ಸಮಂತಾ ರುತ್ ಪ್ರಭು ಮತ್ತು ರಾಜ್ ನಿಡಿಮೋರು ಅವರ ಮೊದಲ ಮಗುವಿನ ಹೆಸರಿನ ಬಗ್ಗೆ ಅಭಿಮಾನಿಯೊಬ್ಬರು ವಿಶೇಷ ಸಲಹೆ ನೀಡಿದ್ದಾರೆ. ‘ಸಮ್ರಾಜ್’ ಎಂಬ ಹೆಸರು ಸೂಚಿಸಿದ ಫ್ಯಾನ್‌ಗೆ ಸಮಂತಾ ತಮಾಷೆಯಾಗಿ ನೀಡಿದ ಪ್ರತಿಕ್ರಿಯೆ ವೈರಲ್ ಆಗಿದೆ.

ನಟಿ ಸಮಂತಾ ರುತ್ ಪ್ರಭು ತಮ್ಮ ಮೊದಲ ಮಗುವಿನ ಆಗಮನಕ್ಕೂ ಮುನ್ನವೇ ಮಗುವಿನ ಹೆಸರಿನ ವಿಚಾರವಾಗಿ ಸುದ್ದಿಯಾಗಿದ್ದಾರೆ. ಸಮಂತಾ ಮತ್ತು ಪತಿ ರಾಜ್ ನಿಡಿಮೋರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು, ಇತ್ತೀಚೆಗೆ ನಟಿ ತಮ್ಮ ಪ್ರೆಗ್ನೆನ್ಸಿ ಜರ್ನಿಯ ಕೆಲವು ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಸಮಂತಾ ಫೋಟೋಗಳನ್ನು ಹಂಚಿಕೊಂಡ ಬೆನ್ನಲ್ಲೇ ಅಭಿಮಾನಿಗಳಿಂದ ಪ್ರೀತಿಯ ಕಾಮೆಂಟ್‌ಗಳ ಮಹಾಪೂರವೇ ಹರಿದುಬಂದಿದೆ. ಹಲವರು ನಟಿಗೆ ಶುಭಾಶಯಗಳನ್ನು ತಿಳಿಸುವುದರ ಜೊತೆಗೆ, ಅವರ ಮಗುವಿಗೆ ಯಾವ ಹೆಸರು ಇಡಬಹುದು ಎಂಬ ತಮ್ಮದೇ ಆದ ಸಲಹೆಗಳನ್ನೂ ನೀಡಿದ್ದಾರೆ. ಆದರೆ ಈ ಪೈಕಿ ಒಬ್ಬ ಅಭಿಮಾನಿಯ ಸಲಹೆ ಮಾತ್ರ ಸಮಂತಾ ಅವರ ಗಮನ ಸೆಳೆದಿದೆ.

‘ಸಮೈರಾ’ ಅಥವಾ ‘ಸಮ್ರಾಜ್’?

'ಕೂಸು ಹುಟ್ಟುವ ಮುನ್ನ ಕುಲಾವಿ ಹೊಲಿಸು' ಎಂಬಂತೆ ಒಬ್ಬ ಅಭಿಮಾನಿ ಹೆಣ್ಣು ಮಗುವಿಗೆ ‘ಸಮೈರಾ’ ಹಾಗೂ ಗಂಡು ಮಗುವಿಗೆ ‘ಸಮ್ರಾಜ್’ ಎಂದು ಹೆಸರಿಡುವಂತೆ ಸಲಹೆ ನೀಡಿದ್ದಾರೆ. ಇದರಲ್ಲಿ ವಿಶೇಷವೇನೆಂದರೆ, ‘ಸಮಂತಾ’ ಮತ್ತು ‘ರಾಜ್’ ಎಂಬ ಎರಡು ಹೆಸರುಗಳನ್ನು ಸೇರಿಸಿ ‘ಸಮ್ರಾಜ್’ ಎಂಬ ಹೆಸರನ್ನು ಅಭಿಮಾನಿ ಸೂಚಿಸಿದ್ದಾರೆ. ಈ ಸಲಹೆಯನ್ನು ಕಂಡ ಸಮಂತಾ ತಮ್ಮ ಎಂದಿನ ಹಾಸ್ಯಮಯ ಶೈಲಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.

‘SAMRAJ. A little full of ourselves, don’t you think?’ ಎಂದು ನಗುವ ಎಮೋಜಿಯೊಂದಿಗೆ ಸಮಂತಾ ಕಾಮೆಂಟ್ ಮಾಡಿದ್ದಾರೆ. ಅಂದರೆ, ‘ಸಮ್ರಾಜ್‌ನಾ? ನಮ್ಮ ಬಗ್ಗೆ ನಾವೇ ಸ್ವಲ್ಪ ಹೆಚ್ಚಾಗಿ ಯೋಚಿಸುತ್ತಿದ್ದೇವೆ ಅನಿಸುತ್ತಿಲ್ಲವಾ?’ ಎಂಬರ್ಥದಲ್ಲಿ ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ. ಸಮಂತಾ ಅವರ ಈ ಪ್ರತಿಕ್ರಿಯೆ ಇದೀಗ ಅಭಿಮಾನಿಗಳ ಗಮನ ಸೆಳೆಯುತ್ತಿದ್ದು, ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.

ಪ್ರೆಗ್ನೆನ್ಸಿ ಜರ್ನಿಯ ಝಲಕ್ ಹಂಚಿಕೊಂಡ ಸಮಂತಾ

ಇತ್ತೀಚೆಗೆ ಸಮಂತಾ ತಮ್ಮ ಪ್ರೆಗ್ನೆನ್ಸಿ ಗ್ಲೋ ಹಾಗೂ ಬೆಳೆದಿರುವ ಬೇಬಿ ಬಂಪ್‌ನ ಝಲಕ್‌ಗಳನ್ನು ಫೋಟೋ ಡಂಪ್ ಮೂಲಕ ಹಂಚಿಕೊಂಡಿದ್ದರು. ಫೋಟೋಗಳು ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳು ಕಾಮೆಂಟ್ ಬಾಕ್ಸ್‌ನಲ್ಲಿ ಪ್ರೀತಿ ಮತ್ತು ಶುಭಾಶಯಗಳನ್ನು ಹಂಚಿಕೊಂಡಿದ್ದಾರೆ.

ಪ್ರೆಗ್ನೆನ್ಸಿ ಘೋಷಿಸಿದ ಬಳಿಕ ಸಮಂತಾ ಈ ಹೊಸ ಹಂತದ ಬದುಕಿನ ಹಲವು ಕ್ಷಣಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಸದ್ಯ ಮ್ಯಾಟರ್ನಿಟಿ ಲೀವ್ನಲ್ಲಿರುವ ನಟಿ, ಪ್ರೆಗ್ನೆನ್ಸಿ ವರ್ಕೌಟ್‌ಗಳು, ಬೇಬಿ ಬಂಪ್ ಫೋಟೋಗಳು ಸೇರಿದಂತೆ ತಾಯ್ತನದ ಹೊಸ ಅನುಭವಗಳ ಬಗ್ಗೆ ಆಗಾಗ್ಗೆ ಪೋಸ್ಟ್ ಮಾಡುತ್ತಿದ್ದಾರೆ.

‘ಅಮ್ಮನಾಗಲು ಸಿದ್ಧರಾಗೋದು ಸ್ವಲ್ಪ ಭಯವಾಗ್ತಿದೆ!’

ಇತ್ತೀಚಿನ ಇನ್‌ಸ್ಟಾಗ್ರಾಮ್ Q&Aನಲ್ಲಿ ಸಮಂತಾ, ಮಗುವಿಗಾಗಿ ಈಗಾಗಲೇ ಸಾಕಷ್ಟು ವಸ್ತುಗಳನ್ನು ಖರೀದಿಸಿರುವುದಾಗಿ ಹೇಳಿಕೊಂಡಿದ್ದರು. ಆದರೆ ಅಮ್ಮನಾಗಲು ನಿಜವಾಗಿಯೂ ಸಿದ್ಧತೆ ಮಾಡಿಕೊಳ್ಳುವ ವಿಚಾರ ಸ್ವಲ್ಪ ಸವಾಲಿನಂತೆ ಭಾಸವಾಗುತ್ತಿದೆ ಎಂದು ತಮಾಷೆಯಾಗಿ ಹೇಳಿಕೊಂಡಿದ್ದರು.ಇದೇ ವೇಳೆ ತಮ್ಮ ಪ್ರೆಗ್ನೆನ್ಸಿ ತೂಕದ ಬಗ್ಗೆಯೂ ಸಮಂತಾ ಮಾತನಾಡಿದ್ದರು. ಇಲ್ಲಿಯವರೆಗೆ 11 ಕೆ.ಜಿ. ತೂಕ ಹೆಚ್ಚಾಗಿದೆ ಎಂದು ಅವರು ಬಹಿರಂಗಪಡಿಸಿದ್ದರು.

ಡಿಸೆಂಬರ್‌ನಲ್ಲಿ ಮೊದಲ ಮಗುವಿನ ನಿರೀಕ್ಷೆ

ಸಮಂತಾ ಮತ್ತು ರಾಜ್ ನಿಡಿಮೋರು ದಂಪತಿ ಡಿಸೆಂಬರ್‌ನಲ್ಲಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಆದರೆ ಮಗುವಿನ ನಿಖರವಾದ ಡ್ಯೂ ಡೇಟ್ ಅನ್ನು ದಂಪತಿ ಇನ್ನೂ ಅಧಿಕೃತವಾಗಿ ಘೋಷಿಸಿಲ್ಲ. ಇನ್ನು ಮಗುವಿನ ಹೆಸರು, ಪ್ರೆಗ್ನೆನ್ಸಿ ಜರ್ನಿ ಹಾಗೂ ತಾಯ್ತನದ ಹೊಸ ಅನುಭವಗಳ ಬಗ್ಗೆ ಸಮಂತಾ ಹಂಚಿಕೊಳ್ಳುತ್ತಿರುವ ಪ್ರತಿಯೊಂದು ಅಪ್‌ಡೇಟ್‌ಗೂ ಅಭಿಮಾನಿಗಳಿಂದ ಭಾರೀ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.