
ನಟಿ ಸೌಮ್ಯಾ ಶೆಟ್ಟಿ ಗಂಡ ಸುದೀಪ್ ಶೆಟ್ಟಿ ಆತ್ಮ*ಹತ್ಯೆ ಪ್ರಕರಣ: ಪೊಲೀಸ್ ಠಾಣೆಗೆ ಕಂಪ್ಲೇಂಟ್ ಕೊಟ್ಟ ಮಾವ!
ನಟಿ ಸೌಮ್ಯಾ ಶೆಟ್ಟಿ ಮದುವೆಯಾದ ಒಂದೇ ತಿಂಗಳಲ್ಲಿ ಪತಿ ಸುದೀಪ್ ಶೆಟ್ಟಿ ವಿಷ ಸೇವಿಸಿ ಸಾವನ್ನಪ್ಪಿದ್ದಾರೆ. ಇದು ಆತ್ಮ*ಹತ್ಯೆ ಎನ್ನಲಾಗುತ್ತಿದ್ದರೂ, ಸುದೀಪ್ ತಂದೆ ಸೊಸೆ ಸೌಮ್ಯಾ ವಿರುದ್ಧವೇ ಕೊಲೆ ಆರೋಪ ಮಾಡಿ ದೂರು ದಾಖಲಿಸಿದ್ದು, ಪ್ರಕರಣ ಹಲವು ಅನುಮಾನಗಳಿಗೆ ಕಾರಣವಾಗಿದೆ.
ಉಡುಪಿ: ಪ್ರೀತಿಸಿ ಮದುವೆಯಾಗಿದ್ದ ನಟಿ ಸೌಮ್ಯಾ ಶೆಟ್ಟಿ ಬದುಕಿನಲ್ಲಿ ಒಂದೇ ತಿಂಗಳ ಅವಧಿಯಲ್ಲಿ ವಿಧಿಯಾಟ ಆಟವಾಡಿದೆ. ಮದುವೆಯಾದ ಸಂಭ್ರಮ ಆರುವ ಮುನ್ನವೇ ಸೌಮ್ಯ ಶೆಟ್ಟಿ ಗಂಡ ಸುದೀಪ್ ಶೆಟ್ಟಿ ವಿಷ ಸೇವಿಸಿ ಆತ್ಮ*ಹತ್ಯೆ ಮಾಡಿಕೊಂಡಿರುವ ಘಟನೆ ಕಾರ್ಕಳ ತಾಲೂಕಿನಲ್ಲಿ ನಡೆದಿದೆ. ಆದರೆ ಈ ಸಾವು ಈಗ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ಸುದೀಪ್ ತಂದೆ ತನ್ನ ಸೊಸೆಯ ಸೌಮ್ಯಾಳ ವಿರುದ್ಧವೇ ಗಂಭೀರ ಆರೋಪ ಮಾಡಿದ್ದಾರೆ. ಇದೀಗ ನಟಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಆರಂಭಿಸಲಾಗಿದೆ.
ಪ್ರಕರಣದ ಹಿನ್ನೆಲೆ:
ಸುದೀಪ್ ಶೆಟ್ಟಿ ಹಾಗೂ ಕಾರ್ಕಳದ ಬಂಗ್ಲೆಗುಡ್ಡೆ ನಿವಾಸಿ ಸೌಮ್ಯ ಶೆಟ್ಟಿ ಫೆಬ್ರವರಿ 17ರಂದು ಪುತ್ತೂರಿನಲ್ಲಿ ರಿಜಿಸ್ಟರ್ ಮದುವೆಯಾಗಿದ್ದರು. ಸೌಮ್ಯ ಶೆಟ್ಟಿ ತುಳು ನಾಟಕ ಕಲಾವಿದೆ ಹಾಗೂ ಮೇಕಪ್ ಆರ್ಟಿಸ್ಟ್ ಆಗಿ ಗುರುತಿಸಿಕೊಂಡಿದ್ದರು. ಸುದೀಪ್ ಮನೆಯವರು ಈ ಮದುವೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಈ ನಡುವೆ ಮಾರ್ಚ್ 19ರಂದು ಕುಕ್ಕುಂದೂರು ದೇವಸ್ಥಾನದಲ್ಲಿ ಈ ಜೋಡಿ ಮತ್ತೆ ವಿವಾಹವಾಗಿದ್ದರು. ಆದರೆ ಮಾರ್ಚ್ 22ರ ಸುಮಾರಿಗೆ ಸುದೀಪ್ ವಿಷ ಸೇವಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮಾರ್ಚ್ 29ರಂದು ಮಂಗಳೂರಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ತಂದೆಯ ಗಂಭೀರ ಆರೋಪ:
ಸುದೀಪ್ ತಂದೆ ದಾಮೋದರ್ ಅವರು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, 'ನನ್ನ ಮಗನಿಗೆ ಸೌಮ್ಯ ಶೆಟ್ಟಿ ವಿಷ ಹಾಕಿ ಕೊಂದಿದ್ದಾಳೆ. ಅವಳು ಈ ಹಿಂದೆಯೂ ಹಲವು ಪುರುಷರಿಗೆ ವಂಚನೆ ಮಾಡಿದ್ದಾಳೆ. ವಿಷ ಹಾಕಿದರೂ 7 ದಿನಗಳ ಕಾಲ ಮಗನಿಗೆ ಸರಿಯಾದ ಚಿಕಿತ್ಸೆ ಕೊಡಿಸದೆ ನಿರ್ಲಕ್ಷ್ಯ ವಹಿಸಿದ್ದಾಳೆ' ಎಂದು ಆರೋಪಿಸಿದ್ದಾರೆ. ಅಲ್ಲದೆ, ಸೌಮ್ಯ ತನ್ನ ಮಗನಿಗೆ ಆತ್ಮ*ಹತ್ಯೆ ಮಾಡಿಕೊಳ್ಳುವಂತೆ ಪ್ರಚೋದನೆ ನೀಡಿದ್ದಾಳೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪತ್ನಿ ಸೌಮ್ಯ ಶೆಟ್ಟಿ ಸ್ಪಷ್ಟನೆ:
ಈ ಆರೋಪಗಳನ್ನು ನಿರಾಕರಿಸಿರುವ ಸೌಮ್ಯ ಶೆಟ್ಟಿ, 'ನಾನು ಸುದೀಪ್ ಹಣಕ್ಕಾಗಿ ಮದುವೆಯಾಗಿಲ್ಲ. ಆತನಿಗಿದ್ದ ಲಕ್ಷಾಂತರ ರೂಪಾಯಿ ಸಾಲದ ಬಗ್ಗೆ ತಿಳಿದಿದ್ದರೂ ನಾನು ಜೀವನ ನಡೆಸಲು ಬಯಸಿದ್ದೆ. ಸುದೀಪ್ ಅವರ ತಂದೆಯೇ ಅವರನ್ನು ಮನೆಯಿಂದ ದೂರವಿಟ್ಟಿದ್ದರು. ಮದುವೆಗೆ ಮನೆಯವರು ಒಪ್ಪದಿದ್ದಾಗ ಸುದೀಪ್ ಮನನೊಂದು ವಿಷ ಸೇವಿಸಿರಬಹುದು. ವಿಷ ಸೇವಿಸಿದ ನಂತರವೂ ಅವರು ಆರಾಮವಾಗಿದ್ದರು, ಕೇವಲ ಫುಡ್ ಪಾಯಿಸನ್ ಎಂದು ಭಾವಿಸಿ ನಾವು ಆಸ್ಪತ್ರೆಗೆ ದಾಖಲಿಸಿದ್ದೆವು. ಸುದೀಪ್ ಮನೆಯವರೇ ಆತನಿಗೆ ಕಿರುಕುಳ ನೀಡುತ್ತಿದ್ದರು' ಎಂದು ತಿರುಗೇಟು ನೀಡಿದ್ದಾರೆ.
ತನಿಖೆ ಚುರುಕುಗೊಳಿಸಿದ ಪೊಲೀಸರು:
ಪ್ರಸ್ತುತ ಮಂಗಳೂರಿನ ಎನಪೋಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಸುದೀಪ್ ಯಾವ ಕಾರಣಕ್ಕಾಗಿ ವಿಷ ಸೇವಿಸಿದರು? ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ? ಎಂಬುದನ್ನು ಪೋಸ್ಟ್ ಮಾರ್ಟಂ ವರದಿ ಬಹಿರಂಗಪಡಿಸಲಿದೆ. ಸದ್ಯ ಕಾರ್ಕಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಎರಡೂ ಕಡೆಯ ಹೇಳಿಕೆಗಳನ್ನು ಪಡೆದು ತನಿಖೆ ಮುಂದುವರಿಸಿದ್ದಾರೆ.