ಪ್ರಧಾನಿ ಮೋದಿಯವರನ್ನು ನಿಂದಿಸಿ, ನಂತರ ಕ್ಷಮೆ ಕೋರಿದ್ದ ಬಾಲಕಿ ರುಚಿಕಾ ಸಿಂಗ್ ಮತ್ತೊಮ್ಮೆ ವಿವಾದ ಸೃಷ್ಟಿಸಿದ್ದಾಳೆ. ತನ್ನ ಜೀವನ ನರಕವಾಗಿದೆ ಮತ್ತು ಸ್ವಾತಂತ್ರ್ಯವಿಲ್ಲದಂತಾಗಿದೆ ಎಂದು ಮೋದಿಯವರನ್ನೇ ದೂಷಿಸಿ ಹೊಸ ವಿಡಿಯೋ ಮಾಡಿದ್ದಾಳೆ. ಈಕೆಯ ವರ್ತನೆಗೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಇದು ಕೇವಲ ಪ್ರಚಾರದ ಗೀಳು ಎಂದು ಟೀಕಿಸುತ್ತಿದ್ದಾರೆ.

ಕೆಲವರಿಗೆ ಆಗಾಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಸದ್ದು ಮಾಡುತ್ತಿರುವ ಆಸೆ. ತಮ್ಮ ವಿಷಯ ಸ್ವಲ್ಪ ತಣ್ಣಗಾಗಿ, ಯಾಕೋ ತಾವು ಸೈಡ್​ಲೈನ್​ ಆಗುತ್ತಿದ್ದೇವೆ ಎನ್ನಿಸಿದ ತಕ್ಷಣ, ಕಾಂಟ್ರವರ್ಸಿಯೊಂದನ್ನು ಮಾಡಿ, ಮತ್ತೆ ಮುನ್ನೆಲೆಗೆ ಬರುವ ಹಪಾಹಪಿ. ಇದನ್ನು ಸದಾ ಟ್ರೋಲ್​ ಆಗುತ್ತಿರುವವರಲ್ಲಿ ಕಾಣುವುದು ಸಹಜವಾಗಿದೆ. ನೆಗೆಟಿವ್​ ಆಗಿಯಾದರೂ ಸುದ್ದಿಯಲ್ಲಿ ಇರಬೇಕು, ಅದರಲ್ಲಿಯೂ ರಾಜಕೀಯದ ಬಗ್ಗೆ ಕಮೆಂಟ್​ ಮಾಡಿದರೆ, ಅವರನ್ನು ಪ್ರೋತ್ಸಾಹಿಸುವ ವರ್ಗವೂ ಇರತ್ತಲ್ಲ ಎನ್ನುವ ಖುಷಿ ಇಂಥವರಿಗೆ. ಇದೀಗ ಇದೇ ಸಾಲಿನಲ್ಲಿ ಸೇರಿ, ಮತ್ತೆ ವರಾತ ಶುರುವಿಟ್ಟುಕೊಂಡಿದ್ದಾಳೆ ಬಾಲಕಿ ಎನ್ನಲಾದ ರುಚಿಕಾ ಸಿಂಗ್​.

ಕಾಕ್ರೋಚ್​ ಜನತಾ ಪಕ್ಷದ ವತಿಯಿಂದ ಜಂತರ್​ ಮಂತರ್​ನಲ್ಲಿ ನಡೆದ ಪ್ರತಿಭಟನೆಯ ಸಮಯದಲ್ಲಿ ಈಕೆ ಬೆಳಕಿಗೆ ಬಂದಿದ್ದಳು. ತನ್ನನ್ನು 15 ವರ್ಷದವಳು ಎಂದು ಹೇಳುವ ರುಚಿಕಾ, ಆಡಿದ ಮಾತುಗಳು ಮಾತ್ರ ಎಲ್ಲರನ್ನೂ ದಂಗುಬಡಿಸಿದ್ದವು. ಅದೂ ದೇಶದ ಪ್ರಧಾನಿಯೊಬ್ಬರನ್ನು ಅವಾಚ್ಯ ಶಬ್ದಗಳಿಂದ ನಿಂದಿಸುವುದು ಎಂದರೆ ಎಂಥ ವ್ಯಕ್ತಿತ್ವ ಇರಬಹುದು ಎನ್ನುವುದನ್ನು ಊಹಿಸಿಕೊಳ್ಳಬಹುದು. ಸಾಮಾನ್ಯವಾಗಿ ರಾಜಕೀಯದಲ್ಲಿ ಆರೋಪ, ಪ್ರತ್ಯಾರೋಪ ಸಹಜ. ಆದರೆ ಈ ಬಾಲಕಿ, ಪ್ರಧಾನಿ ನರೇಂದ್ರ ಮೋದಿ, ಅವರ ತಾಯಿಯನ್ನೂ ಕೆಟ್ಟದ್ದಾಗಿ ಬೈದಿದ್ದಳು. ಇದು ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಯಿತು. ಟ್ರೋಲ್​ ಆದ ಬಳಿಕ, ವಿಡಿಯೋ ಮಾಡಿ ಕ್ಷಮೆ ಕೋರಿದಳು ರುಚಿಕಾ. ಆಕೆಯ ಅಮ್ಮ ಕೂಡ ವಿಡಿಯೋಮಾಡಿ, ಪ್ರತಿಭಟನಾಕಾರರು ನನ್ನಮಗಳ ಬ್ರೈನ್​ವಾಷ್​ ಮಾಡಿದ್ದರು. ಅದಕ್ಕೆ ಏನೂ ಅರಿಯದೇ ಹಾಗೆ ಮಾಡಿದ್ದಾಳೆ, ಕ್ಷಮಿಸಿ ಎಂದು ಹೇಳಿದರು. ಅಷ್ಟಕ್ಕೂ ಮೋದಿಗೆ ಬೈದವಳೇ ಬೇರೆ, ಕ್ಷಮೆ ಕೋರುತ್ತಿರುವವಳೇ ಬೇರೆ ಎನ್ನುವ ಮಾತುಗಳು ಕೂಡ ಕೇಳಿ ಬಂದಿತ್ತು. ಇದಕ್ಕೆ ಕಾರಣ, ಇಬ್ಬರ ನಡುವೆ ಇರುವ ವ್ಯತ್ಯಾಸ. ಕ್ಷಮೆ ಕೋರಿದಾಗ ಚಿಕ್ಕ ಬಾಲಕಿಯ ಹಾಗೆ ಇದ್ದರೆ, ಈಗ ಮಾತನಾಡ್ತಿರೋಳು ಯುವತಿಯ ಹಾಗೆ ಇದ್ದಾಳೆ. ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ನಾಟಕವಾಡುತ್ತಿದ್ದಾರೆ ಎಂದೇ ಹೇಳಲಾಗಿತ್ತು.

ಮತ್ತೆ ಪ್ರಧಾನಿ ವಿರುದ್ಧ ಕಿಡಿ

ಈ ವಿಷಯದ ಬಗ್ಗೆ ಪರೋಕ್ಷವಾಗಿ ಮಾತನಾಡಿದ್ದ ಪ್ರಧಾನಿ, ಮಕ್ಕಳಲ್ವಾ, ಇರಲಿ ಎಲ್ಲರನ್ನೂ ಕ್ಷಮಿಸಿದ್ದೇನೆ ಎಂದಿದ್ದರು. ಅಲ್ಲಿಗೆ ವಿಷಯ ತಣ್ಣಗಾಯಿತು. ವಿಷಯ ತಣ್ಣಗಾಗುತ್ತಿದ್ದಂತೆಯೇ ಮತ್ತೆ ಚಿಗುರಿಕೊಂಡಿದ್ದಾಳೆ ಬಾಲಕಿ. ಮತ್ತೊಂದು ವಿಡಿಯೋ ಮಾಡಿರುವ ಈಕೆ, ಪ್ರಧಾನಿಗೆ ಮತ್ತೆ ಬೈದಿದ್ದಾಳೆ. ನೀವು ನನ್ನ ಜೀವನವನ್ನು ನರಕ ಮಾಡಿದ್ದೀರಿ. ಎಲ್ಲಿಯೂ ನಾನು ಹೋಗುವ ಹಾಗೆ ಇಲ್ಲ. ನನ್ನಂಥ ಚಿಕ್ಕವಳಿಗೆ ಸಿಕ್ಕಾಪಟ್ಟೆ ಟಾರ್ಚರ್ ಕೊಡುತ್ತಿದ್ದೀರಿ. ಈಗ ನನ್ನ ಬಳಿ ಕಳೆದುಕೊಳ್ಳಲು ಏನೂ ಇಲ್ಲ. ನನಗೆ ಸ್ವಾತಂತ್ರ್ಯ ಇಲ್ಲವಾಗಿದೆ. ಮುಖ ಮುಚ್ಚಿಕೊಂಡು ಇರಬೇಕಾದ ಸ್ಥಿತಿ ಬಂದಿದೆ. ಎಲ್ಲವೂ ನಿಮ್ಮಿಂದ ಎಂದಿದ್ದಾಳೆ ಬಾಲಕಿ!

ಬಾಲಕಿಗೆ ತಿರುಗೇಟು

ಇದಕ್ಕೆ ಸಿಕ್ಕಾಪಟ್ಟೆ ಕಮೆಂಟ್ಸ್​ ಬಂದಿದ್ದು, ಇಂಥವರನ್ನು ಸುಮ್ಮನೇ ಬಿಡುತ್ತಿರುವುದೇ ದೊಡ್ಡ ತಪ್ಪು ಎನ್ನುತ್ತಿದ್ದಾರೆ. ಈ ಬಾಲಕಿ ವಿನಾಕಾರಣ, ಕಾಂಟ್ರವರ್ಸಿ ಕ್ರಿಯೇಟ್​ ಮಾಡುತ್ತಿದ್ದಾಳೆ. ತನ್ನ ಹೆಸರು ಸೈಡ್​ಲೈನ್​ ಆಗಿರುವುದಕ್ಕೆ ಮತ್ತೆ ಸುದ್ದಿಯಲ್ಲಿ ಇರಲು ಬಯಸುತ್ತಿದ್ದಾಳೆ ಎಂದಿರುವ ನೆಟ್ಟಿಗರು, ಈಗ ಅಮ್ಮ ಎಲ್ಲಿ ಎಂದು ಪ್ರಶ್ನಿಸುತ್ತಿದ್ದಾರೆ. ಅವರೆಲ್ಲಾ ನನ್ನ ಮಗಳ ಬ್ರೈನ್​ವಾಷ್​ ಮಾಡಿದ್ದರು ಎಂದಿದ್ದ ಅಮ್ಮ, ಪತ್ತೆನೇ ಇಲ್ವಲ್ಲಾ ಎಂದು ಪ್ರಶ್ನಿಸುತ್ತಿದ್ದಾರೆ. ಇದರ ಹಿಂದಿರುವ ಉದ್ದೇಶ ಏನು? ಬಾಲಕಿ ಎನ್ನುವ ಈಕೆಯ ಹಿಂದೆ ಇರುವವರು ಯಾರು ಎನ್ನುವ ಪ್ರಶ್ನೆಗಳೆಲ್ಲಾ ಮತ್ತೆ ಕೇಳಿಬರುತ್ತಿದೆ. ಮುಖ ಮುಚ್ಚಿಕೊಂಡು ಹೋಗಬೇಕಾದ ಸ್ಥಿತಿಗೆ ಮೋದಿ ಕಾರಣವಲ್ಲ, ಅವೆಲ್ಲಾ ನೀನೇ ಮಾಡಿಕೊಂಡಿರುವುದು ಎಂದು ಹಲವರು ಹೇಳುತ್ತಿದ್ದಾರೆ.