದ ಸಮಾಜಕ್ಕೆ ಕೊಡುಗೆ ನೀಡಬೇಕೆಂದು ಈ ಸಂಕಲ್ಪ ಕೈಗೊಂಡಿದ್ದಾರೆ. ಇನ್ನು ಮುಖ್ಯವಾಗಿ ಸಂಗ್ರಹವಾಗುವ ಹಣವನ್ನು ದೇವಳಗಳಲ್ಲಿ ಕೇವಲ ಅನ್ನ ದಾನಕ್ಕೆ ಮಾತ್ರ ನೀಡುತ್ತಾರೆ.