2008ರ ಮುಂಬೈ ದಾಳಿಯ ಉಗ್ರ ಅಜ್ಮಲ್ ಕಸಬ್‌ನನ್ನು 2012ರಲ್ಲಿ ಗಲ್ಲಿಗೇರಿಸಲಾಯಿತು. ಗಲ್ಲುಶಿಕ್ಷೆಗೂ ಮುನ್ನ ಆತ ತನ್ನ ಕೊನೆಯ ಆಸೆಯಾಗಿ ಟೊಮ್ಯಾಟೋ ತಿನ್ನಲು ಕೇಳಿದ್ದ. ಆದರೆ ಆತ ಟೊಮ್ಯಾಟೋವನ್ನೇ ಏಕೆ ಕೇಳಿದ ಎಂಬ ರಹಸ್ಯ ಮಾತ್ರ ಅವನ ಸಾವಿನೊಂದಿಗೆ ನಿಗೂಢವಾಗಿಯೇ ಉಳಿದಿದೆ.

166ಕ್ಕೂ ಅಧಿಕ ಜನರ ಸಾವಿಗೆ, 300ಕ್ಕೂ ಅಧಿಕ ಜನರ ಭೀಕರ ನೋವಿಗೆ ಕಾರಣವಾದ ಭಯಾನಕ ಘಟನೆ 2008ರ ನವೆಂಬರ್​ 26ರಂದು ನಡೆದಿದ್ದ ಮುಂಬೈ ಭಯೋತ್ಪಾದನಾ ದಾಳಿ. 26/11 ಎಂದೇ ಇತಿಹಾಸದ ಪುಟಗಳಲ್ಲಿ ದಾಖಲಾದ ಈ ದಾಳಿ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಮುಂಬೈ ದಾಳಿಗೆ ಬಂದಿದ್ದ 10 ಉಗ್ರರ ಪೈಕಿ ಜೀವಂತವಾಗಿ ಸೆರೆ ಸಿಕ್ಕವ ಅಮೀರ್ ಅಜ್ಮಲ್ ಕಸಬ್. 2012ರಲ್ಲಿ ಅವನನ್ನು ಗಲ್ಲಿಗೇರಿಸಲಾಗಿತ್ತು. 2008ರಿಂದ 2012ರವರೆಗೆ ಹಲವು ಕೋರ್ಟ್​ಗಳನ್ನು ಅಲೆದು ಕೊನೆಗೆ ಸುಪ್ರೀಂಕೋರ್ಟ್​ನಲ್ಲಿ ಅವನಿಗೆ ಗಲ್ಲುಶಿಕ್ಷೆ ಕಾಯಂ ಆಗಿತ್ತು. ಆಗಸ್ಟ್ 29, 2012ರಲ್ಲಿ ಸುಪ್ರೀಂಕೋರ್ಟ್​ ಅಂತಿಮವಾಗಿ ಮರಣದಂಡನೆ ವಿಧಿಸಿತ್ತು. ಇನ್ನೊಂದು ವಾರದಲ್ಲಿ, ಈ ಗಲ್ಲುಶಿಕ್ಷೆ ವಿಧಿಸಿ, 14 ವರ್ಷ ಆಗಲಿದೆ.

ನವೆಂಬರ್ 21, 2012 ರಂದು ಪುಣೆಯ ಯೆರವಾಡಾ ಕೇಂದ್ರ ಕಾರಾಗೃಹದಲ್ಲಿ ಬೆಳಿಗ್ಗೆ 7.30ಕ್ಕೆ ಗಲ್ಲಿಗೇರಿಸಲಾಯಿತು. ಅವನನ್ನು ಗಲ್ಲಿಗೇರಿಸುವ ಮೊದಲು, ಅವನು ಬೆಳಿಗ್ಗೆ ಪ್ರಾರ್ಥನೆ ಸಲ್ಲಿಸಿದನು. ಗಲ್ಲುಶಿಕ್ಷೆಗೆ ಒಳಗಾದವರು ಎಷ್ಟೇ ಕ್ರೂರರಾಗಿದ್ದರೂ, ಅವರಿಗೆ ಭಾರದ ಕಾನೂನಿನ ಪ್ರಕಾರ ಅಂತಿಮ ಆಸೆಯನ್ನು ಕೇಳಲಾಗುತ್ತದೆ. ಅದರಂತೆಯೇ ಕಸಬ್​ಗೂ ಅಂತಿಮ ಆಸೆ ಕೇಳಿದಾಗ, ಅವನು ಹೇಳಿದ್ದು, ಟೊಮ್ಯಾಟೋ ತಿನ್ನುವ ಆಸೆ! ಬಹುಶಃ ಇತಿಹಾಸದ ಯಾವುದೇ ಕೈದಿಯೂ ಕೇಳದ ಆಸೆಯನ್ನು ಆತ ಕೇಳಿದ್ದ. ಅದರಂತೆಯೇ ಪೊಲೀಸರು ಒಂದು ಬಟ್ಟಲು ಟೊಮ್ಯಾಟೋ ಹಣ್ಣನ್ನು ತಂದು ಅವನ ಕೈಗೆ ಇತ್ತಿದ್ದರು. ಆದರೆ ಕಸಬ್​ ಅದರಲ್ಲಿ ಎರಡೇ ಎರಡು ಟೊಮ್ಯಾಟೋ ಹಣ್ಣನ್ನು ತಿಂದು, ಮಿಕ್ಕಿದ್ದನ್ನು ವಾಪಸ್​ ನೀಡಿದ್ದ.

ಮಣ್ಣಾಗಿ ಹೋದ ಆ ರಹಸ್ಯ

ಕಸಬ್​ ಸತ್ತು, 14 ವರ್ಷವಾದರೂ, ಆ ಟೊಮ್ಯಾಟೋ ರಹಸ್ಯ ಮಾತ್ರ ಅವನ ಜೊತೆಗೇ ಮಣ್ಣಾಗಿ ಹೋಗಿದೆ. ಕೈದಿಗಳ ಅಂತಿಮ ಇಚ್ಛೆಯನ್ನು ಕೇಳಲಾಗುತ್ತದೆಯೇ ವಿನಾ ಅದು ಯಾಕೆ, ಏನು ಎಂದು ಕೇಳಲಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಉಗ್ರ ಕಸಬ್​ ಅಂತಿಮ ಇಚ್ಛೆಯಾಗಿ ಟೊಮ್ಯಾಟೋ ಕೇಳಿದಾಗ, ಅದಕ್ಕೆ ಕಾರಣವನ್ನು ಪೊಲೀಸರು ಪ್ರಶ್ನಿಸಿರಲಿಲ್ಲ. ಆದರೆ ಇಂದಿಗೂ ಆ ಟೊಮ್ಯಾಟೋ ರಹಸ್ಯ ಮಾತ್ರ ರಹಸ್ಯವಾಗಿಯೇ ಉಳಿದಿದೆ. ಇದಕ್ಕೆ ಕಾರಣ ಏನಿರಬಹುದು ಎಂದು ಹಲವರು ತಮ್ಮದೇ ಆದ ರೀತಿಯಲ್ಲಿ ವಿಶ್ಲೇಷಿಸುತ್ತಿದ್ದರೂ, ನಿಜವಾದ ಕಾರಣ ಮಾತ್ರ ಕಸಬ್​ ಜೊತೆ ಮಣ್ಣಾಗಿದೆ.

ಗಲ್ಲು ಶಿಕ್ಷೆ ದಿನ ಏನಾಗಿತ್ತು?

ಇನ್ನು ಅವನ ಗಲ್ಲುಶಿಕ್ಷೆಯ ದಿನ ಏನಾಗಿತ್ತು ಎನ್ನುವುದು ಕೂಡ ಆ ವೇಳೆ ಸಾಕಷ್ಟು ಸುದ್ದಿಯಾಗಿತ್ತು. ಮುಂಬೈನ ಆರ್ಥರ್ ರೋಡ್ ಜೈಲಿನಿಂದ ಪುಣೆಯ ಯರವಾಡ ಜೈಲಿಗೆ ಕಸಬ್ ನನ್ನು ಸಾಗಿಸಲು 3 ಗಂಟೆ ಬೇಕಾಯಿತು. ಈ ಸ್ಥಳಾಂತರದ ಸಮಯದಲ್ಲಿ, ಕಸಬ್ ತುಂಬಾ ಭಯಭೀತನಾಗಿದ್ದನು, ಅವನ ಬಾಯಿಂದ ಒಂದು ಪದವೂ ಹೊರಡಲಿಲ್ಲ ಎನ್ನಲಾಗಿದೆ. ಪುಣೆ ಜೈಲಿಗೆ ಸ್ಥಳಾಂತರಗೊಂಡ ನಂತರ, ಮರಣದಂಡನೆಗೆ ಒಂದು ದಿನ ಮೊದಲು, ಕಸಬ್ ಬಳಿ ಕೊನೆಯ ಆಸೆಯನ್ನು ಕೇಳಿದಾಗ, ಆಗ ಆತ ಏನನ್ನೂ ಹೇಳಲಿಲ್ಲ. ಕೊನೆಗೆ ಟೊಮ್ಯಾಟೋ ಆಸೆ ವ್ಯಕ್ತಪಡಿಸಿದ್ದ. ಜೊತೆಗೆ, ಗಲ್ಲು ಶಿಕ್ಷೆ ಹೆಸರು ಕೇಳಿ ಇಡೀ ರಾತ್ರಿ ನಿದ್ದೆ ಬಂದಿರಲಿಲ್ಲ ಎಂದು ಅಧಿಕಾರಿಗಳು ಹೇಳಿದ್ದರು. ಕಸಬ್ ಗಲ್ಲಿಗೇರಿದ ದಿನ ಬೆಳಗ್ಗೆ ಸ್ನಾನ ಮಾಡಲಾಗಿತ್ತು. ನೇಣಿಗೆ ಶರಣಾಗುವ ಹಿಂದಿನ ರಾತ್ರಿ ಕಸಬ್‌ಗೆ ನಿದ್ದೆಯೇ ಬಂದಿರಲಿಲ್ಲ. ಕಣ್ಮಿಚ್ಚಿ ತೆರೆಯುವಷ್ಟರಲ್ಲಿ ರಾತ್ರಿ ಕಳೆದು ಹೋಗಿತ್ತು. ಆತ ನವೆಂಬರ್ 21 ರಂದು ಅಂದರೆ ಗಲ್ಲಿಗೇರಿಸುವ ಬೆಳಿಗ್ಗೆ ನಮಾಜ್ ಮಾಡಿದ್ದ ಎನ್ನಲಾಗಿದೆ.