ರಾಜ್ಯದ ಐದು ಗ್ಯಾರಂಟಿಗಳಿಂದಲೇ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಅನ್ನಭಾಗ್ಯ ಯೋಜನೆ ಮಾತ್ರ ಸಿದ್ದರಾಮಯ್ಯನವರದ್ದು, ಉಳಿದ 4 ಗ್ಯಾರಂಟಿಗಳ ಸೃಷ್ಟಿಸಿದ್ದು ಯಾರು? ಎಂದು ಕೇಳುತ್ತಲೇ ಸಿಎಂ ಡಿ.ಕೆ. ಶಿವಕುಮಾರ್ ಸತ್ಯವನ್ನು ಬಾಯಿಬಿಟ್ಟರು. ತಾವು ಸಿಎಂ ಆದಾಗಿನಿಂದ ದಿನಕ್ಕೆ ಕನಿಷ್ಠ 6 ಗಂಟೆಯೂ ನಿದ್ದೆ ಮಾಡುತ್ತಿಲ್ಲ ಎಂದು ಹೇಳಿದರು.

ಬೆಂಗಳೂರು (ಸೆ.11): ರಾಜ್ಯದ 'ಪಂಚ ಗ್ಯಾರಂಟಿಗಳಲ್ಲಿ 10 ಕೆ.ಜಿ. ಅಕ್ಕಿ ನೀಡುವ 'ಅನ್ನಭಾಗ್ಯ' ಯೋಜನೆ ಮಾತ್ರ ಸಿದ್ದರಾಮಯ್ಯ ಅವರದ್ದು, ಉಳಿದೆಲ್ಲಾ ನಾಲ್ಕು ಯೋಜನೆಗಳೂ ನನ್ನ ಕಲ್ಪನೆಯಲ್ಲಿ ಮೂಡಿಬಂದವು' ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ನಗರದಲ್ಲಿ ಇತ್ತೀಚೆಗೆ ಪತ್ರಿಕಾ ಸಂಪಾದಕರೊಂದಿಗೆ ನಡೆಸಿದ ಸಂವಾದ ಕಾರ್ಯಕ್ರಮದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ‘ಪಂಚ ಗ್ಯಾರಂಟಿ’ ಯೋಜನೆಗಳ ಕುರಿತು ಮಾತನಾಡಿದ ಅವರು, ಪಕ್ಷದ ಸಂಘಟನೆ ಹಾಗೂ ಗ್ಯಾರಂಟಿ ಯೋಜನೆಗಳ ಹಿಂದಿನ ಶ್ರಮವನ್ನು ಹಂಚಿಕೊಂಡರು.

'ನಾನು ಕೆಪಿಸಿಸಿ ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿಯೇ ಈ ಪಂಚ ಗ್ಯಾರಂಟಿ ಯೋಜನೆಗಳ ನೀಲನಕ್ಷೆ ಸಿದ್ಧವಾಯಿತು. ಅದರಲ್ಲಿ 10 ಕೆ.ಜಿ. ಅಕ್ಕಿ ಕೊಡುವ ಅನ್ನಭಾಗ್ಯ ಯೋಜನೆ ಸಿದ್ದರಾಮಯ್ಯ ಅವರ ಆಲೋಚನೆಯಾಗಿತ್ತು. ಆದರೆ ಉಳಿದ ಗ್ಯಾರಂಟಿಗಳನ್ನು ನಾನೇ ಸಿದ್ಧಪಡಿಸಿದ್ದು, ಅವುಗಳ ಕಲ್ಪನೆಯೂ ನನ್ನದೇ ಆಗಿತ್ತು. ಕೇವಲ ಗ್ಯಾರಂಟಿ ಮಾತ್ರವಲ್ಲದೆ ಭಾರತ್‌ ಜೋಡೋ ಯಾತ್ರೆಯ ಯಶಸ್ವಿ ಸಂಘಟನೆ, ಜನಸೇವೆ ಇಲಾಖೆ, ಕೃಷ್ಣಾ ಮೇಲ್ದಂಡೆ ಯೋಜನೆ ಮತ್ತು ನೀರಾವರಿ ಯೋಜನೆಗಳಿಗೆ ವೇಗ ನೀಡಿದ್ದು ಹೀಗೆ ನನ್ನ ಯೋಜನೆಗಳ ಪಟ್ಟಿ ನೀಡುತ್ತಾ ಹೋದರೆ ಇಡೀ ರಾತ್ರಿಯೇ ಬೇಕಾಗುತ್ತದೆ' ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.

ಕೇಂದ್ರದಿಂದ ಅನುದಾನ ತಾರತಮ್ಯ: ಡಿ.ಕೆ.ಶಿ ಅಸಮಾಧಾನ

ಇದೇ ವೇಳೆ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ ಅವರು, 'ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವರು ಮಾತುಗಳಲ್ಲಿ ಅತ್ಯುತ್ತಮವಾಗಿ ಮಾತನಾಡುತ್ತಾರೆ. ಆದರೆ ರಾಜ್ಯದ ಅಭಿವೃದ್ಧಿ ಯೋಜನೆಗಳಿಗೆ ಹಣ ಬಿಡುಗಡೆ ಮಾಡುವ ವಿಚಾರ ಬಂದಾಗ ಯಾವುದೇ ಸಹಕಾರ ನೀಡುತ್ತಿಲ್ಲ' ಎಂದು ದೂರಿದರು.

'ಬೆಂಗಳೂರಿನಲ್ಲಿ 44 ಕಿ.ಮೀ. ಉದ್ದದ ಡಬಲ್‌ ಡೆಕ್ಕರ್ ರಸ್ತೆ ಯೋಜನೆಗೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಕೇಂದ್ರ ಸರ್ಕಾರ ಕೇವಲ 13.8 ಕಿ.ಮೀ.ಗೆ ಮಾತ್ರ ಒಪ್ಪಿಗೆ ನೀಡಿದೆ. ಮೆಟ್ರೋ ವಿಸ್ತರಣೆ ಮತ್ತು ನೀರಾವರಿ ಯೋಜನೆಗಳಲ್ಲೂ ರಾಜ್ಯಕ್ಕೆ ನಿರಂತರ ತಾರತಮ್ಯ ಎಸಗಲಾಗುತ್ತಿದೆ. ಬಜೆಟ್‌ನಲ್ಲಿ ಘೋಷಿಸಿದ ಅನುದಾನವನ್ನು ನೀಡಲೂ ಮೀನಮೇಷ ಎಣಿಸುತ್ತಿದ್ದು, ಚುನಾವಣೆಗಳು ಸಮೀಪಿಸುತ್ತಿರುವುದರಿಂದ ರಾಜಕೀಯ ಮಾಡುತ್ತಿದ್ದಾರೆ' ಎಂದು ಆರೋಪಿಸಿದರು.

ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧವೂ ವಾಗ್ದಾಳಿ ನಡೆಸಿದ ಅವರು, 'ಬಿ.ಎಸ್‌. ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರ ಆಡಳಿತಾವಧಿಯ ಕ್ರಮಗಳಿಂದಾಗಿ ನೀರಾವರಿ ಇಲಾಖೆಯೊಂದರಲ್ಲೇ ಬರೋಬ್ಬರಿ ₹1.25 ಲಕ್ಷ ಕೋಟಿ ಮೊತ್ತದ ಬಿಲ್‌ಗಳು ಬಾಕಿ ಉಳಿದಿವೆ. ಈ ಎಲ್ಲಾ ಆರ್ಥಿಕ ಹೊರೆಗಳನ್ನು ನಾವೀಗ ನಿಭಾಯಿಸಿಕೊಂಡು ಮುನ್ನಡೆಯಬೇಕಿದೆ' ಎಂದರು.

ನಾನು ಸತತ 6 ಗಂಟೆ ನಿದ್ದೆಯನ್ನೂ ಮಾಡಿಲ್ಲ'

'ಅಧಿಕಾರಕ್ಕೆ ಬಂದು 100 ದಿನಗಳಿಗೂ ಅಧಿಕ ಕಾಲ ಕಳೆದಿದೆ. ಈ ಅವಧಿಯಲ್ಲಿ ನಾನು ಸತತವಾಗಿ 6 ಗಂಟೆಗಳ ಕಾಲ ನಿದ್ದೆ ಮಾಡಿಲ್ಲ. ಅಧಿಕಾರದ ಅವಧಿಯಲ್ಲಿ ರಾಜ್ಯದ ಜನತೆಗೆ ಯಾವುದಾದರೂ ಶಾಶ್ವತ ಸಾಕ್ಷಿ ಗುಡ್ಡೆ ಬಿಟ್ಟು ಹೋಗಬೇಕು ಎಂಬ ಉದ್ದೇಶದಿಂದ ಹಗಲಿರುಳು ಶ್ರಮಿಸುತ್ತಿದ್ದೇನೆ. ನನಗೆ ಯಾವುದೇ ವೈಯಕ್ತಿಕ ಹವ್ಯಾಸಗಳಿಲ್ಲ, ಕುಟುಂಬದ ಚಿಂತೆಯೂ ಇಲ್ಲ. ರಾಜ್ಯದ ಅಭಿವೃದ್ಧಿಯೇ ನನ್ನ ಏಕೈಕ ಗುರಿ' ಎಂದು ಡಿ.ಕೆ. ಶಿವಕುಮಾರ್ ಭಾವುಕರಾಗಿ ನುಡಿದರು.