Asianet Suvarna News Asianet Suvarna News

Uttara Kannada: ಹೋಳಿಯ ಸಂಭ್ರಮ ಹೆಚ್ಚಿಸಿದ ಹಾಲಕ್ಕಿ ಸುಗ್ಗಿ

ಉತ್ತರಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಕಂಡುಬರುವ ವಿಶೇಷ ಆಚರಣೆಗಳಲ್ಲಿ ಹೋಳಿ ಸುಗ್ಗಿ ಕುಣಿತ ಕೂಡಾ ಒಂದು. ಪ್ರತೀ ವರ್ಷ ಹೋಳಿ ಹಬ್ಬ ಸಮೀಪಿಸುತ್ತಿದ್ದಂತೆ ಎಲ್ಲಿ ನೋಡಿದರೂ ಬಗೆ ಬಗೆಯ ವೇಷಧಾರಿಗಳು, ಕೋಲಾಟ, ಗುಮಟೆ ಪಾಂಗಿನ ಸದ್ದು ಸಡಗರದ ಸಂಭ್ರಮ ಕಾಣುತ್ತದೆ.

ಹೋಳಿ ಹುಣ್ಣಿಮೆ ಹತ್ತಿರವಾದಂತೆ ಉತ್ತರಕನ್ನಡ(Uttara Kannada) ಜಿಲ್ಲೆಯಲ್ಲಿ ಸುಗ್ಗಿಯ ಸಂಭ್ರಮ ಮುಗಿಲು ಮುಟ್ಟುತ್ತದೆ. ಜಿಲ್ಲೆಯಲ್ಲಿನ ಹಾಲಕ್ಕಿ, ಕೋಮಾರಪಂಥ, ಕರೆ ಒಕ್ಕಲಿಗ, ನಾಮಧಾರಿ, ಅಂಬಿಗ, ಆಗೇರ ಸೇರಿದಂತೆ ಹಲವು ಸಮಾಜದವರು ತಮ್ಮ ಸಾಂಪ್ರದಾಯಿಕ ಕಲೆಯಾದ ಸುಗ್ಗಿ ಕುಣಿತವನ್ನು ಹೋಳಿ ಹಬ್ಬದ ಹಿನ್ನೆಲೆ ಪ್ರಾರಂಭಿಸುತ್ತಾರೆ. ಹಬ್ಬಕ್ಕೂ ಏಳೆಂಟು ದಿನಗಳ ಮುನ್ನ ಸುಗ್ಗಿ ಕುಣಿತ ಪ್ರಾರಂಭಿಸಿ ಊರೂರು ತಿರುಗಿ ತಮ್ಮ ಸಮಾಜದವರ ಮನೆಗೆ ತೆರಳಿ ಕುಣಿತವನ್ನು ಪ್ರದರ್ಶಿಸುತ್ತಾರೆ. ಈ ಬಾರಿ ಕೂಡಾ ಕಾರವಾರ ತಾಲೂಕಿನ ಹಾಲಕ್ಕಿ(halakki) ಗೌಡ ಸಮಾಜದ ಸುಗ್ಗಿ ಕುಣಿತಕ್ಕೆ ಚಾಲನೆ ನೀಡಲಾಗಿದ್ದು, ತಮ್ಮ ಸಮುದಾಯದವರು ಇರುವಲ್ಲಿಗೆ ತೆರಳಿ ಸುಗ್ಗಿ ಕುಣಿತವನ್ನ ಪ್ರದರ್ಶಿಸುತ್ತಿದ್ದಾರೆ. ಕಾರವಾರದ ಅಮದಳ್ಳಿ ಗ್ರಾಮದ ಕರಿ ದೇವರಿಗೆ ಪೂಜೆ ಮಾಡಿ ಹೊರಟಿರುವ ಸುಗ್ಗಿ ಕುಣಿತದ ತಂಡದವರು ಮನೆ ಮನೆಗೆ ತೆರಳಿ ತಮ್ಮ ಕಲೆಯನ್ನ ಪ್ರದರ್ಶಿಸುತ್ತಿದ್ದಾರೆ. ಹೋಳಿ ಹುಣ್ಣಿಮೆಗೂ ಏಳು ದಿನಗಳ ಮುಂಚೆ ಸುಗ್ಗಿ ಕುಣಿತವನ್ನು ಪ್ರಾರಂಭಿಸುವುದು ಹಾಲಕ್ಕಿ ಸಮಾಜದವರಲ್ಲಿ ಹಿಂದಿನಿಂದಲೂ ನಡೆದು ಬಂದ ಸಂಪ್ರದಾಯವಾಗಿದೆ. ತಮ್ಮ ಜನಾಂಗದವರು ನೆಲೆಸಿರುವ ಮನೆಗಳ ಮುಂದೆ ತೆರಳಿ ಸುಗ್ಗಿ ಕುಣಿತ ಮಾಡುವುದರಿಂದ ಜನರಿಗೆ ಎದುರಾಗಿರುವ ಸಮಸ್ಯೆ, ತೊಂದರೆಗಳು ಬಗೆಹರಿಯುವುದರ ಜತೆಗೆ ಯಾವುದೇ ರೋಗಗಳೂ ಮನೆಯವರಿಗೆ ಬಾರದಂತೆ ತಡೆಯುತ್ತದೆ ಅನ್ನೋದು ಹಾಲಕ್ಕಿ ಸಮುದಾಯದವರ ನಂಬಿಕೆ. 

ಯಾವ ರಾಶಿಯ ಸಾವು ಯಾವುದರಿಂದ ಬರುತ್ತದೆ?

ಅಂದಹಾಗೆ, ಈ ಸುಗ್ಗಿ ಕುಣಿತಕ್ಕೆ ತನ್ನದೇ ಆದ ವಿಶೇಷವಿದೆ. ಇಲ್ಲಿ ಸಾಂಪ್ರದಾಯಿಕ ಉಡುಗೆ ತೊಟ್ಟು, ತಲೆಗೆ ಬಣ್ಣ ಬಣ್ಣದ ತುರಾಯಿ ಪೇಟವನ್ನು ಕಟ್ಟಿ, ಪೊಗಡೆ ವೇಷಭೂಷಣ ಧರಿಸಿ ಸುಗ್ಗಿ ಕುಣಿಯುವುದು ಎಲ್ಲರ ಮನಸೆಳೆಯುತ್ತದೆ. ಇದರೊಂದಿಗೆ ಗುಮಟೆ, ಜಾಗಟೆಯ ಸದ್ದು, ವಾದ್ಯಗಳ ಹಿಮ್ಮೇಳ ಸುಗ್ಗಿ ಕುಣಿತಕ್ಕೆ ಇನ್ನಷ್ಟು ಮೆರಗು ನೀಡುತ್ತದೆ. ಒಮ್ಮೆ ವೇಷತೊಟ್ಟು ಹಣೆಗೆ ಗಂಧವನ್ನು ಇಟ್ಟುಕೊಂಡು ಹೊರಟರೆ ಸುಗ್ಗಿ ಕುಣಿತ ಮುಗಿಸುವ ಏಳು ದಿನದವರೆಗೂ ವಾಪಾಸ್ ಮನೆಗೆ ತೆರಳುವಂತಿಲ್ಲ. ಜತೆಗೆ ಸಮಾಜದ ಮನೆಯವರ ಅಂಗಳದಲ್ಲಿ ಸುಗ್ಗಿ ಕುಣಿತ ಮಾಡಿದಾಗ ಅವರು ನೀಡುವ ಹಣ, ಊಟ ತಿಂಡಿ ಸ್ವೀಕರಿಸುವ ಪ್ರತೀತಿ ಇದೆ. ಕಳೆದ ಬಾರಿ ಕೊರೊನಾ ಕಾರಣದಿಂದಾಗಿ ಸುಗ್ಗಿ ಕುಣಿತಕ್ಕೆ ಬ್ರೇಕ್ ಬಿದ್ದಿದ್ದು, ಈ ಬಾರಿ ಸಂಪ್ರದಾಯದಂತೆ ಸುಗ್ಗಿಯನ್ನ ಪ್ರಾರಂಭಿಸಲಾಗಿದೆ. ಸಮುದಾಯದ ಮನೆಗಳವರು ತಮ್ಮನ್ನು ಆಹ್ವಾನಿಸಿದಲ್ಲಿಗೆ ತೆರಳಿ ಕುಣಿತವನ್ನು ಪ್ರದರ್ಶನ ಮಾಡಲಾಗುತ್ತದೆ. ಹೋಳಿಯ ದಿನದಂದು ಸುಗ್ಗಿ ಪ್ರಾರಂಭಿಸಿದಲ್ಲಿಗೇ ವಾಪಸ್ಸಾಗಿ ಕರಿ ದೇವರಿಗೆ ಪೂಜೆ ಸಲ್ಲಿಸಿ, ತುರಾಯಿಗಳನ್ನು ದೇವರಿಗೆ ಅರ್ಪಿಸಿದ ಬಳಿಕವೇ ಸುಗ್ಗಿ ಕುಣಿತವನ್ನ ಕೊನೆಗೊಳಿಸಲಾಗುತ್ತದೆ. ಬಳಿಕ ಸಮುದ್ರ ಸ್ನಾನ ಮಾಡಿಕೊಂಡು ಮನೆಗೆ ತೆರಳಲಾಗುತ್ತದೆ ಅಂತಾರೇ ತಂಡದವರು. 

Vermilion Remedies: ಹಣಕಾಸಿನ ಸಮಸ್ಯೆಗೆ ಕುಂಕುಮದ ಪರಿಹಾರ

ಒಟ್ಟಿನಲ್ಲಿ ಜಾನಪದ ಕಲೆಗಳು ವಿನಾಶದ ಅಂಚಿಗೆ ಸಾಗುತ್ತಿರುವ ಈ ದಿನಗಳಲ್ಲಿ ತಲೆ ತಲಾಂತರಗಳಿಂದ ಬಂದಿರುವ ಸಾಂಪ್ರದಾಯಿಕ ಸುಗ್ಗಿಕುಣಿತದ ಕಲೆಯನ್ನು ಇಂದಿಗೂ ನಡೆಸಿಕೊಂಡು ಬರಲಾಗುತ್ತಿದೆ. ಮಕ್ಕಳು, ಯುವಕರು ಹಾಗೂ ವೃದ್ಧರೂ ಕೂಡಾ ಒಟ್ಟಾಗಿ ಈ ಕುಣಿತದಲ್ಲಿ ಪಾಲ್ಗೊಳ್ಳುವುದರಿಂದ ಮುಂದಿನ ಪೀಳಿಗೆಗೂ ಆಚರಣೆ, ಸಂಸ್ಕೃತಿ, ಸಂಪ್ರದಾಯಗಳನ್ನು ತಿಳಿಸಿಕೊಡುವಲ್ಲಿ ಸುಗ್ಗಿ ಕುಣಿತ ಸಹಕಾರಿಯಾಗಿರುವುದರಲ್ಲಿ ಎರಡು ಮಾತಿಲ್ಲ.

Video Top Stories