ಕುಡಿದ ಮತ್ತಿನಲ್ಲಿ ಬಂದು ಮಲಗಿದ್ದ ಪತ್ನಿಯ ಜೀವ ತೆಗೆದು ಹೃದಯಾಘಾತದ ನಾಟಕ ಕಟ್ಟಿದ್ದ ಪತಿ ಕೊನೆಗೂ ಅರೆಸ್ಟ್ ಆಗಿದ್ದಾನೆ. ನಂತರ ಪ್ರಕರಣ ಬಯಲಾಗಿದ್ದು ಹೇಗೆ? ಅನ್ನೋ ವಿವರ ಈ ಸ್ಟೋರಿಯಲ್ಲಿದೆ.

ಕಾರವಾರ: ಕುಡಿದ ಮತ್ತಿನಲ್ಲಿ ಪತ್ನಿಯನ್ನೇ ಕೊಂದು ಏನೂ ತಿಳಿಯದವನಂತೆ 'ಹೃದಯಾಘಾತ'ದ ನಾಟಕವಾಡಿದ್ದ ಪತಿಯನ್ನು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಪೊಲೀಸರು ಬಂಧಿಸಿದ್ದಾರೆ. ಈ ಬೆಚ್ಚಿಬೀಳಿಸುವ ಘಟನೆ ಹೊನ್ನಾವರ ತಾಲೂಕಿನ ದೊಡ್ಡಗುಂಡ ಗ್ರಾಮದಲ್ಲಿ ನಡೆದಿದೆ.

ನಡೆದಿದ್ದೇನು?

ದೊಡ್ಡಗುಂಡ ಗ್ರಾಮದ ನಿವಾಸಿ ಗಣಪತಿ ಮಂಜುನಾಥ ನಾಯ್ಕ ಬಂಧಿತ ಆರೋಪಿ. ಈತ ತನ್ನ ಪತ್ನಿ ಮಂಗಲಾ ಗಣಪತಿ ನಾಯ್ಕ (27) ಎಂಬಾಕೆಯನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಘಟನೆ ನಡೆದ ದಿನ ಆರೋಪಿ ಗಣಪತಿ ಮದ್ಯ ಸೇವಿಸಿ ಮನೆಗೆ ಬಂದಿದ್ದ ಎನ್ನಲಾಗಿದೆ. ರಾತ್ರಿ ಪತ್ನಿ ಮಂಗಲಾ ಮಲಗಿದ್ದಾಗ, ಕುಡಿದ ಮತ್ತಿನಲ್ಲಿದ್ದ ಗಣಪತಿ ಆಕೆಯ ಕುತ್ತಿಗೆ ಹಿಚುಕಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.

ಪತ್ನಿ ಮೃತಪಟ್ಟಿದ್ದನ್ನು ಖಚಿತಪಡಿಸಿಕೊಂಡ ಆರೋಪಿ ಯಾರಿಗೂ ಸಂಶಯ ಬಾರದಿರಲಿ ಎಂದು ಹೊಸ ಕಥೆ ಕಟ್ಟಿದ್ದ. ತನ್ನ ಪತ್ನಿ ಮಂಗಲಾಗೆ ಇದ್ದಕ್ಕಿದ್ದಂತೆ 'ಹೃದಯಾಘಾತ' ಸಂಭವಿಸಿ ಸಾವನ್ನಪ್ಪಿದ್ದಾಳೆ ಎಂದು ಎಲ್ಲರಿಗೂ ನಂಬಿಸಿದ್ದ. ಆಕೆಯ ಸಾವು ನೈಸರ್ಗಿಕ ಎಂದು ಬಿಂಬಿಸಲು ಆತ ಸಾಕಷ್ಟು ಪ್ರಯತ್ನ ನಡೆಸಿದ್ದ.

ಮಂಗಲಾಳ ಸಾವಿನ ಬಗ್ಗೆ ಆಕೆಯ ಸಹೋದರಿಗೆ ಬಲವಾದ ಸಂಶಯ ವ್ಯಕ್ತವಾಗಿತ್ತು. ಆರೋಗ್ಯವಾಗಿದ್ದ ತಂಗಿ ಇದ್ದಕ್ಕಿದ್ದಂತೆ ಹೃದಯಾಘಾತದಿಂದ ಸಾಯಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಎದ್ದಿತ್ತು. ತಕ್ಷಣವೇ ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿತ್ತು. ಪ್ರಕರಣವನ್ನು ಕೈಗೆತ್ತಿಕೊಂಡ ಮಂಕಿ ಪೊಲೀಸರು ತನಿಖೆ ಆರಂಭಿಸಿದಾಗ ಅಸಲಿ ಸತ್ಯ ಬಯಲಾಗಿದೆ.

ಪೊಲೀಸ್ ವಿಚಾರಣೆಯಲ್ಲಿ ಕೊಲೆ ಒಪ್ಪಿಕೊಂಡ ಆರೋಪಿ

ಪೊಲೀಸರು ಸಂಶಯದ ಮೇಲೆ ಪತಿ ಗಣಪತಿಯನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಿದಾಗ ಆತ ಪತ್ನಿಯನ್ನೇ ಕೊಂದಿರುವುದನ್ನು ಒಪ್ಪಿಕೊಂಡಿದ್ದಾನೆ. ಸದ್ಯ ಮಂಕಿ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.