ದುಲೀಪ್ ಟ್ರೋಫಿ ಸೆಮಿಫೈನಲ್‌ನ ಮೊದಲ ದಿನ, ಉತ್ತರ ವಲಯ ವಿರುದ್ಧ ವಿದ್ವತ್ ಕಾವೇರಪ್ಪ ಅವರ ಮಾರಕ ಬೌಲಿಂಗ್ ನೆರವಿನಿಂದ ದಕ್ಷಿಣ ವಲಯ ಮೇಲುಗೈ ಸಾಧಿಸಿದೆ. ಮತ್ತೊಂದು ಪಂದ್ಯದಲ್ಲಿ, ರಿಂಕು ಸಿಂಗ್ ಅವರ ಅರ್ಧಶತಕದ ಹೊರತಾಗಿಯೂ ಕೇಂದ್ರ ವಲಯ ತಂಡವು ಪೂರ್ವ ವಲಯದ ವಿರುದ್ಧ 266 ರನ್‌ಗಳಿಗೆ ಆಲೌಟ್ ಆಗಿದೆ.
ಬೆಂಗಳೂರು: ದುಲೀಪ್ ಟ್ರೋಫಿ ದೇಸಿ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಉತ್ತರ ವಲಯ ವಿರುದ್ಧ ದಕ್ಷಿಣ ವಲಯ ಮೊದಲ ದಿನ ಮೇಲುಗೈ ಸಾಧಿಸಿದೆ. ಉತ್ತರ ವಲಯ 195 ರನ್‌ಗೆ ಆಲೌಟಾಗಿದ್ದು, ಬಳಿಕ ದಕ್ಷಿಣ ತಂಡ ದಿನದಂತ್ಯಕ್ಕೆ 2 ವಿಕೆಟ್ ನಷ್ಟದಲ್ಲಿ 40 ರನ್ ಕಲೆಹಾಕಿದೆ.
ಟಾಸ್ ಗೆದ್ದ ಉತ್ತರ ವಲಯ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭಿಕ ಆಟಗಾರ ಸನತ್ ಸಂಗ್ವಾನ್(10) ವಿಫಲರಾದರು. 2ನೇ ವಿಕೆಟ್‌ಗೆ 53 ರನ್ ಮೂಡಿಬಂತು. 71 ರನ್‌ಗೆ 1 ವಿಕೆಟ್ ಕಳೆದುಕೊಂಡಿದ್ದ ತಂಡ ಬಳಿಕ 24 ರನ್ ಸೇರಿಸುವಷ್ಟರಲ್ಲೇ ಮತ್ತೆ 3 ವಿಕೆಟ್ ನಷ್ಟಕ್ಕೊಳಗಾಯಿತು. 95ಕ್ಕೆ 4 ವಿಕೆಟ್ ಬಿದ್ದ ಬಳಿಕ ಖಮ್ರಾನ್ ಇಕ್ಬಾಲ್‌ಗೆ ಬೆಂಬಲವಾಗಿ ನಿಂತಿದ್ದು ನಾಯಕ ಕನ್ಹಯ್ಯ ವಧವಾನ್. ಅವರು 35 ರನ್ ಸೇರಿಸಿದರು.
ಆದರೆ 4 ವಿಕೆಟ್‌ಗೆ 161 ರನ್ ಗಳಿಸಿದ್ದ ತಂಡ ಬಳಿಕ ದಿಢೀರ್ ಕುಸಿಯಿತು. ಕನ್ಹಯ್ಯರನ್ನು ತನಯ್ ತ್ಯಾಗರಾಜನ್ ಔಟ್ ಮಾಡಿದ ಬಳಿಕ ಕನ್ನಡಿಗ ವಿದ್ವತ್ ಕಾವೇರಪ್ಪ ಮಾರಕ ಸ್ಪೆಲ್ ಮೂಲಕ ಉತ್ತರ ವಲಯವನ್ನು ಕಾಡಿದರು. ತಮ್ಮ 5 ಓವರ್ ಸ್ಪೆಲ್‌ನಲ್ಲಿ ನಾಲ್ವರನ್ನು ಪೆವಿಲಿಯನ್‌ಗೆ ಅಟ್ಟಿದರು. 76 ರನ್ ಗಳಿಸಿದ್ದ ಇಕ್ಬಾಲ್‌ರನ್ನೂ ವಿದ್ವತ್ ಔಟ್ ಮಾಡಿದರು. 161ರ ಬಳಿಕ ತಂಡ 34 ರನ್ ಸೇರಿಸುವಷ್ಟರಲ್ಲಿ ಕೊನೆ 6 ವಿಕೆಟ್ ಪತನಗೊಂಡವು. ವಿದ್ವತ್ 4, ನಿಧೀಶ್ ಹಾಗೂ ತನಯ್ ತಲಾ 2 ವಿಕೆಟ್ ಪಡೆದರು.
ಆರಂಭಿಕ ಆಘಾತ:
ಉತ್ತರದಂತೆ ದಕ್ಷಿಣ ತಂಡವೂ ಆರಂಭಿಕ ಆಘಾತಕ್ಕೊಳಗಾಯಿತು. ರಿಕ್ಕಿ ಭುಯಿ(5) ಹಾಗೂ ಶೇಖ್ ರಶೀದ್(0) ಬೇಗನೇ ಔಟಾಗಿದ್ದು, ಎನ್.ಜಗದೀಶನ್(ಔಟಾಗದೆ 34 ರನ್) ಅವರು ನಾಯಕ ತಿಲಕ್ ವರ್ಮಾ(1) ಜೊತೆ 2ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ತಂಡ ಇನ್ನೂ 155 ರನ್ ಹಿನ್ನಡೆಯಲ್ಲಿದೆ.
ಸ್ಕೋರ್: ಉತ್ತರ ವಲಯ ಮೊದಲ ಇನ್ನಿಂಗ್ಸ್ 195/10 (ಇಕ್ಬಾಲ್ 76, ಕನ್ಹಯ್ಯ 35, ವಿದ್ವತ್ 4-66, ತನಯ್ 2-31), ದಕ್ಷಿಣ ವಲಯ ಮೊದಲ ಇನ್ನಿಂಗ್ಸ್ 40/2 (ಮೊದಲ ದಿನದಂತ್ಯಕ್ಕೆ)(ಜಗದೀಶನ್ ಔಟಾಗದೆ 34, ಅನ್ಶುಲ್ 1-9, ಗುರ್ನೂರ್ 1-12)zz
ರಿಂಕು 60, ಕೇಂದ್ರ ವಲಯ ತಂಡ 266 ರನ್‌ಗೆ ಆಲೌಟ್
ದುಲೀಪ್ ಟ್ರೋಫಿಯ ಮತ್ತೊಂದು ಸೆಮಿಫೈನಲ್‌ನಲ್ಲಿ ಪೂರ್ವ ವಲಯ ವಿರುದ್ಧ ಕೇಂದ್ರ ವಲಯ ತಂಡ 266 ರನ್‌ಗೆ ಆಲೌಟಾಗಿದೆ. ನಾಯಕ ರಜತ್ ಪಾಟೀದಾರ್(12), ಅಮನ್ ಮೋಖಡೆ(8) ಮಿಂಚಲಿಲ್ಲ. ಯಶ್ ರಾಥೋಡ್ 29, ಹರ್ಷ್ ದುಬೆ 27 ರನ್ ಕೊಡುಗೆ ನೀಡಿದರು. ಕಡಿಮೆ ಮೊತ್ತಕ್ಕೆ ಕುಸಿಯುವ ಭೀತಿಯಲ್ಲಿದ್ದ ತಂಡಕ್ಕೆ ನೆರವಾಗಿದ್ದು ಆರ್ಯನ್ ಜುಯಲ್ ಮತ್ತು ರಿಂಕು ಸಿಂಗ್. ಆರಂಭಿಕ ಆಟಗಾರ ಆರ್ಯನ್ 46 ರನ್ ಗಳಿಸಿದರೆ, 6ನೇ ಕ್ರಮಾಂಕದಲ್ಲಿ ಆಡಲು ಬಂದ ರಿಂಕು 88 ಎಸೆತಗಳಲ್ಲಿ 66 ರನ್ ಬಾರಿಸಿದರು. ಸಾರಂಶ್ ಜೈನ್ 13, ಆರ್ಯನ್ ಪಾಂಡೆ 22 ರನ್ ಗಳಿಸಿದರು. ಪೂರ್ವ ವಲಯ ಪರ ಮುಕೇಶ್ ಕುಮಾರ್, ಅಭಿಜಿತ್ ಸರ್ಕಾರ್ ತಲಾ 3, ಮೊಹಮ್ಮದ್ ಶಮಿ, ಕೌನೈನ್ ಖುರೈಶಿ ತಲಾ 2 ವಿಕೆಟ್ ಪಡೆದರು.
ಸ್ಕೋರ್: ಕೇಂದ್ರ ವಲಯ ಮೊದಲ ಇನ್ನಿಂಗ್ಸ್ 266/10 (ರಿಂಕು 60, ಆರ್ಯನ್ 46, ಮುಕೇಶ್ 3-56, ಅಭಿಜಿತ್ 3-38, ಶಮಿ 2-42, ಖುರೈಶಿ 2-49)


