ರಾಮನಗರದ ಶಾಂತಿಲಾಲ್ ಬಡಾವಣೆಯಲ್ಲಿ ಖೋಟಾ ನೋಟು ತಯಾರಿಸುತ್ತಿದ್ದ ಅಡ್ಡೆ ಮೇಲೆ ದಿಢೀರ್ ದಾಳಿ! ₹5 ಲಕ್ಷ ಮೌಲ್ಯದ ನಕಲಿ ನೋಟು ಸಿದ್ಧಪಡಿಸುತ್ತಿದ್ದ 7 ಆರೋಪಿಗಳನ್ನು ಐಜೂರು ಪೊಲೀಸರು ಬಂಧಿಸಿದ್ದಾರೆ. ಆದರೆ, ಖೋಟಾ ನೋಟು ಎಲ್ಲಿ ಬಳಕೆಯಾಗ್ತಿತ್ತು ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ.

ರಾಮನಗರ (ಸೆ.03): ರೇಷ್ಮೆ ನಗರಿ ರಾಮನಗರದಲ್ಲಿ ಭಾರೀ ಖೋಟಾ ನೋಟು ದಂಧೆಯೊಂದು ಬಯಲಾಗಿದೆ. ನಗರದ ನಿರ್ಮಾಣ ಹಂತದ ಮನೆಯೊಂದರ ಮೇಲೆ ದಿಢೀರ್ ದಾಳಿ ನಡೆಸಿರುವ ಪೊಲೀಸರು, ₹5 ಲಕ್ಷ ಮುಖಬೆಲೆಯ ನಕಲಿ ನೋಟು ತಯಾರಿಸಲು ಸಿದ್ಧಪಡಿಸಲಾಗಿದ್ದ 10 ಪೇಪರ್ ಬಂಡಲ್‌ಗಳನ್ನು ವಶಪಡಿಸಿಕೊಂಡು, ಜಾಲದಲ್ಲಿದ್ದ 7 ಮಂದಿ ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ. ಆದರೆ, ಈ ಹಣ ಎಲ್ಲಿಗೆ ಬಳಕೆ ಆಗ್ತಿತ್ತು ಗೊತ್ತಾ? ಇಲ್ಲಿದೆ ಮಾಹಿತಿ.

ನಗರದ ಶಾಂತಿಲಾಲ್ ಲೇಔಟ್‌ನಲ್ಲಿ ಈ ಅಕ್ರಮ ದಂಧೆ ನಡೆಯುತ್ತಿತ್ತು. ಖಚಿತ ಮಾಹಿತಿ ಮೇರೆಗೆ ನಗರ ವೃತ್ತ ಆರಕ್ಷಕ ನಿರೀಕ್ಷಕ (ಸಿಪಿಐ) ರಮೇಶ್ ಅವರ ನೇತೃತ್ವದ ಪೊಲೀಸ್ ತಂಡ ಈ ಕಾರ್ಯಾಚರಣೆ ನಡೆಸಿದೆ. ಸ್ಥಳದಲ್ಲಿದ್ದ ಆರೋಪಿಗಳು ₹200 ಮತ್ತು ₹500 ಮುಖಬೆಲೆಯ ನಕಲಿ ನೋಟುಗಳಿಗೆ ಪೇಪರ್ ತಯಾರಿಸುತ್ತಿದ್ದಾಗ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದಾರೆ.

ಬಂಧಿತ ಆರೋಪಿಗಳು ಯಾರು?

ಮನೆ ಮಾಲೀಕ ಸಂತೋಷ್, ಜಾಲದ ಸೂತ್ರಧಾರ ಸಂಪತ್, ಗೋವಿಂದರಾಜು, ರೇಣುಕಾರಾಜ್, ರಾಜೇಶ್, ಶಿವರಾಜ್ ಹಾಗೂ ಸತೀಶ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಇವರಲ್ಲಿ ಹಲವರು ಸ್ಥಳೀಯರೇ ಆಗಿದ್ದಾರೆ ಎಂದು ತಿಳಿದುಬಂದಿದೆ.

ಕಮಿಷನ್ ಆಸೆಗೆ ಬಿದ್ದು ಮನೆ ಕೊಟ್ಟಿದ್ದ ಮಾಲೀಕ!

ಮನೆ ಮಾಲೀಕ ಸಂತೋಷ್ ಮೂಲತಃ ಮಾಗಡಿ ತಾಲೂಕಿನ ಗಟ್ಟಿಪುರ ಗ್ರಾಮದವನು. ಸಣ್ಣಪುಟ್ಟ ರಿಯಲ್ ಎಸ್ಟೇಟ್ ವ್ಯವಹಾರ ಮಾಡಿಕೊಂಡಿದ್ದ ಈತ, ಆ ಹಣದಲ್ಲಿ ಜಾಗ ಖರೀದಿಸಿ ಶಾಂತಿಲಾಲ್ ಲೇಔಟ್‌ನಲ್ಲಿ ಮನೆ ಕಟ್ಟಿಸುತ್ತಿದ್ದ. ಈತನ ಬಳಿ ಬಂದ ಆರೋಪಿ ಸಂಪತ್, ‘ಎಷ್ಟು ಖೋಟಾ ನೋಟುಗಳು ತಯಾರಾಗುತ್ತವೆಯೋ, ಅಷ್ಟು ಹೆಚ್ಚು ಕಮಿಷನ್ ಕೊಡುತ್ತೇವೆ’ ಎಂದು ಆಮಿಷವೊಡ್ಡಿದ್ದ. ಹಣದ ದುರಾಸೆಗೆ ಬಿದ್ದ ಸಂತೋಷ್, ಕಳೆದ 10 ದಿನಗಳಿಂದ ತನ್ನ ನಿರ್ಮಾಣ ಹಂತದ ಮನೆಯನ್ನೇ ನಕಲಿ ನೋಟುಗಳ ಅಡ್ಡೆಯನ್ನಾಗಿ ಮಾಡಲು ಜಾಗ ಬಿಟ್ಟುಕೊಟ್ಟಿದ್ದಲ್ಲದೆ, ತಾನೂ ಈ ಕೃತ್ಯದಲ್ಲಿ ನೇರವಾಗಿ ಭಾಗಿಯಾಗಿದ್ದ. ಇನ್ನು ಖೋಟಾ ನೋಟುಗಳನ್ನು ಮನೆಗಳನ್ನು ನಿರ್ಮಾಣ ಮಾಡುವುದಕ್ಕೆ ಸಾಮಗ್ರಿ ಖರೀದಿ ಹಾಗೂ ಕಾರ್ಮಿಕರಿಗೆ ಕೊಡಲು ಯೋಜನೆ ರೂಪಿಸಿದ್ದನು.

ಇಲ್ಲಿ ಪೇಪರ್ ರೆಡಿ, ಫಿನಿಶಿಂಗ್ ಬೇರೆ ಕಡೆ!

ಪೊಲೀಸರು ದಾಳಿ ನಡೆಸಿದ ವೇಳೆ ಸುಮಾರು ₹5 ಲಕ್ಷ ಮೌಲ್ಯದ ನಕಲಿ ನೋಟು ತಯಾರಿಕೆಗೆ ಬಳಸುವ ವಿಶೇಷ ಪೇಪರ್‌ಗಳನ್ನು ಆರೋಪಿಗಳು ಸಿದ್ಧಪಡಿಸುತ್ತಿದ್ದರು. ಇಲ್ಲಿ ಕೇವಲ ಕಚ್ಚಾ ಪೇಪರ್‌ಗಳನ್ನು ಸಿದ್ಧಪಡಿಸಿ, ನಂತರ ಅದನ್ನು ಬೇರೆಡೆಗೆ ರವಾನೆ ಮಾಡಿ ಅಂತಿಮ ಮುದ್ರಣ (ಫಿನಿಶಿಂಗ್) ನೀಡುವ ವ್ಯವಸ್ಥೆ ಮಾಡಲಾಗಿತ್ತು ಎಂಬ ಆಘಾತಕಾರಿ ಮಾಹಿತಿ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಸ್ಥಳದಲ್ಲಿ ಟೇಬಲ್, ಪೇಪರ್ ಬಂಡಲ್‌ಗಳು, ಕೆಮಿಕಲ್, ರಾಸಾಯನಿಕ ಲೇಪಿತ ಬಟ್ಟೆ, ಗ್ಲಾಸ್ ಫಿಲ್ಮ್ ಸೇರಿದಂತೆ ನಕಲಿ ನೋಟು ತಯಾರಿಕೆಗೆ ಬಳಸುವ ಸಾಮಗ್ರಿಗಳನ್ನು ಜಪ್ತಿ ಮಾಡಲಾಗಿದೆ. ವಿಧಿವಿಜ್ಞಾನ ಪ್ರಯೋಗಾಲಯದ (FSL) ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಮಹತ್ವದ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ.

ತನಿಖೆಗೆ ವಿಶೇಷ ತಂಡ ರಚನೆ: ಎಸ್ಪಿ ರೋಹನ್ ಜಗದೀಶ್

ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ರೋಹನ್ ಜಗದೀಶ್ ಹಾಗೂ ಡಿವೈಎಸ್ಪಿ ಶ್ರೀನಿವಾಸ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮಾತನಾಡಿದ ಎಸ್ಪಿ ರೋಹನ್ ಜಗದೀಶ್, "ಈ ಜಾಲದ ಹಿಂದೆ ಇನ್ನಷ್ಟು ಅಂತಾರಾಜ್ಯ ಕಿಂಗ್‌ಪಿನ್‌ಗಳು ಇರುವ ಶಂಕೆ ಇದೆ. ಇಲ್ಲಿ ತಯಾರಾದ ಪೇಪರ್‌ಗಳನ್ನು ಎಲ್ಲಿಗೆ ಕಳುಹಿಸಲಾಗುತ್ತಿತ್ತು? ನಕಲಿ ನೋಟುಗಳಿಗೆ ಅಂತಿಮ ರೂಪ ನೀಡುತ್ತಿದ್ದವರು ಯಾರು? ಎಂಬಿತ್ಯಾದಿ ಆಯಾಮಗಳಲ್ಲಿ ತನಿಖೆ ಮುಂದುವರಿದಿದೆ. ಪ್ರಕರಣದ ಆಳ-ಅಗಲ ಪತ್ತೆಹಚ್ಚಲು ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ," ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರಸ್ತುತ ಈ ಸಂಬಂಧ ರಾಮನಗರದ ಐಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ.