Karnataka Hijab Row: ಸಮವಸ್ತ್ರ ಸಂಘರ್ಷಕ್ಕೆ ಬ್ರೇಕ್‌ ಹಾಕಲು ಗೃಹ ಇಲಾಖೆ ಸಜ್ಜು!

*ರಾಜ್ಯದಲ್ಲಿ ಹಿಂಸೆಗೆ ತಿರುಗಿದ ಹಿಜಾಬ್‌-ಕೇಸರಿ ಶಾಲು ವಿವಾದ
*ಪೊಲೀಸರಿಂದ ಕಾಲೇಜಲ್ಲಿ ಲಾಠಿ ಚಾಜ್‌ರ್‍, ಅಶ್ರುವಾಯು ಪ್ರಯೋಗ
*ಹಿರಿಯ ಪೊಲೀಸ್‌ ಅಧಿಕಾರಿಗಳ ಜತೆ ಗೃಹ ಸಚಿವ ಆರಗ ಚರ್ಚೆ
*ವಿದ್ಯಾಭ್ಯಾಸಕ್ಕೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲು ಸೂಚನೆ

First Published Feb 9, 2022, 9:05 AM IST | Last Updated Feb 9, 2022, 9:19 AM IST

ಬೆಂಗಳೂರು (ಫೆ. 09): ಕಳೆದ ಕೆಲ ದಿನಗಳಿಂದ ರಾಜ್ಯದ ವಿವಿಧ ಕಾಲೇಜುಗಳಲ್ಲಿ ನಡೆಯುತ್ತಿರುವ ಹಿಜಾಬ್‌-ಕೇಸರಿ ಶಾಲು ಸಂಘರ್ಷ(Hijab Row) ಇದೀಗ ಹಿಂಸೆಗೆ ತಿರುಗಿದೆ. ಮಂಗಳವಾರ ರಾಜ್ಯದ 18 ಜಿಲ್ಲೆಗಳ 54ಕ್ಕೂ ಹೆಚ್ಚು ಕಾಲೇಜುಗಳಲ್ಲಿ ವಿವಾದ ಭುಗಿಲೆದ್ದಿದ್ದು, ಈ ಪೈಕಿ 4 ಜಿಲ್ಲೆಗಳ 6 ಕಾಲೇಜುಗಳಲ್ಲಿ ಹಿಂಸಾಚಾರ (violence) ನಡೆದಿದೆ. ವಿದ್ಯಾರ್ಥಿಗಳು ಗುಂಪು ಘರ್ಷಣೆ, ಕಲ್ಲು ತೂರಾಟ ನಡೆಸಿದ್ದಾರೆ. ಈ ಬೆನ್ನಲ್ಲೇ ಗ್ರಹ, ಶಿಕ್ಷಣ ಇಲಾಖೆ ಸಭೆ ನಡೆಸಿದೆ. ಗೃಹ ಸಚಿವ ಆರಗ ಜ್ಞಾನೇಂದ್ರ , ಶಿಕ್ಷಣ ಸಚಿವ ಬಿ ಸಿ ನಾಗೇಶ್‌, ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಾಣ ನೇತೃತ್ವದಲ್ಲಿ ಸಭೆ ನಡಿದಿದೆ.

ಹಿರಿಯ ಪೊಲೀಸ್‌ ಅಧಿಕಾರಿಗಳ ಜತೆ ಗೃಹ ಸಚಿವ ಆರಗ ಜ್ಞಾನೇಂದ್ರ ರಾಜ್ಯದಲ್ಲಿ ಭುಗಿಲೆದ್ದಿರುವ ಹಿಜಾಬ್-ಕೇಸರಿ ವಿವಾದದ ಬಗ್ಗೆ ಚರ್ಚಿಸಿದ್ದಾರೆ. ವಿದ್ಯಾಭ್ಯಾಸಕ್ಕೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳುವಂತೆ ಸಭೆಯಲ್ಲಿ ಹಿರಿಯ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಲ್ಲದೇ ಕೋರ್ಟ್‌ ತೀರ್ಪು ಏನೇ ಬಂದರೂ ಅದನ್ನು ಪಾಲಿಸುತ್ತೇವೆ ಎಂದು  ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಇದನ್ನೂ ಓದಿ: ಕರ್ನಾಟದಲ್ಲಿ ಹೊತ್ತಿದ ಹಿಜಾಬ್ ಬೆಂಕಿ, 18 ಜಿಲ್ಲೆಗಳ 54 ಕಾಲೇಜಲ್ಲಿ ಪ್ರತಿಭಟನೆ!

ಇನ್ನು ಹಿಜಾಬ್‌-ಕೇಸರಿ ಶಾಲು ವಿವಾದದ ಕಿಡಿ ರಾಜ್ಯಾದ್ಯಂತ ಶಾಲಾ, ಕಾಲೇಜುಗಳಿಗೆ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಎಚ್ಚೆತ್ತ ರಾಜ್ಯ ಸರ್ಕಾರ 1ರಿಂದ 8ನೇ ತರಗತಿಗಳನ್ನು ಹೊರತುಪಡಿಸಿ ರಾಜ್ಯದ ಎಲ್ಲಾ ಪ್ರೌಢಶಾಲೆ, ಪಿಯು ಕಾಲೇಜು, ಎಲ್ಲಾ ವಿಶ್ವವಿದ್ಯಾಲಯಗಳು, ಅವುಗಳ ಸಂಯೋಜಿತ ಪದವಿ, ಡಿಪ್ಲೊಮಾ, ಇಂಜಿನಿಯರಿಂಗ್‌ ಕಾಲೇಜುಗಳಿಗೆ ಬುಧವಾರದಿಂದ 3 ದಿನ ರಜೆ ಘೋಷಿಸಿ ಆದೇಶಿಸಿದೆ. ಅದರಂತೆ ಫೆ.9ರ ಬುಧವಾರದಿಂದ ಫೆ.11ರ ಶುಕ್ರವಾರದ ವರೆಗೆ ಶಾಲೆ, ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ 9ನೇ ತರಗತಿ ಮತ್ತು ಅದರ ಮೇಲ್ಮಟ್ಟದ ಎಲ್ಲಾ ತರಗತಿ ವಿದ್ಯಾರ್ಥಿಗಳಿಗೂ ಭೌತಿಕ ತರಗತಿ ಚಟುವಟಿಕೆಗಳು ಬಂದ್‌ ಆಗಲಿವೆ