Karwar: ನೋಡುಗರನ್ನ ಹುಬ್ಬೇರಿಸುವಂತೆ ಮಾಡಿದ ತೆಂಗಿನಮರ..!

*  ಎರಡ್ಮೂರು ತಿಂಗಳಲ್ಲಿ ಬರೋಬ್ಬರಿ 4000- 5000 ತೆಂಗಿನ ಕಾಯಿ 
*  ಹೊನ್ನಾವರ ತಾಲೂಕಿನ ಹೊಸಕುಳಿ ಗ್ರಾಮದಲ್ಲಿರುವ ಕಲ್ಪವೃಕ್ಷ
*  12 ವರ್ಷಗಳ ಹಿಂದೆ ಬೆಳೆಸಿದಂತಹ ಈ ವಿಶೇಷ ತಳಿಯ ತೆಂಗಿನ ಮರ
 

Share this Video
  • FB
  • Linkdin
  • Whatsapp

ಕಾರವಾರ(ಮೇ.17): ಕಲ್ಪವೃಕ್ಷ ಎಂದೇ ಗುರುತಿಸಲ್ಪಡುವ ತೆಂಗಿನಮರದಲ್ಲಿ ಸಾಮಾನ್ಯವಾಗಿ ನೂರರಿಂದ ಇನ್ನೂರು ಕಾಯಿ ಬಿಡವುದನ್ನು ನೋಡಿದ್ದೇವೆ. ಆದರೆ, ಇಲ್ಲೊಂದು ತೆಂಗಿನಮರ ಮಾತ್ರ ಬರೋಬ್ಬರಿ ನಾಲ್ಕರಿಂದ ಐದು ಸಾವಿರ ಕಾಯಿಗಳನ್ನು ಬಿಟ್ಟು ನೋಡುಗರನ್ನು ಬೆರಗಾಗಿಸುತ್ತಿದೆ. ಇದೇ ಕಾರಣದಿಂದ ಹಲವು ಕೃಷಿ ಪ್ರೇಮಿಗಳು ಈ ತೆಂಗಿನ ಮರವನ್ನು ನೋಡಲು ಆಗಮಿಸುತ್ತಾರಲ್ಲದೇ, ಈ ತಳಿಯ ಗಿಡವನ್ನು ಉಚಿತವಾಗಿ ಕೊಂಡೊಯ್ದು ಬೆಳೆಸುತ್ತಿದ್ದಾರೆ. ಅಷ್ಟಕ್ಕೂ ಈ ವಿಶೇಷ ತೆಂಗಿನಮರ ಇರೋದಾದ್ರೂ ಎಲ್ಲಿ ಅಂತೀರಾ..? ಈ ಸ್ಟೋರಿ ನೋಡಿ... 

ಹೌದು, ಎಲ್ಲಾ ತೆಂಗಿನ ಮರಗಳಿಂದ ಕೊಂಚ ಭಿನ್ನವಾಗಿ ಕಾಣುವ ಈ ಮರದ ಕಾಯಿಗಳಿಂದಾಗುವ ಸಸಿಗಳಿಗೆ ಪ್ರಸ್ತುತ ಎಲ್ಲಿಲ್ಲದ ಬೇಡಿಕೆ. ಈ ಕಲ್ಪವೃಕ್ಷದಲ್ಲಿ ಬೆಳೆಯುವ ಬೆಳೆಯನ್ನು ಎಣಿಸುತ್ತಾ ಹೋದ್ರೆ ಯಾರೂ ಕೂಡಾ ಉಸ್ಸಪ್ಪಾ... ಅನ್ನದಿರಲ್ಲ. ಕಾರಣ ಈ ಮರದಲ್ಲಿ ಬೆಳೆಯುವ ತೆಂಗಿನ ಕಾಯಿಗಳ ಸಂಖ್ಯೆ.‌ ಸಾಮಾನ್ಯವಾಗಿ ಯಾವುದೇ ಉತ್ತಮ ತೆಂಗಿನಮರದಲ್ಲಿ 100, 200 ರಿಂದ 500ರಷ್ಟು ತೆಂಗಿ‌ನಕಾಯಿಗಳು ಬೆಳೆಯೋದು ನೋಡಿದ್ದೇವೆ. ಆದರೆ, ಇಲ್ಲೊಂದು ತೆಂಗಿನಮರದಲ್ಲಿ ಮಾತ್ರ ಬರೋಬ್ಬರಿ 4000ದಿಂದ 5000 ತೆಂಗಿನಕಾಯಿಗಳು ಬೆಳೆಯುತ್ತವೆ. ಅಷ್ಟಕ್ಕೂ ಈ ತೆಂಗಿನ ಮರವಿರೋದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಹೊಸಕುಳಿ ಗ್ರಾಮದಲ್ಲಿ. ಈ ಗ್ರಾಮದ ಹಂಸಾರಾಮಕ್ಕಿ ನಿವಾಸಿ ಸುಬ್ರಾಯ ಪರಮೇಶ್ವರ ಶೆಟ್ಟಿ ಅವರ ಮನೆಯಲ್ಲಿ ಸುಮಾರು 12 ವರ್ಷಗಳ ಹಿಂದೆ ಬೆಳೆಸಿದಂತಹ ಈ ವಿಶೇಷ ತಳಿಯ ತೆಂಗಿನ ಮರದಲ್ಲಿ 3 ವರ್ಷದಲ್ಲೇ ಉತ್ತಮ ಫಸಲು ಪ್ರಾರಂಭವಾಗಿತ್ತು. ಇಂದಿನವರೆಗೂ ಈ ಮರದಲ್ಲಿ ಭರ್ಜರಿಯಾಗಿ ಬೆಳೆ ಬೆಳೆಯುತ್ತಿದ್ದು, ಇದರ ಒಂದೊಂದು ಗೊಂಚಲಿನಲ್ಲೇ 300ರಿಂದ 400ರಷ್ಟು ಕಾಯಿಗಳು ಬೆಳೆಯುತ್ತಿವೆ. ಪ್ರತಿ 2 ತಿಂಗಳಿಗೊಮ್ಮೆ ಇದರ ಬೆಳೆ ಕೊಯ್ಯಲು ತಯಾರಾಗುತ್ತಿದ್ದು, ಮನೆ ಮಾಲಕರಿಗೆ ಭರ್ಜರಿ ಲಾಭ ತಂದು ಕೊಡುತ್ತಿದೆ. 

ಕೊಡಗು: ಬೆಂಕಿಯಿಂದ ಬಾಣಲೆಗೆ ನೆರೆ ಸಂತ್ರಸ್ತರ ಪರಿಸ್ಥಿತಿ..!

ವಿಶೇಷವಾಗಿ ಗುರುತಿದಲ್ಪಟ್ಟಿರುವ ಈ ಮರಕ್ಕೆ ಮಾಲಕರಂತೂ ವಿಶೇಷ ಗೊಬ್ಬರವನ್ನೇನೂ ಹಾಕಿಲ್ಲ. ಈ ಮನೆಯಲ್ಲಿ ದನ ಸಾಕಾಣೆ ಮಾಡುತ್ತಿರುವುದರಿಂದ ಅವುಗಳ ಸಗಣಿ, ಇತರ ಸಾವಯವ ಗೊಬ್ಬರ ಹಾಗೂ ನೀರನ್ನು ಮಾತ್ರ ಈ ಮರಕ್ಕೆ ಹಾಕಲಾಗುತ್ತಿದೆ. ಪ್ರತೀ ವರ್ಷ ಭಾರೀ ಪ್ರಮಾಣದಲ್ಲಿ ಬೆಳೆಗಳನ್ನು ನೀಡುತ್ತಿರುವ ಈ ಮರವನ್ನು ಕಂಡು ಮಾಲಕರು ಕೂಡಾ ಆಶ್ಚರ್ಯಕ್ಕೊಳಗಾಗಿದ್ದರು. ಆದರೆ, ಪ್ರತೀ ವರ್ಷ ಇದೇ ಪ್ರಮಾಣದಲ್ಲಿ ಈ ತೆಂಗಿನಮರ ಬೆಳೆ ನೀಡುತ್ತಿರುವುದರಿಂದ ತೆಂಗಿನಕಾಯಿ ಮಾರಾಟ ಮಾಡಿ, ತೆಂಗಿನ ಎಣ್ಣೆ ಉತ್ಪಾದಿಸಿ ಈ ಮರದ ಮಾಲಕರು ಲಾಭ ಗಳಿಸುತ್ತಿದ್ದಾರೆ. ಈ ಮರದಲ್ಲಿ ಬಿಡುವ ಕಾಯಿ ಅತೀ ರುಚಿಯಾದ ನೀರನ್ನು ಹಾಗೂ ಸಿಹಿ ಕೊಬ್ಬರಿಯನ್ನು ನೀಡುತ್ತಿರುವುದರಿಂದ ಈ ವೃಕ್ಷ ಖಂಡ್ರೆ ಮನೆಯವರಿಗೆ ಅತೀ ಪ್ರೀತಿ ಮತ್ತು ಭಕ್ತಿ. ಈ ವೃಕ್ಷದ ತಳಿ ಯಾವುದೆಂದು ಸದ್ಯಕ್ಕೆ ತಿಳಿದುಬಂದಿಲ್ಲ.‌ 

ಈ ಕಾರಣದಿಂದ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಪರಿಶೀಲಿಸಿ ಯಾವ ತಳಿಯೆಂದು ತಿಳಿಸುವುದಾಗಿ ಮಾಹಿತಿ ನೀಡಿದ್ದಾರೆ. ಈ ಮರದ ವಿಶೇಷತೆಯ ಮಾಹಿತಿ ಹೊರಕ್ಕೆ ಬೀಳುತ್ತಿದ್ದಂತೇ ಈಗಾಗಲೇ ಹಲವು ಜನರು ಇದೇ ಮರದ ತೆಂಗಿನ ಕಾಯಿಗಳಿಂದ ಬೆಳೆದ ಸಸಿಗಳನ್ನು ಉಚಿತವಾಗಿ ಕೊಂಡೊಯ್ದಿದ್ದಾರೆ. ಅಲ್ಲದೇ, ಸುಮಾರು 500 ಸಸಿಗಳನ್ನು ತಯಾರು ಮಾಡಿ ನೀಡುವಂತೆ ಈ ಮನೆಯವರಿಗೆ ಆರ್ಡರ್ ಕೂಡಾ ಕೆಲವರಿಂದ ದೊರಕಿದೆ. ಇನ್ನು ಈ ಮನೆಯ ಯುವಕ ವಿನಯ್ ಹೇಳುವಂತೆ, ಕೆಲವು ರೈತರು ಯಾವುದ್ಯಾವುದೋ ತಳಿಗಳನ್ನು ಖರೀದಿಸಿ ಉತ್ತಮ ಬೆಳೆ ಪಡೆಯದೇ ನಷ್ಟ ಅನುಭವಿಸುತ್ತಾರೆ. ಅದರ ಬದಲು ಇವರ ಮನೆಯಲ್ಲಿರುವ ಮರದ ತಳಿಯನ್ನು ಕೊಂಡೊಯ್ದಲ್ಲಿ ಉತ್ತಮ ಬೆಳೆಯೊಂದಿಗೆ, ಉತ್ತಮ ಲಾಭ ಪಡೆಯಬಹುದು ಅಂತಾರೆ ಈ ಯುವಕ ಮರದ ಮಾಲೀಕ ವಿನಯ್ ಹಂಸಾರಾಮಕ್ಕಿ.

ಒಟ್ಟಿನಲ್ಲಿ ಅತೀ ವಿಶೇಷವಾಗಿರುವ ಈ ತೆಂಗಿನ ಮರ ಒಂದೆಡೆ ಮನೆಯ ಮಾಲೀಕರಿಗೆ ಉತ್ತಮ ಆದಾಯ ನೀಡುವುದರೊಂದಿಗೆ ಊರಿನ ಜನರಿಗೆ ಆಶ್ಚರ್ಯವನ್ನೂ ಉಂಟು ಮಾಡಿದೆ. ಈ ಮರದ ತಳಿ ರಾಜ್ಯದ ಇತರ ರೈತರಿಗೂ ದೊರೆತಲ್ಲಿ, ರಾಜ್ಯದ ರೈತರು ಕೂಡಾ ತೆಂಗುಗಳನ್ನು ಬೆಳೆಯುವ ಮೂಲಕ ತೋಟಗಾರಿಕಾ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯ ಅನ್ನೋದು ನಮ್ಮ ಆಶಯ.

Related Video