
ಬಿಜೆಪಿಗೆ ಅಣ್ಣಾಮಲೈ ರಾಜೀನಾಮೆ ನೀಡಿದ್ದೇಕೆ? ನಿತಿನ್ ನಬಿನ್ ಮನವೊಲಿಕೆಗೆ ಒಪ್ಪಲಿಲ್ಲ ಯಾಕೆ?
ಎಐಎಡಿಎಂಕೆ ಜೊತೆಗಿನ ಮೈತ್ರಿಯನ್ನು ವಿರೋಧಿಸಿ ಬಿಜೆಪಿ ನಾಯಕ ಕೆ. ಅಣ್ಣಾಮಲೈ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ. ಬಿಜೆಪಿ ಹೈಕಮಾಂಡ್ ರಾಜೀನಾಮೆಯನ್ನು ಅಂಗೀಕರಿಸದಿದ್ದರೂ, ಅಣ್ಣಾಮಲೈ ಮುಂದಿನ ಆರು ತಿಂಗಳಲ್ಲಿ ಹೊಸ ಪ್ರಾದೇಶಿಕ ಪಕ್ಷವನ್ನು ಸ್ಥಾಪಿಸುವ ಚಿಂತನೆಯಲ್ಲಿದ್ದಾರೆ ಎಂದು ವರದಿಯಾಗಿದೆ.
ಹೊಸ ಪಕ್ಷ ಸ್ಥಾಪನೆಗೆ ಚಿಂತನೆ ನಡೆಸುತ್ತಿದ್ದಾರೆ ಎನ್ನಲಾದ ತಮಿಳುನಾಡು ಬಿಜೆಪಿ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ಮುಖಂಡ ಬಿ.ಎಲ್. ಸಂತೋಷ್ ಅವರನ್ನು ಮಂಗಳವಾರ ಭೇಟಿ ಮಾಡಿ ಪಕ್ಷಕ್ಕೆ ರಾಜೀನಾಮೆ ನೀಡುವ ಇಂಗಿತ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಅವರನ್ನು ಉಳಿಸಿಕೊಳ್ಳಲು ಆರ್‌ಎಸ್‌ಎಸ್ ಮತ್ತು ಬಿಜೆಪಿ ನಾಯಕರಿಂದ ಅಂತಿಮ ಕ್ಷಣದವರೆಗೆ ಪ್ರಯತ್ನಗಳು ನಡೆದರೂ, ಅವ್ಯಾವವೂ ಫಲ ಕೊಡದೆ ಅವರು ಪಕ್ಷವನ್ನು ತೊರೆಯುವ ಮಾತನ್ನು ಪುನರುಚ್ಚರಿಸಿದ್ದಾರೆ ಎಂದು ವರದಿಯಾಗಿದೆ.
ಅಣ್ಣಾಮಲೈ ಮಂಗಳವಾರ ಬೆಳಿಗ್ಗೆ ನಿತಿನ್ ಹಾಗೂ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರನ್ನು ಭೇಟಿಯಾದರು. ಸ್ವತಂತ್ರವಾಗಿ ರಾಜಕೀಯವಾಗಿ ಮುನ್ನಡೆಯುವ ಅಭಿಲಾಷೆ ವ್ಯಕ್ತಪಡಿಸಿದ ಅವರು, ಸೌಹಾರ್ದಯುತವಾಗಿ ಪಕ್ಷದಿಂದ ಹೊರನಡೆಯುತ್ತಿರುವುದಾಗಿ ತಿಳಿಸಿದರು. ನಂತರ ಪಕ್ಷದ ಅಧ್ಯಕ್ಷ ನಿತಿನ್ ನವೀನ್ ಅವರನ್ನು ಭೇಟಿ ಮಾಡಿ, ‘ಪಕ್ಷದಲ್ಲಿ ಇನ್ನು ಮುಂದುವರಿಯಲು ಆಗದು’ ಎಂದು ಬರೆದಿದ್ದ ಕಾಗದ ನೀಡಿದರು ಎಂದು ಗೊತ್ತಾಗಿದೆ, ಆದರೆ ಇದು ರಾಜೀನಾಮೆ ಪತ್ರವಲ್ಲ ಎಂದು ಬಿಜೆಪಿ ಮೂಲಗಳು ಸ್ಪಷ್ಟಪಡಿಸಿವೆ.
ಬಳಿಕ ಸಂಜೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನೂ ಅಣ್ಣಾಮಲೈ ಭೇಟಿಯಾಗಿ ತಾವು ಪಕ್ಷ ಬಿಡಬೇಕಾದ ಅನಿವಾರ್ಯ ಪರಿಸ್ಥಿತಿ ಬಗ್ಗೆ ವಿವರ ನೀಡಿದರು.