ಬೃಹತ್ ಟೆಕ್ ಕಂಪನಿಯಲ್ಲಿದ್ದ ತಮ್ಮ ಲಕ್ಷಗಟ್ಟಲೆ ಸಂಬಳದ ಕೆಲಸಕ್ಕೆ ರಾಜೀನಾಮೆ ನೀಡಿದ ವೃತ್ತಿಪರರೊಬ್ಬರು, ತಮ್ಮದೇ ಆದ ದೃಷ್ಟಿಕೋನವನ್ನು ರೂಪಿಸುವ ಮತ್ತು ಕೃತಕ ಬುದ್ಧಿಮತ್ತೆಯ ಯುಗದಲ್ಲಿ ಹೊಸ ಸಾಧ್ಯತೆಗಳನ್ನು ಅನ್ವೇಷಿಸುವ ನಿರ್ಧಾರ ಕೈಗೊಂಡಿದ್ದಾರೆ. ಸಾಂಪ್ರದಾಯಿಕ ವೃತ್ತಿಜೀವನವನ್ನು ತೊರೆದು, ಸ್ವಾತಂತ್ರ್ಯ ಮತ್ತು ಜಾಗತಿಕ ಪೌರತ್ವ ಬಯಸುತ್ತಿರುವ ಅವರು, ತಮ್ಮ ಈ ಹೊಸ ಪಯಣವನ್ನು ಹಂಚಿಕೊಳ್ಳುತ್ತಿದ್ದಾರೆ.
ಸಾಂಪ್ರದಾಯಿಕ ವೃತ್ತಿಜೀವನದ ಹಾದಿಯಿಂದ ಹೊರಬಂದು, ಹೊಸ ಸಾಧ್ಯತೆಗಳನ್ನು ಅನ್ವೇಷಿಸುವ ಉದ್ದೇಶದಿಂದ ಭಾರತೀಯ ವೃತ್ತಿಪರರೊಬ್ಬರು ಬೃಹತ್ ಟೆಕ್ ಕಂಪನಿಯಲ್ಲಿದ್ದ ತಮ್ಮ ಆರು ಅಂಕಿಗಳ ( ಅಂದರೆ ಲಕ್ಷಗಳಲ್ಲಿ) ಕಾರ್ಪೊರೇಟ್ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡಿರುವ ತೇಜ ಎಂಬವರು, 2026 ರ ಜುಲೈ 31 ರಂದು ಪ್ರಾಡಕ್ಟ್ ಮ್ಯಾನೇಜರ್ (Product Manager) ಆಗಿ ಬಿಗ್ ಟೆಕ್ ಕಂಪನಿಯಲ್ಲಿ ತಮ್ಮ ಕೊನೆಯ ಕೆಲಸದ ದಿನವಾಗಿತ್ತು ಎಂದು ತಿಳಿಸಿದ್ದಾರೆ. ಉದ್ಯೋಗ ತೊರೆದು ಒಂದು ತಿಂಗಳು ಪೂರೈಸಿದ ಸಂದರ್ಭದಲ್ಲಿ, ತಾವು ಈ ಪ್ರಮುಖ ನಿರ್ಧಾರ ತೆಗೆದುಕೊಳ್ಳಲು ಕಾರಣವಾದ ಆಲೋಚನಾ ಪ್ರಕ್ರಿಯೆಯನ್ನು ವಿವರವಾಗಿ ಹಂಚಿಕೊಂಡಿದ್ದಾರೆ.
31.07.2026 ಬಿಗ್ ಟೆಕ್ ಕಂಪನಿಯಲ್ಲಿ ಪ್ರಾಡಕ್ಟ್ ಮ್ಯಾನೇಜರ್ ಆಗಿ ನನ್ನ ಕೊನೆಯ ದಿನವಾಗಿತ್ತು. ಇಂದಿಗೆ ನಾನು ಅಧಿಕೃತವಾಗಿ ನಿರುದ್ಯೋಗಿಯಾಗಿ ಒಂದು ತಿಂಗಳು ಕಳೆದಿದೆ ಎಂದು ಅವರು ಬರೆದುಕೊಂಡಿದ್ದಾರೆ.
ತಮ್ಮದೇ ಆದ ದೃಷ್ಟಿಕೋನ ರೂಪಿಸುವ ಬಯಕೆ
ಬೇರೊಬ್ಬರ ಕನಸು ಅಥವಾ ದೃಷ್ಟಿಕೋನವನ್ನು (Vision) ಸಾಕಾರಗೊಳಿಸುವುದನ್ನು ನಿಲ್ಲಿಸಿ, ನನ್ನದೇ ಆದ ಸ್ವಂತ ದೃಷ್ಟಿಕೋನವನ್ನು ನಿರ್ಮಿಸಿಕೊಂಡಾಗ ಏನಾಗುತ್ತದೆ ಎಂಬುದನ್ನು ಕಂಡುಕೊಳ್ಳುವ ತೀವ್ರ ಬಯಕೆಯೇ ಈ ನಿರ್ಧಾರಕ್ಕೆ ಪ್ರಮುಖ ಕಾರಣ ಎಂದು ತೇಜ ವಿವರಿಸಿದ್ದಾರೆ.
ಕಳೆದ ಆರು ವರ್ಷಗಳಿಂದ ನಾನು ಮತ್ತೊಬ್ಬರ ಕನಸನ್ನು ನನಸು ಮಾಡಲು ಶ್ರಮಿಸುತ್ತಿದ್ದೆ. ಈಗ ನನ್ನದೇ ಹಾದಿಯನ್ನು ರೂಪಿಸಿಕೊಂಡಾಗ ಏನೆಲ್ಲಾ ಸಾಧ್ಯತೆಗಳಿವೆ ಎಂದು ಅರಿಯಲು ಬಯಸಿದ್ದೇನೆ. ಈ ಸಾಹಸಕ್ಕೆ ಇದುವೇ ಸರಿಯಾದ ಸಮಯ ಎಂದು ನನಗೆ ಅನಿಸಿತು. ಏಕೆಂದರೆ ವಯಸ್ಸಾದಂತೆ ಜವಾಬ್ದಾರಿಗಳ ಭಾರ ಹೆಚ್ಚಾಗುತ್ತದೆ.ಜೊತೆಗೆ ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳುವ ರಿಸ್ಕ್ ಕೂಡ ಹೆಚ್ಚಾಗುತ್ತದೆ. ಈಗ ಸವಾಲು ಸ್ವೀಕರಿಸದಿದ್ದರೆ, ಭವಿಷ್ಯದಲ್ಲಿ ಇದು ಇನ್ನಷ್ಟು ಕಠಿಣವಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಎಐ ನೀಡಿದ ಕ್ರಾಂತಿಕಾರಿ ತಿರುವು
ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದಲ್ಲಿ ಆಗುತ್ತಿರುವ ಕ್ಷಿಪ್ರ ಬದಲಾವಣೆಗಳು ಸಹ ತಮ್ಮ ಚಿಂತನೆಯ ಮೇಲೆ ಭಾರಿ ಪ್ರಭಾವ ಬೀರಿವೆ ಎಂದು ಅವರು ಉಲ್ಲೇಖಿಸಿದ್ದಾರೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರಾಡಕ್ಟ್ ಮ್ಯಾನೇಜರ್ ಆಗಿ ಕೆಲಸ ಮಾಡುವಾಗ, ಕೃತಕ ಬುದ್ಧಿಮತ್ತೆಯು ನೈಜ ಸಮಯದಲ್ಲಿ ಕೆಲಸದ ಸ್ವರೂಪವನ್ನೇ ಹೇಗೆ ಸಂಪೂರ್ಣವಾಗಿ ಬದಲಾಯಿಸುತ್ತಿದೆ ಎಂಬುದನ್ನು ನಾನು ಹತ್ತಿರದಿಂದ ಗಮನಿಸಿದ್ದೇನೆ ಎಂದು ಅವರು ಹೇಳಿದ್ದಾರೆ.
ಒಬ್ಬನೇ ಉದ್ಯೋಗದಾತನ ಕೆಳಗೆ ಕೆಲಸ ಮಾಡುವುದು, ಸಾಂಪ್ರದಾಯಿಕವಾಗಿ ವೃತ್ತಿಜೀವನದ ಏಣಿಯನ್ನು ಹತ್ತುವುದು ಮತ್ತು ಪ್ರತಿದಿನ ಬೆಳಿಗ್ಗೆ 9 ರಿಂದ ಸಂಜೆ 5 ರವರೆಗಿನ ವೇಳಾಪಟ್ಟಿ ಕೆಲಸಲ್ಲೆ ಬದ್ಧವಾಗಿರುವುದು ಮಾತ್ರವೇ ಯಶಸ್ವಿ ಜೀವನ ರೂಪಿಸಿಕೊಳ್ಳುವ ಏಕೈಕ ಮಾರ್ಗವಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ. 2026 ರಲ್ಲಿ ಜೀವನ ನಡೆಸುವುದು ಮತ್ತು ಸಂಪಾದಿಸುವುದಕ್ಕೆ ಇತಿಹಾಸದಲ್ಲೆಂದೂ ಇಲ್ಲದಷ್ಟು ವೈವಿಧ್ಯಮಯ ಮಾರ್ಗಗಳಿವೆ. ಬದಲಾಗುತ್ತಿರುವ ಈ ಜಗತ್ತನ್ನು ಕೇವಲ ಹೊರಗಿನಿಂದ ವೀಕ್ಷಿಸುವುದಕ್ಕಿಂತ, ಆ ಬದಲಾವಣೆಯ ಭಾಗವಾಗಿ ಹೊಸದನ್ನು ನಿರ್ಮಿಸುವುದು ನನಗಿಷ್ಟ ಎಂದು ತೇಜ ಸ್ಪಷ್ಟಪಡಿಸಿದ್ದಾರೆ.
ಸ್ವಾತಂತ್ರ್ಯ ಮತ್ತು ಗಡಿಗಳಿಲ್ಲದ ಜೀವನ
ಈ ಬೃಹತ್ ಬದಲಾವಣೆಯನ್ನು ಬಯಸಿದ್ದಕ್ಕೆ ತಮ್ಮದೇ ಆದ ವೈಯಕ್ತಿಕ ಕಾರಣಗಳನ್ನು ಸಹ ಅವರು ಹಂಚಿಕೊಂಡಿದ್ದಾರೆ. ಭಾರತದಲ್ಲಿರುವ ತಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಮಯ ಕಳೆಯುವುದಕ್ಕೆ ತಾವು ಅಪಾರ ಆದ್ಯತೆ ನೀಡುತ್ತಿದ್ದು, ಅದೇ ಸಮಯದಲ್ಲಿ ಹೊಸ ಸ್ಥಳಗಳನ್ನು ಅನ್ವೇಷಿಸುವ ಹಾಗೂ ಹೊಸ ಜನರನ್ನು ಭೇಟಿಯಾಗುವ ಸಂಪೂರ್ಣ ಸ್ವಾತಂತ್ರ್ಯವನ್ನು ಬಯಸುತ್ತಿರುವುದಾಗಿ ತಿಳಿಸಿದ್ದಾರೆ.
"ನನ್ನೊಳಗಿನ ಮನಸ್ಸು ಯಾವುದೇ ಮಿತಿಗಳಿಲ್ಲದ ಸ್ವತಂತ್ರ ಜೀವನವನ್ನು ಬಯಸುತ್ತಿದೆ. ಹೊಸ ಜನರು, ಹೊಸ ಸ್ಥಳಗಳು ಮತ್ತು ಪೂರ್ವಜರಿಂದ ಬಳುವಳಿಯಾಗಿ ಬಂದ ಜಾಲವಲ್ಲದೆ ನಾನೇ ಸ್ವತಃ ನಿರ್ಮಿಸಿಕೊಳ್ಳುವ ಹೊಸ ನೆಟ್‌ವರ್ಕ್ ನನಗೆ ಬೇಕು. ನನ್ನ ಬೇರುಗಳೊಂದಿಗೆ ನಿಕಟ ಸಂಪರ್ಕ ಹೊಂದಿರುವ ಒಬ್ಬ 'ಜಾಗತಿಕ ನಾಗರಿಕ'ನಾಗಲು (Global Citizen) ನಾನು ಬಯಸುತ್ತೇನೆ. ನಾನು ಎಲ್ಲಿಗೆ ಬೇಕಾದರೂ ಪ್ರಯಾಣಿಸಲು, ಎಷ್ಟು ದಿನ ಬೇಕಾದರೂ ಅಲ್ಲಿ ತಂಗಲು ಮತ್ತು ಮನಸ್ಸು ಬಂದಾಗ ಮನೆಗೆ ಮರಳುವ ಸಂಪೂರ್ಣ ಸ್ವಾತಂತ್ರ್ಯ ನನಗಿರಬೇಕು. ಇದು ಭವಿಷ್ಯದಲ್ಲಿ ಹೇಗೆ ಸಾಕಾರಗೊಳ್ಳುತ್ತದೆ ಎಂಬುದನ್ನು ನೋಡಲು ನಾನು ಕಾತುರನಾಗಿದ್ದೇನೆ " ಎಂದು ಅವರು ಭಾವನಾತ್ಮಕವಾಗಿ ಬರೆದಿದ್ದಾರೆ.
ತಮ್ಮ ಪೋಸ್ಟ್ ಕೊನೆಯಲ್ಲಿ, ಮುಂದಿನ ಹೆಜ್ಜೆ ಯಾವ ರೂಪ ಪಡೆಯುತ್ತದೆ ಎಂದು ನಾನು ಲೆಕ್ಕಾಚಾರ ಮಾಡುತ್ತಿದ್ದೇನೆ. ಪ್ರಸ್ತುತ ನಾನು ಒಂದೊಂದೇ ಹೆಜ್ಜೆಯನ್ನಿಡುತ್ತಾ ಈ ಸಂಪೂರ್ಣ ಪ್ರಯಾಣವನ್ನು ಸೋಷಿಯಲ್ ಮೀಡಿಯಾದಲ್ಲಿ ದಾಖಲಿಸುತ್ತಿದ್ದೇನೆ ಎಂದಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಯ ಮಹಾಪೂರ
ತೇಜ ಅವರ ಈ ಪ್ರಾಮಾಣಿಕ ಪೋಸ್ಟ್‌ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಬೆಂಬಲ ಮತ್ತು ಮೆಚ್ಚುಗೆ ವ್ಯಕ್ತವಾಗಿದೆ. ಅನೇಕ ನೆಟ್ಟಿಗರು ಅವರ ಧೈರ್ಯ ಹಾಗೂ ಸ್ಪಷ್ಟ ಆಲೋಚನೆಯನ್ನು ಕೊಂಡಾಡಿದ್ದಾರೆ. "ನಿಮ್ಮ ನಿರ್ಧಾರ ಮತ್ತು ಆಲೋಚನೆ ನನ್ನಲ್ಲಿ ತೀವ್ರ ಪ್ರಭಾವ ಬೀರಿದೆ ತೇಜಾ!" ಎಂದು ಒಬ್ಬರು ಕಾಮೆಂಟ್ ಮಾಡಿದರೆ, ಮತ್ತೊಬ್ಬರು "ನಿಮ್ಮ ಮುಂದಿನ ಹೊಸ ಪ್ರಯಾಣಕ್ಕೆ ಶುಭ ಹಾರೈಕೆಗಳು" ಎಂದು ಬರೆದಿದ್ದಾರೆ. ಇನ್ನು ಹಲವರು, "ಸಾಮಾನ್ಯ ಆಲೋಚನಾ ಕ್ರಮದಿಂದ ಹೊರಬಂದು ಹೊಸ ಸಾಹಸಕ್ಕೆ ಕೈಹಾಕಿರುವುದು ಮೆಚ್ಚುವಂತದ್ದು, ಹೀಗೆಯೇ ಮುಂದುವರಿಯಿರಿ," ಎಂದು ಪ್ರೋತ್ಸಾಹದ ನುಡಿಗಳನ್ನಾಡಿದ್ದಾರೆ.


