ಯಶ್ಗೆ ಸಿಗ್ಲಿಲ್ವಾ ಬೇರೆ ಡೈರೆಕ್ಟರ್? ಟಾಕ್ಸಿಕ್ ನಿರ್ದೇಶಕಿ ಮೇಲೆ ಮಾಲಿವುಡ್ ಆಕ್ರೋಶ
ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟುಹಬ್ಬದಂದು ಬಿಡುಗಡೆಯಾದ 'ಟಾಕ್ಸಿಕ್' ಚಿತ್ರದ ಗ್ಲಿಂಪ್ಸ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಿರ್ದೇಶಕಿ ಗೀತು ಮೋಹನ್ ದಾಸ್ ಅವರ ಮೇಲೆ ಮಲಯಾಳಂ ಚಿತ್ರರಂಗದವರು ಟೀಕೆ ಮಾಡುತ್ತಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಬರ್ತ್ಡೇ ಪ್ರಯುಕ್ತ ಬಂದಿರೋ ಗ್ಲಿಂಪ್ಸ್ಗೆ ಭರ್ಜರಿ ರೆಸ್ಪಾನ್ಸ್ ಸಿಕ್ತಾ ಇವೆ. ಆದ್ರೆ ಮಲಯಾಳಂ ಇಂಡಸ್ಟ್ರಿಯ ಮಂದಿ ಮಾತ್ರ ಟಾಕ್ಸಿಕ್ ಬಗ್ಗೆ ಕಡು ಟೀಕೆ ಮಾಡ್ತಾ ಇದ್ದಾರೆ. ಅರೇ ಮಾಲಿವುಡ್ ಮಂದಿಗ್ಯಾಕೆ ಟಾಕ್ಸಿಕ್ ಇಷ್ಟವಾಗ್ತಿಲ್ಲ ಅಂತ ನೋಡ ಹೋದ್ರೆ ಅದಕ್ಕೆ ಕಾರಣನೇ ಟಾಕ್ಸಿಕ್ ನಿರ್ದೇಶಕಿ ಗೀತು ಮೋಹನ್ ದಾಸ್. ಮಲಯಾಳಂ ಮೂಲದ ಈ ನಿರ್ದೇಶಕಿ ಬಗ್ಗೆ ಅದೇ ಮಲಯಾಳಂ ಉದ್ಯಮದವರೇ ಟೀಕೆ ಮಾಡ್ತಿದ್ದಾರೆ. ಈಕೆಯನ್ನ ಟಾಕ್ಸಿಕ್ ಲೇಡಿ ಅಂತಿದ್ದಾರೆ.. ಏನಿದರ ಹಿಂದಿನ ಕಾರಣ..? ಇಲ್ಲಿದೆ ನೋಡಿ ಆ ಕುರಿತ ಇನ್ಟ್ರೆಸ್ಟಿಂಗ್ ಸ್ಟೋರಿ.
ಯೆಸ್ ರಾಕಿಂಗ್ ಸ್ಟಾರ್ ಯಶ್ ಬರ್ತ್ಡೇಗೆ ಟಾಕ್ಸಿಕ್ ಸಿನಿಮಾ ಗ್ಲಿಂಪ್ಸ್ ರಿಲೀಸ್ ಆಗಿದೆ. ಯಶ್ ಫ್ಯಾನ್ಸ್ ಈ ಗ್ಲಿಂಪ್ಸ್ ನೋಡಿ ಹಬ್ಬ ಮಾಡ್ತಾ ಇದ್ದಾರೆ. ಯಶ್ ಲುಕ್ಕು, ಗ್ಲಿಂಪ್ಸ್ನ ಅದ್ದೂರಿತನವನ್ನ ಕೊಂಡಾಡ್ತಾ ಇದ್ದಾರೆ. ನೋಡ್ತಾಯಿರಿ ನಮ್ಮ ರಾಕಿಭಾಯ್ ಅಂತಿಂಥ ಸಿನಿಮಾ ಮಾಡಲ್ಲ ಅಂತ ಯಶ್ ಫ್ಯಾನ್ಸ್ ಜಂಬ ಪಡ್ತಾ ಇದ್ದಾರೆ. ಆದ್ರೆ ಈ ಗ್ಲಿಂಪ್ಸ್ ಬಗ್ಗೆ ಒಂದಿಷ್ಟು ಕಡು ಟೀಕೆಗಳು ಬರ್ತಾ ಇವೆ. ಅದ್ರಲ್ಲೂ ವಿಶೇಷವಾಗಿ ಮಲಯಾಳಂ ಚಿತ್ರರಂಗದವರು ಟಾಕ್ಸಿಕ್ ಗ್ಲಿಂಪ್ಸ್ ಬಗ್ಗೆ ನೆಗೆಟಿವ್ ಟಾಕ್ ಶುರು ಮಾಡಿದ್ದಾರೆ. ಅಷ್ಟಕ್ಕೂ ಇವರು ಟಾಕ್ಸಿಕ್ ಬಗ್ಗೆ ಹೀಗೆ ಟೀಕೆ ಮಾಡ್ಲಿಕ್ಕೆ ಕಾರಣ ಯಶ್ ಅಲ್ಲವೇ ಅಲ್ಲ. ಗೀತು ಮೇಲಿನ ಕೋಪಕ್ಕೆ ಟಾಕ್ಸಿಕ್ ಮೇಲೆ ಮುಗಿಬಿದ್ದಿದ್ದಾರೆ.
ಅಸಲಿಗೆ ಗೀತು ಮೋಹನದಾಸ್ ಮಲಯಾಳಂ ಚಿತ್ರರಂಗದ ನಟಿ ಕಂ ನಿರ್ದೇಶಕಿ. ಗೀತು ನಿರ್ದೇಶಿಸಿದ ಲಯರ್ಸ್ ಡೈಸ್ ಸಿನಿಮಾಗೆ ರಾಷ್ಟ್ರಪ್ರಶಸ್ತಿ ಬಂದಿತ್ತು. ಗೀತು ನಿರ್ದೇಶನ ಮಾಡಿದ ಮುಥೋನ್ ಸಿನಿಮಾದ ಮೇಕಿಂಗ್ ಗಮನ ಸೆಳೆದಿತ್ತು. ಇದೇ ಚಿತ್ರದ ಮೇಕಿಂಗ್ ನೋಡಿಯೇ ಯಶ್, ಗೀತುಗೆ ಟಾಕ್ಸಿಕ್ ನಿರ್ದೇಶನ ಮಾಡುವ ಅವಕಾಶ ಕೊಟ್ಟಿರೋದು. ಅಸಲಿಗೆ ಕೆಜಿಎಫ್ -2 ನಂತರ ಯಶ್ಗೆ ಆಕ್ಷನ್ ಕಟ್ ಹೇಳುವ ಅವಕಾಶಕ್ಕಾಗಿ ಇಂಡಿಯನ್ ಸಿನಿ ಇಂಡಸ್ಟ್ರಿಯ ದೊಡ್ಡ ದೊಡ್ಡ ನಿರ್ದೇಶಕರೆಲ್ಲಾ ಸರತಿ ಸಾಲಲ್ಲಿ ನಿಂತಿದ್ರು. ಆದ್ರೆ ಆ ಗೋಲ್ಡನ್ ಚಾನ್ಸ್ ಸಿಕ್ಕಿದ್ದು ಮಾತ್ರ ಗೀತು ಮೋಹನ್ ದಾಸ್ಗೆ.
ಇದೇ ಕಾರಣಕ್ಕೆ ಗೀತು ಮೇಲೆ ಅನೇಕ ನಿರ್ದೇಶಕರಿಗೆ ಹೊಟ್ಟೆಯಿರಿ ಇದೆ. ಆದ್ರೆ ಈಗ ಗೀತು ಮೇಲೆ ಮಲಯಾಳಂ ಚಿತ್ರರಂಗದ ಮಂದಿ ತಿರುಗಿ ಬಿದ್ದಿದ್ದಕ್ಕೆ ಒಂದು ಕಾರಣ ಇದೆ. ಗೀತು ಮೋಹನದಾಸ್ ತನ್ನನ್ನ ತಾನು ಮಹಿಳಾವಾದಿ ಅನ್ನೋ ರೀತಿ ಬಿಂಬಿಸಿಕೊಂಡಿದ್ರು. ಆದ್ರೆ ಟಾಕ್ಸಿಕ್ ಗ್ಲಿಂಪ್ಸ್ ನಲ್ಲಿರೋ ಅಂಶಗಳು ಎಲ್ಲರೂ ಹುಬ್ಬೆರಿಸುವಂತೆ ಇವೆ. ಹೌದು ಟಾಕ್ಸಿಕ್ ಗ್ಲಿಂಪ್ಸ್ ನಲ್ಲಿ ಹೈಲೈಟ್ ಆಗಿರೋದು ಮದಿರೆ ಮತ್ತು ಮಾನಿನಿಯರು. ಅರೆಬರೆ ಬಟ್ಟೆ ತೊಟ್ಟ ವಿದೇಶಿ ಕನ್ಯೆಯರು, ಮದಿರೆಯ ನಶೆ, ಕುಣಿತದ ದೃಶ್ಯಗಳು ಗ್ಲಿಂಪ್ಸ್ನಲ್ಲಿವೆ. ಅದ್ರಲ್ಲೂ ಯಶ್ ಯುವತಿಯೊಬ್ಬಳ ಮೇಲೆ ಮಧ್ಯ ಸುರಿಯೋ ಸೀನ್ ಅನೇಕರ ಕಣ್ಣು ಕುಕ್ಕಿದೆ.
ಹಿಂದೆ 2016ರಲ್ಲಿ ಮಮ್ಮುಟ್ಟಿ ನಟನೆಯ ಕಸಾಬ ಅನ್ನೋ ಸಿನಿಮಾ ರಿಲೀಸ್ ಆಗಿತ್ತು. ನಿತಿನ್ ನಿರ್ದೇಶನ ಮಾಡಿದ್ದ ಈ ಸಿನಿಮಾದಲ್ಲಿ ಮಹಿಳಾ ಪೊಲೀಸ್ ಜೊತೆಗೆ ನಾಯಕ ನಡೆದುಕೊಳ್ಳೋ ಒಂದು ಸನ್ನಿವೇಶದ ಬಗ್ಗೆ ಅನೇಕ ನಟಿಯರು, ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ರು. ಆಗ ಗೀತು ಕೂಡ ಈ ಸಿನಿಮಾ ಬಗ್ಗೆ ಟೀಕೆ ಮಾಡಿದ್ರು. ಈಗ ನೋಡಿದ್ರೆ ಈಕೆ ನಿರ್ದೇಶನ ಮಾಡಿದ ಸಿನಿಮಾದಲ್ಲೂ ಮಹಿಳೆಗೆ ಅಗೌರವ ತೋರಿಸುವಂಥಾ ದೃಶ್ಯ ಇದೆ. ಈ ಡಬಲ್ ಸ್ಟಾಂಡರ್ಡ್ ವಿರುದ್ದ ಮಮ್ಮೂಟ್ಟಿ ಫ್ಯಾನ್ಸ್ ಕೆಂಡಾಮಂಡಲ ಆಗಿದ್ದಾರೆ. ನಿರ್ದೇಶಕ ನಿತಿನ್ ಅಂತೂ ದೀರ್ಘವಾದ ಪೋಸ್ಟ್ ಹಾಕಿ ಗೀತುಗೆ ಛೀಮಾರಿ ಹಾಕಿದ್ದಾರೆ.
ನಿರ್ದೇಶಕ ನಿತಿನ್ ಪೋಸ್ಟ್ :
ಕಸಾಬ ಚಿತ್ರದಲ್ಲಿ ಯಾವುದೇ ಕೆಟ್ಟ ವಿಚಾರ ಇರಲಿಲ್ಲ. ಆದಾಗ್ಯೂ ಇದು ತಪ್ಪು ತಪ್ಪು ಎಂದರು. ಈಗ ಗೀತು ಮೋಹನದಾಸ್ ಬೇರೆ ರಾಜ್ಯಕ್ಕೆ ತೆರಳಿದಾಗ ತಮಗೆ ಸರಿಹೊಂದುವಂತೆ ಸ್ತ್ರೀದ್ವೇಷದ ವ್ಯಾಖ್ಯಾನವನ್ನ ಬದಲಾಯಿಸಿಕೊಂಡಿದ್ದಾರೆ ಎಂದು ದೂರಿದ್ದಾರೆ. ನಿರ್ದೇಶಕ ನಿತಿನ್ ಅಷ್ಟೇ ಅಲ್ಲದೇ ಮಲಯಾಳಂ ಇಂಡಸ್ಟ್ರಿಯ ಅನೇಕರು ಗೀತು ಬಗ್ಗೆ ಅಪಸ್ವರ ಎತ್ತಿದ್ದಾರೆ. ಸದ್ಯಕ್ಕಂತೂ ಇದರ ಬಗ್ಗೆ ಗೀತು ಮಾತನಾಡಿಲ್ಲ. ಆದ್ರೆ ಮಾತನಾಡಲೇಬೇಕಾದ ಸಮಯ ಅಂತೂ ಬಂದೇ ಬರುತ್ತೆ. ಯಾಕಂದ್ರೆ ಟಾಕ್ಸಿಕ್ನಂಥಾ ಬಿಗ್ ಸಿನಿಮಾದ ಪ್ರಮೋಷನ್ ಟೈಂನಲ್ಲಿ ಅವರು ಎಲ್ಲರ ಮುಖಾಮುಖಿ ಆಗಲೇಬೇಕು. ಒಟ್ಟಾರೆ ನಿರ್ದೇಶಕಿಯ ಕಾರಣಕ್ಕೆ ಟಾಕ್ಸಿಕ್ ಬಗ್ಗೆ ನೆಗೆಟಿವ್ ಟಾಕ್ ಕ್ರಿಯೇಟ್ ಆಗುವಂತೆ ಅಗಿದೆ. ರಾಕಿ ಬಗ್ಗೆ ನಮಗೇನು ಸಿಟ್ಟಿಲ್ಲ. ಆದ್ರೆ ಯಶ್ಗೆ ಈ ನಿರ್ದೇಶಕಿಯ ಸಹವಾಸ ಬೇಕಿರಲಿಲ್ಲ ಅನ್ನೋದು ಮಲಯಾಳಂ ಇಂಡಸ್ಟ್ರಿ ಮಂದಿಯ ತಕರಾರು.
ಅಮೀತ್ ದೇಸಾಯಿ, ಏಷ್ಯಾನೆಟ್ ಸುವರ್ಣ ನ್ಯೂಸ್.