Telugu Actress Samantha ತಮ್ಮ ಪೋಸ್ಟ್‌ನಲ್ಲಿ, ಪ್ರತಿಯೊಂದು ಗರ್ಭಧಾರಣೆಯ ಅನುಭವವೂ ವಿಭಿನ್ನವಾಗಿರುತ್ತದೆ ಎಂದು ಹೇಳಿದ್ದಾರೆ. ತಾವು ಮಾಡುತ್ತಿರುವ ವ್ಯಾಯಾಮಗಳು ತಮ್ಮ ದೇಹ, ಅನುಭವ ಮತ್ತು ಗರ್ಭಾವಸ್ಥೆಗೆ ಅನುಗುಣವಾಗಿ ಬದಲಾವಣೆ ಮಾಡಿಕೊಂಡು ಮಾಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಟಾಲಿವುಡ್ ನಟಿ ಸಮಂತಾ ಸದ್ಯ ವೈಯಕ್ತಿಕ ಜೀವನದ ಹೊಸ ಅಧ್ಯಾಯದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೇ ‘ಮಾ ಇಂಟಿ ಬಂಗಾರಂ’ ಸಿನಿಮಾದ ಸಕ್ಸಸ್ ಸೆಲೆಬ್ರೇಷನ್‌ನಲ್ಲಿ ತಾವು ಪ್ರೆಗ್ನೆಂಟ್ ಎಂಬ ವಿಚಾರವನ್ನು ಬಹಿರಂಗಪಡಿಸಿದ್ದ ಸಮಂತಾ, ಸದ್ಯದಲ್ಲೇ ಸಿನಿಮಾಗಳಿಗೆ ಬ್ರೇಕ್ ತೆಗೆದುಕೊಳ್ಳುವುದಾಗಿ ಹೇಳಿದ್ದರು. ಇದರ ಬೆನ್ನಲ್ಲೇ ಇದೀಗ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ವರ್ಕೌಟ್ ಫೋಟೋಗಳು ಭಾರೀ ವೈರಲ್ ಆಗುತ್ತಿವೆ.

ಗರ್ಭಾವಸ್ಥೆಯಲ್ಲಿ ಸಾಮಾನ್ಯವಾಗಿ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾರೆ. ಭಾರವಾದ ವಸ್ತುಗಳನ್ನು ಎತ್ತುವುದು, ಹೆಚ್ಚು ದೈಹಿಕ ಶ್ರಮದ ಕೆಲಸಗಳನ್ನು ಮಾಡುವುದರಿಂದ ದೂರವಿರುತ್ತಾರೆ. ವೈದ್ಯರ ಸಲಹೆಯಂತೆ ಕೆಲವರು ಸರಳ ಯೋಗಾಸನ ಅಥವಾ ವ್ಯಾಯಾಮಗಳನ್ನು ಮಾಡುತ್ತಾರೆ. ಆದರೆ ಸಮಂತಾ ಮಾತ್ರ ಪ್ರೆಗ್ನೆನ್ಸಿಯಲ್ಲೂ ಸ್ಟ್ರೆಂಗ್ತ್ ಟ್ರೈನಿಂಗ್ ಮುಂದುವರಿಸಿರುವುದು ಇದೀಗ ಎಲ್ಲರ ಗಮನ ಸೆಳೆದಿದೆ.

ವರ್ಕೌಟ್ ವೇಳೆ ಭಾರ ಎತ್ತುತ್ತಿರುವ ಫೋಟೋಗಳನ್ನು ಸಮಂತಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ತಮ್ಮ ವ್ಯಾಯಾಮದ ಬಗ್ಗೆ ಸ್ಪಷ್ಟನೆಯನ್ನೂ ನೀಡಿದ್ದಾರೆ. ತಾವು ಹಲವು ವರ್ಷಗಳಿಂದ ಸ್ಟ್ರೆಂಗ್ತ್ ಟ್ರೈನಿಂಗ್ ಮಾಡುತ್ತಿದ್ದು, ಗರ್ಭಾವಸ್ಥೆಯಲ್ಲೂ ಅದನ್ನು ಮುಂದುವರಿಸಲು ವೈದ್ಯರ ಅನುಮತಿ ಪಡೆದಿದ್ದೇನೆ ಎಂದು ಹೇಳಿದ್ದಾರೆ. ಜೊತೆಗೆ, ತಮ್ಮ ಟ್ರೈನರ್ ಪ್ರಿನೇಟಲ್ ಟ್ರೈನಿಂಗ್‌ನಲ್ಲಿ ಸರ್ಟಿಫೈಡ್ ಆಗಿದ್ದಾರೆ ಎಂದು ತಿಳಿಸಿದ್ದಾರೆ.

‘ನನ್ನ ವರ್ಕೌಟ್‌ಗಳನ್ನು ನೋಡಿ ನೀವೂ ಮಾಡಬೇಡಿ!’

ಸಮಂತಾ ತಮ್ಮ ಪೋಸ್ಟ್‌ನಲ್ಲಿ, ಪ್ರತಿಯೊಂದು ಗರ್ಭಧಾರಣೆಯ ಅನುಭವವೂ ವಿಭಿನ್ನವಾಗಿರುತ್ತದೆ ಎಂದು ಹೇಳಿದ್ದಾರೆ. ತಾವು ಮಾಡುತ್ತಿರುವ ವ್ಯಾಯಾಮಗಳು ತಮ್ಮ ದೇಹ, ಅನುಭವ ಮತ್ತು ಗರ್ಭಾವಸ್ಥೆಗೆ ಅನುಗುಣವಾಗಿ ಬದಲಾವಣೆ ಮಾಡಿಕೊಂಡು ಮಾಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಅಲ್ಲದೆ, ಗರ್ಭಿಣಿಯರು ತಮ್ಮ ವೈದ್ಯರ ಅನುಮತಿ ಅಥವಾ ಸೂಕ್ತ ತರಬೇತುದಾರರ ಮಾರ್ಗದರ್ಶನವಿಲ್ಲದೆ ತಮ್ಮ ವರ್ಕೌಟ್‌ಗಳನ್ನು ಅನುಸರಿಸಬಾರದು ಎಂದು ವಿಶೇಷವಾಗಿ ಎಚ್ಚರಿಕೆ ನೀಡಿದ್ದಾರೆ. ಗರ್ಭಾವಸ್ಥೆಯಲ್ಲಿ ಯಾವುದೇ ರೀತಿಯ ವ್ಯಾಯಾಮ ಆರಂಭಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವಂತೆ ಹಾಗೂ ಅರ್ಹ ತರಬೇತುದಾರರ ನೆರವಿನಲ್ಲಿ ಮಾತ್ರ ತರಬೇತಿ ಪಡೆಯುವಂತೆ ಸಮಂತಾ ಸಲಹೆ ನೀಡಿದ್ದಾರೆ.

ಸಮಂತಾ ಅವರ ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ, ಅವರ ಡೆಡಿಕೇಶನ್‌ಗೆ ಅಭಿಮಾನಿಗಳು ಹಾಗೂ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಪ್ರೆಗ್ನೆನ್ಸಿಯಲ್ಲೂ ತಮ್ಮ ಫಿಟ್‌ನೆಸ್ ಬಗ್ಗೆ ಕಾಳಜಿ ವಹಿಸುತ್ತಿರುವ ಸಮಂತಾ ಅವರ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿವೆ.

ಇನ್ನು ಬಹುಕಾಲ ಸಿನಿಮಾಗಳಿಂದ ದೂರವಿದ್ದ ಸಮಂತಾ, ನಿರ್ಮಾಪಕಿಯಾಗಿಯೂ ಯಶಸ್ಸು ಕಂಡಿದ್ದಾರೆ. ಇತ್ತೀಚೆಗೆ ನಿರ್ದೇಶಕ ರಾಜ್ ನಿಡಿಮೋರು ಅವರನ್ನು ವಿವಾಹವಾಗುವ ಮೂಲಕ ಹೊಸ ಜೀವನಕ್ಕೆ ಕಾಲಿಟ್ಟಿರುವ ಅವರು, ಈ ವರ್ಷದ ಕೊನೆಯಲ್ಲಿ ತಾಯಿಯಾಗಲಿದ್ದಾರೆ ಎಂಬ ಸುದ್ದಿ ಅಭಿಮಾನಿಗಳಲ್ಲಿ ಮತ್ತಷ್ಟು ಕುತೂಹಲ ಮೂಡಿಸಿದೆ.