ಗುರುವಾರದ ಸಚಿವ ಸಂಪುಟ ಸಭೆಯಲ್ಲಿ ವಾಲ್ಮೀಕಿ ನಿಗಮ ಹಗರಣ ಸಂಬಂಧ ಬಿ. ನಾಗೇಂದ್ರ, ಅಕ್ರಮ ಆಸ್ತಿ ಪ್ರಕರಣದಲ್ಲಿ ರೇಣುಕಾಚಾರ್ಯ ಮತ್ತು ಜನಾರ್ದನ ರೆಡ್ಡಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವ ಬಗ್ಗೆ ಚರ್ಚೆಯಾಗುವ ಸಾಧ್ಯತೆಗಳಿವೆ.

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಸಂಬಂಧ ಮಾಜಿ ಸಚಿವ ಬಿ.ನಾಗೇಂದ್ರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿಸುವ ಬಗ್ಗೆ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್‌ ಅವರು ಸಂಪುಟದ ಸಲಹೆ ಕೋರಿದ್ದು, ಗುರುವಾರದ ಸಚಿವ ಸಂಪುಟ ಸಭೆಯಲ್ಲಿ ವಿಷಯ ಚರ್ಚೆಗೆ ಬರಲಿದೆ.

ಇದಲ್ಲದೆ, ಬಿಜೆಪಿಯ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹಾಗೂ ಗಾಲಿ ಜನಾರ್ದನರೆಡ್ಡಿ ಅವರ ಅಕ್ರಮ ಆಸ್ತಿ ಗಳಿಕೆ ಪ್ರಕರಣಗಳ ಸಂಬಂಧ ಚಾರ್ಜ್‌ಶೀಟ್ ಸಲ್ಲಿಸಲು ಲೋಕಾಯುಕ್ತ ಪೊಲೀಸರು ರಾಜ್ಯಪಾಲರಿಂದ ಕೋರಿರುವ ಅನುಮತಿ ವಿಚಾರವೂ ಚರ್ಚೆಯಾಗಲಿದೆ.

ಬಿ. ನಾಗೇಂದ್ರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಇ.ಡಿ. ರಾಜ್ಯಪಾಲರ ಅನುಮತಿ ಕೋರಿದೆ. ಇದರ ಬೆನ್ನಲ್ಲೇ ರಾಜ್ಯಪಾಲರು ಸಂಪುಟ ಸಲಹೆ ಮತ್ತು ಅಭಿಪ್ರಾಯ ಕೋರಿದ್ದಾರೆ. ಆದರೆ ಲೋಕಾಯುಕ್ತ ಪೊಲೀಸರು ವರ್ಷಗಳ ಹಿಂದೆ ರೇಣುಕಾಚಾರ್ಯ, ಗಾಲಿ ಜನಾರ್ದನರೆಡ್ಡಿ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಕೆಗೆ ಅನುಮತಿ ಕೋರಿದ್ದರೂ ರಾಜ್ಯಪಾಲರು ಕ್ರಮ ಕೈಗೊಂಡಿಲ್ಲ.

ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಗಾಲಿ ಜನಾರ್ದನರೆಡ್ಡಿ ಹಾಗೂ ರೇಣುಕಾಚಾರ್ಯ ಪ್ರಕರಣಗಳಲ್ಲಿ ಯಾವ ರೀತಿ ರಾಜ್ಯಪಾಲರಿಗೆ ಸಲಹೆ ಮತ್ತು ನೆರವು ನೀಡಬಹುದು ಎಂಬ ಬಗ್ಗೆ ಕಾನೂನು ಇಲಾಖೆ ಅಭಿಪ್ರಾಯ ಕೋರಿತ್ತು.

ಕಾನೂನು ಇಲಾಖೆ ಅಭಿಪ್ರಾಯದಂತೆ, ಸಚಿವ ಸಂಪುಟ ಸಭೆಯು ರೇಣುಕಾಚಾರ್ಯ ಹಾಗೂ ಗಾಲಿ ಜನಾರ್ದನರೆಡ್ಡಿ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಿ ಪ್ರಾಸಿಕ್ಯೂಷನ್‌ ನಡೆಸಲು ಸಲಹೆ ನೀಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಇದೇ ವೇಳೆ ಸಚಿವ ಬಿ. ನಾಗೇಂದ್ರ ವಿಚಾರದಲ್ಲಿ ಯಾವ ರೀತಿ ನಿರ್ಧಾರ ಕೈಗೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.

ಎಸ್‌ಐಟಿ ಚಾರ್ಜ್‌ಶೀಟ್‌ನಲ್ಲಿ ಬಿ. ನಾಗೇಂದ್ರ ಹೆಸರಿಲ್ಲ. ಕೇಂದ್ರ ತನಿಖಾ ಸಂಸ್ಥೆಗಳ ಪೂರ್ವಾಗ್ರಹಪೀಡಿತ ತನಿಖೆ ಆಧರಿಸಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಬಾರದು ಎಂದು ತೀರ್ಮಾನಿಸುತ್ತದೆಯೋ ಆಥವಾ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುತ್ತದೆಯೇ ಎಂಬ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ.

2024ರ ಸಂಪುಟ ಸಲಹೆ ಬಗ್ಗೆಯೂ ಪ್ರಶ್ನೆ ಸಾಧ್ಯತೆ

ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧದ ಹಳೆಯ ಗಣಿ ಹಗರಣಕ್ಕೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವ ಪ್ರಸ್ತಾವನೆ ರಾಜ್ಯಪಾಲರ ಬಳಿ ಬಾಕಿ ಇತ್ತು.

ಈ ಕುರಿತು ಶೀಘ್ರ ನಿರ್ಧಾರ ತೆಗೆದುಕೊಳ್ಳುವಂತೆ ರಾಜ್ಯ ಸಚಿವ ಸಂಪುಟವು ರಾಜ್ಯಪಾಲರಾದ ಥಾವರ್ ಚಂದ್ ಗೆಹಲೋತ್‌ ಅವರಿಗೆ 2024ರಲ್ಲಿ ಅಧಿಕೃತವಾಗಿ ಸಲಹೆ ನೀಡಿತ್ತು. ಸಂವಿಧಾನದ 163ನೇ ವಿಧಿಯಡಿ ಲಭ್ಯವಿರುವ ಅಧಿಕಾರವನ್ನು ಬಳಸಿ, ಬಾಕಿ ಇರುವ ಪ್ರಾಸಿಕ್ಯೂಷನ್ ವಿನಂತಿಗಳ ಮೇಲೆ ತಕ್ಷಣದ ಕ್ರಮ ಕೈಗೊಳ್ಳುವಂತೆ ರಾಜ್ಯಪಾಲರಿಗೆ ‘ಸಲಹೆ ಮತ್ತು ನೆರವು’ ನೀಡಲು ನಿರ್ಧರಿಸಿತ್ತು.

ಕುಮಾರಸ್ವಾಮಿ ಮಾತ್ರವಲ್ಲದೆ ಮಾಜಿ ಬಿಜೆಪಿ ಸಚಿವರಾದ ಶಶಿಕಲಾ ಜೊಲ್ಲೆ, ಜಿ. ಜನಾರ್ದನ ರೆಡ್ಡಿ ಮತ್ತು ಮುರುಗೇಶ್ ನಿರಾಣಿ ಅವರ ವಿರುದ್ಧದ ಪ್ರಕರಣಗಳಿಗೂ ತಕ್ಷಣವೇ ಅನುಮತಿ ನೀಡಲು ಸಂಪುಟ ಒತ್ತಾಯಿಸಿತ್ತು. ಆದರೆ ಈವರೆಗೆ ರಾಜ್ಯಪಾಲರು ಕ್ರಮ ಕೈಗೊಂಡಿಲ್ಲ ಎಂಬ ಬಗ್ಗೆಯೂ ಚರ್ಚೆ ನಡೆಯಲಿದೆ ಎಂದು ತಿಳಿದುಬಂದಿದೆ.

ಪಶು ವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮ ಚರ್ಚೆ

ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಪಶು ವೈದ್ಯಾಧಿಕಾರಿ 400 ಹುದ್ದೆಗಳ ನೇಮಕಾತಿ ಅಕ್ರಮದ ಬಗ್ಗೆ ಚರ್ಚೆಯಾಗಲಿದೆ.

ಅಕ್ರಮ ಹಾಗೂ ಭ್ರಷ್ಟಾಚಾರ ಸಾಬೀತಾಗಿರುವ ಹಿನ್ನೆಲೆಯಲ್ಲಿ ನೇಮಕಾತಿಯನ್ನು ರದ್ದುಪಡಿಸಬೇಕೆ ಅಥವಾ ಮುಂದುವರೆಸಬೇಕೆ ಎಂಬ ಬಗ್ಗೆ ಚರ್ಚೆ ನಡೆಯಲಿದೆ.

ಪಿಎಸ್‌ಐ ಮಾದರಿಯಲ್ಲಿ ಇವುಗಳನ್ನು ರದ್ದು ಮಾಡಬೇಕು ಎಂಬ ಪ್ರಸ್ತಾವನೆಯಿದ್ದು, ತನಿಖಾ ಹಂತದಲ್ಲೇ ರದ್ದುಪಡಿಸಬೇಕೆ ಅಥವಾ ತನಿಖೆಯ ಬಳಿಕ ಸೂಕ್ತ ನಿರ್ಧಾರ ಮಾಡಬೇಕೆ ಎಂಬ ಬಗ್ಗೆ ಚರ್ಚೆಯಾಗುವ ಸಾಧ್ಯತೆಯಿದೆ.

ವಿಶೇಷ ಅಧಿವೇಶನ ದಿನಾಂಕ ನಿಗದಿ ಸಾಧ್ಯತೆ

ಕೇಂದ್ರ ಸರ್ಕಾರವು ಕಸ್ತೂರಿ ರಂಗನ್‌ ವರದಿ ಅನ್ವಯ ಪಶ್ಚಿಮ ಘಟ್ಟಗಳನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಿಸಲು ಹೊರಡಿಸಿರುವ ಕರಡು ಅಧಿಸೂಚನೆ ವಿರುದ್ಧ ವಿಧಾನಮಂಡಲ ಅಧಿವೇಶನದಲ್ಲಿ ಒಂದು ದಿನದ ವಿಶೇಷ ಚರ್ಚೆ ನಡೆಸಲು ಸರ್ಕಾರ ನಿರ್ಧರಿಸಿದೆ.

ಈ ಹಿನ್ನೆಲೆಯಲ್ಲಿ ಅಧಿವೇಶನ ದಿನಾಂಕದ ಸಂಪುಟದಲ್ಲಿ ತೀರ್ಮಾನಿಸುವ ಸಾಧ್ಯತೆಯಿದೆ. ಮೂಲಗಳ ಪ್ರಕಾರ ಸೆ. 21ರಿಂದ ಮೂರು ದಿನ ಅಧಿವೇಶನ ನಡೆಸುವ ಸಾಧ್ಯತೆಯಿದೆ.