ವಿಡಿಯೋ Review: ಐವರು ವ್ಲಾಗರ್‌ಗಳು ಭಯಾನಕ ಜಾಗವೊಂದಕ್ಕೆ ತೆರಳಿದಾಗ ನಡೆದ ಘಟನೆಗಳನ್ನು ಫೌಂಡ್ ಫೂಟೇಜ್ ಶೈಲಿಯಲ್ಲಿ ಹೇಳುವ ಸಿನಿಮಾ ‘ವಿಡಿಯೋ’. ಹೊಸ ನಿರೂಪಣೆ, ರಿಯಲಿಸ್ಟಿಕ್ ಮೇಕಿಂಗ್ ಮತ್ತು ನಿರಂತರ ಕುತೂಹಲ ಚಿತ್ರದ ಪ್ರಮುಖ ಆಕರ್ಷಣೆಗಳು.
- ರಾಜೇಶ್ ಶೆಟ್ಟಿ
ತಾಂತ್ರಿಕವಾಗಿ ಶ್ರೀಮಂತವಾಗಿರುವ, ಮೊದಲಿನಿಂದ ಕೊನೆಯವರೆಗೂ ಕುತೂಹಲವನ್ನು ಉಳಿಸಿಕೊಂಡು ಪ್ರೇಕ್ಷಕನನ್ನು ಕತೆಯ ಜೊತೆಗೆ ಕರೆದೊಯ್ಯುವ ಶ್ಲಾಘನೀಯ ಪ್ರಯತ್ನ ‘ವಿಡಿಯೋ’. ತೆರೆಯ ಮೇಲೆ ಇರುವ ಐವರು ಯುವ ಕಲಾವಿದರು ಮತ್ತು ತೆರೆಯ ಹಿಂದೆ ಇರುವ ನಿರ್ದೇಶಕ ಶ್ರೀನಿಧಿ ಬೆಂಗಳೂರು, ಸಂಗೀತ ನಿರ್ದೇಶಕ ಪ್ರಸನ್ನ ಕುಮಾರ್, ಛಾಯಾಗ್ರಾಹಕ ಅವಿನಾಶ್ ಶಾಸ್ತ್ರಿ, ಸಂಕಲನಕಾರ ಸಂಜೀವ್ ಜಾಗಿರ್‌ದಾರ್ ಈ ಸಿನಿಮಾದ ನಿಜವಾದ ಹೀರೋಗಳು.
ತಂತ್ರಜ್ಞರು ಮತ್ತು ಕಲಾವಿದರು ಅದ್ಭುತವಾಗಿ ಕಾರ್ಯ ನಿರ್ವಹಿಸಿದ ಫಲವೇ ಈ ಸಿನಿಮಾ. ಕತೆಯ ಕುರಿತು ಜಾಸ್ತಿ ಹೇಳುವುದೇನೂ ಇಲ್ಲ. ಇದೊಂದು ಫೌಂಡ್ ವಿಡಿಯೋ ಜಾನರಾ ಸಿನಿಮಾ. ಐವರು ವ್ಲಾಗರ್‌ಗಳು ಒಂದು ರುದ್ರ ಭಯಾನಕ ಜಾಗಕ್ಕೆ ವ್ಲಾಗ್ ಮಾಡುವುದಕ್ಕೆ ಹೋದಾಗಿನ ವಿಡಿಯೋ ಫೂಟೇಜ್‌ಗಳು ಈ ಸಿನಿಮಾದ ಜೀವಾಳ. ಅಲ್ಲಿ ಏನು ನಡೆಯಿತು ಅನ್ನುವುದೇ ಕಥನ ಕುತೂಹಲ. ಆ ಕತೆಯನ್ನು ಸೊಗಸಾಗಿ ಹೇಳಿರುವುದು ಈ ಕತೆ, ಚಿತ್ರಕತೆಯ ಸಾರ್ಥಕತೆ.
ಐಡಿಯಾ ಹಳೆಯದಾದರೂ ಸಿನಿಮಾ ನಿರೂಪಣೆಯಲ್ಲಿ ಹೊಸತನ ಕಾಯ್ದುಕೊಂಡಿದ್ದಾರೆ. ರಿಯಲಿಸ್ಟಿಕ್ ಆಗಿ ಕಾಣಿಸುವ ಪ್ರಯತ್ನ ಎದ್ದು ಕಾಣುತ್ತದೆ. ಆರಂಭದಲ್ಲಿ ಲವಲವಿಕೆಯಿಂದ ಸಾಗುವ ಕತೆ, ಮುಂದುವರೆದಂತೆ ಕಾತರದಿಂದ ಮುಂದೇನು ಎಂದು ನೋಡುವಂತೆ ಬದಲಾಗುತ್ತದೆ.
ಚಿತ್ರ: ವಿಡಿಯೋ
ನಿರ್ದೇಶನ: ಶ್ರೀನಿಧಿ ಬೆಂಗಳೂರು
ತಾರಾಗಣ: ಭರತ್, ಜೀವನ್ ಶಿವಕುಮಾರ್, ತೇಜೇಶ್ ಮಂಜುನಾಥ್, ಪ್ರಿಯಾ ಆಚಾರ್, ನಲ್ಮೆ ನಚಿಯಾರ್
ರೇಟಿಂಗ್: 3.5
ಒಂದು ಕತೆಯನ್ನು ನೋಡುಗನಿಗೆ ಕನೆಕ್ಟ್ ಆಗುವಂತೆ ರೂಪಿಸುವುದೇ ಈ ಕಾಲದ ಸವಾಲು. ಶ್ರೀನಿಧಿ ಬೆಂಗಳೂರು ಆ ಸವಾಲಲ್ಲಿ ಗೆದ್ದಿದ್ದಾರೆ. ಅದರಲ್ಲೂ ಯುವ ಕಲಾವಿದರಾದ ಭರತ್, ಜೀವನ್ ಶಿವಕುಮಾರ್, ತೇಜೇಶ್ ಮಂಜುನಾಥ್, ಪ್ರಿಯಾ ಆಚಾರ್, ನಲ್ಮೆ ನಚಿಯಾರ್ ವ್ಲಾಗರ್‌ಗಳಾಗಿ ಮನಸ್ಸಲ್ಲಿ ಉಳಿಯುವಂತೆ ನಟಿಸಿದ್ದಾರೆ. ಹೊಸ ಹುರುಪಿನ ತಂಡದ ಮೆಚ್ಚಬಹುದಾದ ಸಿನಿಮಾ.


