ಬೆಳಗಾವಿ ದಂಡುಮಂಡಳಿ ಪ್ರದೇಶವನ್ನು ಮಹಾನಗರ ಪಾಲಿಕೆಗೆ ಹಸ್ತಾಂತರಿಸುವ ಕುರಿತು ಯಾವುದೇ ಅಂತಿಮ ನಿರ್ಧಾರವಾಗಿಲ್ಲ ಎಂದು ಸಿಇಒ ಮಂಚಲವಾರ ಸುದಾಮ ಸ್ಪಷ್ಟಪಡಿಸಿದ್ದಾರೆ. ಈ ಪ್ರಸ್ತಾವನೆಯು ಇನ್ನೂ ಪರಿಶೀಲನಾ ಹಂತದಲ್ಲಿದ್ದು, ಅಂತಿಮ ತೀರ್ಮಾನ ಕೇಂದ್ರ ರಕ್ಷಣಾ ಸಚಿವಾಲಯಕ್ಕೆ ಸೇರಿದೆ ಎಂದು ಅವರು ತಿಳಿಸಿದ್ದಾರೆ.

ಬೆಳಗಾವಿ: ದಂಡುಮಂಡಳಿ ವ್ಯಾಪ್ತಿಯ ಪ್ರದೇಶವನ್ನು ಮಹಾನಗರ ಪಾಲಿಕೆಗೆ ಹಸ್ತಾಂತರಿಸುವ ಕುರಿತು ಈವರೆಗೆ ಯಾವುದೇ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಹೀಗಾಗಿ ಸಾರ್ವಜನಿಕರು ಹಾಗೂ ಗುತ್ತಿಗೆದಾರರು ಆತಂಕಪಡುವ ಅಗತ್ಯವಿಲ್ಲ ಎಂದು ದಂಡುಮಂಡಳಿ ಸಿಇಒ ಮಂಚಲವಾರ ಸುದಾಮ ಹರಿವಿಜಯ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಂಡುಮಂಡಳಿ ವ್ಯಾಪ್ತಿಯ 112 ಎಕರೆ ಪ್ರದೇಶವನ್ನು ಹೊರತುಪಡಿಸುವ ಪ್ರಸ್ತಾವನೆಯನ್ನು ಮಾತ್ರ ರಾಜ್ಯ ಸರ್ಕಾರಕ್ಕೆ ಕಳುಹಿಸಲಾಗಿದೆ. ಆದರೆ, ಈ ಕುರಿತು ರಾಜ್ಯ ಸರ್ಕಾರದಿಂದ ಈವರೆಗೆ ಯಾವುದೇ ಅಧಿಕೃತ ಲಿಖಿತ ಅನುಮೋದನೆ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.

ದಂಡುಮಂಡಳಿ ವ್ಯಾಪ್ತಿಯ 756 ಎಕರೆ ಪ್ರದೇಶ

ಇದೇ ವೇಳೆ ಜಿಲ್ಲಾಧಿಕಾರಿ ಹಾಗೂ ಮಹಾನಗರ ಪಾಲಿಕೆ ವತಿಯಿಂದ ದಂಡುಮಂಡಳಿ ವ್ಯಾಪ್ತಿಯ 756 ಎಕರೆ ಪ್ರದೇಶವನ್ನು ಹಸ್ತಾಂತರಿಸುವ ಮತ್ತೊಂದು ಪ್ರಸ್ತಾವನೆ ಬಂದಿದ್ದು, ಇದಕ್ಕೆ ದಂಡುಮಂಡಳಿ ಆಡಳಿತ (ಡಿಒ) ಹಾಗೂ ಸ್ಥಳೀಯ ಮಿಲಿಟರಿ ಪ್ರಾಧಿಕಾರದಿಂದ ಆಕ್ಷೇಪಣೆ ವ್ಯಕ್ತವಾಗಿದೆ. ಹೀಗಾಗಿ ಈ ಪ್ರಸ್ತಾವನೆ ಕುರಿತು ಇನ್ನೂ ಅಂತಿಮ ನಿರ್ಧಾರವಾಗಿಲ್ಲ ಎಂದರು.

ಪ್ರಸ್ತಾವನೆ ಹಾಗೂ ಪರಿಶೀಲನಾ ಹಂತ

ದಂಡುಮಂಡಳಿ ಪ್ರದೇಶವನ್ನು ಹಸ್ತಾಂತರಿಸುವ ಕುರಿತು ಅಂತಿಮ ತೀರ್ಮಾನ ಕೈಗೊಳ್ಳುವ ಅಧಿಕಾರ ಕೇಂದ್ರ ರಕ್ಷಣಾ ಸಚಿವಾಲಯಕ್ಕೆ ಸೇರಿದೆ. ರಾಜ್ಯ ಸರ್ಕಾರದ ಪ್ರಸ್ತಾವನೆ ರಕ್ಷಣಾ ಸಚಿವಾಲಯಕ್ಕೆ ತಲುಪಿದ ಬಳಿಕವೇ ಮುಂದಿನ ಪ್ರಕ್ರಿಯೆ ನಡೆಯಲಿದೆ. ಸದ್ಯ ಈ ವಿಚಾರ ಪ್ರಸ್ತಾವನೆ ಹಾಗೂ ಪರಿಶೀಲನಾ ಹಂತದಲ್ಲಿದೆ ಎಂದು ತಿಳಿಸಿದರು.

ದಂಡುಮಂಡಳಿ ವ್ಯಾಪ್ತಿಯಲ್ಲಿ ಈಗಾಗಲೇ ಕೈಗೆತ್ತಿಕೊಂಡಿರುವ ಅಭಿವೃದ್ಧಿ ಕಾಮಗಾರಿಗಳ ಗುತ್ತಿಗೆದಾರರು ಹಾಗೂ ಟೆಂಡರ್‌ದಾರರು ಹಣ ಪಾವತಿ ಕುರಿತು ಆತಂಕಪಡುವ ಅಗತ್ಯವಿಲ್ಲ. ಪೂರ್ಣಗೊಂಡ ಹಾಗೂ ನಿಯಮಾನುಸಾರ ಕೈಗೊಂಡಿರುವ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಹಣವನ್ನು ನಿಯಮದಂತೆ ಪಾವತಿಸಲಾಗುವುದು ಎಂದು ಭರವಸೆ ನೀಡಿದರು.

ಇದನ್ನೂ ಓದಿ: 'ಬೆಳಗಾವಿ, ಕಾರವಾರ, ನಿಪ್ಪಾಣಿ ನಮಗೆ ಸೇರಬೇಕು' ಮಹಾರಾಷ್ಟ್ರ ಸಲ್ಲಿಸಿದ ತ್ವರಿತ ವಿಚಾರಣೆ ಅರ್ಜಿಗೆ ಸುಪ್ರೀಂ ಕೋರ್ಟ್‌ ಹೇಳಿದ್ದೇನು

ಪ್ರದೇಶ ಹಸ್ತಾಂತರದ ಕುರಿತು ಮುಂದಿನ ಎಲ್ಲ ನಿರ್ಧಾರಗಳನ್ನು ಸಾರ್ವಜನಿಕರ ಹಿತದೃಷ್ಟಿಯಿಂದಲೇ ಕೈಗೊಳ್ಳಲಾಗುವುದು. ಈ ಬಗ್ಗೆ ಯಾವುದೇ ವದಂತಿಗಳಿಗೆ ಕಿವಿಗೊಡಬಾರದು ಎಂದು ದಂಡುಮಂಡಳಿ ಸಿಇಒ ಮಂಚಲವಾರ ಸುದಾಮ ಹರಿವಿಜಯ ಹೇಳಿದ್ದಾರೆ.

ಇದನ್ನೂ ಓದಿ: Belagavi: 24 ಎಕ್ರೆ ಜಾಗದಲ್ಲಿ ಐಟಿ ಪಾರ್ಕ್ ನಿರ್ಮಾಣ; ಅಂದಾಜು ವೆಚ್ಚ ₹1223 ಕೋಟಿ