ನ್ಯೂಯಾರ್ಕ್‌ನಲ್ಲಿ ನಡೆದ 'ಒಂದು ಜಗತ್ತು: ಒಂದು ಮಾನವೀಯತೆ' ಸಮ್ಮೇಳನದಲ್ಲಿ ಆರೆಸ್ಸೆಸ್ ಮುಖ್ಯಸ್ಥ ಮೋಹನ ಭಾಗವತ್ ಅವರು, ಧರ್ಮಗಳು ಬೇರೆಯಾದರೂ ಮಾನವೀಯತೆ ಒಂದೇ ಎಂದು ಪ್ರತಿಪಾದಿಸಿದರು. ಭಾರತದಲ್ಲಿ ಮುಸ್ಲಿಮರು ಇರಬಾರದು ಎಂದು ಭಾವಿಸುವವನು ಹಿಂದೂ ಆಗಿರಲು ಸಾಧ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
- ಧರ್ಮ ಬೇರೆ ಆದರೂ ಮಾನವೀಯತೆ ಒಂದೇ
- ಆರೆಸ್ಸೆಸ್ಸಿಗರು ಹಿಂದು-ಮುಸ್ಲಿಂ ಭೇದ ಮಾಡಲ್ಲ
ಭಾಗವತ್ ಜತೆ ಚುಂಚಶ್ರೀ
ನ್ಯೂಯಾರ್ಕ್ (ಆ.30): ನ್ಯೂಯಾರ್ಕ್‌ನ ಐಕಾನಿಕ್ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್‌ನಲ್ಲಿ ನಡೆದ ‘ಒಂದು ಜಗತ್ತು: ಒಂದು ಮಾನವೀಯತೆ’ ಸಮ್ಮೇಳನದಲ್ಲಿ ಆರೆಸ್ಸೆಸ್ ಮುಖ್ಯಸ್ಥ ಮೋಹನ ಭಾಗವತ್ ಜತೆ ಆದಿಚುಂಚನಗಿರಿ ಮಠದ ನಿರ್ಮಲಾನಂದ ಶ್ರೀಗಳೂ ಪಾಲ್ಗೊಂಡಿದ್ದರು.
ಧರ್ಮಗಳು ಬೇರೆ ಬೇರೆಯಾಗಿರಬಹುದು, ಮಾನವೀಯತೆ ಒಂದೇ
ನ್ಯೂಯಾರ್ಕ್: ‘ಧರ್ಮಗಳು ಬೇರೆ ಬೇರೆಯಾಗಿರಬಹುದು, ಮಾನವೀಯತೆ ಒಂದೇ. ಭಾರತದಲ್ಲಿ ಮುಸ್ಲಿಂ ಇರಬಾರದು ಎಂದು ಯಾವುದೇ ಹಿಂದೂ ಭಾವಿಸಿದರೆ, ಅವನು ಹಿಂದೂವಾಗಿ ಉಳಿಯುವುದಿಲ್ಲ’ ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ ಭಾಗವತ್ ಹೇಳಿದರು.
ನ್ಯೂಯಾರ್ಕ್‌ನಲ್ಲಿ ಶನಿವಾರ ನಡೆದ ‘ಒಂದು ಜಗತ್ತು: ಒಂದು ಮಾನವೀಯತೆ’ ಎಂಬ ಧಾರ್ಮಿಕ ನಾಯಕರ ಸಮ್ಮೇಳನದಲ್ಲಿ ಹಲವಾರು ಧಾರ್ಮಿಕ ನಾಯಕರ ಜೊತೆಗೆ ಮಾತನಾಡಿದ ಭಾಗವತ್, ವಿವಿಧ ಧರ್ಮಗಳ ನಡುವೆ ಏಕತೆ ಮತ್ತು ಸಾಮರಸ್ಯಕ್ಕೆ ಕರೆ ನೀಡಿದರು.
‘ಇಂದಿನ ಧರ್ಮಗಳನ್ನು ಹೆಚ್ಚಾಗಿ ಆಚರಣೆಗಳಿಂದ ವ್ಯಾಖ್ಯಾನಿಸಲಾಗಿದೆ. ಧಾರ್ಮಿಕ ಶಿಸ್ತನ್ನು ಅನುಸರಿಸಲು ಮತ್ತು ದೈವತ್ವದ ಮಾರ್ಗವನ್ನು ಅನುಸರಿಸಲು, ಈ ಆಚರಣೆಗಳ ಶಿಸ್ತು ಸಹ ಅಗತ್ಯವಾಗಿದೆ. ಆದರೆ ಧರ್ಮದ ಉದ್ದೇಶವೇನು? ಅದು ನಮ್ಮನ್ನು ಸತ್ಯದ ಕಡೆಗೆ ಕರೆದೊಯ್ಯುತ್ತದೆ. ಧರ್ಮಗಳು ಬೇರೆ ಆಗಿರಬಹುದು. ಆದರೆ ಮಾನವೀಯತೆ ಒಂದೇ’ ಎಂದರು.
ಭಾರತದಲ್ಲಿ ಮುಸ್ಲಿಮರು ಇರಬೇಕು:
‘ನೀವು ನಿಮ್ಮನ್ನು ಹಿಂದೂ ಎಂದು ಕರೆದುಕೊಳ್ಳಲು ಬಯಸಿದರೆ, ಎಲ್ಲಾ ಮಾರ್ಗಗಳು ಒಂದೇ ಕಡೆಗೆ ಕರೆದೊಯ್ಯುತ್ತವೆ ಎಂದು ನೀವು ನಂಬಬೇಕು. ಮತ್ತು ಪ್ರತಿಯೊಬ್ಬ ಮನುಷ್ಯನಿಗೂ ಒಂದು ಘನತೆ ಇರುತ್ತದೆ. ಮನುಷ್ಯರ ನಡುವೆ ಯಾವುದೇ ವ್ಯತ್ಯಾಸವಿಲ್ಲ. ನಾನು ಒಂದು ಕಡೆ ಉಪನ್ಯಾಸ ನೀಡಿದಾಗ ಮುಸ್ಲಿಂ ಸೋದರರೂ ಇದ್ದರು. ಮತ್ತು ಅವರು ನನಗೆ, ‘ನೀವು ಹಿಂದೂ ಸಂಘಟನೆ, ನೀವು ಹಿಂದೂ ರಾಷ್ಟ್ರ ಎನ್ನುತ್ತಿದ್ದೀರಿ. ಮುಸ್ಲಿಮರ ಕತೆ ಏನು? ನೀವು ನಮ್ಮನ್ನು ಓಡಿಸುತ್ತೀರಾ?’ ಎಂದು ಕೇಳಿದರು. ಅದಕ್ಕೆ ನಾನು, ಇಲ್ಲ ಎಂದೆ. ಅದು ಹಿಂದುತ್ವವಲ್ಲ. ಭಾರತದಲ್ಲಿ ಮುಸ್ಲಿಂ ಇರಬಾರದು ಎಂದು ಯಾವುದೇ ಹಿಂದೂ ಭಾವಿಸಿದರೆ, ಅವನು ಹಿಂದೂವಾಗಿ ಉಳಿಯುವುದಿಲ್ಲ’ ಎಂದು ಹೇಳಿದರು.
ಆರೆಸ್ಸೆಸ್ ತಾರತಮ್ಯ ಮಾಡಲ್ಲ:
1996 ರ ಹರ್ಯಾಣ ವಿಮಾನ ಅಪಘಾತದ ಸಮಯದಲ್ಲಿ ಆರ್‌ಎಸ್‌ಎಸ್‌ನ ಕೆಲಸದ ಬಗ್ಗೆ ಮಾತನಾಡಿದ ಭಾಗವತ್, ‘ಆಗ ಹೆಚ್ಚಿನ ಪ್ರಯಾಣಿಕರು ಮುಸ್ಲಿಮರಾಗಿದ್ದರು. ನಮ್ಮ ಸ್ವಯಂಸೇವಕರು ಮೊದಲು ಅಲ್ಲಿಗೆ ತಲುಪಿ ಗಾಯಾಳುಗಳಿಗೆ ಚಿಕಿತ್ಸೆ ನೀಡಿದರು. ಅಂತಿಮ ವಿಧಿವಿಧಾನ ಆ ಸಮಯದಲ್ಲಿ ಸಹಾಯ ಮಾಡಿದರು. ನಾವು ಇವರು ಮುಸ್ಲಿಮರು ಎಂದು ಎಂದಿಗೂ ಭಾವಿಸಿರಲಿಲ್ಲ’ ಎಂದರು.
ಯುದ್ಧ ನಿಲ್ಲಿಸಲು ಬಯಸುತ್ತೇವೆ:
ನಾವು ಏನಾದರೂ ಆಗುವ ಮುನ್ನ ಅದನ್ನು ತಡೆಯಲು ರಾಜಕೀಯ ಪ್ರಭಾವ ಬೀರಲು ಯತ್ನಿಸುತ್ತೇವೆ. ಯುದ್ಧಗಳನ್ನು ನಿಲ್ಲಿಸಲು ರಾಜಕೀಯದ ಮೇಲೆ ಪ್ರಭಾವ ಬೀರುತ್ತೇವೆ ಎಂದು ಸ್ಪಷ್ಟಪಡಿಸಿದರು.
ಮಾನವೀಯತೆ ಗುಣ:
ಪ್ರಾಚೀನ ಸಂಪ್ರದಾಯಗಳ ಬಗ್ಗೆ ಸಮಾಜಕ್ಕೆ ಶಿಕ್ಷಣ ನೀಡಬೇಕು. ಭಾರತದ ಸಂಪ್ರದಾಯಗಳು ವಿದೇಶಿ ಆಕ್ರಮಣಗಳಿಂದ ಬದುಕುಳಿದಿವೆ, ಇದು ಜನರಿಗೆ ಒಂದು ಪ್ರಪಂಚ, ಒಂದು ಮಾನವೀಯತೆಯ ಬಗ್ಗೆ ಕಲಿಸಿತು ಎಂದು ಅಭಿಪ್ರಾಯಪಟ್ಟರು.
ನ್ಯೂಯಾರ್ಕಲ್ಲಿ ಭಾಗವತ್, ಚುಂಚನಗಿರಿ ಶ್ರೀ
ನ್ಯೂಯಾರ್ಕ್: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರೆಸ್ಸೆಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರು ಶನಿವಾರ ರಾತ್ರಿ ನ್ಯೂಯಾರ್ಕ್‌ನ ಐಕಾನಿಕ್ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್‌ನಲ್ಲಿ ಬೃಹತ್ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದರು. ಸಭೆಯಲ್ಲಿ ಕರ್ನಾಟಕದ ಆದಿಚುಂಚನಗಿರಿ ಮಠದ ನಿರ್ಮಲಾನಂದ ಶ್ರೀಗಳೂ ಪಾಲ್ಗೊಂಡಿದ್ದರು. ‘ಯುನಿವರ್ಸಲ್ ಒನೆನೆಸ್ ಸೆಲೆಬ್ರೇಷನ್ಸ್’ ಹೆಸರಿನ ಈ ಕಾರ್ಯಕ್ರಮದ ಉದ್ದೇಶ ಜಾಗತಿಕ ಏಕತೆ ಸಾರುವುದಾಗಿದೆ. ಸುಮಾರು 5000 ಜನ ಸಭೆಯಲ್ಲಿ ಭಾಗಿಯಾಗಿದ್ದರು.


