ವಿಜಯನಗರ ಜಿಲ್ಲೆಯ ಹೊಳಗುಂದಿ ಗ್ರಾಮದಲ್ಲಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಮೇಲ್ವಿಚಾರಕರಾಗಿದ್ದ ಕುಬೇಂದ್ರ ಕುಮಾರ್ ಎಂಬುವವರು ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ. ಮೇಲಧಿಕಾರಿಗಳ ಕಿರುಕುಳ ಮತ್ತು ಕೆಲಸದ ಒತ್ತಡವೇ ಸಾವಿಗೆ ಕಾರಣ ಎಂದು ಮೃತನ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವಿಜಯನಗರ (ಸೆ.03): ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಹೊಳಗುಂದಿ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಮೇಲ್ವಿಚಾರಕರೊಬ್ಬರು (Supervisor) ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಧಾರುಣ ಘಟನೆ ಬೆಳಕಿಗೆ ಬಂದಿದೆ.

ದಾವಣಗೆರೆ ಜಿಲ್ಲೆ ಜಗಳೂರಿನ ನಿವಾಸಿ ಎಚ್. ಕುಬೇಂದ್ರ ಕುಮಾರ್ (43) ಮೃತ ದುರ್ದೈವಿ. ಮೃತರಿಗೆ ಪತ್ನಿ, ಒಬ್ಬ ಪುತ್ರ ಹಾಗೂ ಒಬ್ಬ ಪುತ್ರಿ ಇದ್ದು, ಕುಟುಂಬದ ಆಧಾರಸ್ತಂಭವಾಗಿದ್ದ ವ್ಯಕ್ತಿಯ ದಿಢೀರ್ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಫ್ಯಾನ್‌ಗೆ ನೇಣು ಬಿಗಿದುಕೊಂಡು ಸಾವು

ಕುಬೇಂದ್ರ ಕುಮಾರ್ ಅವರು ಎಂದಿನಂತೆ ತಮ್ಮ ಕೆಲಸ ಮುಗಿಸಿಕೊಂಡು ಮನೆಗೆ ಬಂದಿದ್ದರು. ಬಳಿಕ ಒಳಗಿನಿಂದ ಬಾಗಿಲು ಹಾಕಿಕೊಂಡಿದ್ದಾರೆ. ಈ ವೇಳೆ ಪಕ್ಕದ ಮನೆಯವರು ಹೊರಗೆ ಹೋಗುವ ಸಂದರ್ಭದಲ್ಲಿ ಕುಬೇಂದ್ರ ಅವರ ಮನೆಯ ಕಿಟಕಿಯಿಂದ ಒಳಗೆ ನೋಡಿದಾಗ, ಅವರು ಫ್ಯಾನ್‌ಗೆ ನೇಣು ಹಾಕಿಕೊಂಡಿರುವುದು ಕಂಡುಬಂದಿದೆ. ಆತಂಕಗೊಂಡ ನೆರೆಹೊರೆಯವರು ತಕ್ಷಣವೇ ಹೂವಿನಹಡಗಲಿ ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದಾರೆ.

3 ವರ್ಷಗಳಿಂದ ಸಂಸ್ಥೆಯಲ್ಲಿ ಸೇವೆ

ಮೃತ ಕುಬೇಂದ್ರ ಕುಮಾರ್ ಅವರು ಕಳೆದ ಮೂರು ವರ್ಷಗಳಿಂದ ಹೊಳಗುಂದಿ ಹಾಗೂ ಭಾವಿಹಳ್ಳಿ ಗ್ರಾಮಗಳ ವ್ಯಾಪ್ತಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘಗಳ ಮೇಲ್ವಿಚಾರಕರಾಗಿ (ಸೂಪರ್‌ವೈಸರ್) ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದೆ.

ಸಿಬ್ಬಂದಿ ಕಿರುಕುಳವೇ ಕಾರಣ ಎಂದು ಕುಟುಂಬಸ್ಥರ ಗಂಭೀರ ಆರೋಪ!

ಆತ್ಮಹ*ತ್ಯೆಗೆ ನಿಖರ ಕಾರಣವೇನು ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ಮೃತನ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. 'ಧರ್ಮಸ್ಥಳ ಸಂಘದ ಇತರ ಸಿಬ್ಬಂದಿ ಹಾಗೂ ಮೇಲಧಿಕಾರಿಗಳ ನಿರಂತರ ಮಾನಸಿಕ ಕಿರುಕುಳ ಮತ್ತು ಕೆಲಸದ ಒತ್ತಡವೇ ಕುಬೇಂದ್ರ ಅವರ ಸಾವಿಗೆ ಕಾರಣ' ಎಂದು ಕುಟುಂಬಸ್ಥರು ಕಣ್ಣೀರಿಡುತ್ತಾ ಆರೋಪಿಸಿದ್ದಾರೆ.

ಪೊಲೀಸ್ ತನಿಖೆ ಚುರುಕು

ಮಾಹಿತಿ ತಿಳಿಯುತ್ತಿದ್ದಂತೆ ಹೂವಿನಹಡಗಲಿ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಕುಟುಂಬಸ್ಥರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಸಾವಿನ ಹಿಂದಿರುವ ಅಸಲಿ ಕಾರಣವೇನು? ಕಿರುಕುಳದ ಆರೋಪ ನಿಜವೇ? ಎಂಬಿತ್ಯಾದಿ ಆಯಾಮಗಳಲ್ಲಿ ತನಿಖೆ ಕೈಗೆತ್ತಿಕೊಂಡಿದ್ದಾರೆ.