ಶ್ರೀಲಂಕಾ ಕ್ರಿಕೆಟ್ ಮಂಡಳಿಯಲ್ಲಿನ ಆಡಳಿತಾತ್ಮಕ ಬಿಕ್ಕಟ್ಟಿನಿಂದಾಗಿ, ಮುಂದಿನ ವರ್ಷ ನಡೆಯಲಿರುವ ಮಹಿಳಾ ಚಾಂಪಿಯನ್ಸ್ ಟ್ರೋಫಿಯನ್ನು ಬೇರೆ ದೇಶದಲ್ಲಿ ನಡೆಸಲು ಐಸಿಸಿ ಚಿಂತನೆ ನಡೆಸಿದೆ. ಈ ಟೂರ್ನಿಯ ಆತಿಥ್ಯ ವಹಿಸುವ ರೇಸ್‌ನಲ್ಲಿ ಭಾರತ ಮುಂಚೂಣಿಯಲ್ಲಿದ್ದು, ಅಕ್ಟೋಬರ್‌ನಲ್ಲಿ ಅಂತಿಮ ನಿರ್ಧಾರ ಹೊರಬೀಳಲಿದೆ.
ನವದೆಹಲಿ: ಮುಂದಿನ ವರ್ಷದ ಫೆಬ್ರವರಿಯಲ್ಲಿ ನಡೆಯಲಿರುವ ಮಹಿಳಾ ಚಾಂಪಿಯನ್ಸ್ ಟ್ರೋಫಿಯನ್ನು ಶ್ರೀಲಂಕಾದ ಬದಲು ಬೇರೆ ದೇಶದಲ್ಲಿ ನಡೆಸುವುದಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಚಿಂತನೆ ನಡೆಸಿದೆ. ಭಾರತದಲ್ಲಿ ಕೂಟ ನಡೆಯುವ ಸಾಧ್ಯತೆಯಿದ್ದು, ಅಕ್ಟೋಬರ್‌ನಲ್ಲಿ ನಡೆಯುವ ಸಭೆಯಲ್ಲಿ ಐಸಿಸಿ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಿದೆ.
ಲಂಕಾ ಕ್ರಿಕೆಟ್ ಮಂಡಳಿಯಲ್ಲಿ ಬಿಕ್ಕಟ್ಟು
ಈ ವರ್ಷ ನಡೆದ ಪುರುಷರ ಟಿ20 ವಿಶ್ವಕಪ್‌ಗೆ ಲಂಕಾ ಸಹ ಆತಿಥ್ಯ ವಹಿಸಿತ್ತು. ಅದರೊಂದಿಗೆ ಮತ್ತೊಂದು ಐಸಿಸಿ ಟೂರ್ನಿ ಆಯೋಜನೆಗೆ ಶ್ರೀಲಂಕಾ ಕ್ರಿಕೆಟ್ ಮಂಡಳಿ ಮುಂದಾಗಿತ್ತು. ಆದರೆ ಲಂಕಾ ಕ್ರಿಕೆಟ್ ಮಂಡಳಿಯಲ್ಲಿ ಬಿಕ್ಕಟ್ಟು ಉಂಟಾಗಿದ್ದರಿಂದ ಸದ್ಯ ಅಲ್ಲಿನ ಕ್ರಿಕೆಟ್ ಮೇಲುಸ್ತುವಾರಿಯನ್ನು ಸರ್ಕಾರ ನೇಮಿಸಿರುವ ಮಧ್ಯಂತರ ಸಮಿತಿ ನೋಡಿಕೊಳ್ಳುತ್ತಿದೆ. ಇದರಿಂದಾಗಿ ಮಂಡಳಿಯ ಆಡಳಿತದಲ್ಲಿ ಅಲ್ಲಿನ ಸರ್ಕಾರ ಹಸ್ತಕ್ಷೇಪ ನಡೆಸುತ್ತಿದೆ. ಆದರೆ ಮಧ್ಯಂತರ ಸಮಿತಿಗೆ ಐಸಿಸಿ ಮಾನ್ಯತೆ ಇಲ್ಲದ ಕಾರಣ ಲಂಕಾದಲ್ಲಿ ಟೂರ್ನಿ ನಡೆಸದಿರಲು ನಿರ್ಧರಿಸಿದೆ ಎಂದು ವರದಿಯಾಗಿದೆ.
ಹೀಗಾದಲ್ಲಿ ಮತ್ತೊಂದು ಮಹತ್ವದ ಐಸಿಸಿ ಟೂರ್ನಿಗೆ ಭಾರತ ಆತಿಥ್ಯ ವಹಿಸಿದಂತಾಗಲಿದೆ. ಅಂದಹಾಗೆ ಕಳೆದ ವರ್ಷ ನಡೆದ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತ ಆತಿಥ್ಯ ವಹಿಸಿತ್ತು. ಆಗ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ಮಹಿಳಾ ತಂಡವೇ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.
ಥಾಯ್ಲೆಂಡ್ ವಿರುದ್ಧ ಭಾರತದ ಮಹಿಳೆಯರಿಗೆ 94 ರನ್ ಜಯ
ಯುಎಇ: ಮಹಿಳಾ ಏಷ್ಯಾಕಪ್ ಕ್ರಿಕೆಟ್‌ನಲ್ಲಿ ಭಾರತ ಭರ್ಜರಿ ಶುಭಾರಂಭ ಮಾಡಿದೆ. ಭಾನುವಾರ ಥಾಯ್ಲೆಂಡ್ ವಿರುದ್ಧ ಹರ್ಮನ್‌ಪ್ರೀತ್ ಕೌರ್ ಪಡೆ 94 ರನ್‌ಗಳಿಂದ ಜಯಗಳಿಸಿತು.
ಮೊದಲು ಬ್ಯಾಟ್ ಮಾಡಿದ ಭಾರತ 20 ಓವರಲ್ಲಿ 9 ವಿಕೆಟ್‌ಗೆ 159 ರನ್ ಗಳಿಸಿತು. ಶಫಾಲಿ ವರ್ಮಾ 36 ಎಸೆತಗಳಲ್ಲೇ 64 ರನ್ ಸಿಡಿಸಿದರು. ಹೀಗಾಗಿ ಮೊದಲ 10 ಓವರ್‌ಗಳಲ್ಲಿ ತಂಡ 2 ವಿಕೆಟ್ ನಷ್ಟದಲ್ಲಿ 101 ರನ್ ಗಳಿಸಿತ್ತು. ಕೊನೆ 10 ಓವರ್‌ಗಳಲ್ಲಿ ಕೇವಲ 58 ರನ್ ಗಳಿಸಿದ ತಂಡ, 6 ವಿಕೆಟ್‌ಗಳನ್ನೂ ಕಳೆದುಕೊಂಡಿತು.
ಆದರೆ ಬೌಲಿಂಗ್‌ನಲ್ಲಿ ಭಾರತ ಬಿಗು ದಾಳಿ ನಡೆಸಿತು. ಥಾಯ್ಲೆಂಡ್ 16.1 ಓವರ್‌ಗಳಲ್ಲಿ ಕೇವಲ 65 ರನ್‌ಗೆ ಆಲೌಟಾಯಿತು. ನಂದನಿ ಶರ್ಮಾ, ದೀಪ್ತಿ ಶರ್ಮಾ ತಲಾ 3, ಶ್ರೀ ಚರಣಿ 2 ವಿಕೆಟ್ ಕಿತ್ತರು.
ಸ್ಕೋರ್: ಭಾರತ 20 ಓವರಲ್ಲಿ 159/9 (ಶಫಾಲಿ 64, ಪ್ರತಿಕಾ 22, ಸುಲೀಪೊರ್ನ್ 3-26), ಥಾಯ್ಲೆಂಡ್ 16.1 ಓವರಲ್ಲಿ 65/10 (ನನ್ನಾಪತ್ 41, ದೀಪ್ತಿ 3-0, ನಂದನಿ 3-18)


