ಭದ್ರತಾ ಸಂಸ್ಥೆಗಳ ಕಣ್ಣುತಪ್ಪಿಸಲು ಕಾಶ್ಮೀರಿ ಉಗ್ರರು ಹೊಸ ಮಾರ್ಗವನ್ನು ಕಂಡುಕೊಂಡಿದ್ದಾರೆ. ಅವರು ರಹಸ್ಯ ಸಂದೇಶಗಳನ್ನು ಕಳುಹಿಸಲು ಮತ್ತು ನೇಮಕಾತಿ ಚಟುವಟಿಕೆಗಳಿಗಾಗಿ ಅಶ್ಲೀಲ ವೆಬ್‌ಸೈಟ್‌ಗಳು ಮತ್ತು ಡೇಟಿಂಗ್ ಆ್ಯಪ್‌ಗಳನ್ನು ಬಳಸುತ್ತಿದ್ದಾರೆ. ಈ ಮೂಲಕ ಟೋರ್ ನೆಟ್‌ವರ್ಕ್‌ನಂತಹ ಗೂಢಲಿಪೀಕರಿಸಿದ ವೇದಿಕೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.
ಶ್ರೀನಗರ/ನವದೆಹಲಿ: ಸಾಂಪ್ರದಾಯಿಕ ಸಾಮಾಜಿಕ ಜಾಲತಾಣ ಮೂಲಕ ನಡೆಯುವ ನೇಮಕಾತಿ ಚಟುವಟಿಕೆಯಿಂದ ಸುಲಭವಾಗಿ ಸಿಕ್ಕಿಬೀಳುವ ಆತಂಕ ಹಿನ್ನೆಲೆಯಲ್ಲಿ ಉಗ್ರರು ಹೊಸ ದಾರಿ ಕಂಡುಕೊಂಡಿದ್ದಾರೆ. ಆನ್‌ಲೈನ್ ಗೇಮಿಂಗ್ ಪ್ಲಾಟ್‌ಫಾರ್ಮ್‌ಗಳ ದುರ್ಬಳಕೆ ಬಳಿಕ ಉಗ್ರರು ಮತ್ತು ಅವರ ಬೆಂಬಲಿಗರು ಅಶ್ಲೀಲ ವೆಬ್‌ಸೈಟ್‌ಗಳು ಹಾಗೂ ನಿರ್ದಿಷ್ಟ ಗುಂಪು ಅಥವಾ ಉದ್ದೇಶಕ್ಕಾಗಿ ರೂಪಿಸಲಾದ ಅಪ್ಲಿಕೇಷನ್‌ಗಳನ್ನು ಗೌಪ್ಯ ಸಂವಹನಕ್ಕಾಗಿ ಬಳಸುತ್ತಿರುವ ವಿಷಯ ಬೆಳಕಿಗೆ ಬಂದಿದೆ.
ಕಾಶ್ಮೀರದಲ್ಲಿ ಉಗ್ರರ ನೇಮಕಾತಿಗಾಗಿ ಪಾಕ್ ಉಗ್ರ ಸಂಘಟನೆಗಳು, ಗುಪ್ತಚರ ಸಂಸ್ಥೆ ಐಎಸ್‌ಐ ಬದಲಿ ಮಾರ್ಗದ ಮೊರೆ ಹೋಗುತ್ತಿರುವುದು ಸುರಕ್ಷತಾ ಏಜೆನ್ಸಿಗಳ ತನಿಖೆ ವೇಳೆ ಬೆಳಕಿಗೆ ಬಂದಿದೆ.
ಇದೀಗ ಅವರು ಬಳಸುತ್ತಿರುವ ಅಶ್ಲೀಲ ಪ್ಲಾಟ್‌ಫಾರ್ಮ್‌ಗಳು ರಿಯಲ್ ಟೈಮ್ ಚಾಟ್ ಟೂಲ್‌ಗಳನ್ನು ಹೊಂದಿದ್ದು, ಬಳಕೆದಾರರಿಗೆ ಆಸುಪಾಸಿನ ಪ್ರದೇಶದಲ್ಲೇ ಡೇಟಿಂಗ್ ಸೂಕ್ತ ವ್ಯಕ್ತಿಗಳನ್ನು ಹುಡುಕಲು ನೆರವು ನೀಡುತ್ತದೆ. ಆದರೆ, ಇದನ್ನು ದುರ್ಬಳಕೆ ಮಾಡಿಕೊಂಡು ಉಗ್ರರು ತಮಗೆ ಬೇಕಾದ ಸಂದೇಶ ಪ್ರಸಾರ ಮಾಡಲು ಹಾಗೂ ಸಮನ್ವಯ ಸಾಧಿಸಲು ಈ ಪ್ಲಾಟ್‌ಫಾರ್ಮ್ ವೇದಿಕೆಯಾಗಿ ಕೆಲಸ ಮಾಡುತ್ತಿದೆ.
ಟೋರ್ ಬಳಕೆ
ಉಗ್ರ ಸಂಘಟನೆಗಳು ಟೋರ್-ಆಧಾರಿತ ಕೋಟೆಕ್ಸ್ ಮತ್ತು ಕಾನಿಯಾನ್‌ನಂಥ ಮೆಸೇಜಿಂಗ್ ಅಪ್ಲಿಕೇಷನ್‌ಗಳನ್ನು ಗೂಢ ಸಂದೇಶ ಕಳುಹಿಸಲು ಹಾಗೂ ಗುರುತು ಮರೆಮಾಚಲು ಬಳಸುತ್ತಿವೆ ಎನ್ನಲಾಗುತ್ತಿದೆ. ಆದರೆ ಭಾರತದಲ್ಲಿ ಕೋನಿಯನ್ ಎಪಿಕೆ(ಆ್ಯಂಡ್ರಾಯಿಡ್ ಪ್ಯಾಕೇಜ್ ಕಿಟ್) ಫೈಲ್‌ಗೆ ನಿರ್ಬಂಧವಿದೆ.
ಈ ಹಿನ್ನೆಲೆಯಲ್ಲಿ ಖಾಸಗಿತ ಕಾಪಾಡುವ ಪ್ಲಾಟ್‌ಫಾರ್ಮ್‌ಗಳಾದ ಫ್ರಾನ್ಸ್ ಮೂಲದ ಆ್ಯಪ್‌ಗಳನ್ನು ಉಗ್ರರು ಬಳಸುತ್ತಿದ್ದಾರೆ. ಈ ಆ್ಯಪ್‌ಗಳಲ್ಲಿ ಮೆಸೇಜ್ ಕಳುಹಿಸಿಸಲು ಸಿಮ್ ಕಾರ್ಡ್ ಅಥವಾ ಫೋನ್ ನಂಬರ್‌ನ ಅಗತ್ಯವೇ ಬೀಳುವುದಿಲ್ಲ. ಇದರ ಜತೆ ಮೂನ್‌ಚಾಟ್‌ನಂಥ ವಿಯೆಟ್ನಾಂ ಮೂಲದ ಆ್ಯಪ್‌ಗಳ ಮೇಲೂ ಏಜೆನ್ಸಿಗಳ ಕಣ್ಣುಬಿದ್ದಿದೆ. ಈ ಆ್ಯಪ್‌ಗಳು ಪಿಜಿಪಿ-ಎನ್‌ಕ್ರಿಪ್ಟೆಡ್ ಆವೃತ್ತಿ ಹೊಂದಿದ್ದು, ಇದರ ಮೂಲ ಚೀನಾ ಆಗಿರುವ ಅನುಮಾನ ಇದೆ.
ಟೋರ್ ನೆಟ್‌ವರ್ಕ್ ಬಳಕೆ ಹೆಚ್ಚಳ
ಭದ್ರತಾ ತಜ್ಞರ ಪ್ರಕಾರ ಹಲವು ಆ್ಯಪ್‌ಗಳು ಟೋರ್ ನೆಟ್‌ವರ್ಕ್‌ಗಳನ್ನು ಬಳಸುತ್ತಿರುವ ಸಾಧ್ಯತೆ ಇದೆ. ಇದರಿಂದಾಗಿ ಸಂದೇಶಗಳನ್ನು ಎಲ್ಲಿಂದ, ಎಲ್ಲಿಗೆ ಕಳುಹಿಸಲಾಗುತ್ತಿದೆ ಎಂಬ ಮೂಲ ಪತ್ತೆ ಹಚ್ಚುವುದು ಕಷ್ಟ. ಟೋರ್ ನೆಟ್‌ವರ್ಕ್ ಅಮೆರಿಕ ಮೂಲದ ಲಾಭರಹಿತ ಸಂಸ್ಥೆ ದಿ ಟೋರ್ ಪ್ರಾಜೆಕ್ಟ್‌ನ ಭಾಗ. ಇದರ ಉದ್ದೇಶ ಖಾಸಗಿತನ,ಸೆನ್ಸಾರ್‌ಶಿಪ್ ಪ್ರಯತ್ನಗಳನ್ನು ಧಿಕ್ಕರಿಸುವುದು. ಆದರೆ, ಉಗ್ರರು ಇದನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.


