- Home
- Karnataka Districts
- ಬಸ್ ಓಡಿಸುತ್ತಿದ್ದ ಬಾಳೇಶ್‌ಗೆ ಹೃದಯಾಘಾತ; ತಾನು ಓಡಿಸಿದ ಬಸ್‌ನಲ್ಲೇ ಅಂತಿಮಯಾತ್ರೆ ಮಾಡಿಸಿದ ಸಾರಿಗೆ ಇಲಾಖೆ
ಬಸ್ ಓಡಿಸುತ್ತಿದ್ದ ಬಾಳೇಶ್‌ಗೆ ಹೃದಯಾಘಾತ; ತಾನು ಓಡಿಸಿದ ಬಸ್‌ನಲ್ಲೇ ಅಂತಿಮಯಾತ್ರೆ ಮಾಡಿಸಿದ ಸಾರಿಗೆ ಇಲಾಖೆ
ಪ್ರಯಾಣಿಕರನ್ನ ಸುರಕ್ಷಿತವಾಗಿ ಮನೆ ತಲುಪಿಸುತ್ತಿದ್ದ ಸಾರಿಗೆ ಬಸ್ ಚಾಲಕ ಹಠಾತ್ ಹೃದಯಾಘಾತದಿಂದ ಸಾವನ್ನಪ್ಪಿದ್ದು, ತಾನು ಚಲಾಯಿಸುತ್ತಿದ್ದ ಬಸ್‌ನಲ್ಲಿ ಶವವಾಗಿ ಮನೆ ತಲುಪಿದ ದೃಶ್ಯ ನೋಡುವವರ ಕಣ್ಣಾಲಿಗಳು ತುಂಬಿ ಬಂದವು. ಧಾರವಾಡ ಸಾರಿಗೆ ಸಿಬ್ಬಂದಿ ಏನು ಮಾಡಿದ್ರು ನೋಡಿ

ಹೃದಯಾಘಾತಕ್ಕೆ ಬಲಿಯಾದ ಧಾರವಾಡ ಬಸ್ ಚಾಲಕ!
ಧಾರವಾಡ ಬಸ್ ನಿಲ್ದಾಣದಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ವೇಳೆ ದಿಢೀರ್ ಹೃದಯಾಘಾತದಿಂದ ಸಾರಿಗೆ ಬಸ್ ಚಾಲಕ ಬಾಳೇಶ್ ತೇಲಿ(38) ಮೃತಪಟ್ಟ ಹೃದಯ ವಿದ್ರಾವಕ ಘಟನೆ ನಡೆದಿದೆ. ಚಾಲಕ ಸಾವನ್ನಪ್ಪಿದ ಬಳಿಕ ಮೃತದೇಹವನ್ನು ಹುಟ್ಟೂರಿಗೆ ಅಂಬುಲೆನ್ಸ್ ಬದಲು ಸಾರಿಗೆ ಬಸ್‌ನಲ್ಲೇ ರವಾನಿಸಿದೆ.
ಬೆಳಗಾವಿ ಮೂಲದ ಬಾಳೇಶ್ ತೇಲಿ ಹೃದಯಾಘಾತ
ಮೃತ ಬಾಳೇಶ್ ತೇಲಿ ಮೂಲತಃ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶಿರಹಟ್ಟಿ ಗ್ರಾಮದ ನಿವಾಸಿಯಾಗಿದ್ದಾರೆ. ಹಲವು ವರ್ಷಗಳಿಂದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ (NWKRTC) ಕಲಘಟಗಿ ಡಿಪೋದಲ್ಲಿ ಬಸ್ ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದರು ಎನ್ನಲಾಗಿದೆ. ಆದರೆ ಚಿಕ್ಕ ವಯಸ್ಸಿಗೆ ಹಠಾತ್ ಸಂಭವಿಸಿದ ಹೃದಯಾಘಾತದಿಂದ ಮೃತರಾಗಿದ್ದಾರೆ.
ಸಾರಿಗೆ ಬಸ್‌ನಲ್ಲೇ ಮೃತದೇಹ ರವಾನಿಸಿದ ಸಿಬ್ಬಂದಿ
ಸಾರಿಗೆ ಇಲಾಖೆ ಸಿಬ್ಬಂದಿ ಚಾಲಕನ ಅಕಾಲಿಕ ಮರಣಕ್ಕೆ ಮರುಗಿದ್ದಾರೆ. ಮೃತದೇಹ ಆಂಬುಲೆನ್ಸ್ ಬದಲು ತಾನು ಚಾಲನೆ ಮಾಡುತ್ತಿದ್ದ ಬಸ್‌ನಲ್ಲೇ ಅಂತಿಮ ಯಾತ್ರೆ ನಡೆಸಲು ವ್ಯವಸ್ಥೆ ಮಾಡಿದರು. ಅದರಂತೆ ಧಾರವಾಡದಿಂದ ಹುಟ್ಟೂರಿಗೆ ಸಾರಿಗೆ ಇಲಾಖೆ ಬಸ್‌ನಲ್ಲೇ ಬಾಳೇಶ್ ತೇಲಿ ಮೃತದೇಹ ತಂದು ಸಾರಿಗೆ ಸಿಬ್ಬಂದಿ ಅಂತಿಮ ನಮನ ಸಲ್ಲಿಸಿದರು.
ಬಸ್ಸಿನಲ್ಲಿ ಮಗನ ಮೃತದೇಹ ಕಂಡು ತಾಯಿ ಕಣ್ಣೀರು
ಅಂತಿಮಯಾತ್ರೆ ವೇಳೆ ಬಾಳೇಶ್ ತೇಲಿ ಮೃತದೇಹ ಸಾರಿಗೆ ಬಸ್‌ನಲ್ಲಿಡುತ್ತಿದ್ದಂತೆ ಮಗನ ಶವ ಕಂಡು ಗೋಗರೆದು ಅತ್ತ ತಾಯಿ. ಪ್ರತಿದಿನ ಮಗ ಹುಮ್ಮಸಿನಿಂದ ಕೆಲಸಕ್ಕೆ ಹೋಗುತ್ತಿದ್ದ. ತಾನೇ ಓಡಿಸುತ್ತಿದ್ದ ಬಸ್‌ನಲ್ಲಿ ತಣ್ಣಗೆ ಮಲಗಿಬಿಟ್ಟ, ನಮ್ಮನ್ನೆಲ್ಲ ಬಿಟ್ಟುಹೋದ ಅಂತಾ ಒಂದೇ ಸಮನೆ ಮಗನ ಸಾವು ಅರಗಿಸಿಕೊಳ್ಳಲಾಗದೆ ಕಣ್ಣೀರಾಕಿದ ತಾಯಿ. ಈ ದೃಶ್ಯದಿಂದ ನೆರೆದವರ ಕಣ್ಣಗಳೂ ತೇವಗೊಂಡವು.

