ಹಿಂಸೆಗೆ ತಿರುಗಿದ ಹಿಜಾಬ್-ಕೇಸರಿ ಶಾಲು ವಿವಾದ ಪೊಲೀಸರಿಂದ ಕಾಲೇಜಲ್ಲಿ ಲಾಠಿ ಚಾಜ್‌ರ್, ಅಶ್ರುವಾಯು ಪ್ರಯೋಗ ಚಾಕು ತಂದಿದ್ದವ ಸೇರಿ ಇಬ್ಬರು ವ್ಯಕ್ತಿಗಳ ಸೆರೆ ಸಾಗರದಲ್ಲಿ ಶಾಸಕ ಹಾಲಪ್ಪ ಎದುರೇ ವಿದ್ಯಾರ್ಥಿಗಳ ಹೊಡೆದಾಟ
ಬೆಂಗಳೂರು(ಫೆ.09): ಕಳೆದ ಕೆಲ ದಿನಗಳಿಂದ ರಾಜ್ಯದ ವಿವಿಧ ಕಾಲೇಜುಗಳಲ್ಲಿ ನಡೆಯುತ್ತಿರುವ ಹಿಜಾಬ್-ಕೇಸರಿ ಶಾಲು ಸಂಘರ್ಷ(hijab vs saffron scarf) ಇದೀಗ ಹಿಂಸೆಗೆ ತಿರುಗಿದೆ. ಮಂಗಳವಾರ ರಾಜ್ಯದ 18 ಜಿಲ್ಲೆಗಳ 54ಕ್ಕೂ ಹೆಚ್ಚು ಕಾಲೇಜುಗಳಲ್ಲಿ ವಿವಾದ ಭುಗಿಲೆದ್ದಿದ್ದು, ಈ ಪೈಕಿ 4 ಜಿಲ್ಲೆಗಳ 6 ಕಾಲೇಜುಗಳಲ್ಲಿ ಹಿಂಸಾಚಾರ(violence) ನಡೆದಿದೆ. ವಿದ್ಯಾರ್ಥಿಗಳು ಗುಂಪು ಘರ್ಷಣೆ, ಕಲ್ಲು ತೂರಾಟ ನಡೆಸಿದ್ದಾರೆ. ಈ ವೇಳೆ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು(Police) ಕಾಲೇಜಿನೊಳಗೆ ಪ್ರವೇಶಿಸಿ ಲಾಠಿ ಪ್ರಹಾರ, ಅಶ್ರುವಾಯು ಪ್ರಯೋಗಿಸಿದ್ದಾರೆ. ಹಿಂಸಾಚಾರದ ವೇಳೆ 12ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿದ್ದು, ಬಸ್‌ಗಳು ಸೇರಿದಂತೆ 11 ವಾಹನಗಳು ಕಲ್ಲು ತೂರಾಟದಿಂದ ಜಖಂಗೊಂಡಿವೆ.
ಶಿವಮೊಗ್ಗ, ದಾವಣಗೆರೆ, ಹರಿಹರದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಸೆಕ್ಷನ್ 144 ಅಡಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಬಿಜೆಪಿ ಶಾಸಕ ಹರತಾಳು ಹಾಲಪ್ಪ ಸಮ್ಮುಖವೇ ವಿದ್ಯಾರ್ಥಿಗಳು ಹೊಡೆದಾಡಿಕೊಂಡಿದ್ದಾರೆ. ಬನಹಟ್ಟಿಕಾಲೇಜಿನಲ್ಲಿ ನಡೆದ ಕಲ್ಲು ತೂರಾಟದಲ್ಲಿ ಉಪನ್ಯಾಸಕರೊಬ್ಬರು ಗಾಯಗೊಂಡಿದ್ದಾರೆ. ಏತನ್ಮಧ್ಯೆ ಹಿಜಾಬ್ ಪರ- ವಿರೋಧ ರಾಜ್ಯದ 33ಕ್ಕೂ ಹೆಚ್ಚು ಕಡೆಗಳಲ್ಲಿ ಪ್ರತಿಭಟನೆಗಳು ನಡೆದಿವೆ.
Hijab row : ಸಂವಿಧಾನ ಹೇಳಿದಂತೆ ನಡೆಯುತ್ತೇವೆ, ನಮಗೆ ಸಂವಿಧಾನವೇ ಭಗವದ್ಗೀತೆ ಎಂದ ಹೈಕೋರ್ಟ್!
ಎಲ್ಲೆಲ್ಲಿ ಅಶಾಂತಿ?:
ಶಿವಮೊಗ್ಗದ ಬಾಪೂಜಿ ಕಾಲೇಜು, ಸಾಗರದ ಪದವಿ ಪೂರ್ವ ಕಾಲೇಜು, ದಾವಣಗೆರೆ ಜಿಲ್ಲೆ ಹರಿಹರದ ಪ್ರಥಮ ದರ್ಜೆ ಕಾಲೇಜು, ಬಾಗಲಕೋಟೆ ಜಿಲ್ಲೆಯ ಬನಹಟ್ಟಿಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ನಡುವಿನ ಸಂಘರ್ಷ ತಾರಕಕ್ಕೇರಿ ಕಲ್ಲುತೂರಾಟ ನಡೆಯಿತು. ಈ ವೇಳೆ ಪೊಲೀಸರು ಲಾಠಿ ಚಾಜ್‌ರ್ ನಡೆಸಿದರು. ಹರಿಹರದಲ್ಲಿ ಅಶ್ರವಾಯು ಸಿಡಿಸಿದರು. ಇನ್ನು ದಾವಣಗೆರೆ ಪದವಿ ಕಾಲೇಜಲ್ಲೂ ಪೊಲೀಸರು ಪರಿಸ್ಥಿತಿ ನಿಯಂತ್ರಣಕ್ಕೆ ಲಾಠಿ ಚಾಜ್‌ರ್ ನಡೆಸಿದರು.
ಪ್ರತಿಭಟನೆಗೆ ಪೋಷಕರ ಸಾಥ್:
ಹರಿಹರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮುಂದೆ ವಿದ್ಯಾರ್ಥಿಗಳ ಪ್ರತಿಭಟನೆಗೆ ಪಾಲಕರು ಮತ್ತು ಸಾರ್ವಜನಿಕರು ಸಾಥ್ ನೀಡಿದ್ದರಿಂದ ಪರಿಸ್ಥಿತಿ ಬಿಗಡಾಯಿಸಿತು. ಈ ವೇಳೆ ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಬಳಿಕ ಅಶ್ರುವಾಯುವನ್ನೂ ಸಿಡಿಸಿದರು. ಸಂಜೆ ಹೊತ್ತಿಗೆ ಸಾರಿಗೆ ಸಂಸ್ಥೆಯ 3 ಬಸ್ಸುಗಳನ್ನು ತರಿಸಿ ಗ್ರಾಮೀಣ ಪ್ರದೇಶಗಳಿಂದ ಬರುವ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕಳುಹಿಸಿಕೊಡಲಾಯಿತು.
Hijab Row: ಶಾಂತಿ ಕಾಪಾಡುವಂತೆ ವಿದ್ಯಾರ್ಥಿಗಳಿಗೆ ಸಿಎಂ ಮನವಿ
ಶಿವಮೊಗ್ಗ, ಶಿಕಾರಿಪುರ ಮತ್ತು ಸಾಗರದಲ್ಲಿ ಗಲಾಟೆ, ಬಸ್‌ಗಳ ಮೇಲೆ ಕಲ್ಲುತೂರಾಟ, ಪ್ರತಿಭಟನೆಗಳು ನಡೆದಿವೆ. ಶಿವಮೊಗ್ಗದಲ್ಲಿ ಕಲ್ಲು ತೂರಾಟ ನಡೆಸಿದ ಒಬ್ಬ ಮತ್ತು ಚಾಕು ಇಟ್ಟುಕೊಂಡು ಓಡಾಡುತ್ತಿದ್ದ ಮತ್ತೊಬ್ಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಲ್ಲು ತೂರಾಟದಿಂದ ಶಿವಮೊಗ್ಗದಲ್ಲಿ ಓರ್ವ ವ್ಯಕ್ತಿ ಗಾಯಗೊಂಡಿದ್ದರೆ, ಸಾಗರದಲ್ಲಿ 10 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಧ್ವಜಸ್ತಂಭದಲ್ಲಿ ಕೇಸರಿ ಬಾವುಟ:
ಶಿವಮೊಗ್ಗದ ಬಾಪೂಜಿ ಕಾಲೇಜಿನಲ್ಲಿ ವಿದ್ಯಾರ್ಥಿಯೊಬ್ಬ ಅಲ್ಲಿದ್ದ ಧ್ವಜಸ್ತಂಭ ಹತ್ತಿ ಕೇಸರಿ ಧ್ವಜ ಕಟ್ಟಲು ಯತ್ನಿಸಿದಾಗ ಇನ್ನೊಬ್ಬ ವಿದ್ಯಾರ್ಥಿ ಈತನ ಮೇಲೆ ಕಲ್ಲು ಎಸೆದ. ಇದಾಗುತ್ತಿದ್ದಂತೆ ಎಲ್ಲ ಕಡೆ ಕಲ್ಲು ತೂರಾಟ ಆರಂಭಗೊಂಡಿದ್ದು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ವಿದ್ಯಾರ್ಥಿಗಳನ್ನು ಚದುರಿಸಿದರು. ಇದಾದ ಸ್ವಲ್ಪ ಹೊತ್ತಿಗೆ ಡಿವಿಎಸ್ ಕಾಲೇಜಿನಲ್ಲೂ ಗಲಾಟೆ ಶುರುವಾಗಿದ್ದು ಪೊಲೀಸರು ಪರಿಸ್ಥಿತಿ ನಿಯಂತ್ರಣಕ್ಕೆ ತರುವಲ್ಲಿ ಹೈರಾಣಾದರು. ಇಷ್ಟರಲ್ಲಿಯೇ 144 ಸೆಕ್ಷನ್ ಘೋಷಣೆಯಾಗಿ ಪೊಲೀಸರು ವಿದ್ಯಾರ್ಥಿಗಳನ್ನು ಚದುರಿಸುವಲ್ಲಿ ಯಶಸ್ವಿಯಾದರು.
ಶಾಸಕರ ಎದುರೇ ಹೊಡೆದಾಟ:
ಕಲ್ಲು ತೂರಾಟದಿಂದ ಗಾಯಗೊಂಡು ಸಾಗರ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಲು ಶಾಸಕ ಹರತಾಳು ಹಾಲಪ್ಪ ಆಗಮಿಸಿದ್ದರು. ಈ ವೇಳೆಯಲ್ಲಿ ಜಮಾಯಿಸಿದ್ದ ವಿದ್ಯಾರ್ಥಿಗಳು ನಮ್ಮ ಮೇಲೆ ವಿನಾಕಾರಣ ಕಲ್ಲು ತೂರಾಟ ನಡೆಸಲಾಗಿದೆ ಎಂದು ದೂರುತ್ತಿದ್ದರು. ಈ ವೇಳೆಯಲ್ಲಿ ಅನ್ಯ ಕೋಮಿನ ಕೆಲವರು ಆಗಮಿಸಿ ವಾಗ್ಯುದ್ಧ ಆರಂಭಿಸಿದ್ದಾರೆ. ಆಗ ಶಾಸಕರ ಸಮ್ಮುಖವೇ ವಿದ್ಯಾರ್ಥಿಗಳ ನಡುವೆ ಹೊಡೆದಾಟ ನಡೆದಿದೆ.
ಇನ್ನು ಬಾಗಲಕೋಟೆ ಜಿಲ್ಲೆಯ ಬನಹಟ್ಟಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೇಸರಿ ಶಾಲು ಧರಿಸಿದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಗುಂಪು ಘರ್ಷಣೆಯಾಗಿ ಕಲ್ಲು ತೂರಾಟ ನಡೆದ ಪರಿಣಾಮ ಒಬ್ಬ ಗಾಯಗೊಂಡಿದ್ದಾನೆ. ಈ ವೇಳೆ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಚಾಜ್‌ರ್ ನಡೆಸಿದರು.
ಇದೇ ವೇಳೆ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಿಜಾಬ್ ಮತ್ತು ಕೇಸರಿ ಶಾಲು ಸಂಘರ್ಷ ತೀವ್ರ ಸ್ವರೂಪ ಪಡೆದುಕೊಂಡಿದ್ದು ಕಾಲೇಜಿನ ಹೊರಗೆ ವಿದ್ಯಾರ್ಥಿಯೊಬ್ಬನ ಮೇಲೆ ಗುಂಪೊಂದು ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ.
