ಭಾರತ ಮತ್ತು ಶ್ರೀಲಂಕಾ ನಡುವಿನ ಎರಡನೇ ಟೆಸ್ಟ್ ಪಂದ್ಯವು ರೋಚಕ ಡ್ರಾನಲ್ಲಿ ಅಂತ್ಯಗೊಂಡಿದೆ. ಫಾಲೋ ಆನ್‌ಗೆ ಸಿಲುಕಿದ್ದ ಲಂಕಾ ಪರ ಸೋನಲ್ ದಿನುಶಾ ಅಜೇಯ ಶತಕ ಸಿಡಿಸಿ ತಂಡವನ್ನು ಸೋಲಿನಿಂದ ಪಾರುಮಾಡಿದರು. ಈ ಡ್ರಾನ ಹೊರತಾಗಿಯೂ, ಭಾರತವು ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 1-0 ಅಂತರದಿಂದ ಗೆದ್ದುಕೊಂಡಿತು.

ಕೊಲಂಬೊ: ಭಾರತ ಹಾಗೂ ಶ್ರೀಲಂಕಾ ನಡುವಿನ ಎರಡನೇ ಟೆಸ್ಟ್ ಪಂದ್ಯವು ನೀರಸ ಡ್ರಾನಲ್ಲಿ ಅಂತ್ಯವಾಗಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಭಾರೀ ಮುನ್ನಡೆ ಸಾಧಿಸಿ, ಆತಿಥೇಯ ಲಂಕಾದ ಮೇಲೆ ಫಾಲೋ ಆನ್ ಹೇರಿದ್ದ ಭಾರತ ತಂಡವು, ಕೊನೆಯ ದಿನ ಗೆಲುವು ಸಾಧಿಸುವ ಲೆಕ್ಕಾಚಾರದಲ್ಲಿತ್ತು. ಆದರೆ ಲಂಕಾ ಪರ ಸೋನಲ್ ದಿನುಶಾ ಅಜೇಯ ಶತಕ ಸಿಡಿಸುವ ಮೂಲಕ ತಂಡವನ್ನು ಸೋಲಿನಿಂದ ಪಾರು ಮಾಡುವಲ್ಲಿ ಯಶಸ್ವಿಯಾದರು. ಇದರ ಹೊರತಾಗಿಯೂ ಗಾಲೆ ಟೆಸ್ಟ್ ಪಂದ್ಯವನ್ನು ಗೆದ್ದು ಬೀಗಿದ್ದ ಶುಭ್‌ಮನ್ ಗಿಲ್ ಪಡೆ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 1-0 ಅಂತರದಲ್ಲಿ ಜಯಿಸುವಲ್ಲಿ ಯಶಸ್ವಿಯಾಗಿದೆ.

ಲಂಕಾ ಮೇಲೆ ಫಾಲೋ ಆನ್ ಹೇರಿದ್ದ ಟೀಂ ಇಂಡಿಯಾ

ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ತಂಡವು ಶ್ರೀಲಂಕಾವನ್ನು 290 ರನ್‌ಗಳಿಗೆ ಆಲೌಟ್ ಮಾಡುವ ಮೂಲಕ 213 ರನ್‌ಗಳ ಭಾರೀ ಮುನ್ನಡೆ ಸಾಧಿಸಿತು. ಇದರ ಬೆನ್ನಲ್ಲೇ ಲಂಕಾದ ಮೇಲೆ ಟೀಂ ಇಂಡಿಯಾ ಫಾಲೋ ಆನ್ ಹೇರಿತು. ಎರಡನೇ ಇನ್ನಿಂಗ್ಸ್ ಅರಂಭಿಸಿದ ಶ್ರೀಲಂಕಾ 5 ರನ್‌ಗಳಿಗೆ ಮೊದಲ ಹಾಗೂ 63 ರನ್‌ಗಳಿಗೆ ಎರಡನೇ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದರೆ ಇದಾದ ಬಳಿಕ ಭಾರತೀಯ ದಾಳಿಯನ್ನು ಲಂಕಾ ಬ್ಯಾಟರ್‌ಗಳು ದಿಟ್ಟವಾಗಿ ಎದುರಿಸಲು ಆರಂಭಿಸಿದರು.

ಮಧ್ಯಮ ಕ್ರಮಾಂಕದಲ್ಲಿ ಪಸಿಂದು ಸೂರ್ಯಬಂಡಾರ ಆಕರ್ಷಕ 92 ರನ್ ಸಿಡಿಸಿ ಶತಕವಂಚಿತರಾದರೇ, ಕಮಿಂದು ಮೆಂಡಿಸ್ ಸಮಯೋಚಿತ 55 ರನ್ ಬಾರಿಸಿದರು. ನಾಯಕ ಧನಂಜಯ ಡಿ ಸಿಲ್ವಾ 23 ರನ್ ಗಳಿಸಿ ಮಾನವ್ ಸುತಾರ್‌ಗೆ ವಿಕೆಟ್ ಒಪ್ಪಿಸಿದರು.

ಲಂಕಾವನ್ನು ಸೋಲಿನಿಂದ ಕಾಪಾಡಿದ ಸೋನಲ್ ದಿನುಶಾ

ಶ್ರೀಲಂಕಾ ತಂಡವು ಒಂದು ಹಂತದಲ್ಲಿ 218 ರನ್‌ಗಳಿಗೆ ಆರು ವಿಕೆಟ್ ಕಳೆದುಕೊಂಡು ಬಹುತೇಕ ಸೋಲಿನತ್ತ ಮುಖ ಮಾಡಿತ್ತು. ಆದರೆ ಏಳನೇ ವಿಕೆಟ್‌ಗೆ ಸೋನಲ್ ದಿನುಶಾ ಹಾಗೂ ಕೇಶಾರ ನುವಂತಾ 112 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ನುವಾಂತ 46 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಆದರೆ ಮತ್ತೊಂದು ತುದಿಯಲ್ಲಿ ಕೆಚ್ಚೆದೆಯ ಬ್ಯಾಟಿಂಗ್ ನಡೆಸಿದ ಸೋನಲ್ ದಿನುಶಾ 264 ಎಸೆತಗಳನ್ನು ಎದುರಿಸಿ 8 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ ಅಜೇಯ 133 ರನ್ ಬಾರಿಸಿ ಪಂದ್ಯವನ್ನು ಡ್ರಾ ಮಾಡುವಲ್ಲಿ ಯಶಸ್ವಿಯಾದರು.

ಭಾರತ ಪರ ರವೀಂದ್ರ ಜಡೇಜಾ ಹಾಗೂ ಮಾನವ್ ಸುತಾರಾ ತಲಾ 3 ವಿಕೆಟ್ ಕಬಳಿಸಿದರೆ, ಸಾರಾನ್ಶ್‌ ಜೈನ್, ಮೊಹಮ್ಮದ್ ಸಿರಾಜ್ ಹಾಗೂ ಪ್ರಸಿದ್ದ್ ಕೃಷ್ಣ ತಲಾ ಒಂದೊಂದು ವಿಕೆಟ್ ಪಡೆದರು.