Yash Toxic Dialogue: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಸಿನಿಮಾ ಬಿಡುಗಡೆಗೂ ಮುನ್ನವೇ ಹಲವು ಕಾರಣಗಳಿಗೆ ಸುದ್ದಿಯಲ್ಲಿದೆ.

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಸಿನಿಮಾ ಬಿಡುಗಡೆಗೂ ಮುನ್ನವೇ ಹಲವು ಕಾರಣಗಳಿಗೆ ಸುದ್ದಿಯಲ್ಲಿದೆ. ಚಿತ್ರದ ಟೀಸರ್, ಟ್ರೇಲರ್, ಹಾಡುಗಳು ಮಾತ್ರವಲ್ಲದೆ, ಕೆಲವೊಂದು ಡೈಲಾಗ್‌ಗಳು ಹಾಗೂ ದೃಶ್ಯಗಳು ಕೂಡ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಹುಟ್ಟುಹಾಕಿವೆ. ಅದರಲ್ಲೂ ಯಶ್ ಹಾಗೂ ರುಕ್ಮಿಣಿ ವಸಂತ್ ಕಾಣಿಸಿಕೊಳ್ಳುವ ಒಂದು ದೃಶ್ಯ ಇದೀಗ ಮತ್ತೊಮ್ಮೆ ಗಮನ ಸೆಳೆಯುತ್ತಿದೆ.

‘I was hoping to have a civilized conversation’... ಯಶ್ ಕೊಟ್ಟ ಉತ್ತರವೇನು?

‘ಟಾಕ್ಸಿಕ್’ ಟ್ರೇಲರ್‌ನಲ್ಲಿ ರುಕ್ಮಿಣಿ ವಸಂತ್ ಅವರು ಯಶ್ ಎದುರು ಬಂದು “I was hoping to have a civilized conversation” ಎಂದು ಹೇಳುವ ದೃಶ್ಯವಿದೆ. ಇದಕ್ಕೆ ಯಶ್ ಅವರ ಪಾತ್ರ “Do I look civilized to you?” ಎಂದು ಖಡಕ್ ಆಗಿ ಉತ್ತರಿಸುತ್ತದೆ. ಈ ಚಿಕ್ಕ ಸಂಭಾಷಣೆ ಟ್ರೇಲರ್‌ನ ಹೈಲೈಟ್‌ಗಳಲ್ಲಿ ಒಂದಾಗಿ ಗಮನ ಸೆಳೆದಿದೆ. ಯಶ್ ಅವರ ಬೋಲ್ಡ್ ಲುಕ್, ಬಾಡಿ ಲ್ಯಾಂಗ್ವೇಜ್ ಹಾಗೂ ಡೈಲಾಗ್ ಡೆಲಿವರಿ ಅಭಿಮಾನಿಗಳ ಗಮನ ಸೆಳೆದಿದ್ದರೆ, ಈ ದೃಶ್ಯವನ್ನು ಇಟ್ಟುಕೊಂಡು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಹಾಗೂ ಚರ್ಚೆಗಳೂ ನಡೆದಿವೆ. ಇದೀಗ ಇದೇ ಡೈಲಾಗ್ ಬಗ್ಗೆ ಸ್ವತಃ ರುಕ್ಮಿಣಿ ವಸಂತ್ ಅವರಿಗೆ ಪ್ರಶ್ನೆ ಎದುರಾಗಿದೆ.

ನಿರೂಪಕಿ ಕೇಳಿದ ಪ್ರಶ್ನೆಗೆ ರುಕ್ಮಿಣಿ ಕೊಟ್ಟ ಉತ್ತರವೇನು?

ಹೈದರಾಬಾದ್‌ನ ಮಲ್ಲಾ ರೆಡ್ಡಿ ಯುನಿವರ್ಸಿಟಿಯಲ್ಲಿ ನಡೆದ ‘ಟಾಕ್ಸಿಕ್’ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ನಿರೂಪಕಿ ರುಕ್ಮಿಣಿ ವಸಂತ್ ಅವರಿಗೆ ಈ ವೈರಲ್ ಡೈಲಾಗ್ ಬಗ್ಗೆ ಪ್ರಶ್ನೆ ಕೇಳಿದ್ದಾರೆ. ಯಶ್ ಅವರ “Do I look civilized to you?” ಡೈಲಾಗ್‌ ಅನ್ನು ನೆನಪಿಸಿದ ನಿರೂಪಕಿ, ‘ನಾನು ನಿಮ್ಮೊಂದಿಗೆ civilized conversation ನಿರೀಕ್ಷಿಸುತ್ತಿದ್ದೆ’ ಎಂದು ಕಾಲೆಳೆದಿದ್ದಾರೆ.

ಇದಕ್ಕೆ ರುಕ್ಮಿಣಿ ವಸಂತ್ ನಗುತ್ತಲೇ ಚುಟುಕಾಗಿ ಉತ್ತರಿಸಿದ್ದಾರೆ. “ನಿಮ್ಮ ಜೊತೆ ನನ್ನದು ಯಾವಾಗಲೂ civilized conversation ಆಗಿರುತ್ತದೆ” ಎಂದು ಹೇಳಿ ನಗುವಿನ ಮೂಲಕವೇ ಮಾತು ಮುಗಿಸಿದ್ದಾರೆ ಆದರೆ, ಟ್ರೇಲರ್‌ನಲ್ಲಿರುವ ಯಶ್ ಅವರ ಪಾತ್ರದ ಆ ದೃಶ್ಯದ ಬಗ್ಗೆ ಹೆಚ್ಚಿನ ವಿವರಣೆ ನೀಡದೆ ರುಕ್ಮಿಣಿ ಜಾಣ್ಮೆಯಿಂದ ಉತ್ತರಿಸಿದ್ದಾರೆ. ಅವರ ಈ ಪ್ರತಿಕ್ರಿಯೆ ಕಾರ್ಯಕ್ರಮದಲ್ಲೂ ನಗೆ ಮೂಡಿಸಿದೆ.

ರುಕ್ಮಿಣಿ ಬಗ್ಗೆ ಯಶ್ ಹೇಳಿದ್ದೇನು?

ಇದೇ ಕಾರ್ಯಕ್ರಮದಲ್ಲಿ ಯಶ್ ತಮ್ಮ ಸಹನಟಿ ರುಕ್ಮಿಣಿ ವಸಂತ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನೂ ಆಡಿದ್ದಾರೆ. ರುಕ್ಮಿಣಿ ವಸಂತ್ ಕನ್ನಡದ ಹುಡುಗಿ ಎನ್ನುವುದು ಹೆಮ್ಮೆಯ ವಿಚಾರ ಎಂದು ಹೇಳಿರುವ ಯಶ್, ಅವರು ಎಲ್ಲೆಡೆ ಒಳ್ಳೆಯ ಹೆಸರು ಮಾಡುತ್ತಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, ‘ಟಾಕ್ಸಿಕ್’ ಸಿನಿಮಾದ ಕೆಲಸದ ಸಂದರ್ಭದಲ್ಲಿ ರುಕ್ಮಿಣಿ ಅವರ ವ್ಯಕ್ತಿತ್ವವನ್ನು ಮತ್ತಷ್ಟು ಹತ್ತಿರದಿಂದ ಅರಿಯಲು ಸಾಧ್ಯವಾಯಿತು ಎಂದು ಯಶ್ ಹೇಳಿದ್ದಾರೆ.

‘ರುಕ್ಮಿಣಿ ತುಂಬಾ ಬುದ್ಧಿವಂತೆ...’

ರುಕ್ಮಿಣಿ ವಸಂತ್ ಅವರ ಜ್ಞಾನ ಹಾಗೂ ಬುದ್ಧಿವಂತಿಕೆಯನ್ನು ಯಶ್ ವಿಶೇಷವಾಗಿ ಕೊಂಡಾಡಿದ್ದಾರೆ. ಅವರು ಸಾಕಷ್ಟು ವಿಷಯಗಳನ್ನು ತಿಳಿದುಕೊಂಡಿದ್ದಾರೆ ಹಾಗೂ ಸಿನಿಮಾದ ಕೆಲಸದ ಸಂದರ್ಭದಲ್ಲಿ ಅವರ ಜ್ಞಾನ ತಮ್ಮ ಗಮನಕ್ಕೆ ಬಂದಿದೆ ಎಂದು ಹೇಳಿದ್ದಾರೆ. ಕನ್ನಡದ ಹುಡುಗಿಯೊಬ್ಬರು ಇಷ್ಟೊಂದು ಪ್ರತಿಭೆ ಹಾಗೂ ಜ್ಞಾನ ಹೊಂದಿರುವುದು ಹೆಮ್ಮೆಯ ವಿಚಾರ ಎಂಬ ರೀತಿಯಲ್ಲಿ ಯಶ್ ಮಾತನಾಡಿದ್ದಾರೆ. ಯಶ್ ಅವರ ಈ ಮಾತುಗಳ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ರೀಲ್ಸ್ ಹಾಗೂ ಪೋಸ್ಟ್‌ಗಳ ಮೂಲಕ ಹಂಚಿಕೊಳ್ಳುತ್ತಿದ್ದಾರೆ.

‘ಟಾಕ್ಸಿಕ್’ನಲ್ಲಿ ಯಶ್-ರುಕ್ಮಿಣಿ ಕಾಂಬಿನೇಷನ್ ಹೇಗಿರಲಿದೆ?

‘ಟಾಕ್ಸಿಕ್’ನಲ್ಲಿ ಯಶ್, ಕಿಯಾರಾ ಅಡ್ವಾಣಿ, ನಯನತಾರಾ, ರುಕ್ಮಿಣಿ ವಸಂತ್ ಸೇರಿದಂತೆ ದೊಡ್ಡ ತಾರಾಬಳಗವಿದೆ. ಈ ಪೈಕಿ ಯಶ್ ಮತ್ತು ರುಕ್ಮಿಣಿ ನಡುವಿನ ಈ ಒಂದು ದೃಶ್ಯವೇ ಟ್ರೇಲರ್ ಬಿಡುಗಡೆಯಾದಾಗಿನಿಂದ ಕುತೂಹಲ ಮೂಡಿಸಿದೆ. ಅದರಲ್ಲೂ “Do I look civilized to you?” ಎಂಬ ಡೈಲಾಗ್ ಸಖತ್ ವೈರಲ್ ಆಗಿರುವ ಬೆನ್ನಲ್ಲೇ, ಇದೀಗ ಇದೇ ಡೈಲಾಗ್ ಬಗ್ಗೆ ರುಕ್ಮಿಣಿ ನೀಡಿರುವ ಹಾಸ್ಯಮಯ ಪ್ರತಿಕ್ರಿಯೆ ಕೂಡ ಸುದ್ದಿಯಾಗಿದೆ. ಒಟ್ಟಿನಲ್ಲಿ, ಯಶ್ ಅವರ ಬೋಲ್ಡ್ ಲುಕ್, ವೈರಲ್ ಡೈಲಾಗ್ ಹಾಗೂ ರುಕ್ಮಿಣಿ ವಸಂತ್ ಅವರ ಚುಟುಕು ಉತ್ತರ-ಈ ಮೂರು ಸಂಗತಿಗಳು ‘ಟಾಕ್ಸಿಕ್’ ಕುರಿತ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿವೆ. ಸಿನಿಮಾ ತೆರೆಕಂಡ ಬಳಿಕ ಈ ದೃಶ್ಯದ ಸಂಪೂರ್ಣ ಸಂದರ್ಭ ಏನು ಎಂಬುದು ಗೊತ್ತಾಗಲಿದೆ.