Health Tips: ಮಾರುಕಟ್ಟೆಯಲ್ಲಿ ಮಾರಾಟವಾಗುವ ಪ್ರಮಾಣೀಕರಿಸದ ಸೊಳ್ಳೆ ನಿವಾರಕ ಅಗರಬತ್ತಿಗಳು ಆರೋಗ್ಯಕ್ಕೆ ಅತ್ಯಂತ ಅಪಾಯಕಾರಿಯಾಗಬಲ್ಲವು ಎಂಬ ವಿಷಯವನ್ನು ಸ್ವತಃ ವೈದ್ಯರೇ ಎತ್ತಿ ಹೇಳಿದ್ದಾರೆ. ಇವುಗಳಲ್ಲಿ ಹಾನಿಕಾರಕ ರಾಸಾಯನಿಕಗಳಿರುವುದರಿಂದ, ಅಂತಹ ಅಗರಬತ್ತಿಗಳನ್ನು ಬಳಕೆ ಮಾಡುವ ಮುನ್ನ ಎಚ್ಚರ ವಹಿಸೋದು ಮುಖ್ಯ.
ಸೊಳ್ಳೆಗಳನ್ನು ಓಡಿಸಲು ಅಗರಬತ್ತಿ ಬಳಸುತ್ತಿದ್ದೀರಾ?
ಇತ್ತೀಚಿನ ದಿನಗಳಲ್ಲಿ ಸೊಳ್ಳೆಗಳ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದ್ದು ಸೊಳ್ಳೆಯ ಕಾಟದಿಂದ ತಮ್ಮ, ರಕ್ಷಣೆಗಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಸೊಳ್ಳೆ ನಿವಾರಕ ಧೂಪದ ಕಡ್ಡಿಗಳನ್ನು (incense sticks) ಹಲವರು ಬಳಸುತ್ತಾರೆ. ಇದರಿಂದ ಸೊಳ್ಳೆಗಳು ಬೇಗನೆ ಓಡಿ ಹೋಗುತ್ತವೆ ಅನ್ನೋದೇನೋ ನಿಜ. ನೀವು ಈ ಅಗರಬತ್ತಿಗಳನ್ನು ಬಳಸುತ್ತಿದ್ದರೆ, ಒಮ್ಮೆ ನಿಂತು ಮರುಪರಿಶೀಲಿಸುವುದು ಅಗತ್ಯ. ಯಾಕಂದ್ರೆ ಇವು ನಿಮ್ಮ ಆರೋಗ್ಯ ಅಥವಾ ಜೀವಕ್ಕೆ ಗಂಭೀರ ಅಪಾಯವನ್ನು ಉಂಟುಮಾಡಬಲ್ಲವು ಎಂಬ ಕಾರಣಕ್ಕೆ, ಇಂತಹ ಉತ್ಪನ್ನಗಳನ್ನು ಖರೀದಿಸುವ ಮುನ್ನ ಅವುಗಳ ಗುಣಮಟ್ಟ ಮತ್ತು ಅಧಿಕೃತತೆಯನ್ನು ಖಚಿತಪಡಿಸಿಕೊಳ್ಳುವುದು ಅತ್ಯಗತ್ಯ.
ಅಗರಬತ್ತಿಗಳು ಶ್ವಾಸಕೋಶದ ಆರೋಗ್ಯಕ್ಕೆ ಹಾನಿಕಾರಕ
ವಿವಿಧ ಹಾನಿಕಾರಕ ರಾಸಾಯನಿಕಗಳ ಉಪಸ್ಥಿತಿಯಿಂದಾಗಿ ಆರೋಗ್ಯಕ್ಕೆ ಅತ್ಯಂತ ಹಾನಿಕಾರಕವಾದ ನಕಲಿ ಅಗರಬತ್ತಿಗಳು ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿವೆ ಎಂಬ ವರದಿಗಳು ಬಂದಿವೆ. ಹಾನಿಕಾರಕ ಕೆಮಿಕಲ್ ಗಳಿಂದಾಗಿ ಇಂತಹ ಅಗರಬತ್ತಿಗಳು ಸೊಳ್ಳೆಯನೇನೋ ಓಡಿಸುತ್ತವೆ. ಆದರೆ ಅದರ ಜೊತೆಗೆ ನಿಮ್ಮ ಶ್ವಾಸಕೋಶಕ್ಕೆ ತೊಂದರೆಯನ್ನುಂಟು ಮಾಡುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು, ದೇಶದ ಹಲವೆಡೆ ಅಂಗಡಿದಾರರಲ್ಲಿ ಜಾಗೃತಿ ಮೂಡಿಸಲು ಮತ್ತು ಅವರಿಗೆ ಎಚ್ಚರಿಕೆ ನೀಡಲು ನಿರಂತರವಾಗಿ ವಿಶೇಷ ಅಭಿಯಾನಗಳನ್ನು ನಡೆಸಲಾಗುತ್ತಿದೆ. ಇಂತಹ ಅಗರಬತ್ತಿಗಳನ್ನು ಹೊಂದಿರುವವರ ವಿರುದ್ಧ ನಿಯಮಗಳ ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ಹಾಗಾಗಿ ನೀವು ಅಗರಬತ್ತಿ ಖರೀದಿಸುವ ಮುನ್ನ ಎಚ್ಚರ ವಹಿಸುವುದು ಮುಖ್ಯ.
ಈ ಅಂಶಗಳ ಬಗ್ಗೆ ವಿಶೇಷ ಗಮನಹರಿಸಿ
ನೀವು ಮನೆಯಲ್ಲಿ ಧೂಪದ ಕಡ್ಡಿಗಳನ್ನು (incense sticks) ಬಳಸುವುದಾದರೆ, ಅವು ಮಾನ್ಯತೆ ಪಡೆದ ಸಂಸ್ಥೆಯಿಂದ ಪ್ರಮಾಣೀಕೃತವಾಗಿರುವುದನ್ನು ಖಚಿತಪಡಿಸಿಕೊಳ್ಳಿ. ಆಗಾಗ್ಗೆ ನಾವು ಆರೋಗ್ಯಕ್ಕೆ ಹಾನಿಕಾರಕವಾಗಬಲ್ಲ ಧೂಪದ ಕಡ್ಡಿಗಳನ್ನು ಖರೀದಿಸುವ ಸಾಧ್ಯತೆಯಿರುತ್ತದೆ. ಅಲ್ಲದೆ, ಯಾವುದೇ ನಿರ್ದಿಷ್ಟ ಧೂಪದ ಕಡ್ಡಿಯಿಂದ ನಿಮಗೆ ಉಸಿರಾಟದ ತೊಂದರೆ ಉಂಟಾದರೆ, ಅದನ್ನು ಬಳಸಬೇಡಿ. ಅಗರಬತ್ತಿಯಿಂದ ಉಸಿರಾಟದ ಸಮಸ್ಯೆಗಳು ಉಂಟಾದಲ್ಲಿ, ಅದು ಈಗಾಗಲೇ ಇರುವ ಆರೋಗ್ಯ ಸಮಸ್ಯೆಗಳನ್ನು ಇನ್ನಷ್ಟು ಉಲ್ಬಣಗೊಳಿಸಬಹುದು ಎಂದು ತಜ್ಞರು ಎಚ್ಚರಿಸುತ್ತಾರೆ.


