ಟಾಕ್ಸಿಕ್ ಸಿನಿಮಾ ಮೂಲಕ ನಟ ಯಶ್ ಸದ್ದು ಮಾಡ್ತಿದ್ದಾರೆ. ಸಿನಿಮಾದಲ್ಲಿ ಖಡಕ್ ಅವತಾರದಲ್ಲಿ ಕಾಣಿಸಿಕೊಂಡಿರುವ ಯಶ್, ರಿಯಲ್ ಲೈಫ್ ನಲ್ಲೂ ಹಾಗೇ ಇದ್ದಾರಾ? ಅದಕ್ಕೆ ಉತ್ತರ ಇಲ್ಲಿದೆ.
ಯಶ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಟಾಕ್ಸಿಕ್ ಬಾಕ್ಸ್ ಆಫೀಸ್ ಕೊಳ್ಳೆ ಹೊಡಿತಿದೆ. ಈಗಾಗಲೇ ಇದು ಅನೇಕ ದಾಖಲೆಗಳನ್ನು ಮುರಿದಿದ್ದು, ಮೂರು ದಿನಗಳಲ್ಲಿ ವಿಶ್ವದಾದ್ಯಂತ 200 ಕೋಟಿ ರೂಪಾಯಿ ಗಳಿಕೆ ಗಡಿ ದಾಟಿದೆ. ಟಾಕ್ಸಿಕ್ ಸಿನಿಮಾದಲ್ಲಿ ರೆಬೆಕ್ಕಾ ಪಾತ್ರದಲ್ಲಿ ನಟಿಸಿರುವ ತಾರಾ ಸುತಾರಿಯಾ, ಯಶ್ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ರಿಯಲ್ ಲೈಫ್ ನಲ್ಲಿ ಯಶ್ ಹೇಗೆ ಎಂಬುದನ್ನು ಅವರು ಹೇಳಿದ್ದಾರೆ.
ರಿಯಲ್ ಲೈಫ್ನಲ್ಲಿ ಯಶ್ ಹೇಗಿದ್ದಾರೆ?
ಟಾಕ್ಸಿಕ್ ಸಿನಿಮಾದಲ್ಲಿ ಯಶ್ ಅವರದ್ದು ಕೋಪಿಷ್ಠ ಮತ್ತು ಖಡಕ್ ರೋಲ್. ಟಾಕ್ಸಿಕ್ ಕ್ಯಾರೆಕ್ಟ್ ನಂತೆ ಯಶ್ ರಿಯಲ್ ಲೈಫ್ ನಲ್ಲೂ ಖಡಕ್ ಆಗಿದ್ದಾರಾ ಎನ್ನುವ ಪ್ರಶ್ನೆ ಅನೇಕ ಅಭಿಮಾನಿಗಳನ್ನು ಕಾಡುತ್ತದೆ. ಅದಕ್ಕೆ ಯಶ್ ಜೊತೆ ಟಾಕ್ಸಿಕ್ ನಲ್ಲಿ ನಟಿಸಿರುವ ತಾರಾ ಸುತಾರಿಯಾ ಉತ್ತರ ನೀಡಿದ್ದಾರೆ. ರಿಯಲ್ ಲೈಫ್ನಲ್ಲಿ ಯಶ್ ಇದಕ್ಕೆ ತದ್ವಿರುದ್ಧ ಎಂದು ತಾರಾ ಹೇಳಿದ್ದಾರೆ.
ದಿ ಮೇಲ್ ಫೆಮಿನಿಸ್ಟ್ ಪಾಡ್ಕಾಸ್ಟ್ನಲ್ಲಿ ಮಾತನಾಡಿದ ತಾರಾ, ಯಶ್ ತುಂಬಾ ಸೆನ್ಸಿಟಿವ್ ಮತ್ತು ವಿಚಾರಶೀಲ ವ್ಯಕ್ತಿ. ಅವರು ತಮ್ಮ ಬಗ್ಗೆ ಯೋಚಿಸುವುದಕ್ಕಿಂತ ಬೇರೆಯವರ ಬಗ್ಗೆ ಹೆಚ್ಚು ಯೋಚಿಸುತ್ತಾರೆ. ಇಂತಹ ವ್ಯಕ್ತಿಗಳು ಇಂಡಸ್ಟ್ರಿಯಲ್ಲಿ ತುಂಬಾ ಕಡಿಮೆ ಎಂದು ತಾರಾ ಹೇಳಿದ್ದಾರೆ. ಇಲ್ಲಿಯವರೆಗೆ ಭೇಟಿಯಾದವರಲ್ಲಿ ಯಶ್ ತುಂಬಾ ವಿಭಿನ್ನ ವ್ಯಕ್ತಿ ಎಂದೂ ತಾರಾ ಹೇಳಿದ್ದಾರೆ.
ನಟಿಯರ ಹೋಲಿಕೆ ಬಗ್ಗೆಯೂ ಮಾತು
ಇದೇ ವೇಳೆ ನಟಿಯರನ್ನು ಒಬ್ಬರ ಜೊತೆ ಮತ್ತೊಬ್ಬರನ್ನು ಹೋಲಿಕೆ ಮಾಡುವ ಬಗ್ಗೆಯೂ ತಾರಾ ಮಾತನಾಡಿದ್ದಾರೆ. ಪ್ರತಿಯೊಬ್ಬ ನಟಿಯೂ ತಮ್ಮದೇ ಆದ ಪಾತ್ರದಲ್ಲಿ ವಿಭಿನ್ನವಾಗಿ ಕಾಣುತ್ತಾರೆ. ಹಾಗಾಗಿ ಒಬ್ಬ ನಟಿಯನ್ನು ಮತ್ತೊಬ್ಬರ ಜೊತೆ ಹೋಲಿಕೆ ಮಾಡುವುದು ಸರಿಯಲ್ಲ. ಸೋಷಿಯಲ್ ಮೀಡಿಯಾದಲ್ಲಿ ನಟಿಯರ ಹೋಲಿಕೆ ಸಾಮಾನ್ಯವಾಗಿದೆ. ಆದರೆ ಪುರುಷ ನಟರ ವಿಷಯದಲ್ಲಿ ಇಂತಹ ಹೋಲಿಕೆಗಳು ಹೆಚ್ಚಾಗಿ ನಡೆಯುವುದಿಲ್ಲ ಎಂದು ತಾರಾ ಹೇಳಿದ್ದಾರೆ.
ಮೂರು ದಿನದಲ್ಲಿ 221 ಕೋಟಿ ರೂಪಾಯಿ!
ಇನ್ನು ಟಾಕ್ಸಿಕ್ ಸಿನಿಮಾದ ಬಾಕ್ಸ್ ಆಫೀಸ್ ಕಲೆಕ್ಷನ್ ಗಮನ ಸೆಳೆಯುತ್ತಿದೆ. ಬಿಡುಗಡೆಯಾದ ಮೊದಲ ದಿನವೇ ಸಿನಿಮಾ ವಿಶ್ವದಾದ್ಯಂತ ಸುಮಾರು 150 ಕೋಟಿ ರೂಪಾಯಿ ಗಳಿಸಿತ್ತು. ಎರಡನೇ ದಿನ ಸುಮಾರು 40 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಮೂರನೇ ದಿನದ ಕಲೆಕ್ಷನ್ ಸೇರಿ, ಮೂರು ದಿನಗಳಲ್ಲಿ ಸಿನಿಮಾ ವಿಶ್ವದಾದ್ಯಂತ ಸುಮಾರು 221 ಕೋಟಿ ರೂಪಾಯಿ ಗಳಿಸಿದೆ. ಯಶ್ ಜೊತೆಗೆ ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ, ರುಕ್ಮಿಣಿ ವಸಂತ್ ಮತ್ತು ತಾರಾ ಸುತಾರಿಯಾ ಸಿನಿಮಾದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಗೀತು ಮೋಹನ್ದಾಸ್ ನಿರ್ದೇಶನದ ಈ ಸಿನಿಮಾ ಸುಮಾರು 600 ಕೋಟಿ ರೂಪಾಯಿ ಬಜೆಟ್ನಲ್ಲಿ ನಿರ್ಮಾಣವಾಗಿದೆ.


