ಕಾಶ್ಮೀರಿ ಪಂಡಿತ ನರ್ಸ್ ಸರಳಾ ಭಟ್ ಹತ್ಯೆ ಪ್ರಕರಣದಲ್ಲಿ ಚಾರ್ಜ್‌ಶೀಟ್ ಸಲ್ಲಿಕೆಯಾಗುತ್ತಿದ್ದಂತೆ, ಭಯೋತ್ಪಾದಕ ಯಾಸಿನ್ ಮಲಿಕ್ ತನ್ನ ಪತ್ನಿಗೆ ತಲಾಖ್ ನೀಡಲು ಮುಂದಾಗಿದ್ದಾನೆ. ಈಗಾಗಲೇ ಭಯೋತ್ಪಾದನೆಗೆ ಹಣಕಾಸು ನೆರವು ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಈತ, ತನ್ನ ಪತ್ನಿಯ ಭವಿಷ್ಯದ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಹೇಳಿಕೊಂಡಿದ್ದಾನೆ.

ಶ್ರೀನಗರ: ನಿಷೇಧಿತ ಸಂಘಟನೆಯಾದ ಜಮ್ಮು ಮತ್ತು ಕಾಶ್ಮೀರ ಲಿಬರೇಶನ್ ಫ್ರಂಟ್‌ನ ಮುಖ್ಯಸ್ಥ ಯಾಸಿನ್​ ಮಲಿಕ್​ ಈಗ ಭಾರಿ ಸದ್ದು ಮಾಡುತ್ತಿದ್ದಾನೆ. 1989 ಹಾಗೂ 1990ರಲ್ಲಿ ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರ ನರಮೇಧದ ಸಮಯದಲ್ಲಿ ಈತನೇ ಮುಂದಾಳತ್ವ ವಹಿಸಿದ್ದ. ಕಾಶ್ಮೀರಿ ಪಂಡಿತರು ಕಾಶ್ಮೀರ ತೊರೆಯಲು ಎಚ್ಚರಿಕೆ ನೀಡಿದರೂ ಸರಳಾ ಭಟ್ ಧೈರ್ಯವಾಗಿ ಎದೆಗುಂದದೆ ಸೇವೆಗೆ ಹಾಜರಾಗುತ್ತಿದ್ದರು. ಅವರನ್ನು ಬರ್ಬರವಾಗಿ ಕೊಲೆ ಮಾಡಿರುವ ಯಾಸಿನ್​ ಮತ್ತಿತರ ವಿರುದ್ಧ 36 ವರ್ಷಗಳ ಬಳಿಕ ತನಿಖೆ ನಡೆಸಿದ ಪೊಲೀಸರು ಜೈಲಿನಲ್ಲಿರುವ ಉಗ್ರ, ಹಾಗೂ ಮಾಸ್ಟರ್ ಮೈಂಡ್ ಯಾಸಿನ್ ಮಲಿಕ್ ಸೇರಿದಂತೆ ಐವರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದೆ. ಆದರೆ ಇದಾಗಲೇ ಈತ, ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆಗೆ ಹಣಕಾಸು ನೆರವು ಪ್ರಕರಣದಲ್ಲಿ ಮಲಿಕ್ 2019 ರಿಂದ ಜೈಲಿನಲ್ಲಿದ್ದಾನೆ ಮತ್ತು 2022 ರಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

ಇದೀಗ ಸರಳಾ ಕೇಸ್​ನಲ್ಲಿ ಚಾರ್ಜ್​ಷೀಟ್​ ಫೈಲ್​ ಆಗುತ್ತಲೇ, ತನ್ನ ಪತ್ನಿಗೆ ತಲಾಖ್​ ಕೊಡಲು ಮುಂದಾಗಿದ್ದಾನೆ. ಈತ ಕೊಟ್ಟ ಕಾರಣ ಕೇಳಿ ಈತನ ಬೆಂಬಲಿಗರ ಮನಸ್ಸು ಕರಗಬೇಕು, ಹಾಗಿದೆ. 'ಕಳೆದ ಎಂಟು ವರ್ಷಗಳಿಂದ ನನ್ನ ಪತ್ನಿ ಮುಶಾಲ್ ಜೊತೆ ಮಾತನಾಡಿಲ್ಲ. ನನ್ನ ತಾಯಿ, ಪತ್ನಿ ಮುಶಾಲ್ ಮತ್ತು ಅವರ 13 ವರ್ಷದ ಮಗಳ ದನಿ ಕೇಳದೇ ಎಂಟು ವರ್ಷಗಳಾಗಿವೆ. ಈ ಸಮಯದಲ್ಲಿ,ನನಗೆ ಫೋನ್‌ನಲ್ಲಿ ಮಾತನಾಡಲು ಅಥವಾ ವೀಡಿಯೊ ಕರೆ ಮೂಲಕ ಅವರನ್ನು ಭೇಟಿ ಮಾಡಲು ಅವಕಾಶವಿಲ್ಲ. ಆದ್ದರಿಂದ ಮುಶಾಲ್ ತನ್ನ ಜೀವನದ ಉಳಿದ ಭಾಗವನ್ನು ಈ ಸಂದರ್ಭಗಳಿಂದ ಅಥವಾ ವಿಧವೆಯಾಗಿ ಬದುಕಬೇಕೆಂದು ನಾನು ಬಯಸುವುದಿಲ್ಲ. ಅವಳು ತನ್ನ ಜೀವನದಲ್ಲಿ ಘನತೆ ಮತ್ತು ಭರವಸೆಯೊಂದಿಗೆ ಹೊಸ ಅಧ್ಯಾಯವನ್ನು ಪ್ರಾರಂಭಿಸಬೇಕೆಂದು ನಾನು ಬಯಸುತ್ತೇನೆ. ಆದ್ದರಿಂದ ತಲಾಖ್​ ಕೊಡಲು ಇಚ್ಛಿಸುತ್ತೇನೆ' ಎಂದು ಬರೆದಿದ್ದಾನೆ.

ಸಹಾನುಭೂತಿಗಾಗಿ ಬರೆದಿಲ್ಲ ಎಂದ ಉಗ್ರ

ಜೊತೆಗೆ, ಈ ಅಫಿಡವಿಟ್ ಅನ್ನು ಕರುಣೆ ಅಥವಾ ಸಹಾನುಭೂತಿ ಪಡೆಯಲು ಬರೆಯಲಾಗಿಲ್ಲ. ಇದನ್ನು ನನ್ನ ಆತ್ಮಸಾಕ್ಷಿಯ ಕೊನೆಯ ಮಾತುಗಳು ಎಂದಿರೋ ಈ ಉಗ್ರ, ನನ್ನ ಹೆಂಡತಿಯನ್ನು ಮದುವೆಯ ಬಂಧಗಳಿಂದ ಮುಕ್ತಗೊಳಿಸುವ ನೋವಿನ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ ಎಂದಿದ್ದಾನೆ. "ನಿಮ್ಮೊಂದಿಗಿನ ನನ್ನ ಸಮಯ ಕಡಿಮೆ ಮತ್ತು ಅನಿಶ್ಚಿತವಾಗಿದೆ ಎಂದು ನನಗೆ ತಿಳಿದಿದೆ. ನೀವು ನನಗಿಂತ ಇಪ್ಪತ್ತು (20) ವರ್ಷ ಚಿಕ್ಕವರು, ಮತ್ತು ನೀವು ನನ್ನ ಸಂದರ್ಭಗಳಿಂದ ಅಥವಾ ವಿಧವೆಯಾಗಿ ನಿಮ್ಮ ಉಳಿದ ಜೀವನವನ್ನು ಹೊರೆಯಾಗಿ ಕಳೆಯಬೇಕೆಂದು ನಾನು ಬಯಸುವುದಿಲ್ಲ. ಆದ್ದರಿಂದ, ನಿಮ್ಮ ಜೀವನದಲ್ಲಿ ಘನತೆ ಮತ್ತು ಭರವಸೆಯೊಂದಿಗೆ ಹೊಸ ಅಧ್ಯಾಯವನ್ನು ಪ್ರಾರಂಭಿಸಲು ಧೈರ್ಯವನ್ನು ಕಂಡುಕೊಳ್ಳಲು ನಾನು ನಿಮ್ಮನ್ನು ಒತ್ತಾಯಿಸುತ್ತೇನೆ. ನಾನು ಯಾವಾಗಲೂ ನಿಮ್ಮಿಬ್ಬರನ್ನೂ ಪ್ರೀತಿಸುತ್ತೇನೆ, ಈ ಜಗತ್ತಿನಲ್ಲಿ ಮತ್ತು ಮುಂದಿನ ದಿನಗಳಲ್ಲಿ. ನಾನು ನಿಮ್ಮನ್ನು ಗೌರವಿಸುತ್ತೇನೆ ಮತ್ತು ನಿಮ್ಮನ್ನು ನೆನಪಿಸಿಕೊಳ್ಳುತ್ತೇನೆ ಎಂದು ಬರೆದಿದ್ದಾನೆ!

ಏನಿದು ಸರಳಾ ಕೇಸ್​?

1989 ಹಾಗೂ 1990ರಲ್ಲಿ ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರನ್ನು ಉಗ್ರರು ಟಾರ್ಗೆಟ್ ಮಾಡಿದ್ದರು. ಮಸೀದಿಗಳಲ್ಲಿ ಕಾಶ್ಮೀರಿ ಪಂಡಿತರು ಇಸ್ಲಾಂಗೆ ಮತಾಂತರವಾಗಬೇಕು, ಇಲ್ಲಾ ಕಾಶ್ಮೀರದಿಂದಲೇ ಈಗಲೇ ಹೊರಡಬೇಕು ಎಂದು ಕರೆ ನೀಡಲಾಗಿತ್ತು. ಮನೆ ಮನೆಗಳಿಗೆ ನುಗ್ಗಿ ಪುರುಷರ ಮೇಲೆ ಗುಂಡಿನ ದಾಳಿ, ಮಾರಾಕಾಸ್ತ್ರಗಳಿಂದ ದಾಳಿ ಮಾಡಲಾಗಿತ್ತು. ಮಹಿಳೆಯರನ್ನು ಹೊತ್ತೊಯ್ದು ಹಾಳು ಮಾಡಿ ಬಳಿಕ ಹತ್ಯೆ ಮಾಡಲಾಗುತ್ತಿತ್ತು. ಭಯೋತ್ಪಾದನೆ ಅತ್ಯಂತ ಉಚ್ಚಸ್ಥಿತಿಗೆ ತಲುಪಿತ್ತು. ಅಂದು ಎಪ್ರಿಲ್ 18, 1990. ಯಾಸಿನ್ ಮಲಿಕ್ ಮುಂದಾಳತ್ವದ ಜೆಕೆಎಲ್‌ಎಫ್ ಉಗ್ರರು SKIMS ಆಸ್ಪತ್ರೆಗೆ ನುಗ್ಗಿದ್ದರು. ಇಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದ ಕಾಶ್ಮೀರಿ ಪಂಡಿತ್ ಸರಳಾ ಭಟ್‌‌ನ್ನ ಗನ್ ಪಾಯಿಂಟ್‌ನಲ್ಲಿ ಅಪಹರಿಸಿದ್ದರು.

ಕಾಶ್ಮೀರಿ ಪಂಡಿತರು ಕಾಶ್ಮೀರ ತೊರೆಯಲು ಎಚ್ಚರಿಕೆ ನೀಡಿದರೂ ಸರಳಾ ಭಟ್ ಧೈರ್ಯವಾಗಿ ಎದೆಗುಂದದೆ ಸೇವೆಗೆ ಹಾಜರಾಗುತ್ತಿದ್ದರು. ಇದನ್ನು ಅರಿತ ಉಗ್ರರು ಪಾಠ ಕಲಿಸಲು ಹಾಗೂ ಎಲ್ಲಾ ಪಂಡಿತರು ಭಯಬೀಳುವಂತೆ ಮಾಡಲು ಸರಳಾ ಭಟ್ ಅಪಹರಿಸಿದ್ದರು. ಬಳಿಕ ಯಾಸಿನ್ ಮಲಿಕ್ ಸೇರಿದಂತೆ ಜೆಕೆಎಲ್‌ಎಫ್ ಉಗ್ರರ ಒಬ್ಬರ ಮೇಲೊಬ್ಬರಂತೆ ಎರಗಿದ್ದರು. ಎಪ್ರಿಲ್ 19, 1990ರಂದು ಶ್ರೀನಗರದ ಮಲ್ಲಾಬಾಗ್ ಉಮರ್ ಕಾಲೋನಿ ರಸ್ತೆ ಬದಿಯಲ್ಲಿ ಸರಳಾ ಭಟ್ ಶವ ಪತ್ತೆಯಾಗಿತ್ತು. ಈಕೆಯ ಮೃತದೇಹದ ಮೇಲೆ ಪೊಲೀಸ್‌ಗೆ ಸೂಚನೆ ನೀಡುವಾಕೆ ಎಂದು ಬರೆಯಲಾಗಿತ್ತು. ಸರಳಾ ಭಟ್ ಮನೆ ಮೇಲೆ ಗ್ರೇನೇಡ್ ದಾಳಿ ನಡೆಸಲಾಯಿತು. ಈ ಘಟನೆ ನೋಡಿದ ಬಹುತೇಕ ಕಾಶ್ಮೀರಿ ಪಂಡಿತರು ರಾತ್ರೋರಾತ್ರಿ ಮನೆ ತೊರೆದರು. ಪ್ರಾಣ ಉಳಿಸಿಕೊಳ್ಳಲು ಪಲಾಯನ ಮಾಡಿದರು. ಇತ್ತ ದಾರಿಯಲ್ಲಿ ಸಿಕ್ಕ ಮೃತೇದಹದ ಬಗ್ಗೆ ದೂರು ನೀಡಲು ಯಾರು ಇಲ್ಲದಾದರು. ಉಗ್ರರ ಭಯದಿಂದ ಸಾಕ್ಷಿ ನುಡಿಯಲು ಯಾರು ಮುಂದೆ ಬರಲಿಲ್ಲ.