ಅಂಗನವಾಡಿಯ ಸುತ್ತ..ಸಮಸ್ಯೆಗಳ ಹುತ್ತ: ಹೆಗ್ಗಣಗಳ ಬಿಲದಲ್ಲೇ ಮಕ್ಕಳಿಗೆ ಪಾಠ, ಆಟ !
ಮಕ್ಕಳ ಅಪೌಷ್ಟಿಕತೆ ದೂರಮಾಡಿ ಬುದ್ದಿಮಟ್ಟ, ದೈಹಿಕ ಬೆಳವಣಿಗೆಗೆ ಬುನಾದಿ ಹಾಕೋಕೆ ಸರ್ಕಾರ ಕೋಟಿ ಕೋಟಿ ವ್ಯಯ ಮಾಡಿ ಅಂಗನವಾಡಿ ಮಾಡಿದೆ. ಆದ್ರೆ ಸಿಎಂ ತವರಿನಲ್ಲೇ ಅಂಗನವಾಡಿಗಳು ಹೆಗ್ಗಣದ ಗೂಡಾಗಿದೆ.
ಬಿರುಕು ಬಿಟ್ಟ ಗೋಡೆಗಳು. ಮೇಲೊಂದು ತಗಡಿನ ಹಾಸು. ಕಿತ್ತುಹೋದ ನೆಲದಲ್ಲೇ ಮಕ್ಕಳ ಆಟ, ಪಾಠ, ಊಟ. ಇದೊಂದು ಅಂಗನವಾಡಿ ಕೇಂದ್ರ ಅಂದ್ರೆ ಯಾರಾದರು ನಂಬೋಕಾಗುತ್ತಾ. ನಂಬಲೇಬೇಕು.. ಇದು ಮೈಸೂರಿನ ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಪ್ರತಿನಿಧಿಸುವ ಎಲ್ಲಮ್ಮ ಬಡಾವಣೆಯಲ್ಲಿರೋ ಅಂಗನವಾಡಿ ಕೇಂದ್ರ. ಈ ಅಂಗನವಾಡಿ ಕತೆ ಇಷ್ಟಕ್ಕೆ ಮುಗಿದಿಲ್ಲ. ಇದುವರೆಗೂ ನಾವು ಹೇಳಿದ್ದು ಅಂಗನವಾಡಿ ಹೊರಗಿನ ಚಿತ್ರಣ. ಅಂಗನವಾಡಿ ಒಳಗಿನ ಚಿತ್ರಣವನ್ನೂ ತೋರಿಸ್ತೀವಿ ನೋಡಿ. ಹೇಗಿದೆ..?ಹೆಗ್ಗಣಗಳು ಬಿಲ ತೋಡಿದ್ದರಿಂದ ಮಣ್ಣಿನ ರಾಶಿಯೇ ಬಿದ್ದಿದೆ. ಇದು ಅಂಗನಾವಡಿ ಕೇಂದ್ರವೋ, ಇಲಿ-ಹೆಗ್ಗಣಗಳ ತಾಣವೋ ಅನ್ನೋ ಅನುಮಾನ ಮೂಡಿಸುತ್ತೆ ಅಲ್ವಾ..? ಇದೇ ಕೊಠಡಿಯಲ್ಲಿ ಈ ಪುಟ್ಟ ಪುಟ್ಟ ಮಕ್ಕಳು ಕಾಲ ಕಳೀಬೇಕು. ಈ ಹಿಂದೆ ಸುಮಾರು 60ಕ್ಕೂ ಹೆಚ್ಚು ಮಕ್ಕಳಿದ್ರು.. ಮೂಲಭೂತ ಸಮಸ್ಯೆಗಳಿಂದ ಪೋಷಕರು ತಮ್ಮ ಮಕ್ಕಳನ್ನು ಕಳಿಸಲು ಹಿಂದೇಟು ಹಾಕುತ್ತಿದ್ದಾರೆ.. ಆದರೂ 25ಕ್ಕೂ ಹೆಚ್ಚು ಮಕ್ಕಳು ಈಗಲೂ ಇದೇ ಹೆಗ್ಗಣದ ಗೂಡಿನಲ್ಲಿ ವಿದ್ಯೆಕಲಿಯುತ್ತಿದ್ದಾರೆ.ಎಲ್ಲಮ್ಮ ಬಡಾವಣೆಯ ಅಂಗನವಾಡಿ ಸಮಸ್ಯೆ ಬಗ್ಗೆ ಏಷ್ಯನೆಟ್ ಸುವರ್ಣನ್ಯೂಸ್ ವರದಿ ಪ್ರಸಾರ ಮಾಡಿತ್ತು.. ನಮ್ಮ ವರದಿ ಬಳಿಕ ಅಧಿಕಾರಿಗಳು ಎಚ್ಚೆತ್ತುಕೊಂಡು ಸ್ಥಳಕ್ಕೆ ಭೇಟಿ ಕೊಟ್ಟಿದ್ದಾರೆ. ಸ್ಥಳದಲ್ಲಿ ಹೆಗ್ಗಣಗಳ ಗೂಡಿನ ದರ್ಶನವಾಗುತ್ತಲೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಅಂಗನವಾಡಿ ಕೇಂದ್ರದಲ್ಲಿದ್ದ ಮಕ್ಕಳನ್ನ ಪಕ್ಕದಲ್ಲೇ ಇರುವ ಸಮುದಾಯ ಭವನಕ್ಕೆ ಶಿಫ್ಟ್ ಮಾಡಿಸಿದ್ದಾರೆ. ಸದ್ಯಕ್ಕೆ ಮಕ್ಕಳನ್ನು ಸಮುದಾಯ ಭವನಕ್ಕೆ ಶಿಫ್ಟ್ ಮಾಡಿದ ಅಧಿಕಾರಿಗಳು ಕೂಡಲೇ ಬಗ್ಗೆ ಶಾಶ್ವತ ಪರಿಹಾರ ಒದಗಿಸುವ ಭರವಸೆ ನೀಡಿದ್ದಾರೆ. ಈ ಭರವಸೆಯನ್ನು ಆದಷ್ಟು ಬೇಗ ಈಡೇರಿಸಲಿ. ಜೊತೆಗೆ ಇಂಥ ಸಮಸ್ಯೆಗಳ ಆಗರವಾಗಿರೋ ಎಲ್ಲಾ ಅಂಗನವಾಡಿ ಕೇಂದ್ರಗಳ ಕಡೆಯೂ ಅಧಿಕಾರಿಗಳು ನಿಗಾ ವಹಿಸಲಿ.
ಇದನ್ನೂ ವೀಕ್ಷಿಸಿ: ಕರಾವಳಿಯಲ್ಲಿ ಮತ್ತೊಮ್ಮೆ ಕನ್ನಡ VS ತುಳು ಫೈಟ್..! ಕನ್ನಡ ಸ್ಟಿಕರ್ ಅಭಿಯಾನಕ್ಕೆ ತುಳು ಭಾಷಾ ಪ್ರೇಮಿಗಳು ಗರಂ