ಕಾಂತಾರದಲ್ಲಿ ಸಹಬಾಳ್ವೆಯ ಸಂದೇಶ ಡಾ.ವೀರೇಂದ್ರ ಹೆಗ್ಗಡೆ
- ಡಾ. ಹೆಗ್ಗಡೆ) ಕಾಂತಾರದಲ್ಲಿ ಸಹಬಾಳ್ವೆಯ ಸಂದೇಶ
- ಚಿತ್ರ ವೀಕ್ಷಿಸಿ ಡಾ.ವೀರೇಂದ್ರ ಹೆಗ್ಗಡೆ ಮೆಚ್ಚುಗೆ ಮಾತು
ಮಂಗಳೂರು (ಅ.22) : ಸಿನಿಮಾ ನೋಡದೆ ಬಹಳ ದಿನವಾಗಿತ್ತು. ಸಾಮಾನ್ಯವಾಗಿ ಬರುವ ಚಿತ್ರಗಳಿಗಿಂತ ವಿಭಿನ್ನವಾಗಿ ಕರ್ನಾಟಕ ರಾಜ್ಯದ ಒಂದು ಭಾಗದ ನಂಬಿಕೆ, ನಡವಳಿಕೆಗಳು, ವಿಶೇಷವಾಗಿ ದೈವಾರಾಧನೆಯಲ್ಲಿ ಇರುವಂತಹ ಸೂಕ್ಷ್ಮತೆಗಳನ್ನು ಬಹಳ ಚೆನ್ನಾಗಿ ರಿಷಬ್ ಶೆಟ್ಟಿಅವರು ಈ ಚಿತ್ರದಲ್ಲಿ ತೋರಿಸಿದ್ದಾರೆ. ಜಾತಿ, ಮತ, ಪಂಥಗಳ ಬೇಧ ಮರೆತು ಎಲ್ಲರೂ ಸಹಬಾಳ್ವೆ ಮಾಡಬೇಕು ಎಂಬ ಸಂದೇಶ ಈ ಚಿತ್ರದಲ್ಲಿ ಇದೆ ಎಂದು ರಾಜ್ಯಸಭಾ ಸದಸ್ಯ, ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಪ್ರತಿಕ್ರಿಯಿಸಿದ್ದಾರೆ.
'ಕಾಂತಾರ' ಮೂಡ್‌ನಿಂದ ಹೊರಬಂದಿಲ್ಲ ಎಂದ ವೀರೇಂದ್ರ ಹೆಗ್ಗಡೆ..!
ಮಂಗಳೂರಿನ ಭಾರತ್ ಮಾಲ್‌ನ ಬಿಗ್ ಸಿನಿಮಾಸ್‌ನಲ್ಲಿ ಶುಕ್ರವಾರ ಕಾಂತಾರ ಚಿತ್ರ ವೀಕ್ಷಿಸಿದ ಬಳಿಕ ಅವರು ಸುದ್ದಿಗಾರಲ್ಲಿ ವ್ಯಕ್ತಪಡಿಸಿದ ಅನಿಸಿಕೆ ಇದು.
ಇಂತಹ ಚಿತ್ರದಿಂದಾಗಿ ಯುವ ಸಮುದಾಯಕ್ಕೆ ಹೊಸ ಕತೆಯ ಮತ್ತು ಹಳೆಯ ಸ್ಮರಣೆ ಬೇಕು. ಈ ಚಿತ್ರದಲ್ಲಿ ಹೊಸ ದೃಷ್ಟಿಕೋನವೂ ಇದೆ. ನಮ್ಮ ಜೀವನದಲ್ಲಿ ಅಸತ್ಯದ ವಿರುದ್ಧ ಹೋರಾಡುವ ಕತೆಗಳೇ ನಮ್ಮಲ್ಲಿ ಜಾಸ್ತಿ. ಇಂದು ಕೂಡ ಸತ್ಯದ ರಕ್ಷಣೆ, ಅನ್ಯಾಯದ ವಿರುದ್ಧ ಹೋರಾಟ ಮತ್ತು ನೆಮ್ಮದಿಯ ಜೀವನ ಕಾಣುತ್ತೇವೆ. ನೆಮ್ಮದಿ ಇಲ್ಲದ ವ್ಯಕ್ತಿಯ ಕತೆಯಿಂದಲೇ ಕಾಂತಾರ ಚಿತ್ರ ಆರಂಭವಾಗಿದೆ. ಎಲ್ಲ ಇದ್ದರೂ ರಾಜನಿಗೆ ನೆಮ್ಮದಿ ಇಲ್ಲ. ಇಂದು ನೆಮ್ಮದಿ, ಶಾಂತಿ ಮತ್ತು ಸಹಬಾಳ್ವೆ ನಮಗೆ ಬೇಕಾಗಿದೆ ಎಂದರು.
ಕಾಂತಾರ ಚಿತ್ರ ನೋಡಿ ನಾನು ಬಹಳ ಸಂತೋಷ ಪಟ್ಟಿದ್ದೇನೆ. ಚಿತ್ರ ನೋಡಿ ನಾನು ಇನ್ನೂ ಮೂಡಿನಿಂದ ಹೊರಬಂದಿಲ್ಲ. ಚಿತ್ರ ಚೆನ್ನಾಗಿ ಮೂಡಿಬಂದಿರುವುದಕ್ಕೆ ಎಲ್ಲ ಕಲಾವಿದರನ್ನು ಅಭಿನಂದಿಸುತ್ತೇನೆ. ಈಗಿನ ತಾಂತ್ರಿಕತೆ ಹೇಗೆ ಬಳಸಬಹುದು ಎಂಬುದನ್ನು ಚಿತ್ರ ತೋರಿಸುತ್ತದೆ. ನಿರ್ಮಾಪಕರನ್ನೂ ಅಭಿನಂದಿಸುತ್ತೇನೆ ಎಂದರು.
ದೈವಾರಾಧನೆ ದೃಷ್ಟಿಕೋನಕ್ಕೆ ಸಂಬಂಧಿಸಿ ನಮ್ಮಲ್ಲಿ ಕೂಡ ಇದೇ ನಂಬಿಕೆ ಇದೆ. ದೈವಗಳು, ನಮ್ಮ ನಂಬಿಕೆಗಳು ಯಾವತ್ತೂ ಅಧರ್ಮಕ್ಕೆ ಬೆಂಬಲ ಕೊಡುವುದಿಲ್ಲ. ಇದು ಚಿತ್ರದಲ್ಲಿ ಕೂಡ ಬರುವ ಸಂದೇಶ. ನಮ್ಮ ಸಮಾಜದಲ್ಲಿ ಹಣ, ಭೂಮಿ, ಸಂಪತ್ತು, ಮಾನಿನಿ ವಶಕ್ಕೆ ನಾನಾ ರೀತಿಯಲ್ಲಿ ಪ್ರಯತ್ನ ನಡೆಯುತ್ತಿರುತ್ತದೆ. ಆದರೆ ದೈವಗಳು ಸತ್ಯ ಮತ್ತು ಧರ್ಮ ಹೊರತುಪಡಿಸಿ ಯಾವುದಕ್ಕೂ ಬೆಂಬಲ ಕೊಡುವುದಿಲ್ಲ. ಇದನ್ನು ಚಿತ್ರದಲ್ಲಿ ತೋರಿಸಲಾಗಿದೆ. ಇದು ಒಳ್ಳೆಯ ಸಂದೇಶ ಎಂದು ಭಾವಿಸುತ್ತೇನೆ ಎಂದರು.
ಕಾಂತಾರ ನಟಿಗೆ ಫುಲ್ ಡಿಮ್ಯಾಂಡ್: ಸಪ್ತಮಿ ಗೌಡಗೆ ಅವಕಾಶಗಳ ಮಹಾಪೂರ
ಧರ್ಮ ಸೂಕ್ಷ್ಮ ವಿಚಾರಗಳಿಗೆ ವಿಮರ್ಶೆ ಅನಗತ್ಯ
ನಟ ಚೇತನ್ ಹೇಳಿಕೆಗೆ ಪ್ರತಿಕ್ರಿಯಿಸಿದ ಡಾ.ಹೆಗ್ಗಡೆ, ಅವಿಭಜಿತ ದ.ಕ. ಜಿಲ್ಲೆಯ ಮೂಲ ಸ್ವಭಾವವನ್ನು ಅರಿಯದೆ ಮಾತನಾಡಿದರೆ ಅದು ಬೇರೆ ಆಗುತ್ತದೆ. ಧರ್ಮದ ಮೂಲ ಹುಡುಕಿದರೆ ಎಲ್ಲೂ ಸಿಗುವುದಿಲ್ಲ. ನಂಬಿಕೆ, ಆಚಾರ, ನಡವಳಿಕೆಗಳು ಸ್ವಾಭಾವಿಕವಾಗಿ ಬೆಳೆದು ಬಂದವು. ಅವುಗಳನ್ನು ಬಿಟ್ಟು ಇರಲು ಸಾಧ್ಯವೇ ಇಲ್ಲ. ಅವರು ಹಿಂದೂ ಧರ್ಮದ ಯಾವ ಸೂಕ್ಷ್ಮತೆ ನೋಡಿ ಮಾತನಾಡಿದ್ದಾರೋ ಗೊತ್ತಿಲ್ಲ. ನಮ್ಮ ಅವಿಭಜಿತ ಜಿಲ್ಲೆಯಲ್ಲಿ ವ್ಯಾಪಕವಾಗಿ ಇರುವ ನಂಬಿಕೆ ದೈವದ್ದು, ಇದು ಸತ್ಯ. ನಾವು ಇವತ್ತು ಕೂಡ ದೈವಾರಾಧನೆ, ದೈವ ಮೈಮೇಲೆ ಬಂದಾಗ ಮಾತಿಗೆ ಗೌರವ ಕೊಡುತ್ತೇವೆ. ಇದು ಧರ್ಮ ಸೂಕ್ಷ್ಮ ವಿಚಾರವಾಗಿದ್ದು, ವಿಮರ್ಶೆಯ ಅಗತ್ಯವೇ ಇಲ್ಲ ಎಂದರು.