ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಪ್ರಜ್ವಲ್ ರೇವಣ್ಣ ಸೆಲ್‌ನಲ್ಲಿ ಸಿಕ್ಕ ಮೊಬೈಲ್ ಮತ್ತು ಪೆನ್‌ಡ್ರೈವ್‌ನಲ್ಲಿ 173 ಫೈಲ್‌ಗಳಿರುವುದನ್ನು ಎಫ್‌ಎಸ್‌ಎಲ್ ವರದಿ ದೃಢಪಡಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಜೈಲಿನ ವಾರ್ಡನ್ ಮತ್ತು ಗಲಭೆ ಆರೋಪಿ ಸೇರಿದಂತೆ ಪ್ರಜ್ವಲ್ ಜೊತೆ ಒಟ್ಟು 7 ಜನರನ್ನು ಬಂಧಿಸಲಾಗಿದೆ. ತನಿಖೆಯಲ್ಲಿ ಆಂಧ್ರಪ್ರದೇಶದ ಸಿಮ್ ಬಳಕೆಯಾಗಿರುವುದು ಸಹ ಬಯಲಾಗಿದೆ.
ವರದಿ- ಗಿರೀಶ್ ಮಾದೇನಹಳ್ಳಿ
ಬೆಂಗಳೂರು (ಸೆ.11): ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಸೆಲ್‌ನಲ್ಲಿ ಸಿಕ್ಕ ಮೊಬೈಲ್ ಮತ್ತು ಪೆನ್‌ಡ್ರೈವ್‌ನಲ್ಲಿ ಸುಮಾರು 173 ಫೈಲ್‌ಗಳಿದ್ದವು. ಅದರಲ್ಲಿ ಸಿನಿಮಾ, ವೆಬ್‌ಸೀರೀಸ್ ಹಾಗೂ ‘ಇತರೆ’ ವಿಡಿಯೋಗಳು ಇದ್ದವು ಎಂದು ವಿಧಿ ವಿಜ್ಞಾನ ಪ್ರಯೋಗಾಲಯದ (ಎಫ್ಎಸ್‌ಎಲ್) ವರದಿಯಲ್ಲಿ ದೃಢಪಟ್ಟಿರುವುದಾಗಿ ತಿಳಿದು ಬಂದಿದೆ.
ಈ ನಡುವೆ, ಪ್ರಜ್ವಲ್ ಬಳಸುತ್ತಿದ್ದ ಮೊಬೈಲ್‌ನ ಸಿಮ್ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಪುಂಗನೂರಿನಲ್ಲಿ ಖರೀದಿಸಲಾಗಿದ್ದ ಸಿಮ್. ಅದನ್ನು ಕೊಟ್ಟಿದ್ದು ಬೆಂಗಳೂರಿನ ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಗಲಭೆ ಪ್ರಕರಣದ ಆರೋಪಿ. ಮೊಬೈಲ್ ನೀಡಿದ್ದು ಕೊಲೆ ಆರೋಪಿ. ಇದಕ್ಕೆಲ್ಲಾ ಸಾಥ್ ಕೊಟ್ಟಿದ್ದು ಜೈಲಿನ ವಾರ್ಡನ್ ಎಂಬುದು ತನಿಖೆಯಲ್ಲಿ ದೃಢಪಟ್ಟಿದೆ. ಇದರ ಬೆನ್ನಲ್ಲೇ ಪ್ರಜ್ವಲ್, ಜೈಲಿನ ವಾರ್ಡನ್ ಸೇರಿ 7 ಮಂದಿಯನ್ನು ಬಂಧಿಸಲಾಗಿದೆ.
ಮೊಬೈಲ್‌ನಲ್ಲಿದ್ದ ವಿಡಿಯೋಗಳ ಪೈಕಿ ಹಿಂದಿ, ಕನ್ನಡ ಹಾಗೂ ಇಂಗ್ಲಿಷ್ ಸೇರಿ ಇತರೆ ಭಾಷೆಗಳ ಚಲನಚಿತ್ರಗಳು ಹಾಗೂ ವೆಬ್ ಸಿರೀಸ್‌ಗಳು ಸೇರಿ ‘ಇತರೆ’ ವಿಡಿಯೋಗಳಿವೆ ಎಂದು ಎಫ್‌ಎಸ್‌ಎಲ್ ಖಚಿತಪಡಿಸಿರುವುದಾಗಿ ವಿಶ್ವಸನೀಯ ಮೂಲಗಳು ‘ಕನ್ನಡಪ್ರಭ’ಕ್ಕೆ ಖಚಿತಪಡಿಸಿವೆ. ಆದರೆ ಎಫ್‌ಎಸ್‌ಎಲ್ ತಜ್ಞರ ವರದಿ ಸಂಬಂಧ ಅಧಿಕೃತವಾಗಿ ಪ್ರತಿಕ್ರಿಯಿಸಲು ಹಿರಿಯ ಅಧಿಕಾರಿಗಳು ನಿರಾಕರಿಸಿದ್ದಾರೆ. ಈ ವರದಿ ಬೆನ್ನಲ್ಲೇ ಕಾರಾಗೃಹದಲ್ಲಿ ಕಾನೂನುಬಾಹಿರವಾಗಿ ಮೊಬೈಲ್ ಬಳಕೆ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಅವರಿಗೆ ಮತ್ತಷ್ಟು ಸಂಕಷ್ಟ ಎದುರಾಗಿದ್ದು, ಅವರ ಮೇಲಿನ ಆಪಾದನೆಗೆ ಎಫ್‌ಎಸ್‌ಎಲ್ ವರದಿ ಪ್ರಬಲ ವೈಜ್ಞಾನಿಕ ಸಾಕ್ಷ್ಯವಾಗಲಿದೆ.
ಮೊಬೈಲ್‌ನಲ್ಲಿ ಫೈಲ್‌ಗಳಿಗೆ ಸೀಕ್ರೆಟ್ ಪಾಸ್‌ವರ್ಡ್ ಬಳಸಲಾಗಿದೆ. ತಂತ್ರಜ್ಞಾನ ಬಳಸಿಕೊಂಡು ಆ ಫೈಲ್‌ಗಳನ್ನು ತೆರೆದು ಪರಿಶೀಲಿಸಲಾಗಿದೆ. ಇನ್ನು ಮೊಬೈಲ್ ಹಾಗೂ ಪೆನ್‌ಡ್ರೈವ್ ಬಳಕೆಯಲ್ಲಿದ್ದವು. ಅವುಗಳು ನಿಷ್ಕ್ರಿಯಗೊಂಡಿರಲಿಲ್ಲ ಎಂದು ಎಫ್ಎಸ್‌ಎಲ್ ಹೇಳಿದೆ ಎನ್ನಲಾಗಿದೆ.
ಪ್ರಜ್ವಲ್ ಸೇರಿ 7 ಜನ ಅರೆಸ್ಟ್:
ಜೈಲಿನಲ್ಲಿ ಮೊಬೈಲ್ ಬಳಕೆ ಸಂಬಂಧ ಪ್ರಜ್ವಲ್ ರೇವಣ್ಣ, ಅವರ ಸೆಲ್‌ನ ಸಹಕೈದಿ ಪಶ್ಚಿಮ ಬಂಗಾಳ ಮೂಲದ ಪ್ರತಾಪ್ ರಾಯ್, ಡಿ.ಜೆ.ಹಳ್ಳಿಯ ತೌಸಿಫ್, ಸಿದ್ದಿಕಿ, ಬಾಣಸವಾಡಿಯ ಮಂಜುನಾಥ್, ನವೀನ್ ಹಾಗೂ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ವಾರ್ಡನ್ ಪ್ರಕಾಶ್ ಗಾವ್ಡೇ ಅವರನ್ನು ಬಂಧಿಸಲಾಗಿದೆ. ಹಣದಾಸೆಗೆ ಪ್ರಜ್ವಲ್ ಅವರಿಗೆ ಮೊಬೈಲ್ ಹಾಗೂ ಸಿಮ್ ಅನ್ನು ಕಾರಾಗೃಹದ ಸಿಬ್ಬಂದಿ ಸೇರಿ ಇತರರು ಪೂರೈಕೆ ಮಾಡಿದ್ದರು ಎಂದು ತಿಳಿದು ಬಂದಿದೆ.
ಡಿ.ಜೆ.ಹಳ್ಳಿ-ಕೆಜಿ ಹಳ್ಳಿ ಗಲಭೆಕೋರನ ಸಿಮ್:
2024ರಲ್ಲಿ ಹಾಸನ ಜಿಲ್ಲೆಯ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧಿತರಾಗಿ ಪ್ರಜ್ವಲ್ ರೇವಣ್ಣ ಜೈಲು ಸೇರಿದ್ದರು. ಅದೇ ವೇಳೆ ರೌಡಿ ಕಾರ್ತಿಕ್ ಕೊಲೆ ಪ್ರಕರಣದಲ್ಲಿ ಬಾಣಸವಾಡಿಯ ಮಂಜುನಾಥ್ ಹಾಗೂ ಡಿ.ಜೆ.ಹಳ್ಳಿ-ಕೆ.ಜಿ.ಹಳ್ಳಿ ಗಲಭೆ ಪ್ರಕರಣದಲ್ಲಿ ತೌಸಿಫ್ ಬಂಧಿತರಾಗಿ ಜೈಲಿನಲ್ಲಿದ್ದರು.
ಕೆಲ ದಿನಗಳಲ್ಲಿ ಪ್ರಜ್ವಲ್ ಅವರಿಗೆ ಮಂಜುನಾಥ್ ಹಾಗೂ ತೌಸಿಫ್ ಪರಿಚಯವಾಗಿದೆ. ಇದೇ ವೇಳೆ ಅನಾರೋಗ್ಯದ ಕಾರಣಕ್ಕೆ ತೌಸಿಫ್‌ನನ್ನು ಜಯನಗರ ಸಾರ್ವಜನಿಕ ಆಸ್ಪತ್ರೆಗೆ ಕಾರಾಗೃಹ ಸಿಬ್ಬಂದಿ ದಾಖಲಿಸಿದ್ದರು. ಆಸ್ಪತ್ರೆಯಲ್ಲಿದ್ದಾಗ ಆತನಿಗೆ ಗೆಳೆಯ ಸಿದ್ದಿಕಿ ಸಿಮ್ ಕೊಟ್ಟಿದ್ದ. ಇತ್ತ ಮಂಜುನಾಥ್‌ಗೆ ಕಾರಾಗೃಹ ವಾರ್ಡನ್ ಪ್ರಕಾಶ್ ಮೂಲಕ ಆತನ ಸ್ನೇಹಿತ ನವೀನ್ ಮೊಬೈಲ್ ಕಳುಹಿಸಿದ್ದ. ಈ ಮೊಬೈಲ್ ಇತರೆ ಕೈದಿಗಳ ಬಳಿ ಸುತ್ತಾಡಿ ಕೊನೆಗೆ ಪ್ರಜ್ವಲ್ ಕೈ ಸೇರಿತು. ಅದೇ ಹೊತ್ತಿಗೆ ತೌಸಿಫ್ ಮೂಲಕ ಪ್ರಜ್ವಲ್ ಅವರಿಗೆ ಸಿಮ್ ಸಿಕ್ಕಿತು. ತರುವಾಯ ಕಾನೂನುಬಾಹಿರವಾಗಿ ತಮ್ಮ ಸೆಲ್‌ನಲ್ಲಿ ಮೊಬೈಲ್ ಹಾಗೂ ಸಿಮ್ ಬಳಸಿ ಪ್ರಜ್ವಲ್ ಮಾತನಾಡಿದ್ದಾರೆ ಎಂದು ಮೂಲಗಳು ಹೇಳಿವೆ.
ಸೆರೆಯಾಗಿದ್ದು ಹೇಗೆ?
ಇಎಂಇಐ ಹಾಗೂ ಸಿಮ್ ಮೂಲಕ ಪ್ರಜ್ವಲ್ ಅವರಿಗೆ ಕೈ ಸೇರಿದ ಮೊಬೈಲ್ ಎಲ್ಲಿಂದ ಬಂತು ಎಂಬುದನ್ನು ಪತ್ತೆಹಚ್ಚುವಲ್ಲಿ ಪೊಲೀಸರು ಯಶಸ್ಸು ಕಂಡಿದ್ದಾರೆ. ತಾಂತ್ರಿಕ ಮಾಹಿತಿ ಆಧರಿಸಿ ಕಾರಾಗೃಹ ಸಿಬ್ಬಂದಿ ಪ್ರಕಾಶ್ ಸೇರಿ ಆರೋಪಿಗಳನ್ನು ಪೊಲೀಸರು ಬಂಧಿಸಿದರು. ಈ ಆರೋಪಿಗಳ ಮಾಹಿತಿ ಆಧರಿಸಿ ತನಿಖಾಧಿಕಾರಿ, ನ್ಯಾಯಾಲಯದ ಅನುಮತಿ ಪಡೆದು ಜೈಲಿನಲ್ಲಿದ್ದ ಪ್ರಜ್ವಲ್ ಹಾಗೂ ಪ್ರತಾಪ್ ರಾಯ್‌ನನ್ನು ವಶಕ್ಕೆ ಪಡೆದರು. ಬಳಿಕ ಈ ಪ್ರಕರಣದಲ್ಲೂ ಆ ಇಬ್ಬರನ್ನು ಬಂಧನ ಪ್ರಕ್ರಿಯೆಗೊಳಪಡಿಸಿ ಮರಳಿ ಜೈಲಿಗೆ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.
ಆಂಧ್ರಪ್ರದೇಶದ ಪುಂಗನೂರು:
ಪ್ರಜ್ವಲ್ ಸೆಲ್‌ನಲ್ಲಿ ಪತ್ತೆಯಾದ ಮೊಬೈಲ್‌ಗೆ ಆಂಧ್ರಪ್ರದೇಶ ರಾಜ್ಯದ ಚಿತ್ತೂರು ಜಿಲ್ಲೆಯ ಪುಂಗನೂರಿನಲ್ಲಿ ಖರೀದಿಸಿದ ಸಿಮ್ ಬಳಕೆಯಾಗಿದೆ. ಪುಂಗನೂರಿನಲ್ಲಿ ತನ್ನ ಸಂಬಂಧಿ ಮೂಲಕ ಸಿಮ್ ಅನ್ನು ಸಿದ್ದಿಕಿ ಖರೀದಿಸಿದ್ದ ಎನ್ನಲಾಗಿದೆ. ಇನ್ನು ಪ್ರಜ್ವಲ್ ರೇವಣ್ಣ ಸೆಲ್‌ನಲ್ಲಿ ಮೊಬೈಲ್ ಪತ್ತೆಯಾದ ದಿನವೇ ಆಂಧ್ರಪ್ರದೇಶದ ಟವರ್‌ನಲ್ಲಿ ಸಂಪರ್ಕ ಹೊಂದಿರುವ ಸಿಮ್ ಬಳಕೆಯಾಗಿರುವ ಬಗ್ಗೆ ಕಾರಾಗೃಹ ಇಲಾಖೆ ಮುಖ್ಯಸ್ಥರು ಹೇಳಿದ್ದರು. ಈಗ ತನಿಖೆಯಲ್ಲಿ ಸಹ ಆಂಧ್ರ ಸಿಮ್ ಬಳಕೆ ಖಚಿತವಾಗಿದೆ.
ತನಗೇನೂ ಗೊತ್ತಿಲ್ಲ-ಪ್ರಜ್ವಲ್:
ಇದೇ ಪ್ರಕರಣದ ವಿಚಾರಣೆ ವೇಳೆ ತನಗೇನು ಗೊತ್ತಿಲ್ಲ. ನಾನು ಮೊಬೈಲ್ ಅನ್ನು ಬಳಸಿಲ್ಲ ಎಂದು ಪೊಲೀಸರ ವಿಚಾರಣೆ ವೇಳೆ ಪ್ರಜ್ವಲ್ ಪುನರುಚ್ಚರಿಸಿದ್ದಾರೆ. ಎರಡು ದಿನಗಳ ವಿಚಾರಣೆ ವೇಳೆಗೆ ತನಿಖೆಗೆ ಅವರು ಅಸಹಕಾರ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ಜೈಲಿನಿಂದ ತಮ್ಮ ಕುಟುಂಬದವರು, ಸ್ನೇಹಿತರು ಹಾಗೂ ಹಾಸನದ ಕೆಲ ಜೆಡಿಎಸ್ ಮುಖಂಡರಿಗೆ ಪ್ರಜ್ವಲ್ ರೇವಣ್ಣ ಕರೆ ಮಾಡಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಈಗ ಪ್ರಜ್ವಲ್ ಸಂಪರ್ಕದಲ್ಲಿದ್ದವರಿಗೆ ತನಿಖೆ ಬಿಸಿ ತಟ್ಟುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.


