ಬೆಂಗಳೂರಿನ ಪೀಣ್ಯ ಕೈಗಾರಿಕಾ ಪ್ರದೇಶದ ರಸ್ತೆ ದುಸ್ಥಿತಿಯಿಂದ ಬೇಸತ್ತ ನಾಗರಿಕರೊಬ್ಬರು, ಸ್ಥಳೀಯ ಆಡಳಿತದ ನಿರ್ಲಕ್ಷ್ಯದ ವಿರುದ್ಧ ನೇರವಾಗಿ ಪ್ರಧಾನಿ ಕಾರ್ಯಾಲಯಕ್ಕೆ ಪತ್ರ ಬರೆದಿದ್ದಾರೆ. ಟಿವಿಎಸ್ ಕ್ರಾಸ್‌ನಿಂದ ಹೊರವರ್ತುಲ ರಸ್ತೆಗೆ ಸಂಪರ್ಕಿಸುವ ಈ ಮಾರ್ಗದ ದುರಸ್ತಿಗೆ ತುರ್ತು ಕ್ರಮ ಕೈಗೊಳ್ಳುವಂತೆ ಅವರು ಮನವಿ ಮಾಡಿದ್ದಾರೆ.

ಬೆಂಗಳೂರು (ಸೆ.13): 'ಆಗ್ತಿಲ್ಲ ಸ್ವಾಮಿ.. ಆಗ್ತಿಲ್ಲ.. ಈ ರಸ್ತೆಯಲ್ಲಿ ದಿನವೂ ಓಡಾಡೋಕೆ ಆಗ್ತಾನೇ ಇಲ್ಲ!' – ಇದು ಸಿಲಿಕಾನ್ ಸಿಟಿ ಬೆಂಗಳೂರಿನ ಪ್ರತಿಷ್ಠಿತ ಕೈಗಾರಿಕಾ ಪ್ರದೇಶ ಪೀಣ್ಯದ ರಸ್ತೆಗಳಲ್ಲಿ ನಿತ್ಯ ನರಕಯಾತನೆ ಅನುಭವಿಸುತ್ತಿರುವ ಸಾರ್ವಜನಿಕರ ಆಕ್ರೋಶದ ನುಡಿ. ವರ್ಷಾನುಗಟ್ಟಲೆ ದೂರು ನೀಡಿದರೂ ಸ್ಥಳೀಯ ಆಡಳಿತವಾಗಲಿ, ರಾಜ್ಯ ಸರ್ಕಾರವಾಗಲಿ ಎಚ್ಚೆತ್ತುಕೊಳ್ಳದ ಕಾರಣ ಬೇಸತ್ತ ಬೆಂಗಳೂರಿನ ನಿವಾಸಿಯೊಬ್ಬರು ಇದೀಗ ನೇರವಾಗಿ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕದ ತಟ್ಟಿದ್ದಾರೆ.

ಪೀಣ್ಯದ ಟಿವಿಎಸ್ ಕ್ರಾಸ್‌ನಿಂದ ಹೊರವರ್ತುಲ ರಸ್ತೆ (Outer Ring Road) ಸಂಪರ್ಕಿಸುವ ರಸ್ತೆಯ ದುಃಸ್ಥಿತಿ ಸರಿಪಡಿಸುವಂತೆ ಕೋರಿ ಬೆಂಗಳೂರಿನ ಜಾಗೃತ ನಾಗರಿಕ ದೀಪಕ್ ಎನ್ ಎಂಬುವವರು ಪ್ರಧಾನಿ ಕಾರ್ಯಾಲಯಕ್ಕೆ (PMO) ತುರ್ತು ಮಧ್ಯಪ್ರವೇಶ ಕೋರಿ ಅಧಿಕೃತ ಪತ್ರ ಬರೆದಿದ್ದಾರೆ.

ಏಷ್ಯಾದ ಅತಿದೊಡ್ಡ ಕೈಗಾರಿಕಾ ಹಬ್‌ನಲ್ಲೇ ಈ ದುಸ್ಥಿತಿ!

ಪ್ರಧಾನಿ ಮೋದಿಯವರಿಗೆ ಬರೆದಿರುವ ಪತ್ರದಲ್ಲಿ ವಾಸ್ತವ ಸ್ಥಿತಿಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿರುವ ದೀಪಕ್, 'ಏಷ್ಯಾದ ಅತಿದೊಡ್ಡ ಸಣ್ಣ ಕೈಗಾರಿಕೆಗಳ ತಾಣವಾಗಿರುವ ಪೀಣ್ಯ ಕೈಗಾರಿಕಾ ಪ್ರದೇಶಕ್ಕೆ ಈ ರಸ್ತೆಯೇ ಪ್ರಮುಖ ಸಂಪರ್ಕ ಕೊಂಡಿಯಾಗಿದೆ. ಆದರೆ, ಟಿವಿಎಸ್ ಕ್ರಾಸ್‌ನಿಂದ ಹೊರವರ್ತುಲ ರಸ್ತೆಯವರೆಗಿನ ಮಾರ್ಗ ಸಂಪೂರ್ಣವಾಗಿ ಕಿತ್ತುಹೋಗಿದ್ದು, ಕಸ, ಧೂಳು ಮತ್ತು ಅಪಾಯಕಾರಿ ಗುಂಡಿಗಳಿಂದ ತುಂಬಿ ತುಳುಕುತ್ತಿದೆ. ನಿತ್ಯ ಸಾವಿರಾರು ಉದ್ಯೋಗಿಗಳು, ಸಾರ್ವಜನಿಕರು ಮತ್ತು ವ್ಯಾಪಾರ-ಕೈಗಾರಿಕಾ ವಾಹನಗಳು ಈ ಅಪಾಯಕಾರಿ ರಸ್ತೆಯಲ್ಲೇ ಸಂಚರಿಸಬೇಕಾದ ಅನಿವಾರ್ಯತೆ ಇದೆ' ಎಂದು ತಿಳಿಸಿದ್ದಾರೆ.

'ಜನಸ್ಪಂದನ'ಕ್ಕೂ ಕ್ಯಾರೆ ಅನ್ನದ ಅಧಿಕಾರಿಗಳು!

ರಸ್ತೆ ದುರಸ್ತಿಗಾಗಿ ಸ್ಥಳೀಯ ಆಡಳಿತ, ಇ-ಮೇಲ್ ಮತ್ತು ರಾಜ್ಯ ಸರ್ಕಾರದ ಅಧಿಕೃತ ‘ಜನಸ್ಪಂದನ’ ವೇದಿಕೆ ಮೂಲಕ ಹತ್ತಾರು ಬಾರಿ ದೂರು ನೀಡಿದರೂ ಯಾವುದೇ ಶಾಶ್ವತ ಪರಿಹಾರ ಸಿಕ್ಕಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದಾರೆ. ಒಮ್ಮೆ ಕಾಟಾಚಾರಕ್ಕೆ ಬಂದು ತೇಪೆ (ಪ್ಯಾಚ್ ವರ್ಕ್) ಹಾಕಲಾಯಿತಾದರೂ, ಒಂದೇ ಮಳೆಗೆ ಆ ಡಾಂಬರೆಲ್ಲ ಕೊಚ್ಚಿಹೋಗಿ ರಸ್ತೆ ಮತ್ತಷ್ಟು ಅಧ್ವಾನವಾಗಿದೆ. ಸದ್ಯ ನಡೆಯುತ್ತಿರುವ ಕಾಮಗಾರಿಯೂ ಆಮೆಗತಿಯಲ್ಲಿ ಸಾಗುತ್ತಿದ್ದು, ಜನ ಸಾಮಾನ್ಯರು ದಿನನಿತ್ಯ ಜೀವ ಕೈಯಲ್ಲಿ ಹಿಡಿದು ಸಾಗುವಂತಾಗಿದೆ ಎಂದು ಪತ್ರದಲ್ಲಿ ಅಸಹಾಯಕತೆ ವ್ಯಕ್ತಪಡಿಸಲಾಗಿದೆ.

ಪ್ರಧಾನಿ ಮಧ್ಯಪ್ರವೇಶಕ್ಕೆ ಅಂಗಲಾಚಿದ ನಾಗರಿಕ:

'ನಾವು ವ್ಯವಸ್ಥೆಯ ಮೇಲೆ ಸಂಪೂರ್ಣ ವಿಶ್ವಾಸ ಹೊಂದಿದ್ದೇವೆ. ಪ್ರಧಾನಿ ಕಾರ್ಯಾಲಯವು ಈ ಕೂಡಲೇ ಮಧ್ಯಪ್ರವೇಶಿಸಿ, ಈ ರಸ್ತೆಯ ಎರಡೂ ಬದಿಯ ಕಾಮಗಾರಿಯನ್ನು ಅತ್ಯಂತ ತ್ವರಿತವಾಗಿ ಮತ್ತು ಗುಣಮಟ್ಟದಿಂದ ಪೂರ್ಣಗೊಳಿಸಲು ಸಂಬಂಧಪಟ್ಟ ಪ್ರಾಧಿಕಾರಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಬೇಕು' ಎಂದು ದೀಪಕ್ ಅವರು ಪ್ರಧಾನಿಗಳಿಗೆ ಮನವಿ ಮಾಡಿದ್ದಾರೆ.

ಸ್ಥಳೀಯ ಕಾರ್ಪೊರೇಟರ್, ಶಾಸಕರು ಹಾಗೂ ಪಾಲಿಕೆ ಅಧಿಕಾರಿಗಳು ಕೇಳಬೇಕಾದ ಸಮಸ್ಯೆಗೆ ಪ್ರಧಾನಿ ಕಚೇರಿಗೆ ಪತ್ರ ಬರೆಯುವ ದುಸ್ಥಿತಿ ಬಂದಿರುವುದು ಬೆಂಗಳೂರಿನ ನಾಗರಿಕ ಮೂಲಸೌಕರ್ಯದ ನೈಜ ಚಿತ್ರಣಕ್ಕೆ ಕನ್ನಡಿ ಹಿಡಿದಿದೆ.