ಭೂಮಂಡಲಕ್ಕೆ 3 ವೈರಸ್‌ಗಳ ಶಾಪ! ಎಬೋಲಾ, ಕೊರೊನಾ ಜೊತೆ ಹಂಟಾ ವೈರಸ್ ಅಟ್ಟಹಾಸ: ಮತ್ತೆ ಶುರುವಾಯ್ತು ಲಾಕ್ ಡೌನ್ ಭೀತಿ!

ಜಗತ್ತು ಏಕಕಾಲದಲ್ಲಿ ಎಬೋಲಾ, ಕೊರೊನಾ ಮತ್ತು ಹಂಟಾ ಎಂಬ ಮೂರು ಮಾರಕ ವೈರಸ್‌ಗಳ ಭೀತಿಯನ್ನು ಎದುರಿಸುತ್ತಿದೆ. ಕಾಂಗೋದಲ್ಲಿ ಎಬೋಲಾದ ಅಪರೂಪದ ತಳಿ, ಸಿಂಗಾಪುರದಲ್ಲಿ ಕೊರೊನಾದ ಹೊಸ ರೂಪಾಂತರಿ ಮತ್ತು ಅಂಟಾರ್ಟಿಕಾ ಪ್ರವಾಸದ ಹಡಗಿನಿಂದ ಹಂಟಾ ವೈರಸ್ ಹರಡುತ್ತಿದ್ದು, ಜಾಗತಿಕವಾಗಿ ಆತಂಕ ಸೃಷ್ಟಿಸಿದೆ.

Share this Video
  • FB
  • Linkdin
  • Whatsapp

ಬೆಂಗಳೂರು: ಜಗತ್ತು ಯುದ್ಧದ ಕಾರ್ಮೋಡಗಳ ನಡುವೆ ಬದುಕುತ್ತಿದ್ದರೆ, ಇತ್ತ ಪ್ರಕೃತಿ ಮನುಕುಲದ ಮೇಲೆ ಮತ್ತೊಂದು ಮಸಲತ್ತು ನಡೆಸಿದಂತಿದೆ. ಒಂದು ಕಡೆ ಮಿಸೈಲ್-ಬಾಂಬ್‌ಗಳ ಆರ್ಭಟವಾದರೆ, ಇನ್ನೊಂದೆಡೆ ಕಣ್ಣಿಗೆ ಕಾಣದ ಅಣುಗಾತ್ರದ ವೈರಸ್‌ಗಳು ಭೂಮಂಡಲವನ್ನೇ ಬುಡಮೇಲು ಮಾಡಲು ಸಜ್ಜಾಗಿವೆ. ಹೌದು, ಈಗ ಜಗತ್ತಿಗೆ ಒಂದಲ್ಲ, ಎರಡಲ್ಲ, ಬರೋಬ್ಬರಿ ಮೂರು ಮಾರಕ ವೈರಸ್‌ಗಳ ಭೀತಿ ಎದುರಾಗಿದೆ. ಎಬೋಲಾ, ಕೊರೊನಾ ಮತ್ತು ಹಂಟಾ ವೈರಸ್‌ಗಳು ಏಕಕಾಲಕ್ಕೆ ದಾಳಿ ಮಾಡುತ್ತಿದ್ದು, ಜಾಗತಿಕವಾಗಿ ಹೈ ಅಲರ್ಟ್ ಘೋಷಿಸಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

1. ಎಬೋಲಾ: ಚಿನ್ನದ ಗಣಿಯಲ್ಲಿ ರಕ್ತದ ಆಟ!

ಕಾಂಗೋ ದೇಶದ ಇತುರಿ ಪ್ರಾಂತ್ಯದ ಮೊಂಗ್ವಾಲು ಎಂಬ ಚಿನ್ನದ ಗಣಿ ಪ್ರದೇಶದಲ್ಲಿ ಈ ಕರಾಳ ಕಥೆ ಶುರುವಾಗಿದೆ. ಇಲ್ಲಿ ಹಳೆಯ ಎಬೋಲಾ ವೈರಸ್‌ನ ಅತ್ಯಂತ ಅಪರೂಪದ ಹಾಗೂ ಅಪಾಯಕಾರಿ ತಳಿ 'ಬುಂದಿಬುಗ್ಯೋ' ಪತ್ತೆಯಾಗಿದೆ. ಇತಿಹಾಸದಲ್ಲೇ ಕೇವಲ ಎರಡು ಬಾರಿ ಕಾಣಿಸಿಕೊಂಡಿದ್ದ ಈ ವೈರಸ್ ಈಗ ಮೂರನೇ ಬಾರಿಗೆ ಅಟ್ಟಹಾಸ ಮೆರೆಯುತ್ತಿದೆ.

ಈ ವೈರಸ್ ದೇಹ ಸೇರಿದರೆ ರಕ್ತ ಹೆಪ್ಪುಗಟ್ಟುವ ಶಕ್ತಿಯೇ ನಾಶವಾಗುತ್ತದೆ. ರಕ್ತನಾಳಗಳು ಲೀಕ್ ಆಗಿ ಅಂಗಾಂಗಗಳು ವೈಫಲ್ಯಗೊಳ್ಳುತ್ತವೆ. ಈ ವೈರಸ್‌ಗೆ ಸದ್ಯಕ್ಕೆ ಜಗತ್ತಿನಲ್ಲಿ ಯಾವುದೇ ಲಸಿಕೆ ಅಥವಾ ಔಷಧಿ ಲಭ್ಯವಿಲ್ಲ ಎಂಬುದು ಆತಂಕದ ಸಂಗತಿ. ಇತ್ತೀಚೆಗೆ ಏರ್ ಫ್ರಾನ್ಸ್ ವಿಮಾನದಲ್ಲಿ ಎಬೋಲಾ ಪೀಡಿತ ಪ್ರಯಾಣಿಕ ಪತ್ತೆಯಾದ ಹಿನ್ನೆಲೆಯಲ್ಲಿ ವಿಮಾನವನ್ನೇ ಕೆನಡಾಕ್ಕೆ ಡೈವರ್ಟ್ ಮಾಡಲಾದ ಘಟನೆ ಜಗತ್ತನ್ನು ಬೆಚ್ಚಿಬೀಳಿಸಿದೆ. ಭಾರತ ಕೂಡ ಮೇ 21 ರಂದು ಖಡಕ್ ಹೆಲ್ತ್ ಅಡ್ವೈಸರಿ ಜಾರಿ ಮಾಡಿದ್ದು, ದೆಹಲಿ ವಿಮಾನ ನಿಲ್ದಾಣದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.

2. ಸಿಂಗಾಪುರದಲ್ಲಿ ಕೊರೊನಾ ಗ್ರಹಣ!

ಕೊರೊನಾ ಮುಗಿದೇ ಹೋಯ್ತು ಅಂದುಕೊಂಡಿದ್ದ ಜನತೆಗೆ ಸಿಂಗಾಪುರ ಶಾಕ್ ನೀಡಿದೆ. ಕೇವಲ ಒಂದೇ ವಾರದಲ್ಲಿ ಸಿಂಗಾಪುರದಲ್ಲಿ ಕೋವಿಡ್ ಪ್ರಕರಣಗಳು 8,000 ದಿಂದ 12,700ಕ್ಕೆ ಜಿಗಿದಿವೆ. ಈ ಸಲ ದಾಳಿ ಮಾಡಿರುವುದು NB.1.8.1 ಎಂಬ ಹೊಸ ರೂಪಾಂತರಿ ತಳಿ. ಹೈಟೆಕ್ ವೈದ್ಯಕೀಯ ಸೌಲಭ್ಯವಿರುವ ಸಿಂಗಾಪುರವೇ ಈ ವೈರಸ್ ನಿಯಂತ್ರಿಸಲು ಪರದಾಡುತ್ತಿರುವುದು ಆತಂಕ ಮೂಡಿಸಿದೆ. ಭಾರತಕ್ಕೂ ಸಿಂಗಾಪುರಕ್ಕೂ ವಿಮಾನ ಸಂಪರ್ಕ ಹೆಚ್ಚಿರುವುದರಿಂದ ಭಾರತ ಸರ್ಕಾರ ಈಗಿನಿಂದಲೇ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ.

3. ಅಂಟಾರ್ಟಿಕಾದಲ್ಲಿ ಹಂಟಾ ವೈರಸ್ ಅಟ್ಯಾಕ್!

ಇವಿಷ್ಟೇ ಸಾಲದೆಂಬಂತೆ ಈಗ 'ಹಂಟಾ ವೈರಸ್' ಎಂಬ ಸೈತಾನ ಎಂಟ್ರಿ ಕೊಟ್ಟಿದ್ದಾನೆ. ಅಂಟಾರ್ಟಿಕಾಕ್ಕೆ ಪ್ರವಾಸಕ್ಕೆ ಹೊರಟಿದ್ದ 'ಎಂವಿ ಹೊಂಡಿಯಸ್' ಎಂಬ ಲಕ್ಸುರಿ ಕ್ರೂಸ್ ಹಡಗಿನಲ್ಲಿ ಈ ವೈರಸ್ ಹರಡಿದೆ. ಸಾಮಾನ್ಯವಾಗಿ ಇಲಿಗಳಿಂದ ಹರಡುವ ಈ ವೈರಸ್‌ನ 'ಆಂಡಿಸ್' ಎಂಬ ಅಪರೂಪದ ತಳಿ ಈಗ ಮನುಷ್ಯರಿಂದ ಮನುಷ್ಯರಿಗೆ ಹರಡುತ್ತಿದೆ. ಈ ಹಡಗಿನಲ್ಲಿದ್ದ ಪ್ರಯಾಣಿಕರು ಈಗಾಗಲೇ 12 ದೇಶಗಳಿಗೆ ಹರಡಿದ್ದು, ವಿಶ್ವದಾದ್ಯಂತ ಕ್ವಾರಂಟೈನ್ ಕೇಂದ್ರಗಳು ಭರ್ತಿಯಾಗುತ್ತಿವೆ.

ಭಾರತದ ಮೇಲೆ ಇದರ ಪರಿಣಾಮವೇನು?

ಈ ವೈರಸ್‌ಗಳ ಭೀತಿಯಿಂದಾಗಿ ಮೇ 28ರಿಂದ ದೆಹಲಿಯಲ್ಲಿ ನಡೆಯಬೇಕಿದ್ದ ಪ್ರತಿಷ್ಠಿತ 'ಭಾರತ-ಆಫ್ರಿಕಾ ಫೋರಂ ಶೃಂಗಸಭೆ'ಯನ್ನೇ ಸದ್ಯಕ್ಕೆ ಮುಂದೂಡಲಾಗಿದೆ. ಬರೋಬ್ಬರಿ 11 ವರ್ಷಗಳ ನಂತರ ನಡೆಯಬೇಕಿದ್ದ ಈ ಸಭೆ ಕ್ಯಾನ್ಸಲ್ ಆಗಿರುವುದು ವೈರಸ್ ಅದೆಷ್ಟು ಗಂಭೀರವಾಗಿದೆ ಎಂಬುದಕ್ಕೆ ಸಾಕ್ಷಿ.

ವಿಶ್ವ ಆರೋಗ್ಯ ಸಂಸ್ಥೆ (WHO) ಈಗಾಗಲೇ ಜಾಗತಿಕ ತುರ್ತು ಪರಿಸ್ಥಿತಿ ಘೋಷಿಸಿದ್ದು, ಮುನ್ನೆಚ್ಚರಿಕೆ ವಹಿಸಲು ಸೂಚಿಸಿದೆ. ವಿಜ್ಞಾನ ಎಷ್ಟೇ ಮುಂದುವರಿದಿದ್ದರೂ ಪ್ರಕೃತಿಯ ಈ ಹೊಸ ಪ್ರಯೋಗಗಳ ಮುಂದೆ ಮನುಷ್ಯ ಬರಿಗೈಲಿ ನಿಂತಿದ್ದಾನೆ.

Related Video