ಪತಿ ಎಲ್ಲಿಗೆ ಹೋಗುತ್ತಾನೋ, ಅಲ್ಲಿಗೆಲ್ಲಾ ಪತ್ನಿ ವೋಡಾಫೋನ್ ಜಾಹೀರಾತಿನಲ್ಲಿದ್ದ ಪಗ್ ನಾಯಿ ರೀತಿ ಫಾಲೋ ಮಾಡುತ್ತಾ ಹೋಗಲಾಗದು ಎಂದು ಹೈಕೋರ್ಟ್ ಹೇಳಿದೆ. ಡಿವೋರ್ಸ್ ಪ್ರಕರಣ ಕುರಿತು ಹೈಕೋರ್ಟ್ ಹೇಳಿದ್ದೇನು?

ಚೆನ್ನೈ (ಸೆ.03) ಪತಿ ಹೋದಲ್ಲೆಲ್ಲಾ ಹೆಂಡತಿ ಆತನ ಹಿಂದೆ ಫಾಲೋ ಮಾಡುತ್ತಾ ಹೋಗಲು ಸಾಧ್ಯವಿಲ್ಲ. ವೋಡಾಫೋನ್ ಜಾಹೀರಾತಿನಲ್ಲಿ ಪಗ್ ನಾಯಿ ರೀತಿ ಫಾಲೋ ಮಾಡುತ್ತಾ ಹೋಗಲು ಆಗುವುದಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಹೇಳಿದೆ. ಡಿವೋರ್ಸ್ ಪ್ರಕರಣದ ಕುರಿತು ಮದ್ರಾಸ್ ಹೈಕೋರ್ಟ್ ಪೀಠ ವ್ಯಕ್ತಪಡಿಸಿದ ಅಭಿಪ್ರಾಯ ಎಲ್ಲರ ಗಮನಸೆಳೆದಿದೆ. ನ್ಯಾಯಮೂರ್ತಿಗಳಾದ ಜಿಆರ್ ಸ್ವಾಮಿನಾಥನ್, ಹಾಗೂ ಎಂಡಿ ಸುಮತಿ ಅವರಿದ್ದ ವಿಭಾಗೀಯ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಏನಿದು ಪ್ರಕರಣ

1992ರಲ್ಲಿ ಮದುವೆಯಾದ ಈ ಜೋಡಿಗೆ ನಾಲ್ಕು ಮಕ್ಕಳಿದ್ದಾರೆ. ಆದರೆ ಕಳೆದ 16 ವರ್ಷಗಳಿಂದ ಈ ಜೋಡಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಜೊತೆಗೆ ವಿಚ್ಚೇದನ ಪ್ರಕರಣ ಕೋರ್ಟ್‌ನಲ್ಲಿ ನಡೆಯುತ್ತಿತ್ತು. ಪತಿ ಕೆಲಸದ ನಿಮಿತ್ತ ಮುಂಬೈಗೆ ವರ್ಗಾವಣೆಗೊಂಡಿದ್ದ. ಈ ವೇಳೆ ಪತ್ನಿಯನ್ನು ಕರೆದುಕೊಂಡು ಹೋಗಿರಲಿಲ್ಲ. ಇತ್ತ ಪತಿ ತನ್ನ ಪತ್ನಿ ವಿರುದ್ಧ ಅಕ್ರಮ ಸಂಬಂಧ ಆರೋಪ ಹೊರಿಸಿ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣದ ಕುರಿತು ಕೌಟುಂಬಿಕ ನ್ಯಾಯಾಲಯ ಪತ್ನಿಯ ಆರೋಪ ಪರಿಗಣಿಸಿ ಮಹತ್ವದ ತೀರ್ಪು ನೀಡಿತ್ತು. ಪತ್ನಿಯನ್ನು ಕರೆದುಕೊಂಡು ಹೋಗುವುದು ಪತಿಯ ಕರ್ತವ್ಯ ಎಂದಿತ್ತು. ಈ ತೀರ್ಪು ಪ್ರಶ್ನಿಸಿ ಹಾಗೂ ವಿಚ್ಚೇದನ ಅರ್ಜಿಯನ್ನು ಹೈಕೋರ್ಟ್‌ಗೆ ಸಲ್ಲಿಸಿಲಾಗಿತ್ತು. ಇದೀಗ ಹೈಕೋರ್ಟ್ ಕೆಲ ಅಭಿಪ್ರಾಯ ವ್ಯಕ್ತಪಡಿಸಿದೆ.

ಪಗ್ ನಾಯಿ ರೀತಿ ಹೋಗಲು ಸಾಧ್ಯವಿಲ್ಲ

ಪತಿ ಮುಂಬೈಗೆ ವರ್ಗಾವಣೆಗೊಂಡಾಗ ಪತ್ನಿಯನ್ನು ಕರೆದುಕೊಂಡು ಹೋಗಬೇಕಿತ್ತು, ಇದು ಕರ್ತವ್ಯ ಎಂದು ಹೇಳಲು ಸಾಧ್ಯವಿಲ್ಲ. ಪತಿ ಎಲ್ಲಿಗೆ ಹೋಗುತ್ತಾನೋ, ಅಲ್ಲಿಗೆಲ್ಲಾ ವೋಡಾಫೋನ್ ಜಾಹೀರಾತಿನ ಪಗ್ ನಾಯಿ ರೀತಿ ಪತ್ನಿ ಹೋಗಲು ಆಗುವುದಿಲ್ಲ. ಪತಿ ಸೈನಿಕನಾಗಿದ್ದರೆ ಆತನ ಜೊತೆ ಗಡಿಗೆ ಹೋಗಲು ಸಾಧ್ಯವಿಲ್ಲ, ಸೇನಾ ಬ್ಯಾರಕ್‌ಗಳಲ್ಲಿ ವೈವಾಹಿಕ ಮನೆ ಸಾಧ್ಯವಿಲ್ಲ ಎಂದು ಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿತು.

ಅಕ್ರಮ ಸಂಬಂಧ ಆರೋಪ ತಿರಸ್ಕರಿಸಿದ ಕೋರ್ಟ್

ಪತ್ನಿಗೆ ಅಕ್ರಮ ಸಂಬಂಧವಿದೆ ಎಂದು ಪತಿ ಮಾಡಿದ ಆರೋಪ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿತು. ಈ ಆರೋಪ ಮಾಡುವಾಗ ಪ್ರಕರಣದಲ್ಲಿ ಪ್ರೇಮಿ ಕುರಿತು ಯಾವುದೇ ಉಲ್ಲೇಖವಿಲ್ಲ ಹಾಗೂ ಪಕ್ಷಗಾರರನ್ನಾಗಿ ಮಾಡಿಲ್ಲ. ಹೀಗಾಗಿ ಈ ವಾದವನ್ನು ಕೋರ್ಟ್ ತಳ್ಳಿಹಾಕಿದೆ.

16 ವರ್ಷಗಳಿಂದ ಪ್ರತ್ಯೇಕ ವಾಸ

ಪತಿಗೆ ಈಗ 67 ವರ್ಷ ವಯಸ್ಸಾಗಿದೆ. ಕಳೆದ 16 ವರ್ಷಗಳಿಂದ ಪತಿ ಹಾಗೂ ಪತ್ನಿ ಇಬ್ಬರು ಬೇರೆ ಬೇರೆಯಾಗಿ ವಾಸಿಸುತ್ತಿದ್ದಾರೆ. ಇವರ ಸಂಬಂಧ ಈಗ ಮರುಸ್ಥಾಪಿಸಲು ಸಾಧ್ಯವಿಲ್ಲದ ಮಟ್ಟಕ್ಕೆ ಹೋಗಿದೆ. ಬೇರ ಬೇರೆಯಾಗಿ ವಾಸಿಸುತ್ತಿದೆ ಎಂಬುದನ್ನು ನ್ಯಾಯಾಲಯ ಉಲ್ಲೇಖಿಸಿದೆ.