ಆರ್‌ಎಸ್‌ಎಸ್ ಕುರಿತ ಮಾನಹಾನಿ ಆರೋಪ ಪ್ರಕರಣದಲ್ಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಯುವ ಕಾಂಗ್ರೆಸ್ ಮುಖಂಡ ಮೊಹಮ್ಮದ್ ನಲಪಾಡ್ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ನ್ಯಾಯಾಲಯದ ಆದೇಶವೇನು? ಮುಂದಿನ ವಿಚಾರಣೆ ಯಾವಾಗ?
ಬೆಂಗಳೂರು (ಆ.30): ರಾಷ್ಟ್ರೀಯ ಸ್ವಯಂ ಸೇವಕ ಸಂಘದ (RSS) ಕುರಿತು ಅವಹೇಳನ ಹಾಗೂ ಮಾನಹಾನಿ ಆರೋಪ ಪ್ರಕರಣದ ಆರೋಪಿಗಳಾದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಯುವ ಕಾಂಗ್ರೆಸ್ ಮುಖಂಡ ಮೊಹಮ್ಮದ್ ನಲಪಾಡ್ ಅವರಿಗೆ ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಪ್ರಿಯಾಂಕ್ ಖರ್ಗೆ, ನಲಪಾಡ್ ಕೋರ್ಟ್‌ಗೆ ಹಾಜರು
ನ್ಯಾಯಾಲಯದ ನೋಟಿಸ್ ಹಿನ್ನೆಲೆಯಲ್ಲಿ ಇಬ್ಬರು ಆರೋಪಿಗಳು ಶನಿವಾರ ನ್ಯಾಯಾಲಯಕ್ಕೆ ಖುದ್ದು ಹಾಜರಾಗಿದ್ದರು. ಈ ವೇಳೆ ಆರೋಪಿಗಳ ಪರ ವಕೀಲರು ಜಾಮೀನು ಕೋರಿ ಅರ್ಜಿ ಸಲ್ಲಿಸಿದರು. ತಮ್ಮ ಕಕ್ಷಿದಾರರ ವಿರುದ್ಧದ ಆರೋಪಗಳು ಜಾಮೀನು ನೀಡಬಹುದಾದ ಸ್ವರೂಪದಲ್ಲಿವೆ. ಹೀಗಾಗಿ ಜಾಮೀನು ಮಂಜೂರು ಮಾಡುವಂತೆ ಮನವಿ ಮಾಡಿದರು.
ಸೆ.19ಕ್ಕೆ ವಿಚಾರಣೆ ಮುಂದೂಡಿದ ನ್ಯಾಯಾಲಯ
ಇಬ್ಬರು ಆರೋಪಿಗಳ ಜಾಮೀನು ಅರ್ಜಿ ಪುರಸ್ಕರಿಸಿದ ನ್ಯಾಯಾಲಯ, ತಲಾ 1 ಲಕ್ಷ ರು. ಮೌಲ್ಯದ ವೈಯಕ್ತಿಕ ಬಾಂಡ್ ಮತ್ತು 10 ಸಾವಿರ ರು. ನಗದು ಭದ್ರತೆ ಒದಗಿಸುವಂತೆ ಸೂಚಿಸಿ ಜಾಮೀನು ಮಂಜೂರು ಮಾಡಿ ಬಿಡುಗಡೆಗೊಳಿಸಿತು. ಸೆ.19ಕ್ಕೆ ವಿಚಾರಣೆ ಮುಂದೂಡಿತು.


